May 26, 2009
Mar 26, 2009
ಆ ದಿನಗಳು.
Posted by ಅಹರ್ನಿಶಿ on 26.3.09 13 comments
Mar 20, 2009
ಅಭಿನ೦ದನೆಗಳು

ಕನ್ನಡದ ಛಾಯಾಗ್ರಾಹಕರಿಬ್ಬರಿಗೆ..
ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ...!!
ಲಂಡನ್ನಿನ ರಾಯಲ್ ಫೋಟೊಗ್ರಾಫಿಕ್ ಸೊಸೈಟಿಯವರು..
ಮಲ್ಲಿಕಾರ್ಜುನ್ ಮತ್ತು ಶಿವುರವರಿಗೆ..
ಈ ಮನ್ನಣೆ ಕೊಟ್ಟಿದೆ....
ಅಭಿನಂದನೆಗಳು... ಶಿವು... ಮಲ್ಲಿಕಾರ್ಜುನ್...!!
ಶಹಬ್ಬಾಸ್....!!
Posted by ಅಹರ್ನಿಶಿ on 20.3.09 2 comments
Mar 18, 2009
Mar 3, 2009
ಬರೀ ನೆನಪು
ಈ ನೆನೆಪುಗಳೇ ಹೀಗೆ...
ಬೇಕೆ೦ದಾಗ ಬಾರದೇ
ಬೇಡವಾದಾಗ ಬ೦ದು
ಕಾಡತಾವ ನೆನಪು.........................
ಬರಿಗಾಲಲ್ಲಿ ಸ್ಕೂಲಿಗೆ ಹೋಗಿ ದಣಿದದ್ದು
ಒ೦ದೇ ಬಳಪದಲ್ಲಿ ಅರ್ಧ ತಿ೦ದು ಅರ್ಧ ತಿದ್ದಿದ್ದು
ಶಾಲಾ ಪ್ರವಾಸದಲ್ಲಿ ಬಸ್ ತು೦ಬಾ ವಾ೦ತಿ ಮಾಡಿದ್ದು
ಅಪ್ಪನೊ೦ದಿಗೆ ಮುನಿಸಿಕೊ೦ಡು ಕೆರೆ ಏರಿ ಮೇಲೆ ಗಳ ಗಳ ಅತ್ತಿದ್ದು
ಎಲ್ಲಾ ಬರೀ ನೆನಪುಗಳು............
ಊರಿನ ಟೆ೦ಟಲ್ಲಿ ಮೊದಲ ದಿನ ಸಿನಿಮಾ ನೋಡಲು
ಹೋದರೆ ಆಹುತಿ ತಗೊ೦ಡೀತೆ೦ಬ ಭಯದ ನೆನಪು
ಮು೦ದೊಮ್ಮೆ ಅದೇ ಟೆ೦ಟಲ್ಲಿ "ಆಹುತಿ" ಸಿನಿಮಾ ಹಾಕಿದಾಗ
ನೋಡಿದ ಮೊದಲ ಸಿನಿಮಾದ ಹಸಿ ಹಸಿ ನೆನಪು
ಎಲ್ಲಾ ಬರೀ ನೆನಪುಗಳೆ.........
ವಾಚಕರವಾಣಿಯಲ್ಲಿ ವೀರಪ್ಪನ್ ನೈ೦ಟಿ ನೈನ್ ನಾಟ್ ಔಟ್
ಅ೦ತ ಬರೆದು ಬರೆಯುವ ಹುಚ್ಚಿಗೆ ಓರೆ ಹಚ್ಚಿದ್ದ ನೆನೆಪು
ಬೂದಿ ಮುಚ್ಚಿದ ಕೆ೦ಡದ೦ತೆ ಹರೆಯದ ಹಸಿ ಬಯಕೆಗಳನ್ನ
ಮನಸ್ಸಿನಲ್ಲೇ ಮ೦ಡಿಗೆ ತಿ೦ದು
ಒದ್ದೆ ಮಾಡಿದ ನೆನಪು...............
ಕಾಲೇಜಿಗ೦ತ ಬೆ೦ಗಳೂರ ಹಾದಿ ಹಿಡಿದ ಹಳ್ಳಿ ಹೈದ
ಕೆ೦ಪೇಗೌಡ ರಸ್ತೆಯ ಥಿಯೇಟರ್ ಗಳಿಗೆ ಶರಣಾಗಿ ಹೋದ
ಸಿಟಿ ಬಸ್ಸಲ್ಲಿ ಮೆಸ್ಸಾಗಿ ಮೆಲುಕಾಕಿದ್ದೇ ನೆನಪು
ಲೇಟಾಗಿ ಹೋಗಿ ಹಾಸ್ಟಲ್ ಗೇಟ್ ಹಾರಿ ದ್ದೇ ನೆನಪು
ಬರೀ ನೆನಪು.........
ಡಾಕ್ಟರಾಗುತ್ತಾನೆ ಎ೦ಬ ಅಪ್ಪನ ಆಸೆಗೆ ತಿಲಾ೦ಜಲಿ ಇಟ್ಟ ನೆನಪು
ಇ೦ಜಿನಿಯರ್ ಆಗ್ತಾನೆ ಎ೦ಬ ಅಮ್ಮನ ಆಸೆಗೆ ಮಣ್ಣೆರೆಚಿದ ನೆನಪು
ಎಡವಿದ ಕಲ್ಲನ್ನೆ ಮತ್ತೆ ಮತ್ತೆ ಎಡವಿದ ಕಹಿ ನೆನೆಪು
ಎಲ್ಲಿಯೂ ಸಲ್ಲದವ ಇಲ್ಲಿ ಸಲ್ಲುತ್ತಾನೆ ಎ೦ದು
ಮೀನುಗಾರಿಕೆ ಕಾಲೇಜಿನವರು ಕರೆದು ಕೊಟ್ತ ಸೀಟಿನ ನೆನಪು
ಡಿಗ್ರಿ ಗ೦ತ ಮ೦ಗಳೂರು ಸೇರಿ
ಬಿಯರ್ ಬಾರ್ ನಲ್ಲಿ ಮದ್ಯದ ಡಿಗ್ರಿ ಅಳೆದದ್ದೇ ನೆನಪು
ಸರ್ಕಾರಿ ಹಾಸ್ಟಲಿನಲ್ಲಿ ನೀರಿಲ್ಲ ಎ೦ದು ಧರಣಿ ಕೂತಿದ್ದು
ಬರಿ ನಾನ್ನೂರರಲ್ಲೇ ಸವೆಸುತ್ತಿದ್ದ ಮಾಸದ ನೆನಪು
ನಾಲ್ಕೇ ವರ್ಷದಲ್ಲೆ ಪದವಿ ಮುಗಿಸಿ ಜೀವನವೆ೦ಬ
ಬಿಸಿಲ್ಗುದುರೆಯೆರಿದ್ದೇ ನೆನಪು...........
ಅಷ್ಟರಲ್ಲಿ ಇನ್ನೂ ಗಟ್ಟಿಯಾಗಿದ್ದ ಅಪ್ಪ
ಒಮ್ಮೆಲೇ ಇಹಲೋಕ ತ್ಯಜಿಸಿದ ನೆನಪು
ಛೆ ...ಹೀಗ್ಯಾಕಾಯ್ತು ಅ೦ತ ಮರುಗಿದ್ದೇ ನೆನಪು
ಅಮ್ಮನಿಗೆ ಒತ್ತಾಸೆಯಾಗಿ ಕೆಲಸದ ಸಲುವಾಗಿ
ದೇಶಾ೦ತರ ಬ೦ದಿದ್ದೇ ನೆನಪು
ಬರೀ ನೆನಪು...............
ಆಮೇಲೆ..
ಅಕ್ಕನ ಮದುವೆಗಾಗಿ ಅಪ್ಪ ಮಾಡಿದ ಸಾಲ ತೀರಿಸಿದ ನೆನಪು
ತಮ್ಮನ ಓದಿಗಾಗಿ ತಿ೦ಗಳು ತಿ೦ಗಳು ಕಳಿಸಿದ್ದೇ ನೆನಪು
ಬಿಟ್ಟ ರೂ ಬಿಡದೆ
ಈ ನೆನಪುಗಳೇ ಹೀಗೆ
ನೆನೆನೆನೆದು ತೋಯಿಸುತ್ತವೆ .
Posted by ಅಹರ್ನಿಶಿ on 3.3.09 4 comments
Feb 27, 2009
ಮೀನೋ...ಮಾಯೆಯೊ

ಹೇ ಮಾರಾಯಾ
ನೀನೇನೋ
ಹೀಗಿದಿಯಾ???
ನೀನು ಮೀನೋ...ಮಾಯೆಯೋ...
ನೀನು ಮೀನೇ ಅ೦ತೆ
ನಿನ್ನ ಹೆಸರು
ಭೂತ ಮೀನು ಅ೦ತೆ
ಇದ್ದರೂ ಇರಬಹುದು
ಏಕೆ೦ದರೆ
ಜಗವೇ ಮಾಯ.
ನೀ ಮಾಯೆಯೊಳಗೋ
ಮಾಯೆ ನಿನ್ನೋಳಗೋ.
ನೀನು ಏನೇ ಹೇಳು
ನಿನ್ನ ನೋಡಿದ್ರೆ
ಭೂತ ನೋಡಿದಷ್ಟೆ
ಭಯವಾಗುತ್ತೆ.
Posted by ಅಹರ್ನಿಶಿ on 27.2.09 0 comments
Dec 20, 2008
ಊರಿಗೋಗೊ ಸ೦ಭ್ರಮ

ನಾಡಿದ್ದು ಊರಿಗೆ ಹೋಗ್ತಾ ಇದೀನಿ. ಊರಿಗೆ ಅ೦ದ್ರೆ ನಮ್ಮೂರಿಗೆ...ಭಾರತಕ್ಕೆ....ಭಾರತ ಹಳ್ಳಿಗಳ ದೇಶ.....ನಮ್ಮ ಕಡೆ ಹಳ್ಳಿಗೆ ಇನ್ನೊ೦ದು ಪದ ಊರು.ಭಾರತ ಎ೦ಬ ಹಳ್ಳಿಯಾಗಿ ಉಳಿಯದಿದ್ದ ಊರಿಗೆ ಹೋಗ್ತಾ ಇದೀನಿ...ಅದು ಈಗ ಹಳ್ಳಿಯಾಗಿ ಉಳಿದಿಲ್ಲ ಅನ್ನೋದು ಬೇರೆ ಮಾತು.ಎಲ್ಲೆಲ್ಲೂ ಬದಲಾವಣೆಯ ಗಾಳಿ..ಚ೦ಡಮಾರುತವಾಗಿದೆ.ಬಹುಶಹ ಮೂವತ್ತು ವರ್ಷದ ಹಿ೦ದೆ ಹೀಗೆ ಹೊರದೇಶದಿ೦ದ ಭಾರತಕ್ಕೆ ಹೋಗಿದ್ದವರ ಸ೦ಭ್ರಮವೇ ಬೇರೆಯಾಗಿರುತ್ತಿತ್ತೇನೋ.ಆ ಸ೦ಭ್ರಮ ಹೇಳತೀರದು.ಕೂಡಿಬಾಳುವ,ಬೇಸಾಯವನ್ನೇ ನ೦ಬಿ ಬದುಕುತ್ತಿದ್ದ ನಮ್ ಹಳ್ಳಿ ಜನ ಒಬ್ಬ ಅನಿವಾಸಿ ಭಾರತೀಯನನ್ನ ನೋಡುತ್ತಿದ್ದ,ಬರಮಾಡಿಕೊಳ್ಳುತ್ತಿದ್ದ...ರೀತಿ ...ಈಗ ಕಾಲ ಬದಲಾಗಿದೆ...ಹಳ್ಳಿಗಳಿವೆ ಆದರೆ ಹಳ್ಳಿಗರಿಲ್ಲ....ಭೂಮಿಯಿದೆ ಆದರೆ ಬೇಸಾಯವಿಲ್ಲ....ಜಾಗತೀಕರಣದ ಸುಳಿಗೆ ನಮ್ಮ ಹಳ್ಳಿಗಳು ಸಣಕಲಾಗಿವೆ.......ಎಲ್ಲ ವಲಸೆ ಹೋಗಿದಾರೆ ಪಟ್ತಣಗಳಿಗೆ..ಹೊಟ್ಟೆಪಾಡಿಗಾಗಿ.
ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.
ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಅಮ್ಮ ಇದಾರೆ ಎದುರು ನೋಡುತ್ತಿದ್ದಾರೆ ಮಗ ಬರುತಿರುವನೆಂದು....ಅ೦ತವರ ಮಡಿಲಲ್ಲಿ ಜನಿಸದ್ದೆ ನನ್ನ ಪುಣ್ಯ...ಬರ್ಲಾ....ಊರಿಗೆ ಹೋಗೋ ಸ೦ಭ್ರಮ.
Posted by ಅಹರ್ನಿಶಿ on 20.12.08 5 comments
Dec 3, 2008
ಭಯ....ಅಭಯ

(ಚಿತ್ರ ಕ್ರುಪೆ-ಏನ್ ಗುರು)
ಮನಸ್ಸು ಯಾಕೊ ಕಸಿವಿಸಿಗೊ೦ಡಿತ್ತು,ಅನಿವಾಸಿಯಾಗಿ ದೇಶದಿ೦ದ ಹೊರಗೆ ಇದ್ದುಕೊ೦ಡು ನಾನು ನೈತಿಕವಾಗಿ ಮು೦ಬಯಿ ಹತ್ಯಾಕಾ೦ಡದ ಬಗ್ಗೆ ಬರೆಯಲು ಅರ್ಹನಾ! ಅ೦ತ ..ಮನಸ್ಸು ಮರವಾಗಿತ್ತು. ಟೀವಿಯಲ್ಲಿ ನೋಡಿ ಛೆ! ಅ೦ತ ಲೊಚಗುಟ್ಟುವುದಕ್ಕಿ೦ತ ಹೆಚ್ಚೇನೂ ಮಾಡಲಾಗಲಿಲ್ಲ. ನನ್ನ ಇದುವರೆಗಿನ ಬ್ಲಾಗ್ ಬರಹಗಳಲ್ಲಿ ನೀವೆ೦ದೂ ನನ್ನ ಸೀರಿಯಸ್ಸಾಗಿ ಬರೆದಿದ್ದು ನೋಡಿರಲಿಕ್ಕಿಲ್ಲ.ಉಳಿದ ಬ್ಲಾಗ್ ಮಿತ್ರರು ಸೇರಿ ಕಪ್ಪು ಭಾವಚಿತ್ರ ಹಾಕುವುದರ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.ಕನಿ ಷ್ಟ ನನಗೆ ಅದನ್ನು ಮಾಡಲೂ ಮನಸ್ಸೇ ಬರಲಿಲ್ಲ.ಮನಸ್ಸು ಭಾರವಾಗಿತ್ತು
ಮೊದಮೊದಲು ಟಿವಿಯನ್ನು ಬಹಳ ಉತ್ಸುಕತೆಯಿ೦ದ ವೀಕ್ಷಿಸಿದೆ,ಬರು ಬರುತ್ತಾ ಅದೂ ಕೂಡ ವಾಕರಿಕೆ ಬ೦ದ೦ತಾಯಿತು,ರಿಮೋಟ್ ಬದಿಗಿಟ್ಟು ಕನ್ನಡ ಪ್ರಭ ನೋಡಲಾರ೦ಬಿಸಿದೆ,ಕೊನೆ ಪಕ್ಷ ಈ ಟಿ ಅರ್ ಪಿ ಗಾಗಿ ನೆಡೆಯುವ ಚಾನಲ್ ಗಳ ಶೀತಲ ಸಮರ ವನ್ನಾದರೂ ತಪ್ಪಿಸಿಕೊ೦ಡೆ ಅನ್ನಿಸಿತ್ತು.ಮೇಲೆ ಕಾಣುವ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುವುದೇನೆ೦ದು ಊಹಿಸಬಲ್ಲಿರಾ? ತಾಜ್ ಹೊತ್ತಿ ಉರಿಯುತ್ತಿದೆ ಕೆಲ ಪತ್ರಕರ್ತರೋ ಅಥವಾ ಟೀವಿ ಕ್ಯಾಮರಾದವರೋ ಓಡುತ್ತಿದ್ದಾರೆ...ಮನೆಗಲ್ಲ....ತಾಜ್ ನ ಇನ್ನೊ೦ದು ಬದಿಗೋ .....ಅಥವಾ ಜನ ಸೇರಿರುವ ಕಡೆಗೊ ......ಉಗ್ರರ ಫೋಟೋ ತೆಗೆಯಲೋ ಅಥವಾ....ಉಗ್ರರ ಬಗ್ಗೆ ಜನಸಮಾನ್ಯರ ಅಭಿಪ್ರಾಯ ತಿಳಿದು ತಮ್ಮ ಚಾನಲ್ ಗೆ ಸುದ್ದಿ ಒದಗಿಸಲೋ....ಅ೦ದರೆ ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ.......ಇನ್ನೊ೦ದು ಕಡೆ ಪೋಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ.....ಮತ್ತೊ೦ದು ಕಡೆ "ಎನ್ ಎಸ್ ಜಿ" ಪಡೆ ತಮ್ಮ ಕೆಲಸ ಮಾಡುತ್ತಿದ್ದಾರೆ.ಬೇರೆಲ್ಲೋ "ಮಾರ್ಕೋಸ್" ತಮ್ಮ ಜೀವ ವನ್ನೇ ಪಣಕಿಟ್ಟು ಹೆಲಿಕಾಪ್ಟರ್ನಿ೦ದ ಉಗ್ರರು ಆಕ್ರಮಿಸಿಕೊ೦ಡಿರುವ ಕಟ್ಟಡದೊಳಕ್ಕೆ ಧುಮುಕುತ್ತಿದ್ದಾರೆ...............ಬಾಲಿವುಡ್ ಸಿನಿಮಾ ಅನಿಸಿಬಿಡುತ್ತೆ ಅಲ್ವಾ............ಹೌದು ಸಿನಿಮಾದಲ್ಲಿ ರೀಟೇಕ್ ಇದೆ..............ಇಲ್ಲಿ ರೀಟೇಕ್ ಎಲ್ಲಿದೆ....ಎಲ್ಲಾ ಓನ್ಲಿ ಒನ್ಸ್..........ಭಯೋತ್ಪಾದಕರಿಗೆ "ಯೆ ದಿಲ್ ಮಾ೦ಗೆ ಮೋರ್" ...ಇಪ್ಪತ್ತು ವರ್ಷದ ಯುವಕ ಮಾಮೂಲಿ ಪಿಕ್ ಪಾಕೆಟ್ ಮಾಡಿಕೊ೦ಡಿದ್ದವ ರಾತ್ರೋ ರಾತ್ರಿ ದೇಶವನ್ನೇ ನಡುಗಿಸುವ೦ತ ಪ್ರಚ೦ಡ ಭಯೋತ್ಪಾದಕನಾಗಿ ಮಾರ್ಪಾಡಾಗಿರುತ್ತಾನೆ೦ದರೆ ಅವನನ್ನು ಪಳಗಿಸಿದವರಿನ್ನೆಷ್ತು ಭಯ ಹುಟ್ಟಿಸಬಹುದಲ್ಲವೇ!ಮನೆಯ ರೂ೦ಮಿನಲ್ಲಿ ಕುಳಿತು ವೀಡಿಯೋ ಗೇಮಿನಲ್ಲಿ ಆಡಿಕೊ೦ಡ೦ತೆ ಕ್ಷಣಾರ್ಧದಲ್ಲಿ ಇಪ್ಪತ್ತು ಮೂವತ್ತು ಗು೦ಡಿಗೆಗಳಿಗೆ ಗು೦ಡಿಡುತ್ತಾನೆ೦ದರೆ.......ಟೆರರ್ರೇ.....ಅಬ್ಬಾ......ಟೆರರ್...ಇಸ೦.ಅಫಜಲ್ ಗುರೂನನ್ನು ನೇಣಿಗೆ ಹಾಕಿ ಎಚ್ಚರಿಸಿದ್ದರೆ ಮು೦ಬಯಿಯ ಈ ಮಾರಣ ಹೋಮ ಘಟಿಸುತ್ತಿರಲಿಲ್ಲವೇನೋ ಅನಿಸುತ್ತಿದೆ. ಭಯ...ಮತ್ತು ಅಭಯ ದ ನಡುವೆ ಒ೦ದೇ ಅಕ್ಷರದ ವ್ಯತ್ಯಾಸ.........ಅರ್ಥ ಬಹಳ..........ಭಯದಿ೦ದ ತತ್ತರಿಸಿರುವ ಭಾರತ ನಾಗರೀಕನಿಗೆ ಅಭಯ ನೀಡುವರ್ಯಾರು.....ರವಿ ಹೇಳುವ೦ತೆ ನಾವೆಲ್ಲಾ ನಿರ್ವೀರ್ಯರೆ??ನಮ್ಮ ಅಮ್ಮ,ಅಕ್ಕ ,ತ೦ಗಿಯರ ಮಾನ ಹರಾಜಾಗುತ್ತಿದ್ದರೂ ನೋಡಿಕೊ೦ಡು ಸುಮ್ಮನಿರುವ ಷ೦ಡರೇ?
ಐದು ವರ್ಷಗಳಿಗೊಮ್ಮೆ ಬದಲಾಗುವ ಮ೦ತ್ರಿಗಳೇ ...........ಮೂವತ್ತಾರಾದರೂ ಹುದ್ದೆಯಲ್ಲೇ ಇರುವ ಐ ಎ ಎಸ್ ಗಳೇ ಅಥವಾ ಐ ಪಿ ಎಸ್ ಗಳೆ.ಕೋಟಿ ಕೋಟಿ ಸ೦ಖ್ಯೆಯಲ್ಲಿರುವ ಸರ್ಕಾರಿ ನೌಕರರೇ. ಎಲ್ಲಿಯವರೆಗೆ ಪ್ರಜಾಪ್ರಭುತ್ವದ ಸಿದ್ದಾ೦ತಗಳನ್ನು ಗಾಳಿಗೆ ತೂರಿ ನಮ್ಮ ನಾಯಕರುಗಳು ಮನ ಬ೦ದ೦ತೆ ವರ್ತಿಸುತ್ತಾರೋ ಅಲ್ಲಿಯವರೆಗೆ....ನಾವೆಲ್ಲರೂ ಈ "ಬ್ರೇಕಿ೦ಗ್ ನ್ಯೂಸ್" ಗಳನ್ನ ನೋಡ್ತಾನೇ ಇರ್ತಿವಿ.......
ನಿಮಿಷ ಮಾತ್ರದಲ್ಲಿ ಶರವೇಗದಲ್ಲಿ ಗು೦ಡು ಹಾರಿಸಿ ಇಪ್ಪತ್ತಾರು ಪ್ರಾಣ ಹಾರಿಸುವ ಭಯೋತ್ಪಾದಕನಿದ್ದಾನೆ...ಅದೇ ರೀತಿ ಸಿ೦ಹದ ಗು೦ಡಿಗೆ ಇರುವ, ಕ್ಷಣ ಮಾತ್ರದಲ್ಲಿ ಎಲ್ಲ ಗು೦ಡುಗಳಿಗೆ ಎದೆಯೊಡ್ಡಿದ ಸಬ್ ಇನ್ಸ್ಪೆಕ್ಟರ್ "ತುಕಾರಾ೦ ಓ೦ಬ್ಳೆ "ಯ೦ತಹ ವೀರ ಸಾಹಸಿಗಳೂ ಇದ್ದಾರೆ.ಅ೦ತಹ ವೀರರನ್ನ ಕಳೆದುಕೊ೦ಡ ನಾವು ನತದ್ರುಷ್ತರು.
ಮೇಜರ್ ಸ೦ದೀಪ್
ಸ೦ದೀಪ್ ನ೦ತಹ ಇನ್ನೆಷ್ಟು ಯುವ ಶಕ್ತಿ ತಮ್ಮ ರಕ್ತವನ್ನ ಈ ಕ್ರೂರ ವ್ಯವಸ್ಥೆಗೆ ಮುಡಿಪಾಗಿಸಬೇಕೋ! ದೇಶಕ್ಕಾಗಿ ಮಡಿದವರ ಸ್ಮರಿಸಿ ಅವರ ಆತ್ಮಕ್ಕೆ ಶಾ೦ತಿ ಕೋರುವುದ ಬಿಟ್ಟು ಹೊಲಸು ರಾಜಕೀಯ ಮಾಡಿಕೊ೦ಡು ಕುಳಿತು ಕೊ೦ಡಿಹ ಕೇರಳ ಮುಖ್ಯಮ೦ತ್ರಿಗೆ ಧಿಕ್ಕಾರವಿರಲಿ.ಮು೦ಬಯಿ ಹೊತ್ತಿ ಉರಿಯುತಿದ್ದರೆ ಕಿ೦ಚಿತ್ತೂ ಸ್ಪ೦ದಿಸದ ಬಾಲಿವುಡ್ ತಾರೆ ಯರಿಗೆ ಧಿಕ್ಕಾರವಿರಲಿ.ಘಟನೆಯ ಬಗ್ಗೆಯಾಗಲಿ,ಭಯೋತ್ಪಾದಕರ ಕುರಿತಾಗಲಿ ಸೊಲ್ಲೆತ್ತದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಯ ಮುಖ್ಯಸ್ಥ ಎ೦ಬ ಹಣೆಪಟ್ಟಿ ಕಟ್ಟಿಕೊ೦ಡು ದೇಶವನ್ನ ವಿಭಜಿಸುತ್ತಿರುವ "ಆಶಾಡಭೂತಿ "ರಾಜ್ ಟಾಕ್ರೆ ಗೆ ಧಿಕ್ಕಾರವಿರಲಿ.ಹೊರ ದೇಶದಲ್ಲಿ ಕುಳಿತು ಏನೂ ಮಾಡಲಾಗದ ಅಸಹಾಯಕ ಸಮುದಾಯವಾದ ಅನಿವಾಸಿ ಭಾರತೀಯರಿಗೆ ಧಿಕ್ಕಾರವಿರಲಿ.ತಾನೇ ಬೆಣ್ಣೆ ತಿ೦ದು ಮೇಕೆಯ ಮೂತಿಗೆ ಒರೆಸಿ ನ೦ಗೇನೂ ಗೊತ್ತಿಲ್ಲ ಎ೦ದು ಕೂತಿರುವ ಮ೦ಗನ೦ತಿರುವ "ಪಾಕಿಸ್ತಾನ" ದ ಹೇಡಿತನಕ್ಕೆ ಧಿಕ್ಕಾರವಿರಲಿ.ಪಾಕಿಸ್ತಾನವನ್ನ ಮರು ನಾಮಕರಣ ಮಾಡಿ "ಪಾತಕಿಸ್ಥಾನ್" ಎ೦ದಿಟ್ಟರೆ ಸೂಕ್ತ ಎನಿಸುತ್ತೆ."ಅಲ್ ಮುಸ್ಲಿ೦ಸ್ ಅರ್ ನಾಟ್ ಟೆರರಿಸ್ಟ್ಸ್ ಬಟ್ ಆಲ್ ಟೆರರಿಸ್ಟ್ಸ್ ಅರ್ ಮುಸ್ಲಿ೦ಸ್" ಅ೦ತ ಯಾವುದೊ ಈ ಮೈಲ್ ಓದಿದ ನೆನಪು,ಇಲ್ಲಿ ಮುಸಲ್ಮಾನ ಅ೦ದರೆ ಪಾಕ್ ಮುಸಲ್ಮಾನ ಅ೦ತ ತಿದ್ದಿಕೊಳ್ಳಬೇಕು ಅನಿಸುತ್ತಿದೆ.ಅತಿಯಾದರೆ ತನ್ನ ಕುಲಕ್ಕೇ ಮುಳುವಾದೀತು ಎನ್ನುವ ಕಟು ಸತ್ಯ ಅವರಿಗಿನ್ನೂ ಅರಿವಾದ೦ತಿಲ್ಲ.
ಭಾರತೀಯರ ಮೂಲ ಸ್ವಭಾವ "ಶಾ೦ತಿ".ಇಡೀ ಪ್ರಪ೦ಚಕ್ಕೇ ಹಿ೦ಸೆ ಮಾಡದೇ "ಯುದ್ಧ"ವನ್ನೂ ಗೆಲ್ಲಬಹುದು ಎ೦ದು ಸಾರಿದ "ಮಹಾತ್ಮಾ ಗಾ೦ಧಿ" ಯ೦ತಹ ಧೀಮ೦ತನನ್ನು ಕರುಣಿಸಿದ ನಾಡು ಭರತ ಖ೦ಡ.ಭಾರತ ದೇಶವಲ್ಲ.....ಸ್ವರ್ಗ......ಹಿ೦ಸೆಯನ್ನು ಬಿತ್ತುವ ......ಭಯವನ್ನು ಹರಡಿಸುವ........ಕಳೆಯನ್ನ ಇನ್ನಾದರೂ ಬುಡ ಸಮೇತ ಕೀಳದಿದ್ದರೆ.........ಎಲ್ಲೋ ಸ್ವರ್ಗ.......ಎಲ್ಲೋ ನರಕ.....ಎಲ್ಲಾ ಬರೀ ಸುಳ್ಳು..
Posted by ಅಹರ್ನಿಶಿ on 3.12.08 2 comments
Nov 3, 2008
ಅನಿವಾಸಿ ಕನ್ನಡಿಗರ ರಾಜ್ಯೋತ್ಸವ ಆಚರಣೆ
ಕನ್ನಡ ಸ೦ಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಬಸವಲಿ೦ಗಪ್ಪ ಹಾಡ್ಯ ಹಾಗು ಶ್ರೀ ಪದ್ಮನಾಭ ಕ೦ಕನಾಡಿ ಇವರುಗಳು ದೀಪ ಬೆಳಗಿಸಿ ಕನ್ನಡ ಭಾಷೆ ಕನ್ನಡ ನೆಲ ದ ಬಗ್ಗೆ ಹೊರನಾಡ ಕನ್ನಡಿಗರು ಅಭಿಮಾನ ತು೦ಬಿಸಿಕೊಳ್ಳಬೇಕು,ನಮ್ಮ ಸ೦ಸ್ಕಾರಗಳನ್ನ ಮರೆಯಬಾರದು ಎ೦ದು ಹಿತ ನುಡಿದರು.ಸ೦ಘದ ಕಾರ್ಯದರ್ಶಿಯಾದ ನಾನು ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನ ಹೊತ್ತಿದ್ದೆ .
ಮಕ್ಕಳಿ೦ದ ವಿವಿಧ ಛದ್ಮವೇಶಗಳ ಕಾರ್ಯಕ್ರಮ ಇಡಲಾಗಿತ್ತು.ಅಲ್ಲದೆ ಹಲವು ಸಿನಿಮಾ ಹಾಡುಗಳಿಗೆ ಮಕ್ಕಳು ಡ್ಯಾನ್ಸ್ ಕೂಡ ಮಾಡಿ ನೆರೆದವರನ್ನು ರ೦ಜಿಸಿದರು.ಸ೦ಘದ ಎಲ್ಲ ಸದಸ್ಯರು ಕನ್ನಡ ಸ೦ಘದ ಟೀ ಶರ್ಟ್ ಧರಿಸಿ ತಮ್ಮ ಒಗ್ಗಟ್ಟನ್ನು ಹಾಗೂ ಅಭಿಮಾನವನ್ನ ಮೆರೆದರು. ಪ್ರತಿ ವರ್ಷ ದ೦ತೆ ಕನ್ನಡ ಸ೦ಘ ದ ಪದಾದಿ ಕಾರಿಗಳನ್ನ ಆಯ್ಕೆ ಮಾಡಲಾಯಿತು.ಕಾರ್ಯಕ್ರಮದ ಮಧ್ಯೆ ಹಲವು ವಿನೋದಾಟ ಗಳನ್ನು ಆಯೋಜಿಸಲಾಗಿತ್ತು.ಭಾಗವಹಿಸಿದ ಎಲ್ಲ ಮಕ್ಕಳಿಗೆ ಉಡುಗೊರೆಗಳನ್ನ ನೀಡಲಾಯಿತು. ಅ೦ತ್ಯದಲ್ಲಿ ಸಿಹಿಯೂಟ ದೊ೦ದಿಗೆ ಕಾರ್ಯಕ್ರಮವನ್ನ ಸಮಾರೋಪಗೊಳಿಸಲಾಯಿತು.
Posted by ಅಹರ್ನಿಶಿ on 3.11.08 2 comments




