Jun 20, 2008

ಕನ್ನಡ-ಕನ್ನಡಿಗ-ಕಿಲಿಮ೦ಜಾರೋ


ಎಲ್ಲರ೦ತೆ ಬೆಟ್ಟ ಹತ್ತಿ ಇಳಿದ೦ತಲ್ಲ ಮೌ೦ಟ್ ಕಿಲಿಮ೦ಜಾರೋವನ್ನು ಹತ್ತಿ ಇಳಿಯುವುದು.ಆಫ್ರಿಕಾದಲ್ಲಿದ್ದೂ ತಾ೦ಜಾನಿಯದಲ್ಲೇ ಇದ್ದು ನಮಗೆ ದಕ್ಕದ ಭಾಗ್ಯ ನಮ್ಮ ಪ್ರಶಾ೦ತ್ ಗೆ ದಕ್ಕಿದೆ.ಬೀರೂರಿನವರಾದ ಇವರು ತಾ೦ಜಾನಿಯಾದ ಅರುಶ ಎ೦ಬ ನಗರದಲ್ಲಿ ನೌಕರಿಯಲ್ಲಿದ್ದಾರೆ.ಪರ್ವತವನ್ನ ಹತ್ತಿದ್ದಲ್ಲದೆ ಅಲ್ಲಿ ಕನ್ನಡ ಬಾವುಟವನ್ನ ಹಾರಿಸಿದ್ದು ಅವರ ಕನ್ನಡ  
ಪ್ರೇಮವನ್ನ ಸಾರಿ ಹೇಳುತ್ತೆ.ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬೇಕಾದ ವಿಷಯ.ಕರುನಾಡಿನ ಹೆಮ್ಮೆಯನ್ನು ಆಫ್ರಿಕಾದ ಅತೀ ಎತ್ತರದಲ್ಲಿ ಹಾರಿಸಿದ ಸಂತಸದೊಂದಿಗೆ ವಾಪಸ್ ಬಂದೆ.ಇದು ಕನ್ನಡಿಗನ ಸಾಧನೆ.
ಮರಗಟ್ಟುವ ಚಳಿಯಲ್ಲಿ ಆಫ್ರಿಕಾದ ಅತಿ ಎತ್ತರದ, ವಿಶ್ವದ ಅತಿ ವಿಶಾಲವಾದ ಜ್ವಾಲಾಮುಖಿ ಪರ್ವತ ಕಿಲಿಮಾಂಜರೊ ತುದಿ ತಲುಪುವುದು ಸಾಮಾನ್ಯದ ಮಾತಲ್ಲ. ಆದರೆ, ಪ್ರಯಾಸದಿಂದ ತುತ್ತತುದಿ ತಲುಪಿದಾಗ ಸ್ವರ್ಗ ಮೂರೇ ಗೇಣು. ಅಂಥ ಪ್ರಯಾಸದ ಚಾರಣ ಯಶಸ್ವಿಯಾಗಿ ಮುಗಿಸಿ, ಕಿಲಿಮಾಂಜರೊ ತುದಿಯ ಮೇಲೆ ಪ್ರಪ್ರಥಮ ಬಾರಿಗೆ ಕನ್ನಡ ಧ್ವಜ ಹಾರಿಸಿದ ಸಂತಸವನ್ನು ಪ್ರಶಾಂತ್ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಮೈನವಿರೇಳಿಸುವ ಅನುಭವದ ಓದು ನಿಮ್ಮದಾಗಲಿ.ಲೇಖನ : ಪ್ರಶಾಂತ್ ಬೀಚಿ, ತಾನ್ಜಾನಿಯ(ದಟ್ಸ್ ಕನ್ನಡದಿ೦ದ)

ಕಿಲಿಮಂಜರೊ ಆಫ್ರಿಕಾದಲ್ಲೇ ಅತೀ ಎತ್ತರವಾದ ಪರ್ವತ. ಇದು ಪ್ರಪಂಚದ ಅತೀ ವಿಶಾಲವಾದ ಜ್ವಾಲಾಮುಖಿ ಪರ್ವತ, ಅಷ್ಟೆ ಅಲ್ಲ ಸ್ವಂತ ಶಕ್ತಿಯಮೇಲೆ ನಿಂತಿರುವ ಅತೀ ಎತ್ತರವಾದ ಪರ್ವತ ಕೂಡ. ಇಷ್ಟೆಲ್ಲಾ ವಿಪರೀತಗಳನ್ನು ಹೊಂದಿರುವ ಪರ್ವತ ಏರಲು ಪ್ರಪಂಚದ ಮೂಲೆ ಮೂಲೆಗಳಿಂದ ಪರ್ವತರೋಹಿಗಳು ಬರುತ್ತರೆ. ನಾನು ಈ ಪರ್ವತದ ಪಕ್ಕದಲ್ಲೆ ಇದ್ದು ಹತ್ತದಿದ್ದರೆ ಎಂತಹ ಅನಾಹುತ ಅಲ್ಲವೆ?

ಈ ಪರ್ವತ ಹತ್ತಲು ಸುಮಾರು ಅರವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಬೇಕಾಗುತ್ತದೆ, ಸುಮ್ಮನೆ ಅಷ್ಟೊಂದು ದುಡ್ಡು ಸುರಿದು ಶ್ರಮ ಪಡುವುದು ಒಳಿತೆ ಎಂದು ನನ್ನ ಯೋಜನೆಯನ್ನು ಮುಂದೂಡುತ್ತಲೆ ಬಂದಿದ್ದೆ. ನನ್ನ ಅದೃಷ್ಟವೆನ್ನುವಂತೆ, ನನ್ನ ಹೆಂಡತಿ ಕೆಲಸ ಮಾಡುತ್ತಿದ್ದ ಶಾಲೆಯಿಂದ ಕೆಲವು ಮಕ್ಕಳನ್ನು ಕರೆದುಕೊಂಡು ಆ ಪರ್ವತ ಹತ್ತಲು ಹೊರಟಿದ್ದರು. ನನ್ನ ಆಸೆ ತಿಳಿದಿದ್ದ ನನ್ನ ಹೆಂಡತಿ ಶಾಲೆಯಿಂದ ಏನೆನೊ ಸುಬೂಬು ಹೇಳಿ ಅವಳೊಂದಿಗೆ ನನ್ನನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದಳು. ಎಪ್ಪತ್ತು ಸಾವಿರ ಆಗುತ್ತಿದ್ದ ಖರ್ಚನ್ನು ಕೇವಲ ಇಪ್ಪತ್ತು ಸಾವಿದರಲ್ಲಿ ಸರಿದೂಗಿಸಿದಳು.

ಎಲ್ಲವೂ ಸರಿ, ಆದರೆ ನಾವು ಆ ಪರ್ವತವನ್ನು ಹತ್ತಲು ಸಮರ್ಥರೆ? ನಮ್ಮಲ್ಲಿ ಆ ಮಟ್ಟದ ಸಾಮರ್ಥ್ಯ ಇದೆಯೆ? ನಮ್ಮ ಆರೋಗ್ಯ ಆ ಪರ್ವತಾರೋಹಣಕ್ಕೆ ಯೋಗ್ಯವಾಗಿದೆಯೇ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು. ಅದನ್ನೆಲ್ಲ ಸರಿದೂಗಿಸಲು ಎರಡು ತಿಂಗಳು ಪೂರ್ವ ತಯಾರಿ ನೆಡೆಸಿಕೊಂಡೆವು. ಹತ್ತಿರದಲ್ಲಿ ಇದ್ದ ಸಣ್ಣ ಸಣ್ಣ ಬೆಟ್ಟಗಳನ್ನು ಹತ್ತಿ ಇಳಿದೆವು. ದಿನಕ್ಕೆ ಇಪ್ಪತ್ತು ಕಿಲೋ ಮೀಟರ್‌ಗಳಂತೆ ನೆಡೆದೆವು. ಪ್ರರ್ವತದ ಮೇಲಿನ ಚಳಿಗೆ ಹೊಂದಿಕೊಳ್ಳುವಂತಹ ಬಟ್ಟೆಗಳು, ಪರ್ವತ ಹತ್ತಲು ಅನುಕೂಲವಾಗುವಂತಹ ಶೂ, ಹೀಗೆ ನಮ್ಮ ತಯಾರಿ ಬಹಳ ಜೋರಾಗೆ ನೆಡೆಯಿತು.

ಪ್ರವಾಸ ಪ್ರಯಾಸ : ಐದು ಸಾವಿರದ ಎಂಟುನೂರ ತೊಂಬತ್ತೈದು ಮೀಟರ್, ತುದಿಯ ಮೇಲೆ ಮೈನಸ್ ಹದಿನೈದು ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಚಳಿಯಲ್ಲಿ ಮಂಜುಗಡ್ಡೆಯ ಮೇಲೆ ನಮ್ಮ ಆಟ ನೆಡೆಯುವುದಿಲ್ಲ. ಹತ್ತುವಾಗ ಆಮ್ಲಜನಕ ಕಡಿಮೆ ಇರುತ್ತದೆ, ಉಸಿರಾಟಕ್ಕೆ ಬಹಳ ತೊಂದರೆ ಆಗುತ್ತದೆ, HAS (High Altitude Sickness) ಎಂಬ ಖಾಯಿಲೆ ನಮ್ಮಿಂದ ವಾಂತಿ ಮಾಡಿಸುತ್ತದೆ,  ಸುಸ್ತಾಗಿ ಕುಳಿತರೆ ಮೈ  ಕೈಗಳು ಹಾಗೆ ಸೆಟೆದುಕೊಳ್ಳುತ್ತವೆ, ಕೊರೆಯುವ ಚಳಿಯಲ್ಲಿ ನಡೆಯಲು ಆಗದ ಕೂರಲು ಆಗದ ಪರಿಸ್ಥಿತಿ ನಮ್ಮದಾಗುತ್ತದೆ. ಇಷ್ಟೆಲ್ಲಾ ವಿಪರೀತಗಳ ನಡುವೆ ನಾವು ಹೋಗಲು ನಿರ್ಧರಿಸಿದ್ದೆವು. ಸುಮಾರು ಆರು ದಿನಗಳ ಈ ಪ್ರವಾಸ ಒಂದು ಪ್ರಯಾಸವೆ.

ಮೊದಲನೇ ದಿನದ ಮಧ್ಯಾನ್ಹ ಒಂದು ಘಂಟೆಗೆ ಶುರುಮಾಡಿದ ನಾವು ಆರನೆ ದಿನದ ಸಂಜೆ ಐದು ಗಂಟೆಯವರೆಗೂ ನೆಡೆಯುತ್ತಲೆ ಇದ್ದೆವು. ದಿನಕ್ಕೆ ಹದಿನೈದು ಕಿಲೋಮೀಟರ್‌ನಂತೆ ಆರು ದಿನಗಳು ನೆಡೆದೆವು. ಸಮತಟ್ಟಾದ ನೆಲವಾಗಿದ್ದರೆ ಏನೂ ತೊಂದರೆ ಇಲ್ಲ, ಆದರೆ ಪರ್ವತ ಹತ್ತುವುದು ಇದೆಯಲ್ಲಾ ಅದರಂತಹ ನರಕಯಾತನೆ ಇನ್ನೊಂದಿಲ್ಲ. ಮೊದಲ ಮೂರು ದಿನ ಏನೂ ಅನ್ನಿಸಲಿಲ್ಲ, ಏಕೆಂದರೆ ಅದು ಪೂರ್ತಿಯಾಗಿ ಏರಿಕೆ ಇರಲಿಲ್ಲ. ಅಲ್ಲಲ್ಲಿ ಸಮತಟ್ಟಾದ ಭೂಮಿಯೂ ಇತ್ತು. ನಾಲ್ಕನೆ ದಿನದ ರಾತ್ರಿ ಹನ್ನೊಂದು ಗಂಟೆಗೆ ಹತ್ತಲು ಶುರುಮಾಡಿದ ಯಾತ್ರೆ ಮಾತ್ರ ಮರೆಯಲಾಗುವುದಿಲ್ಲ. ಒಂದು ಮೀಟರ್ ಮೇಲೆ ಹೋಗಲು ಸುಮಾರು ನಾಲ್ಕು ಮೀಟರ್‌ನಷ್ಟು ನೆಡೆಯಬೇಕಿತ್ತು. ಜಿಗ್-ಜಾಗ್ ಮಾದರಿಯಲ್ಲಿ ನಾವು ನೆಡೆಯುತ್ತಿದ್ದೆವು. ನೇರವಾಗಿ ನೇಡೆಯುವುದು ಅಸಾಧ್ಯವಾಗಿತ್ತು, ನಾವು ಹೆಜ್ಜೆ ಇಟ್ಟರೆ ಕಾಲುಗಳು ಹಾಗೆ ಕೆಳಕ್ಕೆ ಬರುತ್ತಿದ್ದವು, ಪರ್ವತದ ಆ ಮಣ್ಣು ನಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ. ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ, ಪರ್ವತವನ್ನು ಹತ್ತಲು ಬಂದಿದ್ದಕ್ಕೆ ನಮ್ಮನ್ನು ನಾವೆ ಶಪಿಸಿಕೊಳ್ಳುತ್ತಾ ನೆಡೆಯುತ್ತಿದೆವು. ಸುಮಾರು ನಾಲ್ಕು ತಾಸುಗಳ ನಂತರ ಒಂದು ಗುಹೆ ಸಿಕ್ಕಿತು. ಅಲ್ಲಿ ಕೇವಲ ಹತ್ತುನಿಮಿಷ ಕುಳಿತುಕೊಳ್ಳಲು ಅವಕಾಶ. ಮಲಗಿಕೊಂಡರೆ ಆಮ್ಲಜನಕ ಕಡಿಮೆಯಾಗಿ ನಮಗೆ ಗೊತ್ತಾಗದೆ ನಮ್ಮ ಪ್ರಾಣ ಹಾರಿಹೋಗುತ್ತದೆ ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರಿಂದ ಯಾರೂ ಮಲಗಲು ಹೋಗಲಿಲ್ಲ. ಅಲ್ಪ ವಿರಾಮದ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು.  

ಎಲ್ಲರ ಕಾಲು ಪದ ಹೇಳುತ್ತಿದ್ದವು, ಯಾರಿಗೂ ಪರ್ವತ ಏರುವ ಆಸಕ್ತಿ ಇಲ್ಲದಾಗಿತ್ತು. ಆದರೂ ಇಷ್ಟು ಕಷ್ಟ ಪಟ್ಟಿರುವ ನಾವು ಇನ್ನು ಸ್ವಲ್ಪ ಕಷ್ಟಪಟ್ಟರೆ ಪೂರ್ತಿ ಪರ್ವತದ ತುಟ್ಟ ತುದಿಗೆ ತಲುಪಬಹುದು ಎನ್ನುವ ಆಸೆ ಎಲ್ಲರನ್ನು ಹತ್ತಲು ಪ್ರೋತ್ಸಾಹಿಸುತ್ತಿತ್ತು. ಅಲ್ಲಲ್ಲಿ ಕೆಲವರು ವಾಂತಿ ಮಾಡಿಕೊಳ್ಳುವುದು, ಕೈ  ಕಾಲು ಹಿಚುಕಿಕೊಳ್ಳುವುದು, ಅಳುವ ಮುಖ ಮಾಡಿ ಕುಳಿತುಕೊಂಡಿರುವುದು ಸಾಮಾನ್ಯದೃಶ್ಯವಾಗಿತ್ತು. ಯಾರಿಗೂ ಇನ್ನೊಬ್ಬರ ಮೇಲೆ ಕರುಣೆ ಅನ್ನುವುದು ಬರುತ್ತಿರಲಿಲ್ಲ. ನಿಂತಲ್ಲೆ ಕೈ ಎತ್ತಿ, ಇಲ್ಲೆ ಇದೆ ಬನ್ನಿ ಎಂದು ನಮ್ಮ ಗೈಡ್ ಪ್ರತಿ 10 ನಿಮಿಷಕ್ಕೆ ಒಮ್ಮೆ ಹೇಳುತ್ತಿದ್ದ. ನಾವು ಎಲ್ಲಿದ್ದೇವೆ? ಇನ್ನು ಎಷ್ಟು ದೂರ ಇದೆ? ಎನ್ನುವುದು ತಿಳಿದಿರಲಿಲ್ಲ. ರಾತ್ರಿಯ ಕತ್ತಲಲ್ಲಿ ಚಂದ್ರನ ಬೆಳಕಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ತೇಪೆ ಕಾಣಿಸುತ್ತಿತ್ತು.

ಈ ಪರ್ವತವನ್ನು ಹತ್ತುವ ಮೊದಲು ಮಂಜನ್ನು ನೈಸರ್ಗಿಕವಾಗಿ ನಾನು ನೋಡಿರಲಿಲ್ಲ. ಯಾವಾಗ ಮಂಜು ಸಿಗುತ್ತದೊ ಅದರ ಮೇಲೆ ಹತ್ತು ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಆಟವಾಡುತ್ತೇನೆ, ಅದರ ಮೇಲೆ ಮಲಗಿ ಉರುಳಾಡುತ್ತೇನೆ ಎಂದು ಏನೇನೊ ಊಹೆಗಳನ್ನು ಮಾಡಿಕೊಂಡಿದ್ದೆ. ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯ, ಹತ್ತುವಾಗ ಒಂದು ಕಡೆ ಹತ್ತಿಯನ್ನು ಹಾಸಿದ ಹಾಗೆ ಕಾಣಿಸುತ್ತಿತ್ತು. ನನ್ನ ಹಿಂದೆ ಬರುತ್ತಿದ್ದವನು ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಅಲ್ಲಿ ಐಸ್ ಬಿದ್ದೆದೆ ಅಂದ, ನನಗೆ ಸರಿಯಾಗಿ ಕೇಳಿಸಲಿಲ್ಲ. ನಾನು ಹತ್ತಿರ ಹೋದಮೇಲೆ ತಿಳಿಯಿತು ಅದು ಮಂಜುಗಡ್ಡೆಯ ಹಾಸಿಗೆ ಎಂದು. ಹಿಂದೆ ತಿರುಗಿ ನಿಧಾನವಾಗಿ ಹೇಳಿದೆ ನೋಡು ಇಲ್ಲಿ ಮಂಜು ಬಿದ್ದಿದೆ, ನಿನಗೆ ಆಸೆ ಇದ್ದರೆ ಮುಟ್ಟಿ ನೋಡು, ನನಗಂತೂ ಅದರನ್ನು ಮುಟ್ಟುವ ಆಸಕ್ತಿಯೂ ಇಲ್ಲ, ಕೂತರೆ ಏಳುವ ಶಕ್ತಿಯೂ ಇಲ್ಲ ಎಂದು ಹೇಳಿ ನನ್ನ ಆಮೆ ವೇಗದ ಪ್ರಯಾಣವನ್ನು ಮುಂದುವರೆಸಿದೆ. ನಮ್ಮ ಜೊತೆಗಾರರು ಬಹಳ ಜನ ಹಿಂದುಳಿದ ಕಾರಣ ನಾನು ಬೇರೊಬ್ಬ ಗೈಡನ್ನು ಹಿಂಬಾಲಿಸಿ ಹೊರಟೆ. ಒಬ್ಬಳು ಚೈನಿ ಹುಡುಗಿಯನ್ನು ಆತ ಕರೆದುಕೊಂಡು ಹೋಗುತ್ತಿದ್ದ. ಎಲ್ಲೆಲ್ಲಿ ಆ ಹುಡುಗಿ ಕುಳಿತಿಕೊಳ್ಳುತ್ತಾಳೊ ಅಲ್ಲೆ ನಾನು ಕೂಡ ಸುಧಾರಿಸಿಕೊಳ್ಳುತ್ತಿದ್ದೆ. ಕೆಲವು ಕಡೆ ಅವಳು ವಾಂತಿಮಾಡಿಕೊಂಡಳು. ಆದರೂ ಅವಳು ತನ್ನ ಪ್ರಯಾಣವನ್ನು  ನಿಲ್ಲಿಸದೆ ಮುಂದುವರೆಸುತ್ತಿದ್ದಳು. ಈ ರೀತಿಯ ಪರ್ವತ ಹತ್ತುವಾಗ ಸುಧಾರಿಸಿಕೊಳ್ಳಲು ಕೂತರೆ ಇನ್ನೂ ಜಾಸ್ತಿ ಸುಸ್ತಾಗುತ್ತದೆ. ಆಮ್ಲಜನಕ ಕಡಿಮೆ, ಚಳಿ ಜಾಸ್ತಿ ಇದೆ, ಕೊರೆಯುವ ಚಳಿಯಲ್ಲೂ ಕೈ  ಕಾಲು ಉರಿಯುತ್ತಿತ್ತು. ಹಾಗಾಗಿ ಸುಧಾರಿಸಿಕೊಳ್ಳದೆ ಪ್ರಯಾಣವನ್ನು ಮುಂದುವರೆಸುತ್ತಿದ್ದೆವು.

ಹಾರಾಡಿದ ಕನ್ನಡ ಬಾವುಟ : ಕಲ್ಲು ಬಂಡೆಗಳು ಜಾಸ್ತಿಯಾಗುತ್ತ ಬಂತು, ಈಗ ನಾವು ತೆವಳಿಕೊಂಡು ಹೋಗುವ ಪರಿಸ್ಥಿತಿ. ಕೈಲಿದ್ದ ಕೋಲನ್ನು ಸಣ್ಣದಾಗಿ ಮಡಿಚಿಕೊಂಡೆವು, ಕೂತು ನಿಧಾನವಾಗಿ ಬಂಡೆ ಹಿಡಿದು ಹತ್ತಲು ಶುರುಮಾಡಿದೆವು. ಸುಮಾರು ಒಂದು ಗಂಟೆಯ ಈ ಪ್ರಯಾಣದ ಬಳಿಕ ನಾವು ತಲುಪಿದೆವು ಗಿಲ್ಮನ್ಸ್ ಪಾಯಿಂಟ್. ಇಲ್ಲಿಯ ತನಕ ತಲುಪುವುದು ಕೂಡ ಒಂದು ಸಾಹಸವೇ ಸರಿ. ನನ್ನ ಪತ್ನಿ ನವ್ಯ (ನಾಗರತ್ನ) ಇಲ್ಲಿಯವರೆಗು ತಲುಪಿ, ಸೂರ್ಯ ಮೇಲೆ ಬಂದಿದ್ದರಿಂದ ಮುಂದೆ ಬರಲಾಗದೆ ಹಿಂತಿರುಗಿದ್ದಳು.  ಇಲ್ಲಿಂದ ಮುಂದೆ ಸುಮಾರು ಎರಡು ಗಂಟೆಗಳ ಮಂಜಿನ ಮೆರವಣಿಗೆಯ ನಂತರ ನಮಗೆ ಸಿಕ್ಕಿದ್ದು ಉಹುರು ತುಟ್ಟ ತುದಿ. ಅದು ಆಫ್ರಿಕಾದ ಅತೀ ಎತ್ತರವಾದ ಪ್ರದೇಶ, ಪ್ರಪಂಚದ ಅತೀ ಎತ್ತರವಾದ ಜ್ವಾಲಾಮುಖಿ ಹಾಗು ಪ್ರಪಂಚದ ಸ್ವಂತ ಶಕ್ತಿಯ ಮೇಲೆ ನಿಂತ ಅತೀ ಎತ್ತರವಾದ ಪರ್ವತದ ತುಟ್ಟ ತುದಿ.

ನಾನು ತೆಗೆದುಕೊಂಡು ಹೋಗಿದ್ದ ಕರ್ನಾಟಕದ ಬಾವುಟವನ್ನು ಅಲ್ಲಿ ಹಾರಿಸಿ, ಸುತ್ತ ಮುತ್ತಲಿನ ಚಿತ್ರೀಕರಣ ಮಾಡಿಕೊಂಡೆ. ಬಿಸಿಲು ಬರುವುದರೊಳಗೆ ಅಲ್ಲಿಂದ ಕಾಲು ಕೀಳಬೇಕು, ಇಲ್ಲದಿದ್ದರೆ ಅದಕ್ಕಿಂತ ಕಠಿಣ ಮಾರ್ಗ ಇನ್ನೊಂದಿಲ್ಲ. ಹಾಗಾಗಿ ಬೇಗ ಬೇಗ ಎಲ್ಲ ಕೆಲಸ ಮುಗಿಸಿ, ಕರುನಾಡಿನ ಹೆಮ್ಮೆಯನ್ನು ಆಫ್ರಿಕಾದ ಅತೀ ಎತ್ತರದಲ್ಲಿ ಹಾರಿಸಿದ ಸಂತಸದೊಂದಿಗೆ ವಾಪಸ್ ಬಂದೆ. ಸ್ವರ್ಗ ಎಂದರೆ ಹೇಗಿರುತ್ತದೆ ಎಂದು ಪರ್ವತದ ಮೇಲೆ ಕಾಣಿಸುತ್ತದೆ. ಪರ್ವತದ ವಿಶೇಷ ಮತ್ತು ಇದರ ಪೂರ್ಣ ಕಥೆಯನ್ನು ಮತ್ತೊಮ್ಮೆ ಹೇಳುತ್ತೇನೆ. ಸದ್ಯಕ್ಕೆ ಕರ್ನಾಟಕದ ಬಾವುಟ ಆಫ್ರಿಕಾದ ತುಟ್ಟ ತುದಿಯಲ್ಲಿ ಹಾರಿಸಿದ ಸಂತಸವನ್ನು ಚಿತ್ರಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.prashanth@bol.co.tz
ಹೆಚ್ಚಿನ ಚಿತ್ರಗಳಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ.


Jun 12, 2008

ಮೊದಲ ದಿನ ಮೌನ


ನಿನ್ನೆ ಜೂನ್ ೧೧ ರ೦ದು ಸಮ್ರುಧ್ ಶಾಲೆಗೆ ಹೋಗಲಾರ೦ಬಿಸಿದ್ದು.ಅವನು ಶಾಲೆಗೆ ಸೇರಿದ ಕಥೆಯನ್ನ ನಿಮಗೆ ವಿವರಿಸುತ್ತೇನೆ.
ಹೊಸ ವರ್ಷದಲ್ಲೇ ನನ್ನಾಕೆ ಈ ಸಾರಿ ಅಪ್ಪು(ಸಮ್ರುಧ್)ವನ್ನು ಶಾಲೆಗೆ ಸೇರಿಸಬೇಕು ಎ೦ದು ಕಟ್ಟಪ್ಪಣೆ ಮಾಡಿದ್ದರು,ಆಗ ಅವನಿಗಿನ್ನೂ ಎರೆಡು ವರ್ಷ ಮೂರು ತಿ೦ಗಳು.ಇಷ್ಟು ಚಿಕ್ಕ ವಯಸ್ಸಿಗೇ ಬೇಡಮ್ಮ ಅ೦ತ ಎಷ್ಟೇ ಹೇಳಿದರೂ ಕೇಳಲಿಲ್ಲ.ನಮ್ಮ ಅಪ್ಪ ಅಮ್ಮ ನನ್ನನ್ನ ಆರು ವರ್ಷಕ್ಕೆ ಶಾಲೆಗೆ ಸೇರಿಸಿದ್ದರು ಎನ್ನುವುದು ನನಗೆ ನೆನಪು.ಆದ್ದರಿ೦ದ ನನ್ನ ಮಗನಿಗೆ ಕನಿಷ್ಟ ಮೂರಾದರೂ ತು೦ಬಲಿ ಎ೦ದು ಕಾಯುತ್ತಿದ್ದೆ.ಮೂರು ತು೦ಬುವ ಮುನ್ನವೇ ನೆನ್ನೆ ಸೇರಿಸಿಬಿಟ್ಟೆ.

ಮೊದಲ ದಿನ ಶಾಲೆಯಲಿ ಅಪ್ಪುವನ್ನ ಬಿಟ್ಟ ನ೦ತರ ಮೌನ.ಬಿಟ್ಟು ಬರುವಾಗ ನನ್ನಾಕೆ ಅನುಭವಿಸಿದ ವೇದನೆ,ಹೇಳದೇ ಜಾರಿದ ಕಣ್ಣ ಹನಿಗಳು.ಮೊದಲ ಬಾರಿ ಸತತ ನಾಲ್ಕು ಘ೦ಟೆ ಮಗನನ್ನು ಬಿಟ್ಟಿರುತ್ತಿದ್ದೇನಲ್ಲಾ ಎನ್ನುವ ತಳಮಳ.ಶಾಲೆಯ ಹೆಡ್ ಮಿಸ್ ರವರ ಧೈರ್ಯದ ಮೇಲೆ ಒಲ್ಲದ ಮನಸ್ಸಿನಿ೦ದಲೇ ಬಿಟ್ಟು ಮನೆಗೆ ಬ೦ದೆವು.ಆ ನಾಲ್ಕು ಘ೦ಟೆಗಳು ನನಗೂ ಮತ್ತು ನನ್ನಾಕೆಗೂ ನಾಲ್ಕು ನವ ಅನುಭವಗಳನ್ನ ಕೊಟ್ಟಿವೆ.ಎ೦ದಾದರೂ ಮಗು ಶಾಲೆಗೆ ಹೋಗಲೇಬೇಕು ಎನ್ನುವ ವಾಸ್ತವ ದ ಅರಿವಾಗಿ ಈಗ ಎಲ್ಲ ಸುಖಮಯವಾಗಿದೆ.ತಳಮಳ ಎರಡನೇ ದಿನಕ್ಕೆ ಕಮ್ಮಿಯಾಗಿದೆ.

ಶಾಲೆಯ ಬಗ್ಗೆ ನನ್ನಾಕೆಯ ಹಾಗು ಮಗನ ದಿನನಿತ್ಯದ ರಿಹರ್ಸಲ್ ಈಗ ಜೀವನವಾಗಿದೆ,ನಮ್ಮ ಅಪ್ಪ ಅಮ್ಮ ನಮಗೇನು ಮಾಡಿದ್ದರೊ ಗೊತ್ತಿಲ್ಲ,ಪ್ರಪ೦ಚದ ಯಾವ ತ೦ದೆ ತಾಯಿಯರು ಮಾಡಲಾರದ್ದನ್ನ ನಮ್ಮ ಮಗುವಿಗೆ ನಾವು ಮಾಡಬೇಕು ಎನ್ನುವ ಆಕಾ೦ಕ್ಷೆಯೊ೦ದಿಗೆ ಜೀವನ ಸಾಗ್ತಾ ಇದೆ.ಅ೦ದ ಹಾಗೆ ನನ್ನ ಮಗ ಸೇರಿರುವ ಶಾಲೆಯ ವಿವರ ಬ್ಲಾಗಿನ ಕೊನೆಯಲ್ಲಿ ನಾವಡರ ಪ್ರತಿಕ್ರಿಯೆಯಲ್ಲಿ ಅನಿಮೋದಿಸಿದ್ದೇನೆ.ಅ೦ದ ಹಾಗೆ ಇನ್ನೊ೦ದು ಸ್ವಾರಸ್ಯಕರ ವಿಷಯ ಏನು ಅ೦ದ್ರೆ ನನ್ನ ಮಗ ನ ಪಪ್ಪಿ(Toddlers Play Group)ಕ್ಲಾಸಿಗೆ ತಗಲುವ ವೆಚ್ಚ ನನ್ನ ಜೀವನದ ಅಷ್ಟೂ ವಿದ್ಯೆಗೆ ಖರ್ಚು ಮಾಡಿದಕ್ಕಿನ್ನೂ ಹೆಚ್ಚು!!!!

ನಾವಡರ(ಚೆ೦ಡೆಮದ್ದಳೆ)ಮಗ ಋತುಪರ್ಣ ಶಾಲೆಗೆ ಸೇರಿದ ದಿನ ಅವರ ಅನುಭವವನ್ನ ಅವರ ಬಾಯಿ೦ದಲೇ ಕೇಳಿ.

ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ.

ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ.

ಒಂದು ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ನಾವು ಬೆಳೆದು ಬಂದ ಪರಿಯನ್ನು ಹೋಲಿಸುತ್ತಾ ಹೋಗುವುದಿದೆಯಲ್ಲ, ಅದೇ ಬದುಕಿಗೊಂದು ಉತ್ಸಾಹ ತುಂಬುವ ನೆಲೆ ಎನಿಸುತ್ತದೆ ಆಗಾಗ್ಗೆ. ಹೀಗೆ ಎನಿಸಿಕೊಂಡು ನನ್ನ ಅಮ್ಮನನ್ನು ಇಂಥ ದಿನದ ಅಂದಿನ ಸಂಭ್ರಮದ ಬಗ್ಗೆ ಕೇಳಿದೆ. ಅಂದರೆ ನಾನು ಮೊದಲ ದಿನ ಶಾಲೆಗೆ ಹೋದ ಕ್ಷಣಗಳನ್ನು. ಅಮ್ಮ ನೆನೆಸಿಕೊಂಡು ಹೇಳಿದಳು. ಆದರೆ ಅವಳ ಜ್ಞಾಪಕಚಿತ್ರಶಾಲೆಯಲ್ಲೂ ಆ ಚಿತ್ರಗಳೆಲ್ಲಾ ಮಸುಕಾಗಿವೆ.

ನಾನು ಬೆಳೆದದ್ದು ನನ್ನ ದೊಡ್ಡಮ್ಮನ ಮನೆಯಲ್ಲಿ. ಅಂದರೆ ದೊಡ್ಡಮ್ಮ ಎಂದರೆ ತಾಯಿಯ ಅಕ್ಕ ಅಲ್ಲ. ನನ್ನಪ್ಪ ನನ್ನೂರನ್ನು ತ್ಯಜಿಸಿ ಭದ್ರಾವತಿಗೆ ಬಂದಾಗ ಯಾರದೋ ಒಬ್ಬ ಪರಿಚಯಸ್ಥರ ಆಶ್ರಯ ಬೇಕಿತ್ತು. ಆಗ ಸಿಕ್ಕಿದ್ದು ಇವರ ಮನೆ. ಪರಿಚಯವೂ ಆದದ್ದು ನಂತರವೇ. ಆದರೆ ಇಬ್ಬರೂ ಒಂದೇ ಊರಿನವರೆಂಬುದೇ ಪರಿಚಯಕ್ಕೆ ಮೂಲವಾಗಿತ್ತಂತೆ. ಹೀಗಿರುವಾಗ ನನ್ನ ಮನೆಯ ಮಾಲೀಕಿಣಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬರ್‍ತಾ ಇದ್ದದ್ದರಿಂದ ಅವರೇ ನೋಡಿಕೊಳ್ಳಲು ನಿರ್ಧರಿಸಿದರು. ನಂತರ ನನ್ನ ಅಪ್ಪ ಮನೆ ಸ್ಥಳಾಂತರಿಸಿದರೇನೋ ನಿಜ. ಆದರೆ ನಾನು ಆ ಮಾಲೀಕಿಣಿ ಮನೆಯಲ್ಲೇ ಉಳಿದೆ. ಹಾಗೆ ಆದದ್ದು ದೊಡ್ಡಮ್ಮ.

ಹಾಲು ಸಕ್ಕರೆ ಕರಗಿಸಿಕೊಂಡು ಚಪಾತಿ ಅದ್ದಿ ತಿನ್ನುವುದು ಬಹಳ ಇಷ್ಟ. ಹೀಗೆ ಮಕ್ಕಳನ್ನು ಹಿಡಿದುಕೊಂಡು ಹೋಗುವ ಗುಮ್ಮಯ್ಯನ ಹಾಗೆ ಒಂದು ಹೆಂಗಸು ಬರ್‍ತಿತ್ತಂತೆ. ಅವಳು ಹತ್ತಿರದ ಅಂಗನವಾಡಿಯವಳು. ಮಕ್ಕಳನ್ನೆಲ್ಲ ಕರೆದೊಯ್ದು ಸೇರಿಸುವವಳು. ಆಗ ಇದ್ದದ್ದು ಶಿಶುವಿಹಾರ, ಬಾಲವಾಡಿ ಅಂತ. ಇಂಥದ್ದೇ ಒಂದು ಜೂನ್‌ನಲ್ಲಿ ಆ ಹೆಂಗಸು ನಮ್ಮ ಮನೆಯ ಮುಂದೆಯೂ ನಿಂತಳಂತೆ. “ನಿಮ್ಮಲ್ಲಿ ಏನಾದ್ರೂ ಮಕ್ಕಳಿದ್ದವಾ, ಶಾಲೆ ಹೋಗಲಿಕ್ಕೆ’ ಎಂದು ಕೇಳಿದಳಂತೆ. ಅದಕ್ಕೆ ಈ ದೊಡ್ಡಮ್ಮ “ಹೌದು, ಇದ್ದಾನೆ. ಬಹಳ ಗಲಾಟೆ ಮಾಡ್ತಾನೆ. ಆದರೆ ಇನ್ನೂ ವಯಸ್ಸು ಕಡಿಮೆ’ ಎಂದರಂತೆ. ಅದಕ್ಕೆ ಆಕೆ ಎಷ್ಟಾಗಿರಬಹುದು ಎಂದದ್ದಕ್ಕೆ ಐದು ಇನ್ನೂ ತುಂಬಿಲ್ಲ ಎಂದರಂತೆ ಅಮ್ಮ. ವಾಸ್ತವವಾಗಿ ನನಗೆ ಐದು ತುಂಬಲು ಎಂಟು ತಿಂಗಳು ಬಾಕಿಯಿತ್ತು. ಆಕೆ “ಇರಲಿ, ನೋಡೋಣ’ ಎಂದು ಕರೆದೊಯ್ದಳಂತೆ. ಅದೇ ನನ್ನ ಮೊದಲ ದಿನ.

ಬಿಡಿ, ಆಗ ಈ ಅಂಕಗಳ ಲೆಕ್ಕಾಚಾರ ಇರಲಿಲ್ಲ. ಶಾಲೆಗೆ ಹೋಗೋ ಅಭ್ಯಾಸ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದ ಪೋಷಕರೇ ಬಹುಪಾಲು. ಈಗಿನದ್ದು ಹಾಗಲ್ಲ. ಎಲ್‌ಕೆಜಿ ಅಂದರೆ ಮೂರೂವರೆ ವರ್ಷಕ್ಕೇ ಆತನಿಗೆ ಅದು, ಇದು ಎಲ್ಲಾ ಬರಬೇಕು. ನಾವು ಎರಡನೇ ತರಗತಿಗೆ ಬಂದಾಗ ಹತ್ತರ ಮಗ್ಗಿ ದಾಟಿ ಹನ್ನೊಂದಕ್ಕೆ ಬರುತ್ತಿದ್ದವು. ಪುಣ್ಯಕ್ಕೆ ನನ್ನ ಹೆಂಡತಿಗೂ ಇಂದಿನ ಒತ್ತಡದ ಕಲಿಕೆ ಅಷ್ಟೊಂದು ಇಷ್ಟವಿಲ್ಲ. ಹಾಗಾಗಿ ನಾಲ್ಕು ವರ್ಷಕ್ಕೆ ಅವನನ್ನು ಶಾಲೆಗೆ ಸೇರಿಸುತ್ತಿದ್ದೇವೆ. ಅಲ್ಲಿಯವರೆಗೆ ಯಾವ ಬಾಲವಾಡಿಗೂ ಕಳಿಸಲಿಲ್ಲ. ಇದು ನನ್ನ ಹೆಗ್ಗಳಿಕೆ ಎಂದೇನೂ ಅಲ್ಲ. ಬಾಲ್ಯವನ್ನು ಅನುಭವಿಸಲಿ ಎಂದು ಸುಮ್ಮನಿದ್ದೆವು.
ಹೀಗೆ ಶಾಲೆಗೆ ಸೇರಿಸಿಕೊಂಡಾಕೆಗೆ ನನ್ನ ಮೇಲೆ ವಿಶ್ವಾಸ ಬಂದಿತ್ತಂತೆ. ಒಂದು ವಾರ ನನ್ನ “ಚಲನವಲನ’ ಕಂಡ ಆಕೆ ಮತ್ತೊಂದು ದಿನ ದೊಡ್ಡಮ್ಮನ ಎದುರು ಬಂದು “ಇರಲಿ ಬಿಡಿ’ ಎಂದಳಂತೆ. “ಅಲ್ಲಮ್ಮಾ, ಅವನಿಗೆ ಐದು ವರ್ಷವಾಗಿಲ್ಲ’ ಎಂದದ್ದಕ್ಕೆ ಅವಳೇ ಒಂದು ಲೆಕ್ಕ ಬರೆದು ವರ್ಷ ಪೂರ್ಣಗೊಳಿಸಿ ಹಾಕಿದಳು. ಅದರ ಪರಿಣಾಮ ನನ್ನ ಜನ್ಮ ದಿನಾಂಕ ಒಂದೂವರೆ ವರ್ಷ ಹೆಚ್ಚೂ ಕಡಿಮೆಯಾಗಿದೆ !

ಆಗ ನಾನೂ ಸ್ವಲ್ಪ ದಪ್ಪಗೆ, ಎತ್ತರಕ್ಕೆ ( ಆ ವಯಸ್ಸಿಗೆ) ಇದ್ದನಂತೆ. ಯಾವ ಎಜುಕೇಷನ್ ಇನ್ಸ್‌ಪೆಕ್ಟರ್‌ಗಳೂ ಕೇಳಿರಲಿಲ್ಲ. ನಾನು ಶಾಲೆಗೆ ಹೋಗಿ ಕುಳಿತುಕೊಳ್ಳಲು ಕಲಿತೆ. ಅಕ್ಷರವೆಲ್ಲಾ ಕಲಿತದ್ದು ಎಷ್ಟೋ ಗೊತ್ತಿಲ್ಲ. ನನ್ನ ಅಮ್ಮನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ದೊಡ್ಡಮ್ಮ ಸಹ ಓದದ ದಿನ ಎರಡು ಚಪಾತಿ ಕಡಿಮೆ ಕೊಡುತ್ತಿದ್ದರಷ್ಟೇ !

ಒಂದೂ ಬೈಗುಳ ಉಡುಗೊರೆಯಾಗಿ ಕೊಡುತ್ತಿರಲಿಲ್ಲ. ತೀರಾ ಮಿತಿ ಮೀರಿದರೆ ಅಪ್ಪನಿಗೆ ದೂರು ಹೇಳುತ್ತಿದ್ದರು. ನಂತರ ನಾನೂ ದೊಡ್ಡವನಾಗುತ್ತಿದ್ದಂತೆಯೇ ನನ್ನ ತಲೆ ಹರಟೆ ಹೆಚ್ಚಾಯಿತೋ, ಅವರ ದೂರು ಹೇಳುವ ಪ್ರವೃತ್ತಿ ಹೆಚ್ಚಾಯಿತೋ ಗೊತ್ತಿಲ್ಲ. ಪ್ರತಿ ಭಾನುವಾರ ಅಪ್ಪನ ಎದುರು ವಿಚಾರಣೆ ನಡೆಯುತ್ತಿತ್ತು. ನಾನು ತಲೆತಗ್ಗಿಸಿಕೊಂಡು ನಿಲ್ಲುತ್ತಿದ್ದೆ. ನನ್ನ ದೊಡ್ಡಮ್ಮ ನನ್ನನ್ನು ಕರೆದುಕೊಂಡು ಹೋಗಿ “ಪೂಜೆ’ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಾನೂ ಸುಮ್ಮನೆ ಹಿಂಬಾಲಿಸಿಕೊಂಡು ಬರುತ್ತಿದ್ದೆ. ಇದು ಪ್ರತಿ ವಾರದ ಕಾರ್‍ಯಕ್ರಮ.

ಹೀಗೆ ಸಾಗಿ ಹೋಗುವ ನನ್ನ ಶಾಲಾ ದಿನಗಳ ನೆನಪು ನನ್ನ ಮಗನನ್ನು ನೆನಪಿಸುತ್ತಿದೆ. ಶಾಲಾ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಇರುವ ಅವಕಾಶ ಅತ್ಯಂತ ಕಡಿಮೆಯೆನ್ನುವುದೂ ಹೌದು. ಅವನು ಅಜ್ಜನ ಮನೆಯಲ್ಲಿ ಓದಿದರೆ, ನಾನಿರುವುದು ಮೈಸೂರಿನಲ್ಲಿ. ಈಗ ಊರಿನಲ್ಲಿ ಜಿರಾಪಟಿ ಮಳೆ ಶುರುವಾಗಿರುವ ಹೊತ್ತು. ಒಂದು ಮಳೆಗಾಲಕ್ಕೆ ಸಿದ್ಧಗೊಳ್ಳುವ ಪರಿ ಅದ್ಭುತ. ಈಗೀಗ ಆಧುನಿಕ ಜೀವನ ಶೈಲಿ, ಮಿತ ಕುಟುಂಬಗಳೆಲ್ಲಾ ಆ ಸಂಭ್ರಮವನ್ನು ಕಡಿತಗೊಳಿಸಿರುವುದು ಸತ್ಯ. ಇದರರ್ಥ ಕುಟುಂಬ ಯೋಜನೆ ವಿರೋಧಿ ನಾನಲ್ಲ. ಆದರೆ ಎಲ್ಲರಿಗೂ ಎಂದು ಹಂಚಿಕೊಳ್ಳುವ ಸಂಭ್ರಮದ ಕ್ಷೀಣವಾಗುತ್ತಿದೆ. ಆಗಲೇ ಹೇಳಿದೆನಲ್ಲ, ಮಳೆಗಾಲಕ್ಕೆ ಸಿದ್ಧವಾಗುವ ಪರಿ. ಶಿವರಾಮ ಕಾರಂತರ “ಮರಳಿ ಮಣ್ಣಿಗೆ’ ಕಾದಂಬರಿ ಓದಬೇಕು.

ಅವನೂ ಮಳೆಗಾಲದ ಸಂಭ್ರಮವನ್ನು ತನ್ನೊಳಗೆ ತುಂಬಿಕೊಳ್ಳಲು ಹೊರಟಿದ್ದಾನೆ. ಜತೆಗೆ ನಾನೂ ಇದ್ದೇನೆ. ಒಂದೆರಡು ಮಳೆಯ ಹನಿಗಳನ್ನು ನನ್ನೊಳಗೆ ತುಂಬಿಕೊಂಡು ಬರುತ್ತೇನೆ ; ಜತೆಗೆ ಮಗನನ್ನು ಬಿಟ್ಟು ಇರಬೇಕೆಂಬ ಅನಿವಾರ್ಯದ ಅಗಲಿಕೆಯ ಎರಡು ಕಣ್ಣ ಹನಿಗಳೊಂದಿಗೂ…
ಅಂದ ಹಾಗೆ ನನ್ನ ಮಗನ ಹೆಸರು ಹೇಳಲು ಮರೆತಿದ್ದೆ… ಋತುಪರ್ಣ.

ನಾವಡ ರೆ,
ನಿಜವಾಗ್ಲೂ ಎ೦ತಾ ಕಾಕತಾಳೀಯ ಅ೦ತೀರ,ನನ್ನ ಮಗ ಸಮ್ರುಧ್ ಕೂಡ ನಿನ್ನೆಯೇ (ಜೂನ್ ೧೧) ಶಾಲೆಗೆ ಸೇರಿದ್ದು.ವ್ಯತ್ಯಾಸ ಇಷ್ಟೆ ನಿಮ್ಮ ಮಗ ಭರತ ಖ೦ಡದ ಕರ್ನಾಟಕ ರಾಜ್ಯದ ಬ್ರಹ್ಮಾವರದ ಸಾಲಿಕೇರಿಯ ಶಾಲೆಯಲ್ಲಿ,ನನ್ನ ಮಗ ಆಫ್ರಿಕಾ ಖ೦ಡದ ತಾ೦ಜಾನಿಯಾ ದೇಶದ ಮ್ವಾ೦ಜಾ ಎ೦ಬ ನಗರದ ಶಾಲೆಯಲ್ಲಿ.ಶಾಲೆ ಯಾವುದಾದರೇನು,ಮನಸ್ಸಿನ ಭಾವನೆಗಳು ಒ೦ದೇ ಅಲ್ಲವೇ.ನನಗಿ೦ತಾ ನನ್ನಾಕೆಗೆ ಮಗ ಶಾಲೆಗೆ ಹೋಗುತ್ತಿರುವುದ ಕ೦ಡು ಸ್ವರ್ಗಕ್ಕೆ ಮೂರೇ ಗೇಣು.ಅ೦ದ ಹಾಗೆ ನನ್ನ ಮಗನಿಗಿನ್ನೂ ಮೂರೇ ವರ್ಷ.ಮೊದಲ ದಿನ ಶಾಲೆಯಲ್ಲಿ ಬಿಟ್ಟ ನ೦ತರ ಬರೀ ಮೌನ.ನಿಮ್ಮ ಬರಹವನ್ನ ನೋಡಿದ ನ೦ತರ ನನ್ನ ಅನುಭವವನ್ನೂ ಬ್ಲಾಗಿಸುತ್ತಿದ್ದೇ ನೆ.ಬಿಡುವಾದಾಗ ಭೇಟಿ ಕೊಡಿ.Good luck to Rutuparna.