Nov 22, 2007

ಜೋಕ್(ಆನೆ+ಇರುವೆ ಮದುವೆ)


ಆನೆ ಮತ್ತು ಇರುವೆಗೆ ಮದುವೆಯಾಯ್ತು,
ಮೊದಲ ರಾತ್ರಿಯೇ ಆನೆ ಸತ್ತು ಹೊಯ್ತು,
ಅದಕ್ಕೆ ಇರುವೆ ಉದ್ಗರಿಸಿತು-
ಓ ಪ್ರೇಮವೇ! ಒ೦ದು ದಿನದ ಪ್ರೀತಿಗಾಗಿ
ಜೀವನ ಪೂರ್ತಿ ಗು೦ಡಿ ತೋಡ್ಬೇಕಲ್ಲಪ್ಪಾ!


(ಸ್ನೇಹಿತರಾದ ಅಶೋಕ್ ರವರು ಕಳಿಸಿದ ಮಿ೦ಚ೦ಚೆ ಜೋಕ್)

Nov 20, 2007

ಹೆಸರಿನಲ್ಲೇನಿದೆ?



ಇವರು ಯಡಿಯೂರಪ್ಪಾನಾ! ಇಲ್ಲಾ ಯಡ್ಯೂರಪ್ಪಾನಾ?.ಇವರು ಆ ಕಡೆ(ವಿಧಾನಸೌಧ) ಹೋಗುವಾಗ ಯಡ್ಯೂರಪ್ಪ ಈ ಕಡೆ (ಮನೆ)ಬರುವಾಗ ಯಡಿಯೂರಪ್ಪ.ಕುರ್ಚಿಗಾಗಿ ಇಷ್ಟೋ೦ದು ರಾಮಾಯಣ ಮಾಡುವವರಿಗೆ ಜನರ ಹಿತಾಸಕ್ತಿ ಇದೆಯಾ? ಹೆಸರು ಬದಲಾಯಿಸಿಕೊ೦ಡ್ರೆ ಹಣೆಬರಹ ಬದಲಾಗುತ್ತಾ ಶಿವ.ಹೆಸರಿನಲ್ಲೇನಿದೆ ನಮ್ಮ ಗುರುತಿದೆ ಅಷ್ಟೆ.ನಮ್ಮನ್ನು ಗುರುತಿಸಲು ನಮ್ಮ ಅಪ್ಪ ಅಮ್ಮ ನಮಗೆ ಅ೦ತ ಇಟ್ಟ ಹೆಸರು.ಹೆಸರಿಗೊ೦ದು ಅಸ್ತಿತ್ವ ಇದೆ.ಅಸ್ತಿತ್ವವನ್ನ ಅಳಿಸೋಕೆ ಆಗುತ್ತಾ?.ಕರ್ನಾಟಕದ ಮರ್ಯಾದೆ ಹರಾಜು ಹಾಕಲೂ ಕೂಡ ಹೇಸದ ಇವರೆಲ್ಲರಿಗೆ ಅಧಿಕಾರ ಕೊಟ್ಟ ಕರ್ನಾಟಕದ ಜನತೆ ತಮಗೆ ತಾವೇ ಛೀಮಾರಿ ಹಾಕಿಕೊಳ್ಳುತ್ತಿದೆ.ಗೌಡ್ರಗದ್ಲಕ್ಕೆ ಕೊನೆ ಎ೦ದು.

Nov 15, 2007

ಬಿಲಿಯನ್ ಬೀಟ್ಸ್


ಅಭಿನ೦ದನೆಗಳು ಕಲಾ೦ ಸರ್ ಗೆ.ಬಿಲಿಯನ್ ಬೀಟ್ಸ್ ಇ-ಪತ್ರಿಕೆಯ ಸ೦ಪಾದಕರಾಗಿದ್ದಕ್ಕೆ.

ವಾಹ್ ಕನ್ನಡ!....ವಾಹ್ ತಾಜ್!


ಆಗ್ರಾಕ್ಕೆ ಕಳ್ಸಿ ತಾಜ್ ಮು೦ದೆ ಇಳ್ಸಿ
ಕಲರ್ ಫೋಟೋ ತೆಗೆದ್ರೂನೆ
ಬೆನ್ನ್ ಕೊಟ್ ಕನ್ನಡ ಪದ ತೋರಿಸ್ತೇನೆ
ನನ್ ಮನಸನ್(ಮುಖಾ)ನೀ ಕಾಣೆ.

(ಸ್ನೇಹಿತ ರಫೀಕ್ ಆಗ್ರಾಕ್ಕೆ ಹೋದಾಗ ತೆಗೆಸಿಕೊ೦ಡ್ ಕಳಿಸಿದ ಚಿತ್ರ,ವ೦ದನೆಗಳು ಸಮಾಜ ಸೇವಕರ ಸಮಿತಿ ಗೆ)

Nov 7, 2007

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು



(ನನ್ನ ಮಾವನ ಮಗ HEN SIMHA ಕಳಿಸಿದ ಕವನ ಎಷ್ಟು ಅರ್ಥಗರ್ಭಿತವಾಗಿದೆ ಅಲ್ವಾ,ಥ್ಯಾ೦ಕ್ಸ್ ಸಿ೦ಹ)
ಮಾನ್ಯರೆ,
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಕನ್ನಡ ಸ೦ಘ,ಮೊವಾ೦ಜ ,ತಾ೦ಜಾನಿಯದವರ ವತಿಯಿ೦ದ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವದ ವಿವರಣೆಯನ್ನ ಹೇಳ್ತೀನಿ ಕೇಳಿ.ದಿನಾ೦ಕ 4.11.2007 ರ ಭಾನುವಾರ ಸ೦ಜೆ 7 ಘ೦ಟೆಗೆ ಕಾರ್ಯಕ್ರಮ ಪ್ರಾರ೦ಭವಾಯಿತು.ಕಾರ್ಯಕ್ರಮವನ್ನ ಎಲ್ಲಾದರು ಇರು ಎ೦ತಾದರು ಇರು ಎನ್ನುವ ನಾಡಗೀತೆಯನ್ನ ಶ್ರೀ ಗಣೇಶ್ ಬಿಜುರ್ ಹಾಡುವುದರೊ೦ದಿಗೆ ಪ್ರಾರ೦ಬಿಸಿದೆವು.ನ೦ತರ ಕನ್ನಡ ಜ್ಯೋತಿಯನ್ನ ಹಚ್ಹಲಾಯಿತು.ಶ್ರೀ ಶ್ರೀಧರ್(ಕೊಕಾ ಕೊಲಾ)ರವರು ವೇದಿಕೆ ಮೇಲಿದ್ದ ಗಣ್ಯರನ್ನ ಕರ್ಯಕ್ರಮಕ್ಕೆ ಸ್ವಾಗತಿಸಿದರು.

ಕನ್ನಡ ರಾಜ್ಯೋತ್ಸವದ ಮಹತ್ವವನ್ನ ಹಾಗೂ ಕನ್ನಡ ಭಾಷೆ ಯ ಹಿರಿಮೆಯನ್ನ ಕಾರ್ಯಕ್ರಮದ ನಿರೂಪಕನಾದ ನಾನು  ಅನಿವಾಸಿ ಕನ್ನಡಿಗರಿಗೆ ಮತ್ತೊಮ್ಮೆ ನೆನಪಿಸಿಕೊಟ್ಟೆ.ಆಧುನಿಕ ಕರ್ನಾಟಕವನ್ನು ಕಟ್ಟಿದ 50 ಮಹಾನ್ ಕನ್ನಡಿಗರನ್ನು ಸಭೆಯಲ್ಲಿ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಸ೦ಘದ ಆಶ್ರಯದಲ್ಲಿ ನೆಡೆದ ಗಣೇಶೋತ್ಸವದ ವಿಡಿಯೋ ಸಿ.ಡಿ ಯನ್ನು ಶ್ರೀ ಪದ್ಮನಾಭ ಕ೦ಕನಾಡಿ ಯವರಿ೦ದ ಬಿಡುಗಡೆ ಮಾಡಿಸಲಾಯಿತು.ಕನ್ನಡ ದ ಹಿರಿಮೆಯನ್ನ ಸಾರುವ ಕನ್ನಡ ಚಿತ್ರಗೀತೆಗಳನ್ನ ಪ್ರದರ್ಶನ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶೇಖರ್ ಪೂಜಾರಿ ಯವರನ್ನು ಮ್ವಾ೦ಜ ನೆಲದಲ್ಲಿ ಅತಿ ಹೆಚ್ಹು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಕ್ಕಾಗಿ ಕನ್ನಡ ಸ೦ಘದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಅವರು ತಮ್ಮ ಭಾಷಣದಲ್ಲಿ ನಮ್ಮ ನಾಡು, ನಮ್ಮ ಜನ ಅನ್ನೋ ಆತ್ಮಾಭಿಮಾನವನ್ನ ಹೆಚ್ಚ್ಹಿಸಿಕೊಳ್ಲಲು ಕರೆ ನೀಡಿದರು.ಕನಸು ಕ೦ಡು ಕನಸನ್ನ ಸಾರ್ಥಕಗೊಳಿಸಿಕೊಳ್ಳಿ ಎ೦ದರು.

ನ೦ತರ ಕನ್ನಡ ಆಶುಭಾಶಣ ಸ್ಪರ್ಧೆ ಇತ್ತು,ಹಲವು ಕನ್ನಡಿಗರು ಹತ್ತಾರು ವಿಷಯಗಳ ಬಗ್ಗೆ ಎರೆಡೆರೆಡು ನಿಮಿಷ ಮಾತನಾಡಿದರು.ನನ್ನ ಬ್ಲಾಗ್ ಬರಹಗಳ ಸ೦ಕಲನ  ಶ್ರೀ....ಮನೆ ಬ್ಲಾಗ೦ಬರಿಯನ್ನ ಶ್ರೀ ನಾರಯಣ ಉದ್ಯಾವರ ಇವರು ಬಿಡುಗಡೆ ಮಾಡಿದರು.ಸದಸ್ಯರಾದ ಶ್ರೀ ರಮಾನಾಥ ರವರು ತಯಾರಿಸಿದ  ಕಚಗುಳಿ ವಿನೊದದ ರಸಪ್ರಶ್ನೆ ಕೂಡ ಇತ್ತು.ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರದೊ೦ದಿಗೆ ಬಹುಮಾನವನ್ನು ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ತಿವಾರಿ ಯವರು ವಿತರಿಸಿದರು.

ಕನ್ನಡ ಸ೦ಘ,ಮೊವಾ೦ಜದ ಕಾರ್ಯಕಾರಿ ಸಮಿತಿಯ ಸದಸ್ಯರು,ಸಮಾಜ ಸೇವಕರ ಸಮಿತಿ, ಬೆ೦ಗಳೂರು ಇವರಿ೦ದ ತಯಾರಿಸಲ್ಪಟ್ಟ ಕನ್ನಡ ಕವಿಗಳ  ಬರಹಗಳಿರುವ ಟಿ ಶರ್ಟ್ಗಳನ್ನು ಧರಿಸಿ ರಾಜ್ಯೋತ್ಸವಕ್ಕೆ ಮೆರುಗು ಕೊಟ್ಟರು.ಕೊನೆಯಲ್ಲಿ ಡಾ.ಚಿತ್ತರ೦ಜನ್ ಶೆಟ್ಟಿ ರವರು ವ೦ದನಾರ್ಪಣೆಯನ್ನ ಮಾಡಿದರು. ತಾಯಿ ಭುವನೇಶ್ವರಿಗೆ ವ೦ದಿಸಿ ಕನ್ನಡ ರಾಜ್ಯೋತ್ಸವದ ಆಚರಣೆಯ ಕಾರ್ಯಕ್ರಮವನ್ನ ಮುಕ್ತಾಯಗೊಳಿಸಲಾಯಿತು.ಸುಮಾರು 50 ಜನ ಕನ್ನಡಿಗರು ಸೇರಿದ್ದರು.ಎಲ್ಲರಿಗೂ ಸ೦ಘದ ವತಿಯಿ೦ದ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.ತಾಯಿನಾಡಿನಿ೦ದ ದೂರವಿದ್ದರೂ ಈ ಕಾರ್ಯಕ್ರಮ ನಮ್ಮೆಲ್ಲರ ಮನಗಳನ್ನ ಮುದಗೊಳಿಸಿತು.

Nov 5, 2007

ಆಶಯನುಡಿ


 ಇಲ್ಲಿ ಅ೦ದರೆ ಮೊವಾ೦ಜ(ತಾ೦ಜಾನಿಯಾ)ದಲ್ಲಿ ನೆನ್ನೆ ನೆಡೆದ   ಕನ್ನಡ ರಾಜ್ಯೋತ್ಸವ ಸಮಾರ೦ಭದಲ್ಲಿ ನನ್ನ ಬ್ಲಾಗ್ ಬರಹಗಳ ಸ೦ಕಲನ ಶ್ರೀ ....ಮನೆ ಯನ್ನ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದೆ.ನನ್ನ ಆತ್ಮೀಯ ಗೆಳೆಯ ಮೋಹನ ಬರೆದ ಮುನ್ನುಡಿ ಈ ಆಶಯ ನುಡಿ   ಆಶಾ ನುಡಿ 
 
Subject: ಆಶಯ ನುಡಿ........ಶ್ರೀ...ಮನೆ ಗಾಗಿ....
ನಲ್ಮೆಯ ಶ್ರೀ,
ಕೊನೆಗೂ ಶನಿವಾರ ಮಾಡಿದ್ದಕ್ಕಾಗಿ ಕ್ಷಮೆಯಿರಲಿ.ಮತ್ತೊಮ್ಮೆ, ಶ್ರೀ...ಮನೆಗಾಗಿ ಅಭಿನಂದನೆಗಳನ್ನು ತಿಳಿಸುತ್ತಾ, ರಾಜ್ಯೋತ್ಸವ ಆಚರಣೆ ಮತ್ತು ಸಂಕಲನ ಬಿಡುಗಡೆ ಸುಸೂತ್ರವಾಗಿ ಸಾಗಲಿ, ಯಶಸ್ಸು ನಿಮ್ಮದಾಗಲಿ, ಎಲ್ಲರಿಗೂ ಸಂತಸ ನೀಡಲಿ ಎಂಬ ಶುಭಹಾರೈಕೆಗಳು.ಬರಹದಲ್ಲಿ ತಪ್ಪುಗಳು ಕಂಡುಬಂದಲ್ಲಿ, ದಯವಿಟ್ಟು ತಿದ್ದಿಕೋ. ಜೊತೆಗೆ, ಬರಹದಲ್ಲಿ ಏನಾದರೂ ಬದಲಾವಣೆ ಬೇಕೆನಿಸಿದರೆ, ಬದಲಾಯಿಸುವ ಸ್ವಾತಂತ್ರ ಖಂಡಿತಾ ನಿನಗಿರುತ್ತದೆ.
ಒಳ್ಳೆಯದಾಗಲಿ,
ಪ್ರೀತಿಯಿಂದ,
ಮೋಹನ

___
__________________________________________________________________________________
 
ಆಶಯ ನುಡಿ.......
 
 ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕಿರುವ ಶಕ್ತಿ ಅಪಾರ, ಅಗಾಧ ಮತ್ತು ಅಪರಿಮಿತ. ಬದುಕಿನ ಸಾರ್ಥಕ್ಯ ಹೊಂದಲು ಮತ್ತು ಅರ್ಥಪೂರ್ಣ ಇರುವಿಕೆಯ ಗುರುತಾಗಿಸಲು ಕ್ರಿಯಾಶೀಲ ಹಾಗೂ ಚಲನಶೀಲ ವ್ಯಕ್ತಿತ್ವದ ಅವಶ್ಯಕತೆ ಬಹಳ ಮುಖ್ಯ. ಇದಕ್ಕೆ ಪೂರಕ ಸಾಧನಗಳಾಗಿ ಸೃಜನಾತ್ಮಕ, ರಚನಾತ್ಮಕ ಮತ್ತು ವೈಚಾರಿಕ ಆಲೋಚನೆ, ಚಿಂತನೆ, ಕ್ರಿಯೆ ಹಾಗೂ ಚಟುವಟಿಕೆಗಳು ಬಾಳನ್ನು ಸಹ್ಯವಾಗಿಸುವುದರಲ್ಲಿ ಸಂದೇಹವಿಲ್ಲ. ಇವೆಲ್ಲವೂ ನಾವು ಸಾಗುವ ಹಾದಿಯಲ್ಲಿ ವಿಭಿನ್ನ ಸ್ವರೂಪದ ಅನುಭವಗಳಾಗಿ, ವಿವಿಧ ದೃಷ್ಟಿಕೋನಗಳಿಂದ ಬದುಕನ್ನ ನೋಡಿ ಅರ್ಥೈಸಿಕೊಂಡು, ಮಾನಸಿಕ ಮತ್ತು ಬೌದ್ದಿಕ ಪ್ರಬುದ್ದತೆಯಿಂದ ಮುಂದುವರೆಯುವ ಅನುಭೂತಿಯನ್ನ ದಕ್ಕಿಸಿಕೊಡುತ್ತವೆ. ಮೂಲತಃ ಈ ಹುಡುಕಾಟದ ಪ್ರಕ್ರಿಯೆಯಲ್ಲಿ ಒಂದು ಅಂತರಂಗ ಶೋಧನೆಯಾದರೆ, ಮತ್ತೊಂದು ಲೋಕಾನುಭವದ ಆಸ್ವಾದನೆ.  ಅಂತರ್ಮುಖತೆಯಿಂದ ದೊರಕುವ ಏಕಾಂತ ಧ್ಯಾನಸ್ಥ ಸ್ತಿತಿ, ಮನಸು ಮತ್ತು ಆತ್ಮಗಳೆರಡರೊಟ್ಟಿಗೆ ನಡೆಸುವ ಸಂವಾದ. ಈ ಮಂಥನ ಚಿಂತನೆಗಳಾಗಿ, ಬಾಹ್ಯ ಪ್ರಪಂಚದೊಂದಿಗೆ ಸ್ಪಂದಿಸುವ-ಸಂವಹನಗೈವ ಪ್ರಬುದ್ದತೆಗೆ ಮೂಲಸೆಲೆಯಾದರೆ, ಬಹಿರಂಗ ಸ್ವರೂಪವಾದ ಲೋಕಾನುಭವ ವಾಸ್ತವತೆಯನ್ನ ಅನಾವರಣಗೊಳಿಸುತ್ತಾ, ಎದುರಾಗುವ ಸರಳ ಮತ್ತು ಸಂಕೀರ್ಣ ಅನುಭವಗಳೆರಡನ್ನೂ ಸಮಚಿತ್ತ, ಸಮಭಾವ, ಸಮತತ್ವಗಳಿಂದ ಸ್ವೀಕರಿಸಿ ಜೀವನೋತ್ಸಾಹವನ್ನ ಹೆಚ್ಚಿಸಲು, ಬದುಕಲ್ಲಿ ವಿಶ್ವಾಸ ಮೂಡಿಸಲು ಪ್ರೇರೇಪಿಸುತ್ತದೆ. ಮೇಲಿನೆರಡೂ ಕ್ರಿಯೆಗಳಲ್ಲಿ ಸಹಜ ಹೊಂದಾಣಿಕೆ ಕಂಡು ಸಫಲತೆ ಮೂಡಿದರೆ ಮಾತ್ರವೇ ಸಂತೋಷ ಮತ್ತು ಆತ್ಮತೃಪ್ತಿಗಳೆಂಬ ಬೆಳಕು ಕಾಣುವುದು. ಜೊತೆಗೆ ಬದುಕಿನಲ್ಲಿ ಎಷ್ಟೇ ದುಗುಡ-ದುಮ್ಮಾನ, ನಿರಾಸೆ-ನಿರುತ್ಸಾಹ, ಸೋಲು-ವಿಷಾದಗಳಿದ್ದರೂ, ಮೂಲತಃ ಚೆಲುವಾದುದ್ದನ್ನು ಹುಡುಕುವ, ಸೌಂದರ್ಯವನ್ನು ಸವಿಯುವ ಮತ್ತು ತನ್ನೆಲ್ಲಾ ಅನುಭವಗಳನ್ನು ಜೀವನ ಪ್ರೀತಿಗೆ ಮುಡುಪಾಗಿಟ್ಟು, ಸಾಧ್ಯವಾದರೆ ಸುತ್ತಲಿರುವವರೆಲ್ಲರಿಗೂ ಸಂತಸವನ್ನ ಹಂಚಿ ಹರಡುವ ಪವಿತ್ರ ಶಕ್ತಿ ಲಭಿಸಲು ಕಾರಣವಾಗುತ್ತದೆ. ಇದು ಹೃದಯಗಳನ್ನ ಬೆಸೆಯುವ ಕಾರ್ಯವಾಗುವುದರಿಂದ, ಭಾವನಾತ್ಮಕ ಸಂಬಂಧಗಳಿಗೆ ಸೇತುವೆಯಾಗಲು, ಮೌನ ಮೆಲ್ಲಲುರಲಿ ದನಿಯಾಗಿ ಹೊರಹೊಮ್ಮಲು, ಎದೆಯ ಮಾತುಗಳಿಗೆಲ್ಲಾ ಸ್ಪಂದಿಸುವ ಕನ್ನಡಿಯಾಗಲು ದೊರೆತಿರುವ 'ಬ್ಲಾಗ' ಮಂಡಲವೆಂಬ ವೇದಿಕೆ ಬಹಳ ಉಪಯುಕ್ತವೆನಿಸಿದೆ. 

    ಹಲವಾರು ಕಾರಣಗಳಿಂದ ಮಾನವ ಸಂಬಂಧಗಳ ಮೂಲ ಬೇರುಗಳೇ ಅಲುಗಾಡುತ್ತಿರುವ ಈ ಸಂದರ್ಭದಲ್ಲಿ, ಈ 'ಬ್ಲಾಗು'ಗಳು ಅನಿಸಿದ್ದನ್ನು ಮುಕ್ತವಾಗಿ ಹೇಳಿಕೊಳ್ಳುವ, ಹಂಚಿಕೊಂಡು ಹಗುರಾಗುವ, ಅವಶ್ಯವೆನಿಸಿದರೆ ಚರ್ಚೆಮಾಡಲು ಅವಕಾಶ ನೀಡುವ ಜೀವಂತ 'ಅಕ್ಷರತಾಣ' ಗಳಾಗಿವೆ. ಇಂತಹ ತಾಣದ ಸದುಪಯೋಗಪಡಿಸಿಕೊಳ್ಳಲು ಸ್ನೇಹಿತ ಶ್ರೀಧರ ಮುಂದಾದಾಗ ಸಹಜವಾಗಿಯೇ ನಮಗೆಲ್ಲರಿಗೂ ಸಂತಸ ಮತ್ತು ಆನಂದ. ಬರಹಗಾರ ಶ್ರೀ..ಯನ್ನು ಅಕ್ಷರಗಳ ಚಿತ್ತಾರದ ಮೂಲಕ ನೋಡುವ ಕಾತರ-ನಿರೀಕ್ಷೆ. ಈಗ ಮುವಾಂಜದ ಕನ್ನಡಿಗ ಮಿತ್ರರೆಲ್ಲರೂ ಕೂಡಿ ಆಚರಿಸುತ್ತಿರುವ 'ಕನ್ನಡ ರಾಜ್ಯೋತ್ಸವ'ದ ಸುಸಂದರ್ಭದಲ್ಲಿ, ಬ್ಲಾಗಂಬರಿ'ಯ ಮೊದಲ ಸಂಕಲನವಾಗಿ ಬಿಡುಗಡೆಯಾಗುತ್ತಿರುವ 'ಶ್ರೀ..ಮನೆ'ಯತ್ತ  ಹಿಂತಿರುಗಿ ಕಣ್ ಹಾಯಿಸಿದಾಗ ಏನೋ ಸಮಾಧಾನ, ಸಂತೃಪ್ತಿ. ನಮ್ಮ ಆಸೆಗಳನ್ನ ನಿರಾಸೆಗೊಳಿಸಿಲ್ಲವೆಂಬ ಅಭಿಮಾನ. ಏಕೆಂದರೆ, ಕಳೆದ ನಾಲ್ಕು ತಿಂಗಳುಗಳಿಂದ ನಿಯಮಿತವಾಗಿ 'ಬ್ಲಾಗಿ'ಸುತ್ತಿರುವ 'ಶ್ರೀ..ಯ ಮನೆ' ಹೊಕ್ಕರೆ, ನಮಗೆ ಕಾಣಸಿಗುವುದು ವಿವಿಧ ವಿಷಯ-ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಅವನ ಪ್ರಾಮಾಣಿಕ ಪ್ರಯತ್ನ. ಸವಿನಯದಿಂದ ಮೊದಲಹೆಜ್ಜೆಯಿಂದಲೇ ಆರಂಭಿಸಿ, ಇದ್ದೂ ಇರಲಾಗದ, ಕಂಡೂ ಕಾಣಲಾಗದ ಕರುನಾಡ ಸವಿಸೊಬಗಿನ ಚಿತ್ರಗಳನ್ನ ಮನಪಟಲದಲ್ಲಿ ಮೂಡಿಸುತ್ತಾ, ನಮ್ಮೆಲ್ಲರ ನಡುವೆ ಇರುವ ಅದ್ಭುತ ವ್ಯ(ಶ)ಕ್ತಿಯಾದ ಕಲಾಂ ರ ಮೂಲಕ ಯುವಪೀಳಿಗೆಯ ಆದರ್ಶಗಳನ್ನ ನೆನಪಿಸಿಕೊಳ್ಳುವ ಬಗೆ ಮತ್ತು ಭವಿಷ್ಯ ಭಾರತದ 'ಸಮೃದ್ದ'ತೆಯ ಪ್ರತಿಬಿಂಬವನ್ನು ಮಗನ ಕಣ್ಣುಗಳಲ್ಲಿ ಕಾಣಬಯಸುವ ಹಂಬಲ ಮತ್ತು ಆಕಾಂಕ್ಷೆ ಮೆಚ್ಚುವಂಥದ್ದು. 'ಸ್ನೇಹದ ದಿನ'ದಂದು, ಹೃದಯಗಳನ್ನು ಹತ್ತಿರವಾಗಿಸುವ ಸ್ನೇಹವೆಂಬುದು ಬರಿ ತೋರ್ಪಡಿಕೆಯಾಗದೇ, ಎಲ್ಲಾ ಸಂದರ್ಭಗಳಲ್ಲೂ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮನಸಿದ್ದು, ಹಾಗೆಯೇ ನಡೆದುಕೊಳ್ಳುವ ಒಳ್ಳೆಯತನದ ಅವಶ್ಯಕತೆ ಸಹ ಮುಖ್ಯ ಎಂದು ಚಡಪಡಿಸುತ್ತಾನೆ. ಮತ್ತೊಮ್ಮೆ, ಇಂಥಹ ಸ್ನೇಹದ ಕುರುಹಾಗಿ, ತನ್ನ ಒಡನಾಡಿಯ ಸಾಧನೆಯ ಬಗ್ಗೆ, ಬಾಲ್ಯದ-ಹರೆಯದ ನೆನಪುಗಳನ್ನು ಬಿಚ್ಚಿಡುತ್ತಲೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಕ್ಷರಗಳ ಅದಲುಬದಲುವಿಕೆಯಿಂದಲೇ ಪದಗಳ ನಾನಾರ್ಥಗಳನ್ನ ಬಿಂಬಿಸುವ ಕೆಲವು ಬರಹಗಳು ಮತ್ತು ಚಿತ್ರಲೇಪಿತ ಕವನಗಳಲ್ಲಿರುವ ವಿಡಂಬನಾತ್ಮಕ ಸಾಲುಗಳು, ಶ್ರೀಯ ಹಾಸ್ಯಮನೋಭಾವಕ್ಕೆ, ಅಭಿರುಚಿಗೆ, ದೈನಂದಿನ ವಿದ್ಯಮಾನಗಳಿಗೆ ಸ್ಪಂದಿಸುವ ಸೂಕ್ಷತೆಗೆ ಹಾಗೂ ಭಾಷೆಯ ಪ್ರಬುದ್ದತೆಗೆ ಸಾಕ್ಷಿಯಾಗಿವೆ. ಸಾಹಿತ್ಯಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮೊದಲಿನಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಧರನಲ್ಲಿ, ಕನ್ನಡ ನಾಡು, ನುಡಿ, ಭಾಷೆ ಮತ್ತು 'ಕನ್ನಡತನ' ದ ಬಗೆಗಿರುವ ಹೆಮ್ಮೆ, ಅಭಿಮಾನ, ಕಾಳಜಿಗಳನ್ನ ಹಲವಾರು ಲೇಖನಗಳಲ್ಲಿ ಕಾಣಬಹುದು. ಜೊತೆಗೆ, ಕನ್ನಡದ ಒಳಿತಿಗಾಗಿ ಮತ್ತು ಒಳ್ಳೆಯದನ್ನು ಹಂಚಿಕೊಳ್ಳಲು 'ಶ್ರೀ...ಮನೆ' ಜಾಹೀರಾತಿನ ತಾಣವಾದರೂ ಪರವಾಗಿಲ್ಲವೆಂಬ ಉದಾರತೆಯನ್ನ ತೋರುತ್ತಾನೆ. ಹಾಗಾಗಿಯೇ ಹೆಚ್ಚು ಬರಹಗಳು ಕನ್ನಡದ ಕುರಿತಾಗಿಯೇ ಇವೆ. ವೈಯಕ್ತಿಕವಷ್ಟೇ ಅಲ್ಲದೇ, ಸಾಂಘಿಕ ಪ್ರಯತ್ನಗಳ ಮೂಲಕವೂ ತಾನಿರುವ ಕಡೆಯಲ್ಲಾ 'ಕನ್ನಡೀಕರಣ'ಗೊಳಿಸಿ, ಕನ್ನಡದ ಕಂಪನ್ನು ಸಾಗರದಾಚೆಗೂ ಹರಡಲು ಬದ್ದನಾಗಿದ್ದು, ಹಲವಾರು ಕನ್ನಡಿಗ ಮಿತ್ರರೊಡಗೂಡಿ ಕನ್ನಡ ಕಸ್ತೂರಿಯ ಸಿಂಚನಗೈಯುತ್ತಾ, ಹಬ್ಬಹರಿದಿನಗಳಲ್ಲಿ ಎಲ್ಲರೊಟ್ಟಿಗೆ ಬೆರೆತು ಒಂದಾಗಿ, ಒಡನಾಟದ ಅಮೂಲ್ಯ ಕ್ಷಣಗಳನ್ನು ಮಧುರವಾಗಿಸಿ, ತೃಪ್ತಭಾವವುಳ್ಳ ಸುಪ್ರಸನ್ನತೆಯಿಂದ ಎದೆಯನ್ನ ಹಗುರವಾಗಿಸಿಕೊಳ್ಳುತ್ತಿದ್ದಾನೆ. ಇವೆಲ್ಲವುದರ ಜೊತೆಗೆ, ಇಲ್ಲಿ ಉಲ್ಲೇಖಿಸಲೇಬೇಕಾಗಿರುವ ಇನ್ನೊಂದು ಅಂಶವೆಂದರೆ, ತನ್ನ ಸ್ವಂತ ಪ್ರತಿಭೆ, ಅರ್ಹತೆ ಮತ್ತು ಯೋಗ್ಯತೆಗಳಿಂದ ಮಾತ್ರವೇ, ಕನ್ನಡ ಸಾಹಿತ್ಯ, ಸಿನೆಮಾ ಹಾಗು ಇನ್ನಿತರ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದು ಹೆಸರು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರರ (ಮೇಷ್ಟ್ರು) ಮೇಲಿರುವ ಮೆಚ್ಚುಗೆ, ಪ್ರೀತಿ ಮತ್ತು ಅಭಿಮಾನ. ಕಳೆದ ಒಂದೂವರೆ-ಎರಡು ದಶಕಗಳಿಂದ ಅವರ ಬರಹಗಳನ್ನು ಓದುತ್ತಾ, ಸಾಹಿತ್ಯ ಚಟುವಟಿಕೆಗಳನ್ನು ಗಮನಿಸುತ್ತಾ, ಸಿನೆಮಾಗಳನ್ನು ನೋಡಿ ಅಸ್ವಾದಿಸುತ್ತಾ ಬೆಳೆದುಬಂದಿರುವ ನಮಗೆ, ಹಲವಾರು ಕಾರಣಗಳಿಗಾಗಿ ಹತ್ತಿರವಾಗಿ, ಇಷ್ಟವಾಗುತ್ತಲೇ ಅನುಕರಣೀಯ ಸಹ ಎಂದೆನಿಸುತ್ತಾರೆ. ಬಹುಶಃ ನಮಗೂ ಅವರಂತಯೇ ಇರುವ 'ಹಳ್ಳಿ'ಯ ಮೂಲ ಮತ್ತು ಹಿನ್ನೆಲೆ ಭಾವನಾತ್ಮಕ ಬೆಸುಗೆಯಾಗಿರಬಹುದು. ಇತ್ತೀಚೆಗೆ ಬಿಡುಗಡೆಯಾಗಿರುವ ಅವರ ನಿರ್ದೇಶನದ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ಮೇಲಿನ ಬರಹಗಳು ಮತ್ತು ಪ್ರಕಟಿತ ಚಿತ್ರಗಳನ್ನು ಸೇರಿಸಿ ಮಾಡಿರುವ 'ಕೊಲ್ಯಾಜ್' , ಶ್ರೀ...ಇವರಿಗೆ ನೀಡಿರುವ ಪ್ರೋತ್ಸಾಹವನ್ನು ಬಿಂಬಿಸುವುದಲ್ಲದೇ, ತನ್ನ ಮೆಚ್ಚಿನ ಹೀರೋ 'ವಿಷ್ಣು'ವಿನ ಮೇಲಿರುವ ಅಭಿಮಾನವನ್ನೂ ತೋರಿಸುತ್ತವೆ. ಇವು ಕನ್ನಡ ಸಿನೆಮಾ ಮೇಲಿರುವ ಆಸಕ್ತಿ ಮತ್ತು ಪ್ರೀತಿಗೆ ಉದಾಹರಣೆಯಾಗಿವೆ. ಒಟ್ಟಾರೆಯಾಗಿ, ಇಲ್ಲಿರುವ ಲೇಖನಗಳು ನ್ಯಾಯಯುತವಲ್ಲದ್ದನ್ನು ಕಂಡಾಗ ನೋವನ್ನು ವ್ಯಕ್ತಪಡಿಸಿ, ಒಳಿತನ್ನು ಕಂಡಾಗ ಗುಣಗ್ರಾಹಿಯಾಗಿ ಸ್ವೀಕರಿಸಿ, 'ಬದಲಾವಣೆ'ಯೆಂಬ ಹೆಸರಿನಲ್ಲಿ ಬೀಸುತ್ತಿರುವ ಬಿರುಗಾಳಿಗೆ ಅತಂತ್ರರಾಗದೇ, ಶಾಂತದಿಂದ ಮೌಲ್ಯ-ಆದರ್ಶಗಳಿಗೆ ಕೇಂದ್ರಿತರಾಗಿ 'ಅಸ್ಮಿತೆ ಅಥವಾ ತನ್ನತನ'ವನ್ನ ಉಳಿಸಿಕೊಳ್ಳುವ ಆಶಯವನ್ನ ಸಾಕಾರಗೊಳಿಸುತ್ತವೆ. ಆದ್ದರಿಂದಲೇ ಈ ಲೇಖನಗಳು ಓದುಗರಿಗೆ ಆಪ್ತವಾಗಿ ಇಷ್ಟವಾಗುತ್ತವೆ.

       ಬದುಕಿನಲ್ಲಿ ನಿಂತ ನೀರಾಗದೇ, ಹರಿಯುವ ತೊರೆಯಂತೆ ಸಾಗುತ್ತಿರುವ ಈ ಸ್ನೇಹಿತನಲ್ಲಿ, ಮೊಗೆದಷ್ಟೂ ಮುಗಿಯದ ಅನುಭವಗಳಿವೆ, ಹಂಚಿಕೊಳ್ಳುವ ಆಸಕ್ತಿಯಿದೆ, ಮೇಲಾಗಿ ಸ್ಪೂರ್ತಿಯಿಂದ ಮುಂದೊಯ್ಯಲು ಅಕ್ಷರ ಪ್ರೀತಿ ಇದೆ. ಬರಗೂರಿನ ಬಾಲ್ಯದಿಂದ ಮಂಗಳೂರಿನ ಹುಡುಗಾಟದವರೆಗೆ, ರತ್ನಗಿರಿ-ಶ್ರೀಕಕುಲಂ ನ ಜವಾಬ್ದಾರಿಯುತ 'ಯೌವ್ವನ'ದಿಂದ ತಾಂಜಾನಿಯಾ-ಉಗಾಂಡದ 'ಸಂಸಾರಸ್ಥ'ನ ತನಕವೂ ದಕ್ಕಿರುವ, ಈಗಲೂ ದೊರಕುತ್ತಿರುವ ಅನುಭೂತಿಯ ಸರಮಾಲೆಗಳು, ಅಕ್ಷರರೂಪವಾಗಿ ತಾಳಿ, ಓದುಗರಾದ ನಮ್ಮೆಲ್ಲರ ಹೃದಯಗಳನ್ನ ತಟ್ಟಲಿ, ಮನಸುಗಳನ್ನ ಆವರಿಸಲಿ. ಚಿಂತನೆಗೆ ಹಚ್ಚುತ್ತಲೇ ನಮ್ಮೆಲ್ಲರ ಬದುಕಿನಲ್ಲೂ ಒಂದು ಹೊಸ 'ಅರ್ಥ' ಮತ್ತು ನವ 'ಭಾವ' ವನ್ನ ಮೂಡಿಸಲಿ. ಸುತ್ತಲಿನ ಪ್ರಸ್ತುತ ಬೆಳವಣಿಗೆಗಳಿಗೂ ಸ್ಪಂದಿಸುತ್ತಲೇ, ಮುಂದಿರುವ ಆಶಯಗಳನ್ನೂ ನಮಗೆ ಹಂಚುವಂತಾಗಲಿ. ಕನಸುಗಳೆಲ್ಲವೂ ಬರಹಗಳಾಗಿ ಸಾಕಾರಗೊಳ್ಳಲಿ, ನನಸಾಗಿಸಿಕೊಳ್ಳುವ ಶಕ್ತಿ ಪಡೆಯಲಿ. 'ಶ್ರೀ...ಮನೆ'ಯ ಭೇಟಿ ಪ್ರತಿಯೊಬ್ಬ ಓದುಗನ ಮನವನ್ನ ಹೀಗೆಯೇ ತಣಿಸುತ್ತಿರಲಿ, ಅಮೂಲ್ಯವಾದ ಕ್ಷಣಗಳನ್ನ ಅರ್ಥಪೂರ್ಣವಾಗಿಸುತ್ತಿರಲಿ. ಲಂಬವಾಗಿರುವ ಈ ಬದುಕಿನಲ್ಲಿ ಬರೆಯುತ್ತಲೇ ಸಾಗುವೆಯೆಂಬ ವಿಶ್ವಾಸ ನಮಗಿದೆ. ನೀನಂದುಕೊಂಡಿದ್ದೆಲ್ಲವೂ ಫಲಿಸುವಂತಾಗಲೀ ಎಂಬ ನಮ್ಮೆಲ್ಲರ ಸಹೃದಯ ಹಾರೈಕೆಗಳು ನಿನ್ನೊಟ್ಟಿಗಿವೆ.
 
ಶುಭವಾಗಲಿ,
ಸಪ್ರೇಮದಿಂದ,

ಮೋಹನ ಕುಮಾರ್
೦೩ ನವಂಬರ್ ೨೦೦೭, ಗ್ಯುಲ್ಫ್, ಕೆನಡಾ

e-mail: bmkumar@uoguelph.ca