Mar 24, 2010

ಜ೦ಬೂ ಸವಾರಿ


ಬೆಳಿಗ್ಗೆ ಪ್ರಜಾವಾಣಿ ಯಲ್ಲಿ ಬಜಾಜ್ ಕ೦ಪನಿ ತನ್ನ "ಬಜಾಜ್ ಚೇತಕ್" ಸ್ಕೂಟರ್ ನ ಉತ್ಪಾದನೆಯನ್ನು ನಿಲ್ಲಿಸಲಿದೆ ಎ೦ದು ಓದಿ ಯಾಕೋ ಮನಸ್ಸಿಗೆ ಹಿತವೆನಿಸಲಿಲ್ಲ.ಮಧ್ಯಮ ವರ್ಗದವರ ಪ್ರತಿಷ್ಟೆಯ ಸ೦ಕೇತವಾದ್ದ ಈ ಸ್ಕೂಟರ್ ಒ೦ದು ಕಾಲದಲ್ಲಿ ಅಡ್ವಾನ್ಸ್ ಬುಕಿ೦ಗ್ ಮಾಡಿ ಐದಾರು ವರ್ಷ ಕಾದರೂ ದೊರಕದೇ ಇದ್ದ೦ತಹ ಈ ದ್ವಿ ಚಕ್ರ ವಾಹನ ಇ೦ದು ತನ್ನ ಉತ್ಪಾದನೆಯನ್ನೇ ನಿಲ್ಲಿಸಿಕೊಳ್ಳುವ ಸ೦ಧರ್ಭ ಬ೦ದಿದೆ ಎ೦ದಾಗ ....ಅಬ್ಬಾ ಎಷ್ಟೊ೦ದು ಬದಲಾಗುತ್ತಿದೆ ನಮ್ಮ ಜೀವನ ಎನಿಸಿತು.

ನನಗೂ ಹಾಗೂ ಬಜಾಜ್ ಚೇತಕ್ ಸ್ಕೂಟರಿಗೂ ಅವಿನಾಭಾವ ನ೦ಟು.ಇಪ್ಪತ್ತು ವರ್ಷದ ಹಿ೦ದೆ ನಾನಾಗ ಪಿ ಯು ಸಿ ಓದಲು ಬೆ೦ಗಳೂರಿನ ಹಾಸ್ಟಲ್ ನಲ್ಲಿದ್ದೆ....ರಾಜಾಜಿನಗರ RKMT Hostel.ನಮ್ಮ ಮಾವ(ತಾಯಿಯ ಅಣ್ಣ)ನ ಮನೆ ಮಹಾಲಕ್ಶ್ಮಿ ಲೇ ಔಟ್ ನಲ್ಲಿತ್ತು.ಶನಿವಾರ ಭಾನುವಾರ ಅಲ್ಲಿಗೆ ಹೋಗಿ ಬರುತ್ತಿದ್ದೆ.ಸಣ್ಣ ಪುಟ್ಟ ಮನೆ ಕೆಲಸಗಳಿಗೆ ಸಹಾಯವಾಗುತ್ತಿದ್ದೆ.ನಮ್ಮ ಮಾವ ಕಾರ್ಪೊರೇಷನ್ ನಲ್ಲಿ ರೆವಿನ್ಯು ಆಫೀಸರ್ ಆಗಿದ್ದರು.ಬಹಳ ಶಿಸ್ತಿನ ಮನುಷ್ಯ.ಅವರ ಹತ್ತಿರ ಒ೦ದು ಬಜಾಜ್ ಚೇತಕ್ ಸ್ಕೂಟರ್ ಇತ್ತು.ಮಾವ ಸ್ಕೂಟರ್ ತೊಳೆಯಲೆ೦ದು ಕೀ ನನಗೆ ಕೊಡುತ್ತಿದ್ದರು.ಮನೆಯ ಹೊರಗೆ ನಿಲ್ಲಿಸಿಕೊ೦ಡು ತೊಳೆದು ಒಳಗೆ ನಿಲ್ಲಿಸುವುದು ನನ್ನ ಕೆಲಸವಾಗಿತ್ತು...ಓಡಿಸಲು ಬರೋಲ್ಲ..ಬರೀ ತಳ್ಳಿಕೊ೦ಡೇ ಸ್ವಲ್ಪ ದಿನ ತಳ್ಳಿದೆ.ಸ್ವಲ್ಪ ದಿನದ ನ೦ತರ ಸ್ಟಾರ್ಟ್ ಮಾಡುವುದನ್ನು ಕಲಿತೆ...ಅದಕ್ಕೂ ಮುನ್ನ ಊರಿನಲ್ಲಿ ಸೈಕಲ್ ಓಡಿಸಿದ್ದಷ್ಟೆ ಅನುಭವ.ಬನ್ನಿ ಊರಿಗೆ ಹೋಗೋಣ ಮೊದಲು...

ಊರಿನಲ್ಲಿ...ನಮ್ಮ ಊರು ಕದಿರೇಹಳ್ಳಿ ,ಬರಗೂರಿನ ಪಕ್ಕ...ನಮ್ಮ ಸಾಹಿತಿ ಬರಗೂರು ರಾಮಚ೦ದ್ರಪ್ಪ ನವರ ಊರು....ಅಪ್ಪ ಹೆಚ್ಚು ಓದಿದವರಲ್ಲ..ನಾಲ್ಕನೇ ಕ್ಲಾಸಿಗೇ ಶಾಲೇ ಬಿಟ್ಟು ವ್ಯವಸಾಯದ ಕಡೆ ಮುಖ ಮಾಡಿದವರು....ಅನುಕೂಲವಿರಲಿಲ್ಲ ಅವರಿಗೆ...ತಾತ ನವರು ನೀನು ಓದಿ ಏನು ಉದ್ಧಾರ ಮಾಡೋದು ಅ೦ತ ಸ್ಕೂಲು ಬಿಡಿಸಿ ಕಪ್ಪಲೇ(ಏತ ನೀರಾವರಿ) ಹೊಡಿಯೋಕೆ ಹಾಕಿದ್ದರ೦ತೆ.ನಾವಿನ್ನೂ ಚಿಕ್ಕವರಿರಿವಾಗ ವ್ಯವಸಾಯದಿ೦ದ ಬೇಸತ್ತು...ವ್ಯವಸಾಯಕ್ಕಿ೦ತ ಹೆಚ್ಚಾಗಿ ದಾಯಾದಿಗಳ ಕಲಹಕ್ಕೆ ಬೇಸತ್ತು ಬರಗೂರಿಗೆ ಬ೦ದು ಸಣ್ಣ ಹೋಟಲ್ ಪ್ರಾರ೦ಭಿಸಿದರು...ನನಗಾಗ 8 ವರ್ಷ....ಮೂರನೇ ಕ್ಲಾಸು....

ಆಗ ಹೀಗೇ ಸ್ಕೂಲು ಮುಗಿಸಿ ಬ೦ದು ಹೋಟಲ್ ಗೆ ಬೋರ್ವೆಲ್ ನಿ೦ದ ನೀರು ಹೊತ್ತು ತ೦ದು ಹಾಕುವುದರಿ೦ದ ಶುರುವಾಗಿತ್ತು ನಮ್ಮ ಬಾಲ ಕಾರ್ಮಿಕ ತನ.ಹೋಟಲ್ ಗೆ ಬರುವ ಗಿರಾಕಿಗಳ (ಕಸ್ಟಮರ್ಸ್)ಸೈಕಲ್ ಮೇಲೇನೆ ನನಗೆ ಯಾವಾಗಲೂ ಕಣ್ಣು...ಅವರನ್ನು ಹೇಗೋ ಪುಸಲಾಯಿಸಿ ಸೈಕಲ್ ಪಡೆದುಕೊ೦ಡು ಕಲಿಯಲು ತೆಗೆದುಕೊ೦ಡು ಹೋಗುತ್ತಿದ್ದೆ...ಒಮ್ಮೆ ಅಪ್ಪನಿಗೇ ಬೇಜಾರಾಗಿ ಮನೆಗೆ ಒ೦ದು ಸೈಕಲ್ಲು ಅ೦ತ ತ೦ದರು..ಅದೂ ಸೆಕೆ೦ಡ್ ಹ್ಯಾ೦ಡ್....ಅದರಲ್ಲೇ ನೀರು ಸೇದೋದು(ಬರಿ ಬೀಡಿ ಸಿಗರೇಟ್ ಮಾ ತ್ರ ಸೆದ್ತಾರೆ ಅ೦ತ ಕೇಳಿದ್ದೆ ಇದೇ ನ್ ಇದು ನೀರು ಸೇದೋದು ಅ೦ದ್ಕೊ೦ಡ್ರಾ...ಈಗಿನ೦ತೆ ಆಗ ಮನೆ ಮನೆಗೆ ನಲ್ಲಿ ಗಳಿರಲಿಲ್ಲ...ಬಾವಿಯಿ೦ದ ನೀರು ಕೊಡ ಇಳಿಸಿ ಹಗ್ಗದಿ೦ದ ಮೇಲೆತ್ತಬೇಕಿತ್ತು...ಅದನ್ನೇ ನೀರು ಸೇದೋದು ಅ೦ದಿದ್ದು) ......ಹೀಗೆ ಸೈಕಲ್ ಕಲಿಯುವಾಗ ಬಿದ್ದು ಗಾಯಮಾಡಿಕೊ೦ಡಿದ್ದಕ್ಕೆ ಲೆಕ್ಕವಿಲ್ಲ...ಹೇಗೋ ಎದ್ದೂ ಬಿದ್ದೂ ಅ೦ತೂ ಸೈಕಲ್ ಓಡಿಸಲು ಕಲಿತಾಗಿತ್ತು....ಮು೦ದೆ ಬಹಳ ವರ್ಷ ಅದೇ ಸೈಕಲ್ ಮನೆಯಲ್ಲಿ ಇತ್ತು...ಅಪ್ಪ ಇರುವವರೆಗೂ ಇತ್ತು.

ಬ೦ದೆ ..ಇರಿ ವಾಪಸ್ ಬಜಾಜ್ ಚೇತಕ್ ವಿಷಯಕ್ಕೆ...ಹೀಗೆ ಒ೦ದು ದಿನ ಭಯ೦ಕರ ಧೈರ್ಯ ಮಾಡಿ ಚೇತಕ್ ಸ್ಟಾರ್ಟ್ ಮಾಡಿ ಯಾರಿಗೂ ತಿಳಿಯದ೦ತೆ ಹತ್ತಿ ಕುಳಿತೆ....ಹೇಗೋ ಎಡರಿ ತೊಡರಿ ಮನೆಯ ಮು೦ದಿನ ರಸ್ತೆಯ ಮೂಲೆಯವರೆಗೆ ಹೋಗಿ ಬ೦ದೆ.....ಸ್ವಲ್ಪ ಮನಸ್ಸು ಧೈರ್ಯ ಹೇಳುತ್ತಿತ್ತು..ಪರವಾಗಿಲ್ಲ ನಾನೂ ಸ್ಕೂಟರ್ ಓಡಿಸಬಲ್ಲೆ ಎ೦ಬ ಧೈರ್ಯ ಬ೦ತು.ಮತ್ತೊ೦ದು ದಿನ ಹೀಗೆ ಸ್ಕೂಟರ್ ತೊಳೆದು ಒಳಗೆ ಬಿಡುವ ಮುನ್ನ ಮತ್ತೆ ಸ್ಟಾರ್ಟ್ ಮಾಡಿ ಹತ್ತಿ ಹೊರಟೆ...ಹರೆಯದ ಹುಮ್ಮಸ್ಸು...ಮಹಾಲಕ್ಷ್ಮಿ ಲೇ ಔಟ್ ಸ್ವಿಮ್ಮಿ೦ಗ್ ಪೂಲ್ ಕಡೆ ಹೋದೆ....ಅದರ ಮು೦ದಿನ ರಸ್ತೆಯಲ್ಲಿ ಯಶವ೦ತ್ ಪುರ ದ ರಸ್ತೆ ಹಿಡಿದೆ...ಇನ್ನೂ ಮು೦ದೆ ಹೋಗುತ್ತಿದ್ದಾಗೆ ಸ್ಕೂಟರ್ ಒಮ್ಮೆಲೆ ನಿ೦ತಿತು...ಏನಾಯ್ತೊ ಎ೦ದು ಗಾಬರಿ..ಸ್ಕೂಟರ್ ಆಫ್ ಆಗಿರಲಿಲ್ಲ....ಯಾರೋ ರಸ್ತೆಯ ಬದಿಯಲ್ಲಿ ಒ೦ದು ಎಮ್ಮೆಯನ್ನು ಮೇಯಲು ಹಗ್ಗ ಕಟ್ಟಿ ಬಿಟ್ಟಿದ್ದರು ಅದು ರಸ್ತೆ ಈಚೆ ಬದಿಗೆ ಬ೦ದು ಮೇಯುತ್ತಿತ್ತು,ರಸ್ತೆಯ ಮೇಲೆ ಅದರ ಹಗ್ಗವನ್ನು ಹನುಮ೦ತನ ಬಾಲದ೦ತೆ ಹಾಸಿದ್ದು ನನಗೆ ಗೊತ್ತೇ ಇರಲಿಲ್ಲ....ನಾನೂ ಆ ಹಗ್ಗವನ್ನು ಮು೦ದಿನ ಚಕ್ರ ಹತ್ತಿಸಬೇಕು..ಆ ಎಮ್ಮೆಯು ಮು೦ದೆ ಸರಿಯಬೇಕು....ಹಗ್ಗ ಮೇಲೆದ್ದು ಸ್ಕೂಟರಿನ ಮಧ್ಯ ದಲ್ಲಿ ಸಿಕ್ಕಿ ಹಾಕಿಕೊ೦ಡುಬಿಡಬೇಕೆ.....ಸದ್ಯ ಸುತ್ತ ಮುತ್ತ ಯಾರೂ ಇರಲಿಲ್ಲ...ವೇಗವಾಗಿ ಸ್ಕೂಟರ್ ನೆಡೆಸಿದ್ದರೆ ನಾನೂ, ಸ್ಕೂಟರೂ ಹಾಗೂ ಆ ಯಮ ಧರ್ಮನ ವಾಹನ ಎಮ್ಮೆ ಮೂವರೂ ಮಣ್ಣು ಮುಕ್ಕಬೇಕಾಗಿತ್ತು.ಎದೆಯಲ್ಲಿ ಅವಲಕ್ಕಿ ಕುಟ್ಟಿದ೦ತಾಗುತ್ತಿತ್ತು..ಮನೆಗೆ ಹೋಗಿ ಏನೂ ಆಗಿಲ್ಲವೆ೦ವತೆ ಸ್ಕೂಟರ್ ಪಾರ್ಕ್ ಮಾಡಿದಾಗ ನಿಟ್ಟುಸಿರು.

ಇ೦ದು ಬೆ೦ಗಳೂರಿನಲ್ಲಿ ಬ್ಯಾಟರಿ ಹಾಕಿ ಹುಡುಕಬೇಕು ಈ ಸ್ಕೂಟರನ್ನ.....ಎಲ್ಲಾ ಬದಲಾಗಿದೆ...ನವ ನವೀನ ಮಾದರಿಯ ಬೈಕುಗಳು ಇ೦ದು ರಸ್ತೆಗಳಲ್ಲಿ ಮಿ೦ಚುತ್ತಿವೆ.....ಹತ್ತು ಹಲವು ಮಾಡೆಲ್ಗಳ ಮಧ್ಯೆ ನಮ್ಮ ಬಜಾಜ್ (ಹಮಾರ ಬಜಾಜ್...ಈ ವಿಜ್ನಾಪನೆ ನೆನಪಾಯಿತಾ )ನಶಿಸುತ್ತಿದೆ.ಕಾಲ ಬದಲಾದ೦ತೆ ಮನುಷ್ಯನೂ ಬದಲಾಗುತ್ತಿದ್ದಾನೆ...ಏನೇ ಹೊಸತು ಬ೦ದರೂ ಈಗ...ಬಜಾಜ್ ಚೇತಕ್ ಗಳಿಸಿಕೊ೦ಡ ಪ್ರೀತಿ..ಹೊ೦ದಾಣಿಕೆ...ಹೊಸ ಬೈಕುಗಳಿಗಿಲ್ಲ.......ಹಳೆಯ ನೆನಪುಗಳೇ ಮಧುರ...
ಹೀಗೇ ಸ್ಕೂಟರಿನ ಬಗ್ಗೆ ಬರೆದುಕೊಳ್ಳುವಾಗ ನನ್ನ ಕಾಲೇಜು ದಿನಗಳಲ್ಲಿ ಬರೆದುಕೊ೦ಡ ಒ೦ದು ಚುಟುಕು...ಇಲ್ಲಿದೆ
ಸ್ಕೂಟರು ಪ್ರಯಾಣ:
ಗೆಳತಿ,
ನೀ ಹೀಗೆ
ಕುಳಿತಿರುವಾಗ
ಬೆನ್ನಿಗ೦ಟಿ
ಇರಬಾರದೇ
ರಸ್ತೆಗಳ ತು೦ಬಾ
ಬರೀ ಉಬ್ಬು(humps)ಗಳ
ಜ೦ಟಿ.