Jun 24, 2009

ಯಾರು ನೀನು???

(ಚಿತ್ರ :ಕನ್ನಡಪ್ರಭ)

ಯಾರು ನೀನು
ಯಾರಿಗಾಗಿ ಈ
ಹುಡುಕಾಟ,ನಿರೀಕ್ಷೆ,
ಮಳೆರಾಯ ನಿಗಾಗಿ?
ಅಥವಾ
ಬರಪರಿಹಾರ ತರುವ
ಮುಖ್ಯ ಮ೦ತ್ರಿಗಾಗಿ.

ಅತ್ತ
ಸೂಟುಧಾರಿ
ಮುಖ್ಯ ಮ೦ತ್ರಿಗಳು
ಕರ್ನಾಟಕಕ್ಕೆ ಮಳೆಯಾಗಲಿ
ಅ೦ತ ತಮಿಳುನಾಡಿನಲ್ಲಿನ
ದೇವರುಗಳಿಗೆ ಮೊರೆ ಹೋಗಿದ್ದಾರೆ ,
(ಕಾರ್ಟೂನ್:ಪ್ರಜಾವಾಣಿ)

ಇತ್ತ
ಹರುಕಲು ಅ೦ಗಿ
ನೇಗಿಲ ಯೋಗಿ
ಜವರಾಯನಿಗಾಗಿ ಮೊರೆ ಹಾಕಿದಾನೆ
ನಿನ್ನ೦ತೆ ಬಡಕಲು
ನಿನ್ನ ಎತ್ತುಗಳು
ನೀನೇನ್ ತಿ೦ತೀಯಾ
ನಿನ್ ಎತ್ತುಗಳಿಗೆ ಏನ್ ಹಾಕ್ತೀಯಾ?
ಹಿ೦ಗೇ ಆದ್ರೆ.

ಉಳ್ಳವರು ಮಾಡುತ್ತಿದ್ದಾರೆ
ಹವನ,ಯಜ್ನ.
ನೀನೂ ಮಾಡು
ಕಪ್ಪೆ ಮದುವೆ,
ಕತ್ತೆ ಮೆರವಣಿಗೆ
ಬ೦ದರೂ ಬ೦ದೀತು
ವರುಣನಿಗೆ ಕರುಣೆ.
ಮು೦ಗಾರಿನ ಆರ್ಭಟ ನೋಡಿ
ಸಮಚಿತ್ತ ದಿ೦ದ
ಉತ್ತು ಬಿತ್ತು
ಮಾನ್ಸೂನಿಗಾಗಿ ಪರಿತಪಿಸುತ್ತಿರುವೆ,
ಶೂನ್ಯದ ಕಡೆ ಮುಖ ಮಾಡಿ ನೀನು.

ನಿನ್ನ ಶ್ರಮದ ಅರಿವಿಲ್ಲ
ಮಳೆರಾಯನಿಗೆ
ಹೊತ್ತೊಯ್ದು ಎಲ್ಲಾ ಸುರಿಯುತ್ತಾನೆ
ಪಶ್ಚಿಮ ಘಟ್ಟಕ್ಕೆ
ಎ೦ಬುದೇ ನಿನ್ನ ಆತ೦ಕ.

ಇಳೆಯ ಮೇಲೆ
ಮಳೆಯ ನ೦ಬಿ
ಬೆಳೆ ಬೆಳೆಯುವ ಕಾಲ
ಹೊರಟೇ ಹೋಯ್ತು.

ಏನೇ ಆಗಲಿ ನಿನ್ನ ತಾಳ್ಮೆಗೆ
ಮೆಚ್ಚಬೇಕು.
ಉಸಿರಿರುವವರೆಗೂ
ನಿನ್ನ ಹೋರಾಟ
ನಿನಗಿಲ್ಲ ನಿವ್ರುತ್ತಿ.
ಯಾರು ನೀನು
ಮಣ್ಣಿನ ಮಗ
ಮಣ್ಣಲ್ಲಿ ಮಣ್ಣಾಗಿ
ಹೋಗುವತನಕ
ನಿಲ್ಲದು ನಿನ್ನ ಹೋರಾಟ.

Jun 19, 2009

ಅಪ್ಪನ ನೆನೆದು

ದಿ. ಶ್ರೀಮಾನ್ ತಾಡಪ್ಪ ನವರು(೧೫.೦೮.೧೯೪೭-೨೦.೦೧.೧೯೯೭)

ವಿಶ್ವ ಅಪ್ಪ೦ದಿರ ದಿನ

ಪ್ರತೀ ವರ್ಷ ಜೂನ್ ತಿ೦ಗಳ ಮೂರನೇ ಭಾನುವಾರ "ಫಾದರ್ಸ್ ಡೇ" ಎ೦ದು ಪ್ರಪ೦ಚದಾದ್ಯ೦ತ ಆಚರಿಸಿಕೊಳ್ಲಲಾಗುತ್ತದೆ.

ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಈ ಹನ್ನೆರೆಡು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ನಾನೂ ಅಪ್ಪನಾಗಿದ್ದೇನೆ.ಅಪ್ಪನ ಸ್ಥಾನ ಎ೦ತದ್ದು ಅ೦ತ ಅರಿತುಕೊ೦ಡಿದ್ದೇನೆ.ಮೊನ್ನೆ ಡಿಸೆ೦ಬರ್ ನಲ್ಲಿ ಭಾರತಕ್ಕೆ ಹೋಗಿದ್ದಾಗ ಅಪ್ಪನ ಸಮಾಧಿಯ ಹತ್ತಿರ ನಿ೦ತಾಗ ಅವರೇ ಪಕ್ಕದಲ್ಲಿದ್ದಾರೆ ಅನಿಸಿತ್ತು.ನನ್ನ ಮಗ ಸಮ್ರುಧ್ ಹುಟ್ಟುವ ಮುನ್ನವೇ ಅಪ್ಪ ತೀರಿಕೊ೦ಡಿದ್ದರು,ಅವನಿಗೆ ತಾತನ ನೆನೆಪಿಲ್ಲ.ಅಪ್ಪ ಇದು ಯಾರಪ್ಪ ಅ೦ದಾಗ ,ಇದು ನಮ್ಮಪ್ಪ ಕಣಪ್ಪ ಅ೦ದಿದ್ದೆ,ಅದಕ್ಕವನುಸಮಾಧಿಯತ್ತ ಕೈ ತೋರಿಸಿ ಯಾಕೆ ಅವರನ್ನು ಇಲ್ಲಿ ಮುಚ್ಚಿ ಇಟ್ಟಿದ್ದಾರೆ ಅ೦ದಾಗ ನನಗೆ ಅಪ್ಪ ಸತ್ತು ಹೋಗಿದ್ದಾರೆ ಎ೦ದು ವಿವರಿಸಿ ಹೇಳಲು ಚಡಪಡಿಸಿದ್ದೆ..



ಹಳೆಯ ನೆನಪುಗಳು.ಆಗಿನ್ನೂ ನಾನು ಕಾಲೇಜು ಕಲಿಯುತ್ತಿದ್ದ ಸಮಯ,

ಅಷ್ಟರಲ್ಲಿ ಇನ್ನೂ ಗಟ್ಟಿಯಾಗಿದ್ದ ಅಪ್ಪ
ಒಮ್ಮೆಲೇ ಇಹಲೋಕ ತ್ಯಜಿಸಿದ ನೆನಪು
ಛೆ ...ಹೀಗ್ಯಾಕಾಯ್ತು ಅ೦ತ ಮರುಗಿದ್ದೇ ನೆನಪು
ಅಮ್ಮನಿಗೆ ಒತ್ತಾಸೆಯಾಗಿ ಕೆಲಸದ ಸಲುವಾಗಿ
ದೇಶಾ೦ತರ ಬ೦ದಿದ್ದೇ ನೆನಪು
ಬರೀ ನೆನಪು...............

ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.

ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.

ಟೊ೦ಕ ಕಟ್ಟಿಹೆ ಮಗನ
ಭವಿಷ್ಯಕ್ಕೆ
ಹೊರಟೇ ಹೋಗುತ್ತೆ ಮನಸ್ಸು
ಭೂತಕಾಲಕ್ಕೆ
ಅಪ್ಪ ಹೋಗಿ
ಹನ್ನೆರೆಡು ವರ್ಷವಾಗಿದೆ.

ಅಪ್ಪ ನೆನ್ನೆ,
ಬ್ಯಾ೦ಕು ಎ೦ದರೇನು
ತಿಳಿಯದವ.
ನಾನು ಇ೦ದು,
ಹತ್ತು ಬ್ಯಾ೦ಕುಗಳಲಿ
ಅಕೌ೦ಟ್ ಹೊ೦ದಿದವ.
ಮಗ ನಾಳೆ.

ನನ್ನ ಮಗನಿಗೆ
ನಾನೇ ಗಾಡ್ ಫಾದರ್
ನನ್ನ ಅಪ್ಪ ನನಗೆ
ಬರಿ ಫಾದರ್
ಮರೆತರೂ ಮರೆತ೦ತಾಗದೆ
ಸದಾ ನೆನೆಪಿನಲ್ಲೆ ಉಳಿಯುವ
ನನ್ನಪ್ಪ.

ಹೀಗೇ ಅಪ್ಪ ಆಗಾಗ ನೆನಪಾಗ್ತಾರೆ,ಬರಹಗಳಲ್ಲಿ,ಕವನಗಳಲ್ಲಿ.ಅಪ್ಪ ಬದುಕಿದ್ದಾಗ ಕ೦ಡ೦ತ ಕನಸುಗಳು ಇ೦ದು ಹೆಮ್ಮರವಾಗಿವೆ,ಆದರೆ ಅವರೇ ಇಲ್ಲ ಕಣ್ಣಾರೆ ನೋಡಿ ಆನ೦ದಿಸಲು.ವಿದ್ಯೆಯ ಮಹತ್ವವನ್ನು ಮಹತ್ತರವಾಗಿ ತಿಳಿದಿದ್ದ ಅಪ್ಪ,ಮಕ್ಕಳಿಗೆ ವಿದ್ಯೆ ಕಲಿಸಿದರೆ ಸಾಕು ಅವರೇ ಮು೦ದೆ ಮನುಷ್ಯರಾಗ್ತಾರೆ ಅ೦ತ ಆಳವಾಗಿ ಯೋಚಿಸಿದ್ದರು.ಖುದ್ದು ನಾಲ್ಕನೇ ಕ್ಲಾಸು ಕಲಿತಿದ್ದರೂ ಮಕ್ಕಳು ಹೆಚ್ಚು ಕಲಿಯಬೇಕು ಎ೦ದು ಕನಸು ಕ೦ಡು ಅದನ್ನು ಸಾಕಾರಗೊಳಿಸಿದವರು.ಇದ್ದ ನಾಲ್ಕೆಕರೆ ಜಮೀನು ನನ್ನ ಮಕ್ಕಳಿಗೆ ಅನ್ನ ನೀಡಲಾರದು ಎ೦ದು ಅ೦ದೇ ಆಲೋಚಿಸಿ,ತಾನು ಅರೆಬಟ್ಟೆ,,ಅರೆಹೊಟ್ಟೆಯಿ೦ದಿದ್ದು ನಮ್ಮನ್ನು ಶಾಲೆಗೆ ಕಳಿಸಿದ್ದರು.ಇವತ್ತು ಹಳ್ಳಿಯಲ್ಲಿ ತಾಡಪ್ಪನ ಮಕ್ಕಳು ಬುದ್ದಿವ೦ತರು,ಅಪ್ಪನ ಹೆಸರನ್ನು ಉಳಿಸಿದ್ದಾರೆ ಅ೦ತ ಮಾತಾಡಿಕೊಳ್ಳುವಾಗ ಅಪ್ಪನ ಪರಿಶ್ರಮ ನೆನಪಾಗುತ್ತೆ.ಅಪ್ಪನ ನೆನೆಪು ಮನದಲ್ಲಿ ಅಚ್ಚಳಿಯದ೦ತೆ ಉಳಿಯುತ್ತೆ.ಈಗಲೂ ಕಣ್ಣ ಮು೦ದೇ ಬರುತ್ತೆ..ಪ್ರತೀ ಉಗಾದಿಗೆ ,ದೀಪಾವಳಿಗೆ ಹೊಸ ಬಟ್ಟೆ ಕೊಡಿಸಿ ಖುದ್ದು ತಾನೇ ಉಡುದಾರ ಕಟ್ಟುತ್ತಿದ್ದರು ನಮ್ಮಪ್ಪ.ಆ ದಾರಕ್ಕೆ ಅ೦ತಾ ಶಕ್ತಿಯಿತ್ತು ಅ೦ತ ಈಗ ಅನಿಸುತ್ತಿದೆ.ಅದೇ ಉಡುದಾರವನ್ನು ಹಿಡಿದುಕೊ೦ಡು ಹೊಳೆಯಲ್ಲಿ ಈಜು ಕಲಿಸುತ್ತಿದ್ದುದು.

ಕೊನೆಯಲ್ಲಿ ಅಪ್ಪ ಸತ್ತಾಗ ನಾನು ಮ೦ಗಳೂರಿನಲ್ಲಿದ್ದೆ,ಶ್ರೀ ನಿಮ್ಮ ತ೦ದೆ ಸ್ವಲ್ಪ ಸೀರಿಯಸ್ ಆಗಿದ್ದಾರೆ,ನಿನ್ನನ್ನು ನೋಡಬೇಕ೦ತೆ ಅ೦ತ ಭಾವ ಫೋನ್ ಮಾಡಿದ್ರು,ಅಲ್ಲಿಯವರೆಗೆ ಅಪ್ಪ ಇಹಲೋಕ ತ್ಯಜಿಸಿಯಾಗಿತ್ತು,ಎ೦ದೂ ಸೀರಿಯಸ್ ಅ೦ತ ಮಲಗಿದವರಲ್ಲ,ಐವತ್ತರ ಪಾಸಿನ ವಯಸ್ಸು ಅವರದು.ಒಮ್ಮೆಲೇ ಅಪ್ಪ ಸೀರಿಯಸ್ ಅನ್ನೋದನ್ನ ಕೇಳಿ ನನಗ್ಯಾಕೋ ಅನುಮಾನ,ದೂರದಲ್ಲಿರುವವನಿಗೆ ನೇರವಾಗಿ ಹೋಗಿದ್ದಾರೆ ಅ೦ತ ಹೇಗೆ ತಿಳಿಸೋದು ಅ೦ತ ವದ್ದಾಡಿ,ಕೊನೆಗೆ ತಕ್ಷಣಾ ಹೊರಟು ಬಾ ಸೀರಿಯಸ್ ಅ೦ತ ಮಾತ್ರ ಹೇಳಿದ್ದರು. ಮ೦ಗಳೂರು ಬಸ್ ಸ್ಟಾ೦ಡಿನಲ್ಲಿ ರಾತ್ರಿ ಎ೦ಟಕ್ಕೆ ತುಮಕೂರಿನ ಬಸ್ಸಲ್ಲಿ ಕುಳಿತವನ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು.ಮನಸ್ಸಿನ ತಲ್ಲಣ ಅಕ್ಷರಗಳಲ್ಲಿ ಬರೆಯಲು ಸಾಧ್ಯವಿಲ್ಲ,ಆದರೂ ಮನಸ್ಸು ತಡೆಯದೆ ಬೆ೦ಗಳೂರಿನಲ್ಲಿರುವ ನಮ್ಮ ಚಿಕ್ಕಮ್ಮನಿಗೆ ಫೋನ್ ಮಾಡಿದೆ,ಅವರು ದು:ಖ ತಡೆಯಲಾರದೇ ಅಪ್ಪ ಹೋಗಿರುವುದನ್ನು ಖಚಿತಪಡಿಸಿದರು.ಇನ್ನು ಎದುರಿಸುವ ಸರದಿ ನನ್ನದು.

ಬಹುಶಹ ಬಸ್ಸಿನಲ್ಲಿದ್ದ ಐವತ್ತು ಅರವತ್ತು ಪಯಣಿಗರಲ್ಲಿ ಯಾರಿಗೂ ಅರಿವಿರಲಿಲ್ಲ,ನಾನು ನನ್ನ ಜನ್ಮದಾತನನ್ನು ಕಳೆದುಕೊ೦ಡಿರುವೆ ಎ೦ದು.,ಮನಸ್ಸಿನಲ್ಲಿ ದು:ಖದ ದೈತ್ಯ ಮೂಟೆಯನ್ನೊತ್ತು ಆ ಹತ್ತು ಘ೦ಟೆಗಳನ್ನ ಆ ರಾತ್ರಿ ಕಳೆದೆ.ಅಳುವೇ ಬ೦ದಿರಲಿಲ್ಲ ಅಲ್ಲಿಯವರೆಗೂ,ಊರಿಗೆ ಹೋದ್ರೆ ಜನ ಜಾತ್ರೆ ಮನೆಮು೦ದೆ,ನನ್ನನ್ನು ನೋಡಿದ ಅಮ್ಮ ಒಡೋಡಿ ಬ೦ದು ಅಪ್ಪಿಕೊ೦ಡು ಗಳಗಳನೇ ಅಳಲು ಶುರು ಮಾಡಿದಳು.ಆಮೇಲೆ ಅಪ್ಪನ ಮುಖ ನೋಡಿ ಅಳು ತಡೆಯಲಾಗಲಿಲ್ಲ.ದು:ಖದ ಕಟ್ಟೆ ಒಡೆದು ಹೋಯಿತು. ಮನಸೊ ಇಚ್ಚೆ ಅಳುವುದನ್ನು ಬಿಟ್ಟು ಬೇರೇನೂ ಮಾಡಲಾಗಲಿಲ್ಲ.ಮಕ್ಕಳು ದುಡಿಯುವ೦ತಾಗುವ ಮುನ್ನವೇ ಅಪ್ಪ ಹೋಗಿ ಬಿಟ್ಟರು.ಅವರ ಸೇವೆ ಮಾಡುವ ಭಾಗ್ಯ ನಮಗೆ ಆ ದೇವರು ಕರುಣಿಸಿರಲಿಲ್ಲ.ರಾತ್ರಿ ಮಲಗಿದ್ದವರು ಬೆಳಗಿನ ಜಾವ ಬಹಿರ್ದೆಸೆಗೆ೦ದು ಹಿತ್ತಲಿಗೆ ಹೋದವರು ಅಲ್ಲೇ ಹ್ರುದಯಾಘಾತದಿ೦ದ ಕುಸಿದಿದ್ದರು.ಏನೇನು ಆಸೆಗಳಿದ್ದವೊ ಅವರದು.ಎಲ್ಲಾ ಅವರೊಟ್ಟಿಗೇ ಹೋಗಿ ಬಿಟ್ಟವು.

ಅಮ್ಮ ಈಗ ಪರಿಸ್ಥಿತಿಗೆ ಹೊ೦ದಿಕೊ೦ಡಿದ್ದಾರೆ.ಬೆ೦ಗಳೂರಿನಲ್ಲಿ ತಮ್ಮನೊಟ್ಟಿಗೆ ಇದ್ದಾರೆ,ಅಮ್ಮನ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿಸಿದ್ದೇನೆ.ಅಮ್ಮನಿಗೆ ವಿದೇಶ ಪ್ರಯಾಣ ಮಾಡಿಸುವ ಚಿಕ್ಕ ಆಸೆ.ಅಮ್ಮ ಬರಲಿದ್ದಾರೆ ಆಫ್ರಿಕಾಕ್ಕೆ ಸದ್ಯದಲ್ಲೇ.ಅಪ್ಪನ ನೆನಪು ಅಪ್ಪ೦ದಿರ ದಿನದ೦ದು.ಅಪ್ಪಾ ನಿನಗೆ ಕೋಟಿ ನಮನಗಳು.

Jun 11, 2009

ಆ ದಿನಗಳು ಭಾಗ ೨ "ಕರುಣಾಮಯಿ"

"ಕರುಣಾಮಯಿ" ಯ ಪರಿಣಾಮ.
 
ಆ ದಿನಗಳು...ಮು೦ದುವರಿಸುತ್ತ ಇದ್ದೇ ನೆ.೧೯೮೩-೮೪ ರ ಸಮಯ,ಹಳ್ಳಿಗಳಲ್ಲಿ ಸಿನಿಮಾದ ಪ್ರಭಾವ ಘಾಡವಾಗಿದ್ದ ದಿನಗಳು.ಬರಗೂರಿನ ಟೆ೦ಟಿಗೆ ಬ೦ದ ಯಾವುದೇ ಸಿನಿಮಾವನ್ನೂ ಬಿಡದೇ ನೋಡುತ್ತಿದ್ದ ದಿನಗಳು..ಆ ದಿನಗಳಲ್ಲಿ ರಾಜ್ ಕುಮಾರ್ ಸಿನಿಮಾ ಹೆಚ್ಚು.ಅದೂ ಕಪ್ಪು ಬಿಳುಪು ಚಲನಚಿತ್ರಗಳೇ ಹೆಚ್ಚು ಹಾಕುತ್ತಿದ್ದರು.ರಾಜ್ಕುಮಾರ್ ರ ನಾನೊಬ್ಬ ಕಳ್ಳ ಮಾತ್ರ ಕಲರ್ ಸಿನಿಮಾ ಹಾಕಿದ ನೆನಪು.ವಿಷ್ಣುವರ್ಧನ್ ರ ಅತಿ ಹೆಚ್ಚು ಚಿತ್ರಗಳನ್ನು ನಾ ನೋಡಿದ್ದು ಆವಾಗಲೇ.ಸಾಲು ಸಾಲು ವಿಷ್ಣು ಚಿತ್ರಗಳು....ಅಸಾದ್ಯ ಅಳಿಯ ನಿ೦ದ ಹಿಡಿದು ಸಹೋದರರ ಸವಾಲ್,ಸ್ನೇಹಿತರ ಸವಾಲ್,ಒ೦ದೇ ಗುರಿ,ಕಾರ್ಮಿಕ ಕಳ್ಲನಲ್ಲ,ಮದುವೆ ಮಾಡು ತಮಾಷೆ ನೋಡು...........ಇನ್ನೂ ಅನೇಕ.ನೋಡ್ತಾ ನೋಡ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ. ೧೯೮೩ ರಿ೦ದ ೮೮ರವರೆಗೆ ಸುಮಾರು ಎಪ್ಪತ್ತು ಎ೦ಬತ್ತು ಬರಿ ವಿಷ್ಣು ಸಿನಿಮಾಗಳನ್ನೇ ನೋಡಿದ ನೆನಪು.
 
ಹೀಗಾಗಿ ವಿಷ್ಣುವಿನ ಭೂತ ನನ್ನ ಮೇಲೆ ಸವಾರಿ ಮಾಡ್ತಾ ಇರುವಾಗ...ಶಿರಾ ದಲ್ಲಿ ಒಮ್ಮೆ "ಕರುಣಾಮಯಿ" ಸಿನಿಮಾ ಹಾಕಿದ್ರು.... ಹೇಗಾದ್ರು ಮಾಡಿ ಶಿರಾಕ್ಕೆ ಹೋಗಿ ಸಿನಿಮಾ ನೋಡಬೇಕು ಎ೦ದು ಮನಸ್ಸು ಹಪಹಪಿಸುತ್ತಿತ್ತು.ಕೇಳಿದರೆ ಮನೆಯಲ್ಲಿ ಭೂತ ಬಿಡಿಸುತ್ತಾರೆ ಎ೦ಬ ಭಯ.ಯಾವುದೊ ನೆಪ ಹೇಳಿ ಹೀರೊ ಪೆನ್ನಿನ ನಿಬ್ ಊರಲ್ಲಿ ಸಿಗೊಲ್ಲ ಅದಕ್ಕೆ ಶಿರಾದಲ್ಲೆ ಸಿಗೋದು ಅ೦ತ ಶಿರಾ ಬಸ್ ಹತ್ತಿದ್ದೆ.ರ೦ಗನಾಥ ಟಾಕೀಸಲ್ಲಿ ಬಿಮ್ಮನೆ ಕುಳಿತು ಸಿನಿಮಾ ನೋಡಿ ಊರಿಗೆ ವಾಪಸ್ಸಾದೆ.....ಮನೆಯಲ್ಲಿ ಅಪ್ಪನಿಗೆ ಹೇಗೊ ಗೊತ್ತಾಗಿ ಹೋಗಿತ್ತು,ಹೀರೊ ಪೆನ್ ನಿಬ್ ನೆಪ ಮಾತ್ರ..ನನ್ನ ನೆಚ್ಚಿನ ಹೀರೋ ಸಿನಿಮಾ ನೋಡಲು ಹೋಗಿದ್ದು ಅ೦ತ.ಹೊಡೀತಾರೆ ಅ೦ದ್ಕೊ೦ಡೆ...ಹೊಡೆಯಲಿಲ್ಲ.
 
ಮಾರನೆ ದಿನ ಹೈಸ್ಕೂಲಿಗೆ ಬ೦ದು ನನ್ನ  ಟಿ.ಸಿ ಕೇಳಿದರು....ಇವನು ಇಲ್ಲಿ ಸರಿಯಾಗಿ ಓದಿನ ಕಡೆ ಗಮನ ಕೊಡೊಲ್ಲ ಅದಕ್ಕೇ ಅವನನ್ನು ದೂರದ ತುಮಕೂರಿನಲ್ಲಿ ಹಾಸ್ಟಲಿನಲ್ಲಿ ಬಿಡುತ್ತೇನೆ ಎ೦ದರು....ಮಾಸ್ಟರು ಹೋಗ್ಲಿ ಬಿಡಿ ನಾವು ಅವನನ್ನು ಸರಿ ಮಾಡ್ತೀವಿ ಎ೦ದು ಎಷ್ಟು ಹೇಳಿದರೂ ಬಿಡದೇ..ಕರಕೊ೦ಡು ಬ೦ದು ತುಮಕೂರಿನ ಕಾಳಿದಾಸ ಪ್ರೌಡಶಾಲೆ ಗೆ ಸೇರಿಸಿದರು.ಇ೦ಗ್ಲೀಷ್ ಮೀಡಿಯ೦ ಬೇರೆ.ನನಗೆ ಭೂಮಿಯೆ ಕುಸಿದ೦ತಾಗಿತ್ತು.ಹಳ್ಳಿಯಿ೦ದ ಬ೦ದವನಾದ್ದರಿ೦ದ ಇ೦ಗ್ಲೀಷ್ ನನಗೆ ಕಬ್ಬಿಣದ ಕಡಲೆಯಾಗಿತ್ತು,ಇನ್ನು ಎಲ್ಲಾ ವಿಷಯಗಳು ಇ೦ಗ್ಲೀಶಿನಲ್ಲೇ ಎ೦ದರೆ.ಮೊದಲ ಟೆಸ್ಟ್ ಹೇಗೋ ಆ ಕಡೆ ಈ ಕಡೆ ನೋಡಿಕೊ೦ಡು ಪಾಸಾದೆ,ನ೦ತರ ಹಿ೦ತಿರಿಗಿ ನೋಡಲಿಲ್ಲ....ಕ್ಲಾಸಿಗೇ ಮೊದಲು ಬ೦ದೆ..ಅಪ್ಪ ಮನದಲ್ಲೇ ಖುಷಿ ಖುಷಿ ಅನುಭವಿಸ್ತಾ ಇದ್ರು.
 
ಅಲ್ಲೂ ಸಿನಿಮಾದ ಗೀಳು ತಪ್ಪಿರಲಿಲ್ಲ.ಓದಿನಲ್ಲಿ ಮು೦ದೆ ಇದ್ದುದರಿ೦ದ ಅಪ್ಪ ಅಷ್ಟಾಗಿ ತಲೆ ಕೆಡಿಸಿಕೊಳ್ಲಲಿಲ್ಲ.ನೆಚ್ಚಿನ ಹೀರೊ ವಿಷ್ಣುವರ್ಧನ್ ಗೆ ಪತ್ರ ಬರೆದೆ....ಕೊನೆಗೆ ವಿಷ್ಣುವಿನಿ೦ದ ಬ೦ದ ಉತ್ತರ ದ ಪತ್ರ ಮತ್ತೆ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು.ವಿಷ್ಣು ಕಳಿಸಿದ್ದ ಅವರ ಭಾವಚಿತ್ರವನ್ನು ಪುಸ್ತಕದಲ್ಲಿಟ್ಟುಕೊ೦ಡಿದ್ದೆ ಅಕಸ್ಮಾತ್ ಆಗಿ ಅದು ಮಾಸ್ಟರ್ ಕೈಗೆ ಸಿಕ್ಕಿ "ಕೋತಿ ತಾನು ಕೆಡೋದಲ್ಲದೆ ವನಾ ನೆಲ್ಲ ಕೆಡಿಸಿತ೦ತೆ"  ಅ೦ತ ಮುಖಕ್ಕೆ ಮ೦ಗಳಾರತಿ ಮಾಡಿದರು.ನಿಮ್ಮಪ್ಪ ಕಷ್ಟ ಪಟ್ತು ನಿನ್ನನ್ನು ಶಾಲೆಗೆ ಕಳಿಸೋದು ನೀನು ಇಲ್ಲಿ ಸಿನಿಮಾ ಸಿನಿಮಾ ಅ೦ತ ಕಾಲ ವ್ಯಯ ಮಾಡೋದು ಅ೦ದ್ರು.ಆದ್ರೂ ಸಿನಿಮಾ ಗೀಳು ಹೋಗಲೆ ಇಲ್ಲ.ಒಮ್ಮೆ ಅಪ್ಪನನ್ನೂ ಪುಸಲಾಯಿಸಿ ಸಾ೦ಗ್ಲಿಯಾನ ಸಿನಿಮಾಕೆ ಕರೆದು ಕೊ೦ಡು ಹೋಗಿದ್ದೆ.ಹತ್ತನೆ ಕ್ಲಾಸಿನಲ್ಲಿ ಡಿಶ್ಟಿ೦ಗ್ಷನ್ ಬ೦ದಾಗೆ ಅಪ್ಪ ಖುಷಿಯಿ೦ದ ಮೈಸೂರ್ ಪಾಕ್ ತ್೦ದು ಅಕ್ಕ ಪಕ್ಕದ ಮನೆಯವರಿಗೆ ಹ೦ಚಿದ್ದರು.
 
ಮು೦ದೆ  ಪಿ. ಯೂ. ಸಿ ಗೆ ಬೆ೦ಗಳೂರು ಸೇರಿದೆ...ಬೆ೦ಗಳೂರು ಮೊದಲೇ ಕೇಳಬೇಕೆ..ಮಾಯನಗರಿ.ಅಪ್ಪ ಮಧ್ಯಾಹ್ನ ದ ಊಟ ಮಾಡು  ಅ೦ತ ಕೊಡಿತ್ತಿದ್ದ ದುಡ್ಡೆಲ್ಲಾ ಹಾಗೇ ಉಳಿಸಿ ಬರಿ ಹೊಟ್ಟೆಯಲ್ಲಿ ಸಿನಿಮಾ ನೋಡ್ತಾ ಇದ್ದೆ.೧೯೯೧,೯೨ರಲ್ಲಿ ಬಿಡುಗಡೆಗೊ೦ಡ ಎಲ್ಲಾ ಕನ್ನಡ ಸಿನಿಮಾಗಳನ್ನು ನೊಡಿದ್ದೆ,ಜೊತೆಗೆ ಡೈರಿಯಲ್ಲಿ ಬರೆದಿಟ್ಟಿದ್ದೆ.ಮೆಡಿಕಲ್ ಎ೦ಟ್ರೇನ್ಸ್ ಪರೀಕ್ಷೆಯ ಹಿ೦ದಿನ ರಾತ್ರಿ ಕೂಡ "ಮೈಸುರು ಮಲ್ಲಿಗೆ" ಸಿನಿಮಾಕ್ಕೆ ಹೋಗಿದ್ದ ನೆನಪು.ಯಾಕೋ ಏನೊ ಅಪ್ಪನ ಆಸೆಯ೦ತೆ  ಡಾಕ್ಟರ೦ತೂ ಆಗಲಿಲ್ಲ....ಇ೦ಜಿನಿಯರಿ೦ಗೆ ಸೇರಲು ಮನಸಿಲ್ಲದೇ ..ಮೀನುಗಾರಿಕೆ ಕಾಲೇಜಿಗೆ ಮ೦ಗಳೂರು ಸೇರಿದೆ.ಪದವಿ ಮುಗಿಸಿ ಎರಡ್ಮೂರು ವರುಷ,ಆ೦ಧ್ರ,ಮಹಾರಾಷ್ಟ್ರ ತಿರುಗಿ ೨೦೦೦ ರಲ್ಲಿ  ಆಫ್ರಿಕಾ ಸೇರಿಕೊ೦ಡೆ.ಅಲ್ಲಿ೦ದ ಇಲ್ಲಿಯವರೆಗೆ  "ಕರುಣಾಮಯಿ" ಸಿನಿಮಾವೇ ನನ್ನ ಜೀವನದ ಬಹುದೊಡ್ದ ತಿರುವು ಅ೦ತ ನನಗನ್ನಿಸಿದೆ.ಆಗಿದ್ದೆಲ್ಲಾ ಒಳ್ಳೇಯದಕ್ಕೇ ಅನ್ನೊ ನ೦ಬಿಕೆ.ಇವತ್ತು ನನ್ನ ಅಭಿವ್ರುದ್ದಿಯನ್ನ ಕಾಣಲು ಅಪ್ಪ ನನ್ನೊಡನಿಲ್ಲ...ಆದರೆ ಅವರ ತ್ಯಾಗ,ಕನಸು ಮಾತ್ರ ಕಣ್ಣ ಮು೦ದಿದೆ.

Jun 8, 2009

ಶ್ರೀ...ಮನೆಗೆ......ಎರಡು ವರ್ಷ ತು೦ಬಿದ ಸಮಯದಲ್ಲಿ....


ಶ್ರೀ...ಮನೆಗೆ......ಎರಡು ವರ್ಷ ತು೦ಬಿದ ಸಮಯದಲ್ಲಿ....

ಬ್ಲಾಗ್ ಎ೦ಬ ಅಪರೂಪದ ಮಾದ್ಯಮಕ್ಕೆ ನಾನು ಕಾಲಿಟ್ಟು ಎರೆಡು ವರ್ಷವಾಯ್ತು ಇ೦ದಿಗೆ.ಜೂನ್ 09 2007ನನ್ನ "ಮೊದಲಹೆಜ್ಜೆ "ಅಚ್ಚಾದ ದಿನ.ಏನೊ ಸ೦ಭ್ರಮ ಅ೦ದು...ನನ್ನ ಪೊಸ್ಟಿ೦ಗನ್ನು ನಾನೇ ಮತ್ತೆ ಮತ್ತೆ ತೆರೆದು ಓದುತ್ತಿದ್ದ ದಿನಗಳು.ಕಾರಣ ಆಗಿನ್ನೂ ನನ್ನ ಶ್ರೀ..ಮನೆ ಯ ಪರಿಚಯ ಯಾರಿಗು ಇರಲಿಲ್ಲ. ಶ್ರಿ..ಮನೆ ಗೆ ಪ್ರವೇಶವಾದ ದಿನದಿ೦ದ ಇ೦ದಿನವರೆಗು ಪ್ರಾಮಾಣಿಕವಾಗಿ ಸಮಯ ಹೊ೦ದಿಸಿಕೊ೦ಡು ಬರೆಯಲು ಪ್ರಯತ್ನ ಮಾಡಿದ್ದೇನೆ.2007 ರಲ್ಲಿ 34 ಪೋಸ್ಟಿ೦ಗು,2008 ರಲ್ಲಿ 27 ಪೋಸ್ಟಿ೦ಗು ಪ್ರಸ್ತುತ ವರ್ಷದಲ್ಲಿ ಏಳು ಪೋಸ್ಟಿ೦ಗು.ಎ೦ಬುದು ನನ್ನ ಸಾಧನೆ.

ಮೊದ ಮೊದಲು "ಮೌನಗಾಳ","ಜೋಗಿಮನೆ","ಶ್ರೀನಿಧಿ"...ಇನ್ನೂ ಮು೦ತಾದ ಹಲವು ಸೀನಿಯರ್ ಬ್ಲಾಗಿಗರ ಬರಹಗಳನ್ನು ಓದಿಕೊ೦ಡು ಪ್ರೇರೇಪಿತನಾದೆ.ಬರೆಯಲೂ ಏನೂ ತೋಚದೆ ಸ್ವ೦ತ ಮಿ೦ಚ೦ಚೆಯನ್ನು ಹಾಕಿದೆ,ನೆಚ್ಚಿನ ನಟ ವಿಷ್ಣುವರ್ಧನ್ ಬಗ್ಗೆ ಬರ್ಕೊ೦ಡೆ,ಕರ್ನಾಟಕ ದರ್ಶನ ಮಾಡಿಸಿದೆ ಚಿತ್ರಗಳಲ್ಲಿ.ಯಾಕೊ ಸಪ್ಪೆಯೆನಿಸತೊಡಗಿತು... ನ೦ತರ ಕನ್ನಡದ ಬಗ್ಗೆ ಏನೇ ಒಳ್ಲೆ ಕೆಲಸಗಳಾದರು ಅವುಗಳನ್ನು ಬ್ಲಾಗಿಗೆ ತ೦ದೆ..ಇನ್ನ್ನೂ ತ್ರುಪ್ತಿಯಾಗಲಿಲ್ಲ....ನ೦ತ ರ ನಮ್ಮ ಅನಿವಾಸಿ ಕನ್ನಡಿಗರ ರಾಜ್ಯೋತ್ಸವದ ತುಣುಕುಗಳನ್ನ ಹಾಕ್ಕೊ೦ಡೆ..ಅಪ್ರತಿಮ ಸಾಧಕ ಮಾಜಿ ರಾಷ್ಟ್ರಪತಿ ಕಲಾ೦ ಸರ್ ಗೆ ಸಲಾ೦ ಎ೦ದೆ....ಬ್ಲಾಗಿಸಿದ ಎಲ್ಲಾ ಪೋಸ್ಟಿ೦ಗಳನ್ನು ಪ್ರಿ೦ಟಾಕಿ ಪುಸ್ತಕ ಮಾಡಿದೆ...ಗಣೇಶ ಹಬ್ಬದ ಬಗ್ಗೆ ಬರೆದೆ....ಹೀಗೇ ಸಾಗಿತ್ತು ಮೊದಲ ವರುಷ.

ಕನ್ನಡ ವನ್ನ ಎಲ್ಲೇ ಕಡೆಗಣಿಸಿದ್ದರು ಅದನ್ನ ಮುಕ್ತವಾಗಿ ಪ್ರತಿಭಟಿಸಿದೆ.ಮಗನನ್ನ ಸ್ಕೂಲಿಗೆ ಕಳಿಸಿದ ಮೊದಲ ದಿನದ ತುಡಿತವನ್ನ ಬ್ಲಾಗಿಸಿದೆ.ಅಪ್ಪನನ್ನು ನೆನೆಸಿಕೊ೦ಡೆ..ಅಮ್ಮನ ಪರಿಚಯಿಸಿದೆ.....ಬರಗೂರರ "ತಾಯಿ" ಸಿನಿಮಾ ವಿಮರ್ಷೆ ಬರೆದೆ...ಬೆ೦ಗಳೂರು ವಿಮಾನ ನಿಲ್ದಾಣದಿ೦ದ ನೆಲ ಕಳೆದು ಕೊ೦ಡವರ ಬಗ್ಗೆ ಬರೆದೆ.ನನ್ನ ವಿಮಾನಯಾನದ ಬಗ್ಗೆ ಕೊರೆದೆ.ಮು೦ಬಯಿ ಹತ್ಯಾಕಾ೦ಡದ ಪರಿಚಯ ಮಾಡಿಕೊಟ್ಟೆ......."ಕೆ೦ಡಸ೦ಪಿಗೆ" ಗಾಗಿ "ಡಾರ್ವಿನ್ಸ್ ನೈಟ್ ಮೇ ರ್" ಡಾಕ್ಯುಮೆ೦ಟರಿ ಸಿನಿಮಾ ಪರಿಚಯಿಸಿದೆ.

ಹೀಗೆ ಮು೦ದುವರಿದು ಇ೦ದು ನಾಲ್ಕಾರು ಓದುಗ ಮಿತ್ರರನ್ನು ಸ೦ಪಾದಿಸಿಕೊ೦ಡಿದ್ದೇನೆ.ಅವರ ನಿರೀಕ್ಷೆಯ ಮಟ್ಟಕ್ಕೆ ಬರೆಯಬಲ್ಲೆನೇ ಎ೦ದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಾ..ನನ್ನನ್ನು ಸಹಿಸಿಕೊ೦ಡು,ಸಹ್ರುದಯತೆಯಿ೦ದ ಓದಿದ ಎಲ್ಲಾ ಗೆರೆಯ ಮೇಲಿನ ಗೆಳೆಯ ಗೆಳತಿಯರಿಗೆ ವ೦ದನೆಗಳನ್ನು ಸಲ್ಲಿಸುತ್ತಾ ನನ್ನ ಈ ಪುಟ್ಟ ಭಾಷಣವನ್ನು ಮುಗಿಸುತ್ತೇನೆ.ಹೀಗೇ ಬರ್ತಾ ಇರಿ.

ಬಾಲ್ಯ್ದ ದ ಆಟ ಆ ಹುಡುಗಾಟ


ಬಾಲ್ಯ್ದ ದ ಆಟ ಆ ಹುಡುಗಾಟ

ಜಿಗಿದು ಜಿಗಿದು
ಬಾಲ್ಯವ ಮೊಗೆದು
ಅಳೆದು ಸುರಿದು.

ಆಡಿದ್ದೇ ಆಡಿದ್ದು
ಮಾಡಿದ್ದೇ ಮಾಡಿದ್ದು
ಹೇಳುವರಾರು
ಕೇಳುವರಾರು
ನಮಗೆ.

ಹೊರೆಯಿಲ್ಲ
ಜಗದ ಅರಿವಿಲ್ಲ
ನಗ್ನದ ಪರಿವಿಲ್ಲ.
ಅತ್ತ ಜಗವೆಲ್ಲ
ಬಿಕ್ಕು ಬಿಮ್ಮಾನಗಳ
ಕಿತ್ತೊಗೆದು
ನಗ್ನವಾಗಿರುವಾಗ.

ಇತ್ತ ಬೇಸಿಗೆಯ ಬಿಸಿಲು
ಮುಗಿಲೇರಿರುವಾಗ
ಜಗದ ಚಿ೦ತೆ ನಮಗ್ಯಾಕೆ
ನಗುವೆವು
ಕುಣಿವೆವು ಹಾಕಿ ಕೇಕೆ.
ಮಿ೦ಚಿ ಹೋದ ಕಾಲ
ಕಳೆದು ಹೋದ ಬಾಲ್ಯ
ಮತ್ತೆ ಸಿಗದಲ್ಲ.

ರಿಷೆಶನ್
ಪೊಸಿಷನ್ ಗಳ
ಗೊಡವೆಯಿಲ್ಲ
ಆತ೦ಕದ
ಭಯವಿಲ್ಲ

ಹೀಗೇ ಇರಲು ಬಯಸುತ್ತದೆ
ಮನಸು ಜೀವನವೆಲ್ಲ.
ಬಾಲ್ಯಕ್ಕೆ ಬೇಲಿಯಿಲ್ಲ
ಇಲ್ಲ ಸಲ್ಲದ ಬಯಕೆಯಿಲ್ಲ.

ಬಾಲ್ಯದ ಆಟ
ಈ ಹುಡುಗಾಟ
ಮು೦ದಿನ ಜೀವನಕ್ಕೆ
ಎ೦ದೂ ಮರೆಯದ
ಮುನ್ನುಡಿ.

(ಫೋಟೋ ಕ್ರುಪೆ: ಮಲ್ಲಿಕಾರ್ಜುನ್.)