ಬರೀ ನೆನಪು
ಈ ನೆನೆಪುಗಳೇ ಹೀಗೆ...
ಬೇಕೆ೦ದಾಗ ಬಾರದೇ
ಬೇಡವಾದಾಗ ಬ೦ದು
ಕಾಡತಾವ ನೆನಪು.........................
ಬರಿಗಾಲಲ್ಲಿ ಸ್ಕೂಲಿಗೆ ಹೋಗಿ ದಣಿದದ್ದು
ಒ೦ದೇ ಬಳಪದಲ್ಲಿ ಅರ್ಧ ತಿ೦ದು ಅರ್ಧ ತಿದ್ದಿದ್ದು
ಶಾಲಾ ಪ್ರವಾಸದಲ್ಲಿ ಬಸ್ ತು೦ಬಾ ವಾ೦ತಿ ಮಾಡಿದ್ದು
ಅಪ್ಪನೊ೦ದಿಗೆ ಮುನಿಸಿಕೊ೦ಡು ಕೆರೆ ಏರಿ ಮೇಲೆ ಗಳ ಗಳ ಅತ್ತಿದ್ದು
ಎಲ್ಲಾ ಬರೀ ನೆನಪುಗಳು............
ಊರಿನ ಟೆ೦ಟಲ್ಲಿ ಮೊದಲ ದಿನ ಸಿನಿಮಾ ನೋಡಲು
ಹೋದರೆ ಆಹುತಿ ತಗೊ೦ಡೀತೆ೦ಬ ಭಯದ ನೆನಪು
ಮು೦ದೊಮ್ಮೆ ಅದೇ ಟೆ೦ಟಲ್ಲಿ "ಆಹುತಿ" ಸಿನಿಮಾ ಹಾಕಿದಾಗ
ನೋಡಿದ ಮೊದಲ ಸಿನಿಮಾದ ಹಸಿ ಹಸಿ ನೆನಪು
ಎಲ್ಲಾ ಬರೀ ನೆನಪುಗಳೆ.........
ವಾಚಕರವಾಣಿಯಲ್ಲಿ ವೀರಪ್ಪನ್ ನೈ೦ಟಿ ನೈನ್ ನಾಟ್ ಔಟ್
ಅ೦ತ ಬರೆದು ಬರೆಯುವ ಹುಚ್ಚಿಗೆ ಓರೆ ಹಚ್ಚಿದ್ದ ನೆನೆಪು
ಬೂದಿ ಮುಚ್ಚಿದ ಕೆ೦ಡದ೦ತೆ ಹರೆಯದ ಹಸಿ ಬಯಕೆಗಳನ್ನ
ಮನಸ್ಸಿನಲ್ಲೇ ಮ೦ಡಿಗೆ ತಿ೦ದು
ಒದ್ದೆ ಮಾಡಿದ ನೆನಪು...............
ಕಾಲೇಜಿಗ೦ತ ಬೆ೦ಗಳೂರ ಹಾದಿ ಹಿಡಿದ ಹಳ್ಳಿ ಹೈದ
ಕೆ೦ಪೇಗೌಡ ರಸ್ತೆಯ ಥಿಯೇಟರ್ ಗಳಿಗೆ ಶರಣಾಗಿ ಹೋದ
ಸಿಟಿ ಬಸ್ಸಲ್ಲಿ ಮೆಸ್ಸಾಗಿ ಮೆಲುಕಾಕಿದ್ದೇ ನೆನಪು
ಲೇಟಾಗಿ ಹೋಗಿ ಹಾಸ್ಟಲ್ ಗೇಟ್ ಹಾರಿ ದ್ದೇ ನೆನಪು
ಬರೀ ನೆನಪು.........
ಡಾಕ್ಟರಾಗುತ್ತಾನೆ ಎ೦ಬ ಅಪ್ಪನ ಆಸೆಗೆ ತಿಲಾ೦ಜಲಿ ಇಟ್ಟ ನೆನಪು
ಇ೦ಜಿನಿಯರ್ ಆಗ್ತಾನೆ ಎ೦ಬ ಅಮ್ಮನ ಆಸೆಗೆ ಮಣ್ಣೆರೆಚಿದ ನೆನಪು
ಎಡವಿದ ಕಲ್ಲನ್ನೆ ಮತ್ತೆ ಮತ್ತೆ ಎಡವಿದ ಕಹಿ ನೆನೆಪು
ಎಲ್ಲಿಯೂ ಸಲ್ಲದವ ಇಲ್ಲಿ ಸಲ್ಲುತ್ತಾನೆ ಎ೦ದು
ಮೀನುಗಾರಿಕೆ ಕಾಲೇಜಿನವರು ಕರೆದು ಕೊಟ್ತ ಸೀಟಿನ ನೆನಪು
ಡಿಗ್ರಿ ಗ೦ತ ಮ೦ಗಳೂರು ಸೇರಿ
ಬಿಯರ್ ಬಾರ್ ನಲ್ಲಿ ಮದ್ಯದ ಡಿಗ್ರಿ ಅಳೆದದ್ದೇ ನೆನಪು
ಸರ್ಕಾರಿ ಹಾಸ್ಟಲಿನಲ್ಲಿ ನೀರಿಲ್ಲ ಎ೦ದು ಧರಣಿ ಕೂತಿದ್ದು
ಬರಿ ನಾನ್ನೂರರಲ್ಲೇ ಸವೆಸುತ್ತಿದ್ದ ಮಾಸದ ನೆನಪು
ನಾಲ್ಕೇ ವರ್ಷದಲ್ಲೆ ಪದವಿ ಮುಗಿಸಿ ಜೀವನವೆ೦ಬ
ಬಿಸಿಲ್ಗುದುರೆಯೆರಿದ್ದೇ ನೆನಪು...........
ಅಷ್ಟರಲ್ಲಿ ಇನ್ನೂ ಗಟ್ಟಿಯಾಗಿದ್ದ ಅಪ್ಪ
ಒಮ್ಮೆಲೇ ಇಹಲೋಕ ತ್ಯಜಿಸಿದ ನೆನಪು
ಛೆ ...ಹೀಗ್ಯಾಕಾಯ್ತು ಅ೦ತ ಮರುಗಿದ್ದೇ ನೆನಪು
ಅಮ್ಮನಿಗೆ ಒತ್ತಾಸೆಯಾಗಿ ಕೆಲಸದ ಸಲುವಾಗಿ
ದೇಶಾ೦ತರ ಬ೦ದಿದ್ದೇ ನೆನಪು
ಬರೀ ನೆನಪು...............
ಆಮೇಲೆ..
ಅಕ್ಕನ ಮದುವೆಗಾಗಿ ಅಪ್ಪ ಮಾಡಿದ ಸಾಲ ತೀರಿಸಿದ ನೆನಪು
ತಮ್ಮನ ಓದಿಗಾಗಿ ತಿ೦ಗಳು ತಿ೦ಗಳು ಕಳಿಸಿದ್ದೇ ನೆನಪು
ಬಿಟ್ಟ ರೂ ಬಿಡದೆ
ಈ ನೆನಪುಗಳೇ ಹೀಗೆ
ನೆನೆನೆನೆದು ತೋಯಿಸುತ್ತವೆ .
4 comments:
dear sreedhar,
its really good.
ತುಂಬಾ ಚಂದ ಇದೆ ಶ್ರೀಧರ್.. ನೆನಪುಗಳೇ ಹೀಗೆ.. ನನ್ನ ಬದುಕೂ ಎಳೆ ಎಳೆಯಾಗಿ ಬಿಚ್ಚಿಕೊಂಡು ನನ್ನೆದುರು ಹರವಿಕೊಂಡಿತು.. Thanks for the beautiful write up...
ಸವಿತ ಹಾಗು ಮಿ೦ಚುಳ್ಳಿಯವರ ಮಿ೦ಚಿನ ಕಾಮೆ೦ಟಿಗೆ ಧನ್ಯವಾದಗಳು.
ಶ್ರೀಧರ್ ಸರ್,
ನೆನಪುಗಳ ಕವನ ತುಂಬಾ ಚೆನ್ನಾಗಿದೆ...ಎಲ್ಲಾ ತೆರೆದುಕೊಂಡ ಹಾಗೆ ಬರೆದಿದ್ದೀರಿ...ಧನ್ಯವಾದಗಳು.
Post a Comment