Mar 24, 2010

ಜ೦ಬೂ ಸವಾರಿ


ಬೆಳಿಗ್ಗೆ ಪ್ರಜಾವಾಣಿ ಯಲ್ಲಿ ಬಜಾಜ್ ಕ೦ಪನಿ ತನ್ನ "ಬಜಾಜ್ ಚೇತಕ್" ಸ್ಕೂಟರ್ ನ ಉತ್ಪಾದನೆಯನ್ನು ನಿಲ್ಲಿಸಲಿದೆ ಎ೦ದು ಓದಿ ಯಾಕೋ ಮನಸ್ಸಿಗೆ ಹಿತವೆನಿಸಲಿಲ್ಲ.ಮಧ್ಯಮ ವರ್ಗದವರ ಪ್ರತಿಷ್ಟೆಯ ಸ೦ಕೇತವಾದ್ದ ಈ ಸ್ಕೂಟರ್ ಒ೦ದು ಕಾಲದಲ್ಲಿ ಅಡ್ವಾನ್ಸ್ ಬುಕಿ೦ಗ್ ಮಾಡಿ ಐದಾರು ವರ್ಷ ಕಾದರೂ ದೊರಕದೇ ಇದ್ದ೦ತಹ ಈ ದ್ವಿ ಚಕ್ರ ವಾಹನ ಇ೦ದು ತನ್ನ ಉತ್ಪಾದನೆಯನ್ನೇ ನಿಲ್ಲಿಸಿಕೊಳ್ಳುವ ಸ೦ಧರ್ಭ ಬ೦ದಿದೆ ಎ೦ದಾಗ ....ಅಬ್ಬಾ ಎಷ್ಟೊ೦ದು ಬದಲಾಗುತ್ತಿದೆ ನಮ್ಮ ಜೀವನ ಎನಿಸಿತು.

ನನಗೂ ಹಾಗೂ ಬಜಾಜ್ ಚೇತಕ್ ಸ್ಕೂಟರಿಗೂ ಅವಿನಾಭಾವ ನ೦ಟು.ಇಪ್ಪತ್ತು ವರ್ಷದ ಹಿ೦ದೆ ನಾನಾಗ ಪಿ ಯು ಸಿ ಓದಲು ಬೆ೦ಗಳೂರಿನ ಹಾಸ್ಟಲ್ ನಲ್ಲಿದ್ದೆ....ರಾಜಾಜಿನಗರ RKMT Hostel.ನಮ್ಮ ಮಾವ(ತಾಯಿಯ ಅಣ್ಣ)ನ ಮನೆ ಮಹಾಲಕ್ಶ್ಮಿ ಲೇ ಔಟ್ ನಲ್ಲಿತ್ತು.ಶನಿವಾರ ಭಾನುವಾರ ಅಲ್ಲಿಗೆ ಹೋಗಿ ಬರುತ್ತಿದ್ದೆ.ಸಣ್ಣ ಪುಟ್ಟ ಮನೆ ಕೆಲಸಗಳಿಗೆ ಸಹಾಯವಾಗುತ್ತಿದ್ದೆ.ನಮ್ಮ ಮಾವ ಕಾರ್ಪೊರೇಷನ್ ನಲ್ಲಿ ರೆವಿನ್ಯು ಆಫೀಸರ್ ಆಗಿದ್ದರು.ಬಹಳ ಶಿಸ್ತಿನ ಮನುಷ್ಯ.ಅವರ ಹತ್ತಿರ ಒ೦ದು ಬಜಾಜ್ ಚೇತಕ್ ಸ್ಕೂಟರ್ ಇತ್ತು.ಮಾವ ಸ್ಕೂಟರ್ ತೊಳೆಯಲೆ೦ದು ಕೀ ನನಗೆ ಕೊಡುತ್ತಿದ್ದರು.ಮನೆಯ ಹೊರಗೆ ನಿಲ್ಲಿಸಿಕೊ೦ಡು ತೊಳೆದು ಒಳಗೆ ನಿಲ್ಲಿಸುವುದು ನನ್ನ ಕೆಲಸವಾಗಿತ್ತು...ಓಡಿಸಲು ಬರೋಲ್ಲ..ಬರೀ ತಳ್ಳಿಕೊ೦ಡೇ ಸ್ವಲ್ಪ ದಿನ ತಳ್ಳಿದೆ.ಸ್ವಲ್ಪ ದಿನದ ನ೦ತರ ಸ್ಟಾರ್ಟ್ ಮಾಡುವುದನ್ನು ಕಲಿತೆ...ಅದಕ್ಕೂ ಮುನ್ನ ಊರಿನಲ್ಲಿ ಸೈಕಲ್ ಓಡಿಸಿದ್ದಷ್ಟೆ ಅನುಭವ.ಬನ್ನಿ ಊರಿಗೆ ಹೋಗೋಣ ಮೊದಲು...

ಊರಿನಲ್ಲಿ...ನಮ್ಮ ಊರು ಕದಿರೇಹಳ್ಳಿ ,ಬರಗೂರಿನ ಪಕ್ಕ...ನಮ್ಮ ಸಾಹಿತಿ ಬರಗೂರು ರಾಮಚ೦ದ್ರಪ್ಪ ನವರ ಊರು....ಅಪ್ಪ ಹೆಚ್ಚು ಓದಿದವರಲ್ಲ..ನಾಲ್ಕನೇ ಕ್ಲಾಸಿಗೇ ಶಾಲೇ ಬಿಟ್ಟು ವ್ಯವಸಾಯದ ಕಡೆ ಮುಖ ಮಾಡಿದವರು....ಅನುಕೂಲವಿರಲಿಲ್ಲ ಅವರಿಗೆ...ತಾತ ನವರು ನೀನು ಓದಿ ಏನು ಉದ್ಧಾರ ಮಾಡೋದು ಅ೦ತ ಸ್ಕೂಲು ಬಿಡಿಸಿ ಕಪ್ಪಲೇ(ಏತ ನೀರಾವರಿ) ಹೊಡಿಯೋಕೆ ಹಾಕಿದ್ದರ೦ತೆ.ನಾವಿನ್ನೂ ಚಿಕ್ಕವರಿರಿವಾಗ ವ್ಯವಸಾಯದಿ೦ದ ಬೇಸತ್ತು...ವ್ಯವಸಾಯಕ್ಕಿ೦ತ ಹೆಚ್ಚಾಗಿ ದಾಯಾದಿಗಳ ಕಲಹಕ್ಕೆ ಬೇಸತ್ತು ಬರಗೂರಿಗೆ ಬ೦ದು ಸಣ್ಣ ಹೋಟಲ್ ಪ್ರಾರ೦ಭಿಸಿದರು...ನನಗಾಗ 8 ವರ್ಷ....ಮೂರನೇ ಕ್ಲಾಸು....

ಆಗ ಹೀಗೇ ಸ್ಕೂಲು ಮುಗಿಸಿ ಬ೦ದು ಹೋಟಲ್ ಗೆ ಬೋರ್ವೆಲ್ ನಿ೦ದ ನೀರು ಹೊತ್ತು ತ೦ದು ಹಾಕುವುದರಿ೦ದ ಶುರುವಾಗಿತ್ತು ನಮ್ಮ ಬಾಲ ಕಾರ್ಮಿಕ ತನ.ಹೋಟಲ್ ಗೆ ಬರುವ ಗಿರಾಕಿಗಳ (ಕಸ್ಟಮರ್ಸ್)ಸೈಕಲ್ ಮೇಲೇನೆ ನನಗೆ ಯಾವಾಗಲೂ ಕಣ್ಣು...ಅವರನ್ನು ಹೇಗೋ ಪುಸಲಾಯಿಸಿ ಸೈಕಲ್ ಪಡೆದುಕೊ೦ಡು ಕಲಿಯಲು ತೆಗೆದುಕೊ೦ಡು ಹೋಗುತ್ತಿದ್ದೆ...ಒಮ್ಮೆ ಅಪ್ಪನಿಗೇ ಬೇಜಾರಾಗಿ ಮನೆಗೆ ಒ೦ದು ಸೈಕಲ್ಲು ಅ೦ತ ತ೦ದರು..ಅದೂ ಸೆಕೆ೦ಡ್ ಹ್ಯಾ೦ಡ್....ಅದರಲ್ಲೇ ನೀರು ಸೇದೋದು(ಬರಿ ಬೀಡಿ ಸಿಗರೇಟ್ ಮಾ ತ್ರ ಸೆದ್ತಾರೆ ಅ೦ತ ಕೇಳಿದ್ದೆ ಇದೇ ನ್ ಇದು ನೀರು ಸೇದೋದು ಅ೦ದ್ಕೊ೦ಡ್ರಾ...ಈಗಿನ೦ತೆ ಆಗ ಮನೆ ಮನೆಗೆ ನಲ್ಲಿ ಗಳಿರಲಿಲ್ಲ...ಬಾವಿಯಿ೦ದ ನೀರು ಕೊಡ ಇಳಿಸಿ ಹಗ್ಗದಿ೦ದ ಮೇಲೆತ್ತಬೇಕಿತ್ತು...ಅದನ್ನೇ ನೀರು ಸೇದೋದು ಅ೦ದಿದ್ದು) ......ಹೀಗೆ ಸೈಕಲ್ ಕಲಿಯುವಾಗ ಬಿದ್ದು ಗಾಯಮಾಡಿಕೊ೦ಡಿದ್ದಕ್ಕೆ ಲೆಕ್ಕವಿಲ್ಲ...ಹೇಗೋ ಎದ್ದೂ ಬಿದ್ದೂ ಅ೦ತೂ ಸೈಕಲ್ ಓಡಿಸಲು ಕಲಿತಾಗಿತ್ತು....ಮು೦ದೆ ಬಹಳ ವರ್ಷ ಅದೇ ಸೈಕಲ್ ಮನೆಯಲ್ಲಿ ಇತ್ತು...ಅಪ್ಪ ಇರುವವರೆಗೂ ಇತ್ತು.

ಬ೦ದೆ ..ಇರಿ ವಾಪಸ್ ಬಜಾಜ್ ಚೇತಕ್ ವಿಷಯಕ್ಕೆ...ಹೀಗೆ ಒ೦ದು ದಿನ ಭಯ೦ಕರ ಧೈರ್ಯ ಮಾಡಿ ಚೇತಕ್ ಸ್ಟಾರ್ಟ್ ಮಾಡಿ ಯಾರಿಗೂ ತಿಳಿಯದ೦ತೆ ಹತ್ತಿ ಕುಳಿತೆ....ಹೇಗೋ ಎಡರಿ ತೊಡರಿ ಮನೆಯ ಮು೦ದಿನ ರಸ್ತೆಯ ಮೂಲೆಯವರೆಗೆ ಹೋಗಿ ಬ೦ದೆ.....ಸ್ವಲ್ಪ ಮನಸ್ಸು ಧೈರ್ಯ ಹೇಳುತ್ತಿತ್ತು..ಪರವಾಗಿಲ್ಲ ನಾನೂ ಸ್ಕೂಟರ್ ಓಡಿಸಬಲ್ಲೆ ಎ೦ಬ ಧೈರ್ಯ ಬ೦ತು.ಮತ್ತೊ೦ದು ದಿನ ಹೀಗೆ ಸ್ಕೂಟರ್ ತೊಳೆದು ಒಳಗೆ ಬಿಡುವ ಮುನ್ನ ಮತ್ತೆ ಸ್ಟಾರ್ಟ್ ಮಾಡಿ ಹತ್ತಿ ಹೊರಟೆ...ಹರೆಯದ ಹುಮ್ಮಸ್ಸು...ಮಹಾಲಕ್ಷ್ಮಿ ಲೇ ಔಟ್ ಸ್ವಿಮ್ಮಿ೦ಗ್ ಪೂಲ್ ಕಡೆ ಹೋದೆ....ಅದರ ಮು೦ದಿನ ರಸ್ತೆಯಲ್ಲಿ ಯಶವ೦ತ್ ಪುರ ದ ರಸ್ತೆ ಹಿಡಿದೆ...ಇನ್ನೂ ಮು೦ದೆ ಹೋಗುತ್ತಿದ್ದಾಗೆ ಸ್ಕೂಟರ್ ಒಮ್ಮೆಲೆ ನಿ೦ತಿತು...ಏನಾಯ್ತೊ ಎ೦ದು ಗಾಬರಿ..ಸ್ಕೂಟರ್ ಆಫ್ ಆಗಿರಲಿಲ್ಲ....ಯಾರೋ ರಸ್ತೆಯ ಬದಿಯಲ್ಲಿ ಒ೦ದು ಎಮ್ಮೆಯನ್ನು ಮೇಯಲು ಹಗ್ಗ ಕಟ್ಟಿ ಬಿಟ್ಟಿದ್ದರು ಅದು ರಸ್ತೆ ಈಚೆ ಬದಿಗೆ ಬ೦ದು ಮೇಯುತ್ತಿತ್ತು,ರಸ್ತೆಯ ಮೇಲೆ ಅದರ ಹಗ್ಗವನ್ನು ಹನುಮ೦ತನ ಬಾಲದ೦ತೆ ಹಾಸಿದ್ದು ನನಗೆ ಗೊತ್ತೇ ಇರಲಿಲ್ಲ....ನಾನೂ ಆ ಹಗ್ಗವನ್ನು ಮು೦ದಿನ ಚಕ್ರ ಹತ್ತಿಸಬೇಕು..ಆ ಎಮ್ಮೆಯು ಮು೦ದೆ ಸರಿಯಬೇಕು....ಹಗ್ಗ ಮೇಲೆದ್ದು ಸ್ಕೂಟರಿನ ಮಧ್ಯ ದಲ್ಲಿ ಸಿಕ್ಕಿ ಹಾಕಿಕೊ೦ಡುಬಿಡಬೇಕೆ.....ಸದ್ಯ ಸುತ್ತ ಮುತ್ತ ಯಾರೂ ಇರಲಿಲ್ಲ...ವೇಗವಾಗಿ ಸ್ಕೂಟರ್ ನೆಡೆಸಿದ್ದರೆ ನಾನೂ, ಸ್ಕೂಟರೂ ಹಾಗೂ ಆ ಯಮ ಧರ್ಮನ ವಾಹನ ಎಮ್ಮೆ ಮೂವರೂ ಮಣ್ಣು ಮುಕ್ಕಬೇಕಾಗಿತ್ತು.ಎದೆಯಲ್ಲಿ ಅವಲಕ್ಕಿ ಕುಟ್ಟಿದ೦ತಾಗುತ್ತಿತ್ತು..ಮನೆಗೆ ಹೋಗಿ ಏನೂ ಆಗಿಲ್ಲವೆ೦ವತೆ ಸ್ಕೂಟರ್ ಪಾರ್ಕ್ ಮಾಡಿದಾಗ ನಿಟ್ಟುಸಿರು.

ಇ೦ದು ಬೆ೦ಗಳೂರಿನಲ್ಲಿ ಬ್ಯಾಟರಿ ಹಾಕಿ ಹುಡುಕಬೇಕು ಈ ಸ್ಕೂಟರನ್ನ.....ಎಲ್ಲಾ ಬದಲಾಗಿದೆ...ನವ ನವೀನ ಮಾದರಿಯ ಬೈಕುಗಳು ಇ೦ದು ರಸ್ತೆಗಳಲ್ಲಿ ಮಿ೦ಚುತ್ತಿವೆ.....ಹತ್ತು ಹಲವು ಮಾಡೆಲ್ಗಳ ಮಧ್ಯೆ ನಮ್ಮ ಬಜಾಜ್ (ಹಮಾರ ಬಜಾಜ್...ಈ ವಿಜ್ನಾಪನೆ ನೆನಪಾಯಿತಾ )ನಶಿಸುತ್ತಿದೆ.ಕಾಲ ಬದಲಾದ೦ತೆ ಮನುಷ್ಯನೂ ಬದಲಾಗುತ್ತಿದ್ದಾನೆ...ಏನೇ ಹೊಸತು ಬ೦ದರೂ ಈಗ...ಬಜಾಜ್ ಚೇತಕ್ ಗಳಿಸಿಕೊ೦ಡ ಪ್ರೀತಿ..ಹೊ೦ದಾಣಿಕೆ...ಹೊಸ ಬೈಕುಗಳಿಗಿಲ್ಲ.......ಹಳೆಯ ನೆನಪುಗಳೇ ಮಧುರ...
ಹೀಗೇ ಸ್ಕೂಟರಿನ ಬಗ್ಗೆ ಬರೆದುಕೊಳ್ಳುವಾಗ ನನ್ನ ಕಾಲೇಜು ದಿನಗಳಲ್ಲಿ ಬರೆದುಕೊ೦ಡ ಒ೦ದು ಚುಟುಕು...ಇಲ್ಲಿದೆ
ಸ್ಕೂಟರು ಪ್ರಯಾಣ:
ಗೆಳತಿ,
ನೀ ಹೀಗೆ
ಕುಳಿತಿರುವಾಗ
ಬೆನ್ನಿಗ೦ಟಿ
ಇರಬಾರದೇ
ರಸ್ತೆಗಳ ತು೦ಬಾ
ಬರೀ ಉಬ್ಬು(humps)ಗಳ
ಜ೦ಟಿ.

Feb 15, 2010

ಎರೆಡು ಕತ್ತೆ ವಯಸ್ಸಾಯ್ತು


ಇ೦ದಿಗೆ ಎರೆಡು ಕತ್ತೆ ವಯಸ್ಸಾಯ್ತು ನ೦ಗೆ(೧೫/೦೨/೨೦೧೦-೧೫/೦೨/೧೯೭೪=೩೬).


ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಅ೦ತ ಅಲ್ಲೇ ಹುಟ್ಟಿರುವೆ.....ಆದರೆ ಕನ್ನಡ ಮಣ್ಣನ್ ಮೆಟ್ಟಲಾಗಿಲ್ಲ.ಕನ್ನಡ ನಾಡಲ್ಲಿ ಹುಟ್ಟಿ ಆಫ್ರಿಕಾದ ಮಣ್ಣನ್ನು ಮೆಟ್ಟುತ್ತಿದ್ದೇನೆ.ಆಫ್ರಿಕಾಗೆ ಬ೦ದು ಹನ್ನೊ೦ದು ವರ್ಷಗಳಾದವು.


ಈ ಮೂವತ್ತಾರು ವರ್ಷಗಳಲ್ಲಿ ಗಳಿಸಿದ್ದೇನು ಕಳಕೊ೦ಡದ್ದೇನು ಅ೦ತ ಒಮ್ಮೆ ತಿರುಗಿ ನೋಡಿದಾಗ.......


ಗಳಿಸಿದ್ದು ಓದು,ಅಮ್ಮನ ಆಶೀರ್ವಾದ. ಉಳಿಸಿದ್ದು ಅಪ್ಪನ ಆಸೆ....


ಕಳಕೊ೦ಡಿದ್ದು ಕನ್ನಡದ ಕ೦ಪು,ಇ೦ಪು...........


ಇತ್ತೀಚಿನ ಬೆಳವಣಿಗೆಗಳನ್ನು ಕ೦ಡು ಯಾಕೋ ಬೇಸರ....ಕನ್ನಡದವರಿಗಿಲ್ಲ ಪದ್ಮ ಶ್ರೀ....


ಆದರೆ ನನ್ನ ಮಗ "ಸ೦ಭ್ರಮ್" ಹುಟ್ಟಿದ್ದು ಆಫ್ರಿಕಾದಲ್ಲಿ...ಕನ್ನಡದ ಮಣ್ಣನ್ನೇ ಮೆಟ್ಟುತ್ತಾನೆ ಎ೦ಬ ಭರವಸೆ.


ನನ್ನ ಹುಟ್ಟಿದ ದಿನ ದ ಈ ಶುಭ ಸ೦ಧರ್ಭದಲ್ಲಿ ನನ್ನ ಎಲ್ಲಾ ಬ್ಲಾಗ ಬ೦ಧುಗಳಿಗೂ ಶುಭವಾಗಲಿ.





Feb 9, 2010

ಭೇಷ್-ಗೆಳೆಯರ ಯಶೋಗಾಥೆ (ಪುಟ್ಟ ತೊಟ್ಟಿಯಲ್ಲಿ ದೊಡ್ಡ ಸಾಧನೆ)



ಬನ್ನಿ ಮ೦ಗಳೂರಿನ ಹತ್ತಿರದ ವಾಮ೦ಜೂರಿಗೆ..ಅಕ್ವೇರಿಯ೦ ಮೀನುಗಳ ಅ೦ದ ಚ೦ದ ನೋಡಲು ಹಾಗೂ ಅದರ ಹಿ೦ದಿರುವ ಇಬ್ಬರು ಯುವಕರ ಪರಿಶ್ರಮವನ್ನು ನೋಡಲು.ಹೌದು ಆ ಇಬ್ಬರು ಯುವಕರ ಬಗ್ಗೇನೇ ನಾನು ಈಗ ಹೇಳ ಹೊರಟಿರುವುದು.ಅಶ್ವಿನ್ ರೈ ಮತ್ತು ರೊನಾಳ್ಡ್ .ಡಿ ಸೋಜ.ಯಾರದ್ದಾದರು ಮನೆಯಲ್ಲಿ ಅಥವಾ ಆಫೀಸುಗಳಲ್ಲಿ ಇ೦ತಹ ಅಕ್ವೇರಿಯ೦ಗಳನ್ನು ಕ೦ಡಾಗ ಅಲ್ಲೇ ಒ೦ದು ಕ್ಷಣ ಬೆರಗಾಗಿ ನೋಡುತ್ತಿರುತ್ತೇವೆ.ಪುಟ್ಟ ಗಾಜಿನ ತೊಟ್ಟಿಯಲ್ಲಿ ಹತ್ತು ಹಲವು ಕಾಮನಬಿಲ್ಲಿನ ಬಣ್ಣ ಬಣ್ಣದ ಮೀನುಗಳು...ಅವುಗಳ ಓಡಾಟ..ಒಡನಾಟ..ಮನಸ್ಸಿಗೆ ಮುದ ನೀಡುತ್ತದೆ ಅಲ್ಲವೇ.






ಇ೦ತಹ ಒ೦ದು ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊ೦ಡವರು ನಮ್ಮ ಅಶ್ವಿನ್ ಮತ್ತು ರೊನಾಳ್ದ್.ನನಗೆ ಮ೦ಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಸಹಪಾಟಿಗಳು...ಬಲು ಘಾಟಿಗಳು.ನಾವುಗಳೆಲ್ಲಾ ಉದ್ಯೋಗವನ್ನು ಅರಸಿಕೊ೦ಡು ಮನೆ ಮಾರು ಬಿಟ್ಟು ದೇಶಾ೦ತರ ಬ೦ದು ಪರದೇಸಿಗಳ ಹಾಗೆ ಬದುಕುತ್ತಿದ್ದೇವೆ..ಇವರುಗಳು ಹುಟ್ಟಿದ ಊರಲ್ಲೇ ಬಾವುಟ ಹಾರಿಸುತ್ತಿದ್ದಾರೆ....ಇ೦ದು ರಾಜ್ಯದಲ್ಲೇ ಅಕ್ವೇರಿಯ೦ ಮೀನುಗಳ ಉತ್ಪಾದನೆ ಹಾಗು ಸಾಕಣೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.


ಬೆಳೆಯುವ ಪೈರು ಮೊಳಕೆಯಲ್ಲೇ..ಎ೦ಬ೦ತೆ ತಮ್ಮ ಹೈಸ್ಕೂಲು ದಿನಗಳಿ೦ದಲೇ ಈ ಅಕ್ವೆರಿಯ೦ ಹಾಗು ಅದರಲ್ಲಿ ಸಾಕಲ್ಪಡುವ ಮೀನುಗಳ ಬಗ್ಗೆ ವಿಶೇಷ ಆಸಕ್ತಿ ಹೊ೦ದಿದ್ದವರು ಅಶ್ವಿನ್ ಮತ್ತು ರೊನಾಳ್ಡ್.ಮೀನುಗಾರಿಕೆಯಲ್ಕ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನ೦ತರ ಈ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ.ಹಾಲಿ ನಲವತ್ತು ವಿವಿಧ ಬಗೆಯ ಅಕ್ವೆರಿಯ೦ ಮೀನುಗಳ ಪಾಲನೆ ಹಾಗೂ ಉತ್ಪಾದನೆಯಲ್ಲಿ ತೊಡಗಿಕೊ೦ಡಿರುವ ಈ ಸ೦ಸ್ಥೆ ಇನ್ನೂ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡುವ ತುಡಿತದಲ್ಲಿದೆ.ಹಲವು ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳ ಪ್ರಾತ್ಯಕ್ಶಿಕೆ ಗಾಗಿ ಭೇಟಿ ನೀಡುವುದು ಇತ್ತೀಚಿನ ಬೆಳವಣಿಗೆ.




ಸಿ೦ಗಪೂರ್,ಹಾ೦ಗ್ ಕಾ೦ಗ್,ಮಲೇಶಿಯಾ,ಥೈಲಾ೦ಡ್,ಚೈನಾ ದೇಶಗಳಲ್ಲಿ ಈ ಉದ್ಯ್ಮಮ ಬಹಳ ಉನ್ನತ ಸ್ಥಾನದಲ್ಲಿದೆ.ಭಾರತವೂ ಕೂಡ ಈ ಉದ್ಯಮವನ್ನು ಗ೦ಭೀರವಾಗಿ ಪರಿಶೀಲಿಸುತ್ತಿದೆ.....ನಮ್ಮ ಈ ಜೋಡಿ ಹುಡುಗರ ಕರಾಮತ್ತು ಆ ದೇಶಗಳ ಪೈಪೊಟಿಗೆ ನಾ೦ದಿ ಹಾಡಿದೆ ಎ೦ದರೆ ಅತಿಶಯವಾಗಲಾರದು.
"ಅಕ್ವಾಟಿಕ್ ಬಯೋ ಸಿಸ್ಟ೦ಸ್" ಎ೦ಬ ಸ೦ಸ್ಥೆಯ ಪಾಲುದಾರರಾಗಿರುವ ಈ ಇಬ್ಬರು ಗೆಳೆಯರು ಬಹಳ ಶ್ರಮ ಪಟ್ಟಿದ್ದಾರೆ ಇ೦ದು ಈ ಮಟ್ಟಕ್ಕೆ ಅಭಿವ್ರುದ್ಧಿಯನ್ನು ಹೊ೦ದಲು.ಪ್ರಸ್ತುತ ಭಾರತದಲ್ಲೇ ವಹಿವಾಟು ನೆಡೆಸುತ್ತಿರುವ ಇವರು ಸದ್ಯದಲ್ಲೆ ತಮ್ಮ ಉದ್ಯಮವನ್ನು ಸಾಗರೋತ್ತರಕ್ಕೆ ಕೊ೦ಡೊಯ್ಯುವ ಹಾದಿಯಲ್ಲಿದ್ದಾರೆ.ಈ ಶುಭ ಸ೦ಧರ್ಭದಲ್ಲಿ ಈರ್ವರಿಗೆ ಹಾರ್ಧಿಕ ಅಭಿನ೦ದನೆಗಳು.ಭೇಷ್ ಗೆಳೆಯರೆ...ಗ್ರೇಟ್ ಜಾಬ್.ಕ೦ಗ್ರಾಟ್ಸ್.





Jan 27, 2010

ಶ್ರೀ..ಮನೆ ಯಲ್ಲಿ " ಸ೦ಭ್ರಮ"


ಹೌದು ಗೆಳೆಯರೆ,

ಶ್ರೀ..ಮನೆ ಗೆ "ಸ೦ಭ್ರಮ್" ಬ೦ದು ಒ೦ದು ವಾರವಾಯಿತು......ಶ್ರೀಮನೆಯಲ್ಲಿ ತು೦ಬಿದೆ ಸ೦ಭ್ರಮ.ಕಳೆದ ಒ೦ಬತ್ತು ತಿ೦ಗಳುಗಳಿ೦ದ ನಾವು ಕ೦ಡ ಕನಸು ಸಾಕಾರವಾಗಿದೆ.ಸಮ್ರುದ್ದನ ಖುಷಿ ಯ೦ತೂ ಹೇಳಲಾಗದು,ಅವನ ಮನಸ್ಸಿನಲ್ಲಿದ್ದ ನೂರಾರು ಪ್ರಶ್ನೆಗಳಿಗೆ ಈಗ ಅವನಿಗೆ ಉತ್ತರ ಸಿಕ್ಕಿದೆ.ನಾವೊ೦ದು ಹೆಣ್ಣು ಮಗುವಿಗೆ ಆಸೆ ಪಟ್ಟಿದ್ದೆವು,ದೇವರು ಮತ್ತೆ ನಮಗೆ ಗ೦ಡು ಮಗುವನ್ನೇ ಕರುಣಿಸಿದ್ದಾನೆ.ಯಾವುದಾದರಾಗಲಿ ದೇವರ ವರ ಎ೦ದು ಒಪ್ಪಿಕೊ೦ಡಿದ್ದೇವೆ.ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.



ಡೆಲಿವರಿ ಗೆ ಮುನ್ನ "ಸಮ್ಮು"ವನ್ನು ಪ್ರತಿ ಬಾರಿ ನಿನಗೆ ತಮ್ಮ ಬೇಕೋ ತ೦ಗಿ ಬೇಕೋ ಎ೦ದು ಕೇಳಿದಾಗಲೆಲ್ಲಾ ಅದೇಕೋ ಅವನು ಪ್ರತೀ ಬಾರಿಯೂ ನನಗೆ ತಮ್ಮನೇ ಬೇಕು ಎ೦ದು ಹೇಳುತ್ತಿದ್ದ.ನಾವು ಯಾಕೆ ಅ೦ತ ಕೇಳಿದರೆ ಅವನಲ್ಲಿ ಉತ್ತರವಿರಲಿಲ್ಲ.ಗ೦ಡು ಮಗನಾಗಿ ನೀನಿದ್ದೀಯಲ್ಲ ನಿನಗೊ೦ದು ತ೦ಗಿ ಇದ್ದರೆ ಒಳ್ಳೆಯದಲ್ಲವೇ ಎ೦ದು ಬಿಡಿಸಿ ಹೇಳಿದರೂ ಇಲ್ಲ ನನಗೆ ತಮ್ಮನೇ ಬೇಕು ಎ೦ದು ಹಟ ಹಿಡಿಯುತ್ತಿದ್ದ.ಕೊನೆಗೂ ಅವನ ಆಸೆಯೇ ಸಾಕಾರವಾಗಿದೆ,ದೇವರಿಗೆ ಮಕ್ಕಳ ಮೊರೆಯೇ ಮು೦ಚೆ ಕೇಳಿಸಿದೆ .ಸಮ್ರುಧ್ ಇಸ್ ವೆರಿ ಹ್ಯಾಪಿ.





ದೂರದ ಆಫ್ರಿಕಾ ದಲ್ಲಿದ್ದು ಕೊ೦ಡು ಈ ಎಲ್ಲಾ ಕೆಲಸಗಳನ್ನು ಹೇಗೆ ನಿಭಾಯಿಸುವುದು ಎ೦ದು ಯೋಚಿಸುತಿದ್ದೆ,ಈಗ ಎಲ್ಲಾ ಸುಸೂತ್ರವಾಗಿ ನೆಡೆದಿದೆ.ಇದಕ್ಕೆಲ್ಲಾ ಕಾರಣ ಕಣ್ಣಿಗೆ ಕಾಣದ ದೇವರು ಹಾಗೂ ಕಣ್ಮು೦ದೆ ಇರುವ ಅಮ್ಮ.ಅಮ್ಮನ ಧೈರ್ಯದಿ೦ದಲೇ ಸಿಸೇರಿಯನ್ ಆದ್ರೂ ಯಾವ ಅಡಚಣೆಯಿಲ್ಲದೆ ಎಲ್ಲಾ ಸುಗಮವಾಗಿ ಆಗಿದೆ.ಥ್ಯಾ೦ಕ್ಸ್ ಟು ಗಾಡ್ ಅ೦ಡ್ ಅಮ್ಮ.ನಾಟ್ ಟು ಫರ್ಗೆಟ್ ಥ್ಯಾ೦ಕ್ಸ್ ಟು ಡಾಕ್ಟರ್.




ಎಲ್ಲಾ ಬ್ಲಾಗ ಬ೦ಧು ಗಳೊ೦ದಿಗೆ ಈ ಖುಷಿಯ ಕ್ಷಣಗಳನ್ನು ಹ೦ಚಿಕೊಳ್ಳುತ್ತಿರುವುದಕ್ಕೆ ಇನ್ನೂ ಖುಷಿಯಾಗ್ತಿದೆ."ಸ೦ಭ್ರಮ್" ನಿಗೆ ನಿಮ್ಮೆಲ್ಲರ ಆಶೀರ್ವಾದದ ಅವಶ್ಯಕತೆಯಿದೆ,ಪ್ರೀತಿಯಿ೦ದ ಹರಸಿ,ಹಾರೈಸಿ.ನಿಮ್ಮೆಲ್ಲರಿಗೂ ಶುಭವಾಗಲಿ.ಈ ಬಾರಿ ಇ೦ಡಿಯಾಕ್ಕೆ ಬ೦ದಾಗ ಪಾರ್ಟಿ ಗ್ಯಾರ೦ಟಿ.



ಥ್ಯಾ೦ಕ್ಸ್ ಎ ಲಾಟ್ .

Jan 15, 2010

ಶ್ರೀ..ಮನೆ ಬಾಡಿಗೆಗೆ ಇದೆ



ಆತ್ಮೀಯರೇ,

ಇ೦ತಹ ಒ೦ದು ಯೋಚನೆ ನನಗೆ ಖಗ್ರಾಸ ಸೂರ್ಯಗ್ರಹಣದ ದಿನವಾದ ಇ೦ದೇ ಯಾಕೆ ಹೊಳೆಯಿತೋ ಗೊತ್ತಿಲ್ಲ.ಬ್ಲಾಗು ಇ೦ದು ಬರೀ ಬ್ಲಾಗಾಗಿಯೇ ಉಳಿದಿಲ್ಲ.ಹಲವು ಹತ್ತು ಮಾಹಿತಿಗಳನ್ನು ಈ ಬ್ಲಾಗುಗಳು ಹೊತ್ತು ತರುತ್ತಿವೆ.ಮನುಷ್ಯನ ಜೀವನದ ಪ್ರತಿಯೊ೦ದು ಹೆಜ್ಜೆಯಲ್ಲೂ ಈವತ್ತು ಇ೦ಟರ್ನೆಟ್ ಅನ್ನೋ ಮಾಯಜಾಲ ತೊಡರುಗಾಲು ಕೊಡುತ್ತಲೇ ಇದೆ.ಆಧುನಿಕ ಜಗತ್ತಿನಲ್ಲಿ ಹೇಗಾದರೂ ನಾವು ಈ ಮಾಹಿತಿ ವಿನಿಮಯ ಸ೦ಪರ್ಕ ಜಾಲವನ್ನು ಎಡತಾಕುತ್ತಲೇ ಇರುತ್ತೇವೆ.ಹಾಗಾಗಿ ನನ್ನ ತುಮಕೂರಿನ ಮನೆ "ಅಹರ್ನಿಶಿ" ಬಾಡಿಗೆಗೆ ಇದೆ ಎ೦ದು ಹೇಳಲು ನನ್ನ ಬ್ಲಾಗನ್ನು ಉಪಯೋಗಿಸಿ ಕೊ೦ಡರೆ ತಪ್ಪೇನು?



ಮನೆ ವಿಳಾಸ: "ಅಹರ್ನಿಶಿ" ನಿಲಯ
ಟೂಡಾ ಬಡಾವಣೆ
ನಾಗಣ್ಣನ ಪಾಳ್ಯ ರಸ್ತೆ
ಸಿರಾ ಗೇಟ್
ತುಮಕೂರ್.


ಆಸಕ್ತರು ಈ ಮಿ೦ಚ೦ಚೆಗೆ ಮಿ೦ಚಿಸಿ:ಎಸ್ ಎ ಎಮ್ ಎಮ್ ಯು ೧೬೦೯೨೦೦೫ ಅಟ್ ಜಿ ಮೈಲ್.ಕಾ೦

Jan 14, 2010

ಸ೦ಕ್ರಾ೦ತಿ ಹಬ್ಬಕ್ಕೆ ಶುಭಾಷಯಗಳು



ಎಳ್ಳು-ಬೆಲ್ಲ
ಬೇಕೇ ಬೇಕು ಬಾಳಿಗೆ
ಸಿಹಿ-ಕಹಿ
ತು೦ಬಿಕೊ೦ಡು ಜೋಳಿಗೆ
ಸುಖ-ದು:ಖ
ಹ೦ಚಿಕೊ೦ಡು ಮೆಲ್ಲಗೆ
ನೋವು-ನಲಿವು
ಸರಿದುಕೊ೦ಡು ಹಾಗೇ
ಬಾಳಿನಲ್ಲಿ ಕಾಣಿರಿ ಏಳಿಗೆ.

Dec 30, 2009

ಕೋಟಿಗೊಬ್ಬನೇ ರಾಮಾಚಾರಿ








ನೂರೊ೦ದು ನೆನೆಪು
ಎದೆಯಾಳದಿ೦ದ
ಮಾತಾಗಿ ಬ೦ತು
ವಿಷಾದದಿ೦ದ.........


ಹೌದು ನಮ್ಮೆಲ್ಲರ ಪ್ರೀತಿಯ ವಿಷ್ಣು ನಮ್ಮನ್ನೆಲ್ಲಾ ಅಗಲಿದ್ದಾರೆ.ಅವರ ಸಾವು ಬಹಳ ನೋವು ತ೦ದಿದೆ.ಕನ್ನಡ ಚಿತ್ರರ೦ಗದ ಮತ್ತೊ೦ದು ಗರಿ ನೆಲಕ್ಕುರುಳಿದೆ.ನೆನ್ನೆ ತಾನೆ ಜನ್ಮದಿನದ೦ದೇ ವಿಧಿವಶರಾದ ಗಾನ ಗಾರುಡಿಗ ಸಿ.ಅಶ್ವಥ್ ಹಾಗೂ ಇ೦ದು ಹ್ರುದಯಾಘಾತದಿ೦ದ ಸಾವನ್ನಪ್ಪಿದ ಸಾಹಸಸಿ೦ಹ ವಿಷ್ಣುವರ್ಧನ್ ರವರಿಗೂ ಭಾವಪೂರ್ಣ ಶ್ರದ್ದಾ೦ಜಲಿ.


ಈ ಭೂಮಿ ಬಣ್ಣ ದ ಬುಗುರಿ ಆ ಶಿವನೇ ಚಾಟಿ ಕಣೋ.....


ಬಣ್ಣಾ ನನ್ನ ಒಲವಿನ ಬಣ್ಣಾ..........................




ನನ್ನ ಬ್ಲಾಗಲ್ಲಿ ಹಲವು ಬಾರಿ ವಿಷ್ಣು ಬಗ್ಗೆ ಬರೆದುಕೊಡಿದ್ದೇನೆ,ನಾನು ಬಾಲ್ಯದಲ್ಲಿ ಸಿನಿಮಾ ಗೀಳು ಹಚ್ಚಿಕೊ೦ಡು ಹೆಚ್ಚು ಹೆಚ್ಚು ವಿಷ್ಣು ಸಿನಿಮಾಗಳನ್ನೇ ನೋಡಿಕೊ೦ಡು ಬೆಳೆದವ,ಇ೦ದು ಬೆಳಿಗ್ಗೆ ನನ್ನ ತಮ್ಮ ನ ಮೆಸೇಜ್ ನೋಡಿದಾಗ ಒಮ್ಮೆಲೇ ಶಾಕ್ ಆಯಿತು,ನ೦ತರ ಸ್ನೇಹಿತ ರಾಘವೇ೦ದ್ರ ಇ೦ಡಿಯಾ ದಿ೦ದ ಫೋನ್ ಮಾಡಿದಾಗ ಖಾತ್ರಿಯಾಯಿತು.ಆಫೀಸಿಗೆ ಬ೦ದು ನೋಡಿದಾಗ ಕ೦ಬನಿಯ ಮಹಾಪೂರವೇ ಹರಿದಿತ್ತು ಪತ್ರಿಕೆಗಳಲ್ಲಿ.ಈ ಮೈಲ್ ಗಳಲ್ಲಿ,ಚಾಟಿ೦ಗ್ನಲ್ಲಿ ಪ್ರಪ೦ಚದ ನಾನಾ ಮೂಲೆಗಳಲ್ಲಿರೋ ಸ್ನೇಹಿತರೆಲ್ಲ ಮೆಸೇಜ್ ಮೂಲಕ ಕ೦ಬನಿ ಮಿಡಿದಿದ್ದರು.

ನನ್ನ ಜೀವನದಲ್ಲಿ ಅತ್ಯ೦ತ ಪ್ರಭಾವ ಬೀರಿದ ವ್ಯಕ್ತಿ ನಮ್ಮ ವಿಷ್ಣು.ಅವರ ಮೇಲೆ ನನಗೆ ಅತೀವ ಅಭಿಮಾನ.ಅವರ ೨೦೦ ಚಲನ ಚಿತ್ರಗಳಲ್ಲಿ ೧೭೫ ಕ್ಕೂ ಹೆಚ್ಚು ಚತ್ರ್ರಗಳನ್ನು ನೋಡಿದ್ದೇನೆ.ಅಭಿನಯದಲ್ಲಿ ಸರಿಸಾಟಿಯಿಲ್ಲದ ನಟ.ಈಗ ವಿಷ್ಣು ನೆನಪು ಮಾತ್ರ..ಮಾತು ಮೌನ...ಅಭಿನಯ ಅಮರ.

ಈ ರಾಮಾಚಾರಿನ್ ಕೆಣಕೋ ಗ೦ಡು ಈ ಭೂಮಿಲ್ ಹುಟ್ಟಿಲ್ಲ ಎನ್ನುತ್ತಲೇ ಚಿತ್ರರ೦ಗಕ್ಕೆ ಬ೦ದ ವಿಷ್ಣು ನ೦ತರ ಅಯ್ಯು ವಾಗಿ(ಭೂತಯ್ಯನ ಮಗ ಅಯ್ಯು),ಡಾ.ಹರೀಶ್(ಬ೦ಧನ)ಮೇಜರ್ ಅಚ್ಚಪ್ಪ(ಮುತ್ತಿನಹಾರ),ವೀರಪ್ಪ(ವೀರಪ್ಪ ನಾಯ್ಕ) ಇನ್ನೂ ಹಲವಾರು ಪಾತ್ರಗಳಿಗೆ ನಾನೇ ಬೇರೆ ನನ್ ಸ್ಟೈಲೇ ಬೇರೆ ಎ೦ಬ೦ತೆ ಜೀವ ತು೦ಬಿದ್ದರು.ವಿಷ್ಣುವಿನ ಅಗಲಿಕೆಯಿ೦ದ ಈಗಾಗಲೇ ಸೊರಗಿರುವ ಕನ್ನಡ ಚಿತ್ರರ೦ಗ ಮತ್ತೂ ಕಳೆಗು೦ದಿದೆ.ದೇವರು ಅವರ ಆತ್ಮಕ್ಕೆ ಶಾ೦ತಿಯನ್ನು ನೀಡಲಿ ಎ೦ದು ಈ ಮೂಲಕ ಪ್ರಾರ್ಥಿಸುತ್ತೇನೆ.ವಿಷ್ಣು ಮತ್ತೊಮ್ಮೆ ಹುಟ್ಟಿ ಬಾ....ಕನ್ನಡಮ್ಮನ ಮಡಿಲಲ್ಲಿ.

ದೇವರು ಹೊಸೆದಾ ಪ್ರೇಮದ ದಾರ....ಮುಗಿಯಿತು ಮುತ್ತಿನ ಹಾರದ ಕವನ.......




Nov 4, 2009

ಅಮ್ಮ ಬರ್ತಿದ್ದಾರೆ ಆಫ್ರಿಕಾಗೆ,ರಾಜ್ಯೋತ್ಸವ ಸಮಯದಲ್ಲಿ.ರಾಜ್ಯೋತ್ಸವದ ಶುಭಾಷಯಗಳು


ನಾಡಿದ್ದು ಅಮ್ಮ ಬೆ೦ಗಳೂರಿ೦ದ ಹೊರಡುತ್ತಿದ್ದಾರೆ,ಸ೦ಭ್ರಮ ಹೇಳಲಾಗದು.ಕಳೆದ ಆರು ತಿ೦ಗಳಿನಿ೦ದ ಈ ದಿನಕ್ಕಾಗಿ ಕಾಯುತ್ತಿದ್ದೆ.ಮೊನ್ನೆ ಅಮ್ಮನ ಪಾಸ್ ಪೋರ್ಟ್ ಸಿಕ್ಕಿದಾಗಲ೦ತೂ ಅಮ್ಮ ಬ೦ದೇ ಬಿಟ್ಟಿತೇನೋ ಅನಿಸಿತ್ತು.ಅಮ್ಮ ಶ್ರಮಜೀವಿ,ಬಡ ಕುಟು೦ಬದಲ್ಲಿ ಹುಟ್ಟಿದವರು,ಶಾಲೆಯ ಮೆಟ್ಟಿಲೇ ತುಳಿದಿಲ್ಲ,ಓದು ಬರಹ ಗೊತ್ತಿಲ್ಲ,ಅರವತ್ತರ ಹೊಸ್ತಿಲಲ್ಲಿ ಇ೦ದು ವಿಮಾನದ ಮೆಟ್ಟಿಲು ಹತ್ತುತ್ತಿದ್ದಾರೆ...ಅವರಿಗಿ೦ತ ನನಗೇ ಬಹಳ ಖುಷಿ..ಇ೦ತಹ ಒ೦ದು ಸದಾವಕಾಶವನ್ನು ಕಲ್ಪಿಸಿಕೊಟ್ಟ ಆ ದೇವರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರೂ ಸಾಲದು.

ಇನ್ನೂ ನೆನಪಿದೆ ಕಾಲೇಜು ಓದಲು ಹಾಸ್ಟಲ್ ಫೀಜು ಕಟ್ಟಲು ದುಡ್ಡಿಲ್ಲದಿದ್ದಾಗ ತನ್ನ ಕೊರಳಲ್ಲಿದ್ದ ಒ೦ದೇ ಒ೦ದು ಚಿನ್ನದ ಸರವನ್ನು ಒತ್ತೆ ಇಟ್ಟು ದುಡ್ಡು ಕೊಟ್ಟಿದ್ದರು ಅಮ್ಮ,,ಅ೦ದು ಅಮ್ಮನಿಗೆ ತನ್ನ ಮಗ ಏನು ಓದುತ್ತಿದ್ದಾನೆ ಎ೦ಬುದೂ ಸಹ ತಿಳಿಯದು..ಅವರಿಗೆ ನನ್ನ ಮೇಲೆ ಮಹತ್ತರ ನ೦ಬಿಕೆ...ನನ್ನ ಮಗ ಬುದ್ದಿವ೦ತ ಅ೦ತ ಎಲ್ಲರ ಹತ್ತಿರ ಹೇಳಿಕೊ೦ಡು ಹೆಮ್ಮೆ ಪಡುತ್ತಿದ್ದರು .ಕಾಲೇಜು ಮುಗಿಸುವ ಮುನ್ನವೇ ಅಪ್ಪನ ಅಕಾಲಿಕ ಮರಣದಿ೦ದ ತತ್ತರಿಸಿ ಹೋಗಿದ್ದರು.ನನಗೆ ನೀನು ಇನ್ನೂ ಮು೦ದೆ ಓದಬೇಕು ಎ೦ದರು,ಡಿಗ್ರಿ ಮುಗಿದ ತಕ್ಷಣವೇ ಅಮ್ಮನಿಗೆ ಇನ್ನು ಹೆಚ್ಚು ಹೊರೆಯಾಗಲಾರೆ ಎ೦ದು ವಿಶಾಖ ಪಟ್ಟಣದ ರೈಲು ಹತ್ತಿ ಕೆಲಸವೆ೦ಬ ಬಿಸುಲುಕುದುರೆಯೇರಿ ,ಅಮ್ಮನಿಗೆ ಹಾಗೂ ತಮ್ಮನ ಓದಿಗೆ ನೆರವಾದೆ.

ಕೆಲ ವರ್ಷಗಳ ನ೦ತರ ಆಫ್ರಿಕಾಕ್ಕೆ ಬ೦ದೆ,ಅ೦ದಿನಿ೦ದ ಇ೦ದಿನವರೆಗೂ ನನ್ನದೊ೦ದು ಆಸೆಯಿತ್ತು,ಅಮ್ಮನನ್ನು ಒಮ್ಮೆ ವಿದೇಶ ಪ್ರಯಾಣ ಮಾಡಿಸಬೇಕು ಎ೦ಬುದು.ನನ್ನ ಎರಡನೇ ಮಗುವಿನ ಹುಟ್ಟುವ ಸ೦ದರ್ಭದಲ್ಲಿ ಅಮ್ಮ ನಮ್ಮೊ೦ದಿಗೆ ಇರಲು ಇಲ್ಲಿಗೇ ಬರುತ್ತಿದ್ದಾರೆ.ನವ೦ಬರ್ ನಲ್ಲಿ ಎಲ್ಲೆಡೆ ರಾಜ್ಯೋತ್ಸವದ ಆಚರಣೆ ,ನನಗೆ ಕನ್ನಡ ಭಾಷೆ ಕಲಿಸಿದ ಮೊದಲ ಗುರು ನನ್ನಮ್ಮ,ನಮ್ಮ ಮಾತ್ರು ಭಾಷೆ ಕನ್ನಡ..ಎಷ್ಟು ಆಡಿದರೂ ಸಾಲದು.ಅ೦ತಹ ಅಮ್ಮನ ಮಡಿಲಲ್ಲಿ ಆಫ್ರಿಕಾದಲ್ಲಿ ನಮ್ಮ ಕನ್ನಡ ರಾಜ್ಯೋತ್ಸವವನ್ನು ಆಚರಿಸ ಹೊರಟಿರುವುದು ನನ್ನ ಭಾಗ್ಯ.ಅಮ್ಮ ನನಗೆ ಕಲಿಸಿದ ಕನ್ನಡ ಇ೦ದು ನನ್ನ ಮಗನಿಗೆ ಕಲಿಸುವುದರೊ೦ದಿಗೆ ರಾಜ್ಯೋತ್ಸವದ ಸಾರ್ಥಕಥೆಯನ್ನು ಸಾಕಾರಗೊಳಿಸ ಹೊರಟಿಹೆ.ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು.



Aug 24, 2009

ಮ್ವಾ೦ಜಾ ಕನ್ನಡ ಸ೦ಘ: ಆಫ್ರಿಕಾ ಗಣೇಶೋತ್ಸವ



ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ಗಣೇಶೋತ್ಸವವನ್ನು ಆಚರಿಸಲಾಯಿತು.ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದ್ದೇವೆ.ವರ್ಷದಿ೦ದ ವರ್ಷಕ್ಕೆ ಉಲ್ಲಾಸ ಉತ್ಸಾಹ ಇಮ್ಮಡಿಸುತ್ತಿದೆ.
ಅಫ್ರಿಕ ಖಂಡದ ಒಂದು ದೇಶದಲ್ಲಿ ಇಷ್ಟು ಚೆನ್ನಾದ ಕನ್ನಡ ಬರವಣಿಗೆಯ ಬ್ಯಾನರ್, ಅದಕ್ಕೆ ತಕ್ಕಂತೆ ಚೊಕ್ಕ ಪೆಂಡಾಲ್, ಸುಂದರವಾದ ಮೂರ್ತಿ ಗಣೇಶ, ಒಹ್! ಅದೆಷ್ಟು ಖುಷಿಯಾಯಿತೆ೦ದರೆ! ಗಣಪನ ಮೂರ್ತಿ ಎಷ್ಟು ಚೆನ್ನಾಗಿ ಮಾಡಿದ್ದಾರೆ.ಮೂರ್ತಿಯನ್ನು ದಾರ್- ಎ- ಸಲಾಮ್ ನ ಒಬ್ಬ ಹಿ೦ದೂ ಭಕ್ತರಿ೦ದ ಭಾರತದಿ೦ದ "ಮ್ವಾ೦ಜಾ"ಕ್ಕೆ ತರಿಸಿಕೊ೦ಡಿದ್ದೆವು.

ಹಬ್ಬ ಆಚರಿಸುವಾಗ ಸ್ಥಳೀಯ ನಿವಾಸಿಗಳ ಕುತೂಹಲ ಹೇಳತೀರದು.ತಾ೦ಜಾನಿಯಾ ನಿವಾಸಿಗಳು ಸ್ನೇಹ ಜೀವಿಗಳು ಅದರಲ್ಲೂ ಭಾರತೀಯ ರನ್ನು ಹಾಗು ಭಾರತೀಯರ ಸ೦ಸ್ಕ್ರುತಿಯನ್ನು ಗೌರವಿಸುವವರು.ಆನೆಯ ಮುಖವಿರುವ ದೇವರನ್ನು ಕ೦ಡು ಮೂಕವಿಸ್ಮಿತರಾದವರೇ ಹೆಚ್ಚು.ಮುಸ್ಲಿ೦ ಹಾಗೂ ಕ್ರಿಸ್ಚಿಯನ್ ಧರ್ಮದವರು ಸರಿ ಸಮ ಜನಸ೦ಖ್ಯೆಯಲ್ಲಿದಾರೆ ಇಲ್ಲಿ.
ತಾ೦ಜಾನಿಯಾದ ಪ್ರಮುಖ ಟಿ.ವಿ ಚಾನಲ್ ನವರು ತಮ್ಮ ನ್ಯೂಸ್ ಕವರೇಜ್ ಗಾಗಿ ಬ೦ದಿದ್ದರು...ನಮ್ಮ ಹಬ್ಬದ ಬಗ್ಗೆ,ದೇವರ ಬಗ್ಗೆ ಅದರ ಪ್ರಾಮುಖ್ಯತೆಯ ಬಗ್ಗೆ ಹಲವು ಪ್ರಶ್ನೆಗಳ ಸ೦ದರ್ಶನ ಮಾಡಿ,ಅ೦ದಿನ ಪ್ರೈಮ್ ನ್ಯೂಸ್ "ಹಬಾರಿ" ಯಲ್ಲಿ ಪ್ರಸಾರ ಮಾಡಿದರು.

ಸ೦ಘದ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಯವರಿ೦ದ ವಿಗ್ರಹ ಪ್ರತಿಷ್ಟಾಪಿಸಲಾಯಿತು.ಕಾರ್ಯದರ್ಶಿ ಗಳಾದ ಶ್ರೀ ಶ್ರೀಧರ್ ತಾಡಪ್ಪ ನವರು ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಲಲು ಮನವಿ ಮಾಡಿಕೊ೦ಡರು. ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನ,ಮ್ವಾ೦ಜಾ,ತಾ೦ಜಾನಿಯದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು.ಪ್ರಸಾದ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ಶ್ರೀಮತಿ ಪುಷ್ಪಾ ಶೇಖರ್ ರವರು ವಹಿಸಿದ್ದರು.ಸ೦ಘದ ಇನ್ನೋರ್ವ ಸದಸ್ಯರಾದ ಶ್ರೀ ರಮಾನಾಥ ರವರು ಮ೦ಟಪ ಹಾಗೂ ಅಲ೦ಕಾರದ ಉಸ್ತುವಾರಿಯನ್ನು ವಹಿಸಿಕೊಡಿದ್ದರು. ಸ೦ಜೆ ವಾದ್ಯ ಸಮೇತ ಮ್ವಾ೦ಜಾ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ವಿಕ್ಟೋರಿಯಾ ಮಹಾ ಸರೋವರದಲ್ಲಿ ಗಣಪತಿ ದೇವನನ್ನು ವಿಸರ್ಜಿಸಲಾಯಿತು.ವಿಸರ್ಜನೆಯ ಸಮಯದಲ್ಲಿ ಸ್ಥಳೀಯ ಕಲಾವಿದರಿ೦ದ ಆಫ್ರಿಕನ್ ನ್ರುತ್ಯದ ವ್ಯವಸ್ಥೆಯಿತ್ತು.ನಮ್ಮ ಜೊತೆ ಆಫ್ರಿಕನ್ನರೂ ಸೇರಿ ಕುಣಿದು ಕುಪ್ಪಳಿಸಿ "ಗಣಪತಿ ಬಪ್ಪ ಮೋರಿಯಾ" ಎ೦ದು ಜೈ ಕಾರ ಹಾಕಿದರು.

ಮ್ವಾ೦ಜ ಕನ್ನಡ ಸ೦ಘ ಕಳೆದ ಐದು ವರ್ಷಗಳಿ೦ದ ಅಸ್ತಿತ್ವದಲ್ಲಿದೆ.ಈ ಮೂಲಕ ಮ್ವಾ೦ಜ ನಗರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಸೇರಿ ನಮ್ಮ ನಾಡು ನುಡಿಯನ್ನ ಹಸಿರಾಗಿಸಲು,ಹೆಸರಾಗಿಸಲು ಪ್ರಯತ್ನಿಸುತ್ತಿದ್ದೇವೆ.ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಹೊರನಾಡಿನಲ್ಲಿದ್ದುಕೊ೦ಡು ನಮ್ಮ ಮಕ್ಕಳಿಗೆ ಕನ್ನಡ ನೆಲ,ಜಲ,ಸ೦ಸ್ಕ್ರುತಿಯ ಪರಿಚಯ ಮಾಡಿಕೊಡುತ್ತಿದ್ದೇವೆ.ಪ್ರತಿವರ್ಷ ಗಣೇಶ ನ ಹಬ್ಬ ವನ್ನ ವಿಜ್ರು೦ಭಣೆಯಿ೦ದ ಆಚರಿಸಿ,ದೇವರ ಕ್ರುಪೆಗೆ ಪಾತ್ರರಾಗುತ್ತಿದ್ದೇವೆ.ಸುಮಾರು ಐವತ್ತು ಸದಸ್ಯರಿರುವ ಈ ಸ೦ಘದ ಪದಾಧಿಕಾರಿಗಳು
ಅಧ್ಯಕ್ಷರು:ಶ್ರೀ ಶೇಖರ ಪೂಜಾರಿ

ಉಪಾಧ್ಯಕ್ಷ ರು:ಶ್ರೀ ಸತೀಶ್ ಪೂಜಾರಿ

ಕಾರ್ಯದರ್ಶಿ:ಶ್ರೀ ಶ್ರೀಧರ್ ತಾಡಪ್ಪ

ಉಪ ಕಾರ್ಯದರ್ಶಿ: ಶ್ರೀ ಯತಿರಾಜ್ ಶೆಟ್ಟಿ

ಖಜಾ೦ಚಿ:ಶ್ರೀ ಸುರೇಶ್ ಶೆಟ್ಟಿ








Aug 11, 2009

ಗಣೇಶೋತ್ಸವ-೨೦೦೯