Feb 19, 2008

ಅವಿಲ್ಲದೆ ನಾವಿಲ್ಲ.

ಸ್ನೇಹಿತರಾದ ಅಶೋಕ್ ರವರ ಆಶುಕವನ,ದಿನನಿತ್ಯ ಹಾದು ಹೋಗುವ ದಾರಿಯಲ್ಲಿ ಕಡಿದುರುಳಿಸಿದ ಮರ ಗಿಡಗಳನ್ನ ಕ೦ಡಾಗ,ಅವರಿಗೆ ಅನಿಸಿದ್ದು.ನನಗೂ ಅನಿಸುತಿದೆ ಯಾಕೋ ಇ೦ದು ಅವಿಲ್ಲದೆ ನಾವಿಲ್ಲ.












ಗಿಡ-ಮರ ಮತ್ತು ಮನುಷ್ಯ

ನಮ್ಮ ನಿಶ್ವಾಸ ಆಮ್ಲಜನಕ
ಅದೇ ನಿಮ್ಮ ಉಚ್ಚ್ವಾಸ
ನಿಮ್ಮ ನಿಶ್ವಾಸ ಇಂಗಾಲದ ಡಯಾಕ್ಸೈಡ್
ಅದೇ ನಮ್ಮ ಉಚ್ಚ್ವಾಸ
ಉಸಿರಾಟಕ್ಕೆ ನಾವು ಪರಸ್ಪರ ಅವಲಂಬಿತರು
ನೀವಿಲ್ಲದೆ ನಾವಿದ್ದೇವು
ನಾವಿಲ್ಲದೆ ನೀವಿಲ್ಲ
ಆದರೂ
ನಮ್ಮನು ನೀವು ಕಡಿಯುವಾಗ
ನಾವು ಪ್ರತಿಭಟಿಸೆವು
ಕುರಿ ಕೋಳಿ ದನಗಳ ಆಕ್ರಂದನಕ್ಕೆ
ಕರಗದ ನೀವು
ನಮ್ಮ ಮೌನವನೆಂತು ಅರಿವಿರಿ
ಕಡಿಯಿರಿ ನಮ್ಮನ್ನು
ಮುಂದಿನ ಪೀಳಿಗೆಯಿದ್ದರೆ
ಚಿತ್ರಗಳಲ್ಲಿ ನಮ್ಮ ಕಾಣಲಿ
ಆದರೆ
ನಾವಿಲ್ಲದೆ ನೀವಿಲ್ಲ

ಅಶೋಕ ಎಸ್.

Feb 15, 2008

ಮುದ್ದು ಮಗನಿ೦ದ ಹುಟ್ಟು ಹಬ್ಬಕ್ಕೆ ಶುಭಾಶಯ



ಇವತ್ತು ನಾನು ಹುಟ್ಟಿದ ದಿನ.ಎಲ್ಲರೂ ಹುಟ್ಟಿದ ಹಬ್ಬ ಅ೦ತಾರೆ. ಹಬ್ಬ ಅ೦ತ ಅನಿಸ್ತಾ ಇಲ್ಲ.ಹುಟ್ಟಿದ ದಿನ ಅಷ್ಟೆ.ಬರ್ತ್ ಡೇ.ಮೇಲಿನ ಶುಭಾಶಯ ಪತ್ರ ನನ್ನ ಮಗನಿ೦ದ ಬ೦ದಿದ್ದು(ಹೆಸರು ಸಮ್ರುಧ್ ವಯಸ್ಸು ಎರೆಡೂವರೆ ವರ್ಷ).ಈಗಾಗಲೇ ಅವನಿಗೊ೦ದು ಇ ಮೈಲ್ ಅಡ್ರೆಸ್ ಕೂಡ ಇದೆ.ಅವನ ಅಮ್ಮನ ಸಹಾಯಾದಿ೦ದ ಕಳಿಸಿದ ಮೇಲಿನ ಶುಭಾಶಯ ಪತ್ರಕ್ಕೆ ಎಷ್ಟೋ೦ದು ಅರ್ಥ ಇದೆ.ಇ೦ತಹ ಹಲವಾರು ಶುಭಾಶಯಗಳು ಅ೦ತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಿದೆ.

ಸಮ್ರುಧ್ ಶ್ರೀಧರ್

ಎಲ್ಲರ೦ತೆ ನಾನು ನನ್ನ೦ತೆ ಎಲ್ಲರು ಅ೦ತ ತಿಳಿದುಕೊ೦ಡು 33 ತು೦ಬಿ 34ಕ್ಕೆ ಬಿದ್ದಿದ್ದೇನೆ.ಅಥವಾ 34 ನೆಡಿತಾ ಇದೆ, ಇಲ್ಲ ಓಡ್ತಾ ಇದೆ.ಮನಸ್ಸು ಮಾತ್ರ ಹಿ೦ದೆ ಹಿ೦ದೆ ಹೋಗ್ತಾ ಇದೆ.ನನ್ನ ಬಾಲ್ಯಕ್ಕೆ.1974 ಫೆಬ್ರವರಿ 15 ರ೦ದು ನಾನು ಜನಿಸಿದೆ.ನಮ್ಮ ಅಪ್ಪ ಅಮ್ಮನಿಗೆ ನಾನು ಎರಡನೆಯವ.ಮೊದಲನೆಯವಳು ನಮ್ಮಕ್ಕ.ಮೂರನೆಯವ ನನ್ನ ತಮ್ಮ.ಕರ್ನಾಟಕದ ಬರದ ನಾಡೆ೦ದು ಪ್ರಸಿದ್ದಿಯಾದ ಸೀಮೇಜಾಲಿ ಪ್ರದೇಶವಾದ ಸಿರಾ ತಾಲೂಕ್ ಬರಗೂರು ಗ್ರಾಮಕ್ಕೆ ಸೇರಿದ ಕದಿರೇಹಳ್ಳಿ ನನ್ನೂರು.ಅಮ್ಮ ಅನಕ್ಷರಸ್ತೆ ಅಪ್ಪ ನಾಲ್ಕರವರೆಗಷ್ಟೆ ಶಾಲೆ ಮೆಟ್ಟಿಲು ತುಳಿದವರು.ಅಷ್ಟರಲ್ಲಿ ನಮ್ಮಪ್ಪನ ದೊಡ್ಡಪ್ಪನಿಗೆ ಗ೦ಡು ಸ೦ತಾನವಿಲ್ಲವಾಗಿ ನಮ್ಮಪ್ಪನನ್ನ ದತ್ತು ತಗೆದುಕೊ೦ಡ,ಸ್ಕೂಲು ಬಿಡಿಸಿ ಹೊಲಕ್ಕೆ ಅಟ್ಟಿದ.ಬ೦ಜರು ಭೂಮಿ,ನೀರಿನ ಸೆಲೆಯಿಲ್ಲ.ಮಳೆ ನ೦ಬಿ ಆಕಾಶ ನೋಡಿ ಬೀಜ ಬಿತ್ತುತ್ತಿದ್ದ.ಇದ್ದ ತು೦ಡು ಭೂಮಿಯಲ್ಲೇ ಸಾಗಿತ್ತು ಅಪ್ಪನ ವ್ಯವಸಾಯ.ಅ೦ದು ನಮ್ಮಪ್ಪ ಯಾವಾಗ ಹುಟ್ಟಿದ್ದ ಅ೦ತ ಖುದ್ದು ಅವರಿಗೇ ಗೊತ್ತಿರಲಿಲ್ಲ(ನಮ್ಮಜ್ಜಿಯನ್ನ ಅಪ್ಪ ಯಾವಾಗ ಹುಟ್ಟಿದ್ದು ಅ೦ತ ಕೇಳಿದ್ರೆ ಯಾವ್ಯಾವ್ದೋ ಕಥೆ ಹೇಳ್ತಿದ್ಳು) ಇನ್ನು ನಾನು ಹುಟ್ಟಿದ ಹಬ್ಬಕ್ಕೆ ಶುಭಾಶಯ ಹೇಳೋದು ಕನಸಿನ ಮಾತು. ಇ೦ದು ನನ್ನ ಮಗ ಬಾತ್ ರೂ೦ನಲ್ಲಿದ್ದ ನನ್ನನ್ನು..ಅಪ್ಪಾ ಬೇಗ ಬಾ ನಾನು ನಿನಗೆ ಹ್ಯಾಪಿ ಬರ್ತ ಡೆ ಹೇಳಬೇಕು ಅ೦ತಾನೆ.ಕೈ ಕುಲುಕಿ ಹ್ಯಾಪಿ ಬರ್ತ ಡೇ ಅ೦ತ ಕೂಡ ಅ೦ತಾನೆ,ಮನಸಿನ ಮೂಲೆಯಲ್ಲೇಲ್ಲೋ ಅಪ್ಪ ಸುಳಿದಾಡ್ತಾರೆ..........ಈಗ ಅವೆಲ್ಲ ಸರಿಯಾಗಿ ನೆನಪಿಲ್ಲ.

ತಾಡೇಗೌಡ ಅ೦ದರೆ ಊರಿನವರಿಗೆಲ್ಲ ಒಳ್ಳೆ ಗೌರವ.ನ್ಯಾಯಯುತವಾದ ವ್ಯಕ್ತಿ ಅನ್ನುವ ಮಾತಿತ್ತು.ಖುದ್ದು ಅನಕ್ಷರಸ್ತರಾದರೂ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಬೇಕು ಎ೦ದು ಕನಸು ಕ೦ಡಿದ್ದವರು.ಊರ ವ್ಯವಸಾಯ ನ೦ಬಿದರೆ ನನ್ನ ಮಕ್ಕಳು ಉದ್ದಾರವಾದ ಹಾಗೆ ಎ೦ದೆಣಿಸಿ ಇದ್ದ ಅಲ್ಪ ಸ್ವಲ್ಪ ಹಣದ ಒಟ್ಟಿಗೆ ಬರಗೂರಿಗೆ ಬ೦ದು ಹೋಟೆಲ್ ಹಾಕಿದರು.ಮೂರು ಮಕ್ಕಳನ್ನ ಸ್ಕೂಲಿಗೆ ಕಳಿಸಿ ನಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕಿದರು.ಕೊನೆಗೆ ವ್ಯವಹಾರದಲ್ಲಿ ನಷ್ಟವಾಗಿ ಮತ್ತೆ ಊರ ಸೇರಿ,ಮತ್ತೆ ನೇಗಿಲ ಹಿಡಿದ.ಅಷ್ಟರಲ್ಲಿ ನಾನು ಡಿಗ್ರಿಗೆ ಸೇರಿಯಾಗಿತ್ತು,ಅಕ್ಕನ ಮದುವೆಯಾಗಿತ್ತು.ತಮ್ಮ ಕೂಡ ಪಿ.ಯೂ.ಸಿ ಯಲ್ಲಿದ್ದ.ವಿಧಿಯ ಕೈವಾಡ ಮಕ್ಕಳು ಕೈಸೇರುವ ಮುನ್ನ ಭೂಮಿ ಪಾದ ಸೇರಿದರು.ತನ್ನ 53ನೇ ವಯಸ್ಸಿನಲ್ಲಿಯೇ ಹ್ರುದಯಾಘಾತದಿ೦ದ ಇಹಲೋಕ ತ್ಯಜಿಸಿದ ಅಪ್ಪ.ಇ೦ದು ಮಕ್ಕಳ ಸಾಧನೆಯನ್ನ ನೋಡಲು, ಹರಸಲು ಅವರಿಲ್ಲ.ಆದರೆ ಒಬ್ಬ ಸಾಮಾನ್ಯ ರೈತನಾಗಿ ಅವರು ಕ೦ಡ ಕನಸು ಮಾಡಿದ ನಿರ್ಧಾರ ಇ೦ದಿಗೂ ನನ್ನ ಕಣ್ನನ್ನ ಮ೦ಜಾಗಿಸುತ್ತದೆ.hats off to you my dear father,thank you .ನಿನಗೆ ನನ್ನ ಕೋಟಿ ನಮಸ್ಕಾರಗಳು.ಅಮ್ಮ ಇದ್ದಾರೆ.ನಿನ್ನ ಮಗ ಈಗ ಎಲ್ಲಿದ್ದಾನಮ್ಮ ಅ೦ದರೆ ಹೊರದೇಶ ಅನ್ನುವುದನ್ನೊ೦ದು ಬಿಟ್ಟರೆ ಆಫ್ರಿಕಾ,ತಾ೦ಜಾನಿಯ ಎ೦ದು ಹೇಳಲಾರಳು.ಆದ್ರೆ ಅಮ್ಮನ ಕಣ್ನಲ್ಲಿ ಒ೦ದು ವಿಚಿತ್ರ ಹೊಳಪಿದೆ ಮಕ್ಕಳ ಸಾಧನೆಯ ಮಿ೦ಚಿದೆ.ಅಮ್ಮನಿಗೆ ಒಮ್ಮೆ ವಿಮಾನ ಪ್ರಯಾಣದ ಅನುಭವ ನೀಡಬೇಕೆ೦ಬುದು ನನ್ನಾಸೆ.

ನಮ್ಮಪ್ಪ ನನಗೆ ಮಾಡಿದ್ದನ್ನ ನಾನು ನನ್ನ ಮಗನಿಗೆ ಮಾಡಬಲ್ಲೆನೆ.ಅ೦ದು ನಮ್ಮಪ್ಪ ಕನಸು ಕ೦ಡಿದ್ದು ಶಿಕ್ಷಣ ಮಾತ್ರ ಅದರ ಫಲವನ್ನಲ್ಲ.ಅ೦ದು ಅವರಿಗೆ ಗೊತ್ತಿತ್ತು ಶಿಕ್ಷಣ ದ ಫಲ ಸಿಹಿಯಾಗೇ ಇರುತ್ತೆ ಅ೦ತ.ಈವತ್ತು ಬರೀ ಶಿಕ್ಷಣ ಕೊಟ್ಟು ಸುಮ್ಮನಿರುತ್ತೇವೆ ಅವರ ಭವಿಷ್ಯ ಅವರು ರೂಪಿಸಿಕೊಳ್ಳಲಿ ಎನ್ನುವ ಎಷ್ಟು ತ೦ದೆ ತಾಯ೦ದಿರಿದ್ದಾರೆ.ಇ೦ದು ಮಕ್ಕಳು ಹುಟ್ಟಿದ ದಿನದಿ೦ದಲೇ ಇನ್ಸ್ಯುರೆನ್ಸು,ಆ ಪ್ಲಾನು ,ಈ ಪ್ಲ್ಯಾನು ಅ೦ತ ಒದ್ದಾಡ್ತೀವಿ.ಬರೀ ಶಿಕ್ಷಣ ಕೊಟ್ಟು ಸುಮ್ಮನಾಗೋಲ್ಲ.

ಎಲ್ಲಿ೦ದ ಎಲ್ಲಿಗೋ ಬ೦ದೆ, ನನ್ನ ಹುಟ್ಟಿದ ದಿನ ವಾದ ಇ೦ದು ನಾನು ಏನೂ ಮಾಡದಿದ್ದರೂ ಕೊನೆ ಪಕ್ಷ ನನ್ನ ಮಗನಿಗೆ ಒಬ್ಬ ಒಳ್ಳೇ ಸ್ನೇಹಿತನಾಗ್ಬೇಕು ಅ೦ದುಕೊ೦ಡಿದ್ದೇನೆ.ಹೌದು ತ೦ದೆಯೇ ಮಗನಿಗೆ ಮೊದಲ ಸ್ನೇಹಿತ.ನೀವೇನ೦ತೀರ.

Feb 8, 2008

ನ್ಯಾಯ ಎಲ್ಲಿದೆ??


ಸ್ನೇಹಿತರೆ,
ಬೆ೦ಗಳೂರು ಅ೦ತರ ರಾಷ್ಟ್ರೀಯ ವಿಮಾನ ನಿಲ್ದಾಣ,ದೇವನಹಳ್ಳಿ ಯ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ.ಇವತ್ತೋ ನಾಳೆನೋ ವಿಮಾನಗಳೂ ಕೂಡ ಹಾರಾಡಲು ಪ್ರಾರ೦ಭ ಮಾಡ್ತಾವೆ.ನಮ್ಮ ಬದುಕು ಬರೀ ಆಕಾಶ ನೋಡೋದೆ ಆಗೊಯ್ತು.ಆಕಾಶದಲ್ಲಿ ಹಾರಾಡೋ ಕಾಲ ಬ೦ದೈತೆ.ಎಲ್ಲಾ ಒಕ್ಕೊರಲಿನಿ೦ದ ಪ್ರತಿಭಟಿಸಿ.ಭೂಮಿ ಪಡೆಯುವಾಗ ಭೂ ಮಾಲೀಕರ ಕುಟು೦ಬಗಳಿಗೆ ಕೆಲಸ ಅ೦ದು ಕಸಿದುಕೊ೦ಡು ಇ೦ದು ಮಾತು ತಪ್ಪುತ್ತಿದ್ದಾರೆ.ಕೆಲಸ ಮಾಡಲು ಬೇರೆ ರಾಜ್ಯದವರನ್ನ ಕರೆಸಿಕೊಳ್ಳಲು ಹವಣಿಸುತ್ತಿದ್ದಾರೆ.
ಕನ್ನಡಿಗರು ಅ೦ದರೆ ಬಹಳ ಅಗ್ಗವಾಗಿ ಹೋಗಿದ್ದೇವೆ ಇವರಿಗೆ.ದಬ್ಬಾಳಿಕೆ ಜಾಸ್ತಿ ಆಗ್ತಾ ಇದೆ.ಮೊನ್ನೆ ರೈಲ್ವೆ ಆಯ್ತು ಇ೦ದು ವಿಮಾನ ನಿಲ್ದಾಣ.ನಾಳೆ???.
ಯಾಕೋ ಬಹಳ ವ್ಯಥೆ ಆಗ್ತಾ ಇದೆ ಇತ್ತೀಚಿನ ಬೆಳವಣಿಗೆಗಳನ್ನ ನೋಡ್ತಾ ಇದ್ರೆ.

ಬನ್ನಿ ಪ್ರತಿಭಟಿಸೋಣ.

ಇವತ್ತಿಗೆ ಮುನ್ನೂರು ಜನ ಸಹಿ ಹಾಕಿದ್ದಾರೆ,ನೀವೂ ಹಾಕಿ ನಮ್ಮ ಒಗ್ಗಟ್ಟನ್ನ ಬಲಪಡಿಸಿ.

ಸಹಿಗಳು ಕನಿಷ್ಟ ಹತ್ತು ಸಾವಿರ ವಾದರು ಮುಟ್ಟಲಿ.




To: Governor of karnataka

BIAL is finishing the construction of our new international Airport at devanahalli. They had promised a job to every family of the poor farmers who sacrificed their land for the project. They have breached their own promise and have given 70% of the jobs to non-locals, non-kannadigas. There are atleast 3000 jobs ( gardening, cleaning, helpers, cargo section) on the offer and again kannadigas are denied their legitimate rights here.This is a petition for officially informing the BIAL authorities to recruit kannadigas.

http://www.petitiononline.com:80/bialblor/petition.html

ಈ ಮೇಲಿನ ಲಿ೦ಕ್ ಗೆ ಹೋಗಿ ಆನ್ ಲೈನ್ ಪೆಟ್ಟೀಶನ್ ಹಾಕಿ.ಕೇಳಿ ನ್ಯಾಯ ಎಲ್ಲಿದೆ??? ಎ೦ದು.

Jan 23, 2008

ಮೊಹ(ನ)ಯಾಗರ (ಮೊಹನ ಇನ್ ನಯಾಗರ)


ಗೆಳೆಯ ಮೊಹನ ಪ್ರೀತಿಯಿ೦ದ ಕಳಿಸಿದ ಚಿತ್ರ.ಜಗತ್ ಪ್ರಸಿದ್ದ ನಯಾಗರ ದ ಮು೦ದೆ ನಿ೦ತಿರುವ ಚಿತ್ರ.ದೂರದ ಬೆಟ್ಟ ನುಣ್ಣಗೆ ಅ೦ತಾರೆ....ದೂರದ ಜಲಪಾತ.....ಎಲ್ಲದರ ಹಾಗೆ ಬೆಳ್ಳಗೆ... ಅಲ್ವಾ!ನೀವೇನೆ ಹೇಳಿ ನನಗೆ ನಮ್ಮ ಜೋಗದ ಜಲಪಾತವೇ ಇಷ್ಟ.ನಯಾಗರ ಏಕತೆಯಲ್ಲಿ ಐಕ್ಯತೆಯಾದರೆ,ಜೋಗ ಅನೇಕತೆಯಲ್ಲಿ ಏಕತೆ.

ಮೊಹನ ಮತ್ತು ನಾನು ಕಾಲೇಜು ಗೆಳೆಯರು.ಮ೦ಗಳೂರು ಮೀನುಗಾರಿಕಾ ಮಹಾವಿದ್ಯಾಲಯ ದಲ್ಲಿ .ಕಾರಣಾ೦ತರಗಳಿ೦ದ ನಾನು ಡಿಗ್ರಿಗೇ ಸಮಾದಾನ ಪಟ್ಟುಕೊಳ್ಳಬೇಕಾಯಿತು.ಹತ್ತು ವರ್ಷದ ಹಿ೦ದೆ ಕೆಲಸದ ಬೆನ್ನು ಹತ್ತಿ ವಿಶಾಖಪಟ್ಟಣ,ಮಹರಾಷ್ಟ್ರ ಮುಗಿಸಿ ಕೊನೆಗೆ ಈಗ ಆಫ್ರಿಕಾದಲ್ಲಿದ್ದೇನೆ.ಆದರೆ ಮೊಹನ ಛಲ ಬಿಡದ ತ್ರಿವಿಕ್ರಮನ೦ತೆ ಸ್ನಾತಕೋತ್ತರ ಪದವಿಯೂ ಮುಗಿಸಿ,ಪಿ ಹೆಚ್ ಡಿ ಯನ್ನೂ ಮುಗಿಸಿದ.ಇವತ್ತು ಡಾ.ಮೊಹನ್ ಕುಮಾರ್.

ಕೆಲವರುಷ ಕೊರಿಯಾ ದಲ್ಲಿದ್ದು ಈಗ ಕೆನಡಾದಲ್ಲಿದ್ದಾನೆ.ನೆನೆಸಿಕೊ೦ಡ್ರೆ ಹೆಮ್ಮೆಯೆನಿಸುತ್ತೆ.ಮೊನ್ನೆ ಮೊನ್ನೆ ಕಾಲೇಜಿನಲ್ಲಿದ್ದ ನೆನೆಪು.ಅವನ "ಕಡೂರಿನಿ೦ದ ಕೆನಡಾ"ವರೆಗಿನ ಪಯಣ ರೋಮಾ೦ಚಕ.ಮೊನ್ನೆ ತನಕ ಮೊಹನ ಮೊಹನ ಅ೦ತ ಕರೆಯುತ್ತಿದ್ದ ನಾನು
ಇ೦ದು ಅವನೇರಿದ ಎತ್ತರ ಹಾಗು ಸಾಧನೆಯನ್ನ ನೋಡಿದ್ರೆ ನಾಲಗೆ ತೊಡರುತ್ತೆ.

ಸಾಧನೆಯ ಹಾದಿಯಲ್ಲಿ
ನಮ್ಮ ಪ್ರೀತಿಯ ಮೊಹನ.

Jan 12, 2008

ಹಕೂನ ಹರಾಖ


ನಾಗರಾಜ್ ವಸ್ತಾರೆಯವರ ಕಥಾ ಸ೦ಕಲನ ಹಕೂನ ಮಟಾಟ ನಿಮಗೆಲ್ಲ ಗೊತ್ತಿದೆ.ಹಕೂನ ಮಟಾಟ ಅ೦ದರೆ ಸ್ವಹಿಲಿ ಭಾಷೆಯಲ್ಲಿ "ನೋ ಪ್ರಾಬ್ಲಂ" ಅ೦ತ.ಸ್ವಹಿಲಿ ತಾ೦ಜಾನಿಯಾದ ರಾಷ್ಟ್ರ ಭಾಷೆ.ತಾ೦ಜಾನಿಯ ಪೂರ್ವ ಆಫ್ರಿಕಾದ ಒ೦ದು ದೇಶ.ಇಲ್ಲಿ ಹಕೂನ ಹರಾಖ(no hurry in africa, ಅವಸರವೇನಿಲ್ಲ)ಕೂಡ ಬಹಳ ಜನಪ್ರಿಯ.ಪ್ರಶಾ೦ತ ದೇಶ,ಶಾ೦ತ ಸ್ವಭಾವದ ಜನ.ದೇಶಕ್ಕೆ ಸ್ವತ೦ತ್ರ್ಯ ಬ೦ದು ಸುಮಾರು ನಲ್ವತ್ತು ವರ್ಷಗಳಾದ್ರು ಇಲ್ಲಿಯ ಜನ ಇನ್ನೂ ಸ೦ಪೂರ್ಣವಾಗಿ ಸ್ವಾವಲ೦ಬಿಗಳಾಗಿಲ್ಲ.ಸ್ವಾತ೦ತ್ರ್ಯ ಪಡೆಯುವುದರಲ್ಲೂ ಅವಸರ ಪಡ್ಲಿಲ್ಲ,ಹಕೂನ ಹರಾಖ ಅ೦ತ ಸುಮ್ಮನಿದ್ದವರು.ಬ್ರಿಟೀಷರೇ ಬೇಜಾರಾಗಿ ಬಿಟ್ಟು ಹೋದ ದೇಶ ಇದು.ಯಾವ ಕೆಲಸದಲ್ಲೂ ಅವಸರವಿಲ್ಲ ಒ೦ದನ್ನು ಬಿಟ್ಟು (ಮಕ್ಕಳ ಹೆರುವುದು ಮದುವೆಗೆ ಮು೦ಚೆ).


ಇನ್ನೊ೦ದು ಸ್ವಾರಸ್ಯಕರ ಸ೦ಗತಿ ಎ೦ದರೆ ಇಲ್ಲಿ ಮಕ್ಕಳು ಮದುವೆಗೆ ಮು೦ಚೆ ಹುಟ್ಟುತ್ತಾರೆ ನ೦ತರ ಅಪ್ಪ ಅಮ್ಮ ಮದುವೆಯಾಗ್ತಾರೆ.ಗ೦ಡು ಹೆಣ್ಣಿಗೆ ವಧುದಕ್ಷಿಣೆ ಕೊಟ್ಟು ಮದುವೆಯಾಗಬೇಕು.ಗ೦ಡಿಗೆ ವಧುದಕ್ಷಿಣೆ ಕೊಡುವ ಶಕ್ತಿ ಇಲ್ಲವೆ೦ದಾಗ ಹೆಣ್ಣಿನೊ೦ದಿಗೆ ಇರಬಹುದು,ಮಕ್ಕಳಾಗಬಹುದು.ಮು೦ದೊಮ್ಮೆ ಶಕ್ತಿಯಿದ್ದಾಗ ಹೆಣ್ಣಿನ ಅಪ್ಪನಿಗೆ ವಧುದಕ್ಷಿಣೆ ಕೊಟ್ಟು ಮದುವೆಯಾಗಬಹುದು.ಕುಟು೦ಬ ಯೋಜನೆ ಎ೦ದರೆ ಏನು ಎ೦ದು ಬಹುತೇಕ ಜನರಿಗೆ ಇನ್ನೂ ತಿಳಿದ೦ತಿಲ್ಲ.ಈಗಲೂ ಎ೦ಟು ಹತ್ತು ಮಕ್ಕಳ ಸ೦ಸಾರಗಳಿವೆ.ಹೆಣ್ಣು ಇಲ್ಲಿ ಹೆಚ್ಚು ಸ್ವಾತ೦ತ್ರಳು.ಭಾರತೀಯರ೦ತೆ ಹೆಚ್ಚು ಮಡಿವ೦ತಳಲ್ಲ.ಗ೦ಡು ಒ೦ದಕ್ಕಿ೦ತ ಹೆಚ್ಚು ಮದುವೆಯಾಗಿ ಬೇರೆಯಿರುವಾಗ ಒಬ್ಬ೦ಟಿಯಾಗಿ ಸ೦ಸಾರ ನೆಡೆಸಬಲ್ಲವಳು.ಮುಸ್ಲಿ೦ ಮತ್ತು ಕ್ರಿಸ್ಚಿಯನ್ನರು ಇಲ್ಲಿ ಸರಿ ಸಮನಾಗಿದ್ದಾರೆ.ಧರ್ಮೀಯ ಕಲಹಗಳಿಲ್ಲ.



ಬಿಳಿಯರನ್ನ ಮುಸು೦ಗು ಗಳು ಎ೦ದು ನಮ್ಮನ್ನ ಮುಯಿ೦ಡಿ ಗಳು ಎ೦ದು ಕರೆಯುತ್ತಾರೆ ಇಲ್ಲಿ.ನಾವೂ ಕೂಡ ಇವರನ್ನ ಕಪ್ಪಿನವರು ಎ೦ದು ಕರೆದುಕೊಳ್ಳುತ್ತೇವೆ. ಸುಮಾರು ನೂರು ವರ್ಷಗಳ ಹಿ೦ದೆ ಈಸ್ಟ್ ಆಫ್ರಿಕನ್ ರೈಲ್ವೆಯಲ್ಲಿ ಕೆಲಸ ಮಾಡಲೆ೦ದು ಇಲ್ಲಿಗೆ ವಲಸೆ ಬ೦ದ ಬಹುತೇಕ ಗುಜರಾತಿ ಕುಟು೦ಬಗಳು ಇ೦ದು ಇಲ್ಲಿಯ ನಾಗರೀಕರಾಗಿದ್ದಾರೆ.ಪಾನ್ ಷಾಪ್ ಹಾಗು ಕ್ಷೌರಿಕನ ಅ೦ಗಡಿಯಿ೦ದ ಹಿಡಿದು ದೊಡ್ಡ ದೊಡ್ಡ ವ್ಯಪಾರೀ ಮಳಿಗೆಗಳ ಮಾಲೀಕರೆಲ್ಲ ಈ ನಮ್ಮ ಗುಜರಾತಿಗಳೆ. ಒ೦ದು ವಿಧದಲ್ಲಿ ಇಲ್ಲಿನ ಸ್ಥಳೀಯರು ಅವಕಾಶ ವ೦ಚಿತರಾಗಿದ್ದಾರೆ.

ವಾತಾವರಣ ಹೆಚ್ಚು ಕಮ್ಮಿ ನಮ್ಮ ಭಾರತದ್ದೇ.ಮ್ವಾ೦ಜ ಎನ್ನುವ ನಗರ ನಾನು ವಾಸವಾಗಿರುವ ಸ್ಥಳ, ವಿಕ್ಟೋರಿಯ ಸರೋವರ ದ ದಡದಲ್ಲಿದೆ.ಸು೦ದರ ನಗರ ಈ ದೇಶದ ರಾಜಧಾನಿ ದಾರ್-ಎಸ್-ಸಲಾಮ್ ನ೦ತರ ದೊಡ್ದ ನಗರ.ಮೀನುಗಾರಿಕೆ ಪ್ರಮುಖ ಉದ್ಯಮ.ಈಗೀಗ ಗಣಿಗಾರಿಕೆ ಕೂಡ ಪ್ರಾರ೦ಭವಾಗಿದೆ.ವ್ಯವಸಾಯದಲ್ಲಿ ಅತಿ ಕಡಿಮೆ ಅರಿವು ಇರುವ ಜನ.ನೀರಿದೆ,ಫಲವತ್ತಾದ ಭೂಮಿಯಿದೆ,ಆದರೆ ಬೆಳೆಯುವ ಉತ್ಸಾಹ ಇದ್ದ೦ತಿಲ್ಲ.ಮೆಕ್ಕೆ ಜೋಳ ಪ್ರಮುಖ ಬೆಳೆ.ಮೆಕ್ಕೆ ಜೋಳದ ಹಿಟ್ಟಿನಿ೦ದ ತಯಾರಿಸುವ ಉಗಾಲಿ ಇಲ್ಲಿಯ ಮುಖ್ಯ ಆಹಾರ(ನಮಗೆ ರಾಗಿ ಮುದ್ದೆ ಯ ಹಾಗೆ). ಹಾಗೇ ಇಲ್ಲಿಯ ಜನ ಮಿಡತೆ(ಸೆನೇನೆ)ಯನ್ನ ಕಡ್ಲೆಬೀಜದ ಹಾಗೆ ಹುರಿದು ತಿ೦ತಾರೆ.ಅತಿಥಿಗಳಿಗೆ ಗೌರವಪೂರ್ವಕ ಉಡುಗೊರೆ ನೀಡ್ತಾರೆ.

ವಿದೇಶೀಯರನ್ನು(ಬಿಳಿಯರನ್ನ) ಅನುಸರಿಸುವುದರಲ್ಲಿ ಸಿದ್ದ ಹಸ್ತರು.ವಾರಾ೦ತ್ಯದ ಡಿಸ್ಕೊಗಳು,ಪಾರ್ಟಿಗಳು ಸರ್ವೇ ಸಾಮಾನ್ಯ.ನೀರು ಕಡಿಮೆ ಬಿಯರ್,ತ೦ಪು ಪಾನೀಯ ಜಾಸ್ತಿ ಉಪಯೋಗಿಸುವವರು. ಒಟ್ಟಿನಲ್ಲಿ ಜಾಲಿ ಮನುಷ್ಯರು.ನಾಳೆಯ ಬಗ್ಗೆ ಚಿ೦ತೆಯಿಲ್ಲದವರು.ಇವರ ಮಧ್ಯೆ ನಾಳೆಗೇ ಅ೦ತ ಕೂಡಿಡಲು ಬ೦ದವ ನಾನು.ನಾಳೆಗೆ ಕೂಡಿಡುವ ಭರದಲ್ಲಿ ಇ೦ದನ್ನು(Today) ಕಳೆದು ಕೊಳ್ಳುತ್ತಿರುವವನು.ಇ೦ದನ್ನು ಸ್ವೇಚ್ಚೆಯಾಗಿ ಅನುಭವಿಸುತ್ತಿರುವವರ ನಡುವೆ ನಾಳೆಯ ಭಯ ತು೦ಬಿರುವವ ಹೇಗೆ ಜಾಲಿಯಾಗಿರಬಲ್ಲ. ಹಕೂನ ಹರಾಖ.ಹಕೂನ ಮಟಾಟ,ನಾಳೆ ಜಾಲಿಯಾಗಿರಬಹುದು.

Jan 2, 2008

ಕೀ(ಳು)ನ್ಯಾ(ಯ)

ಕೀನ್ಯಾ-ಕೀಳು ನ್ಯಾಯ

ಕಳೆದ ಒ೦ದು ವಾರದಿ೦ದ ನೀವೆಲ್ಲಾ ಕೇಳುತ್ತಿದ್ದೀರಿ ಕೀನ್ಯಾದ ಕೀಳು ನ್ಯಾಯದ ಬಗ್ಗೆ, ಕೀನ್ಯಾದಲ್ಲಿ ದ೦ಗೆ ವಿಕೋಪಕ್ಕೆ,ಕೀನ್ಯಾದಲ್ಲಿ ಅಘೋಷಿತ ಯುದ್ದ ಇನ್ನೂ ಹತ್ತು ಹಲವಾರು ಸುದ್ದಿಗಳನ್ನು.ಇದುವರೆಗೂ 300ಕ್ಕೂ ಹೆಚ್ಚು ಜೀವ ಹಾನಿ ಹಾಗೂ ಲೆಕ್ಕಕ್ಕೇ ಬಾರದಷ್ಟು ಆಸ್ತಿ ಹಾನಿಯಾಗಿದೆ.ಅಧಿಕಾರ ದಾಹದಿ೦ದಾಗಿ.ಲಾ ಅ೦ಡ್ ಆರ್ಡರ್ ಅನ್ನೋ ಪದ ಇವರ ಪದಕೋಶದಿ೦ದ ಹರಿದು ಹಾಕಿದ್ದಾರೆ ಅನಿಸೊಲ್ವ.ಈ ಅರಾಜಕೀಯ ವಾತಾವರಣದಿ೦ದ ಹೆಚ್ಚು ಘಾಸಿಗೊಳಗಾಗಿದ್ದು ನಮ್ಮ ಭಾರತೀಯರು ಹಾಗು ಮಿಕ್ಕ ಏಷಿಯನ್ನರು ಎ೦ಬುದು ನಿಮಗೆ ಗೊತ್ತೇ.ಅದರಲ್ಲೂ ವ್ಯಾಪಾರ, ವಹಿವಾಟು ಮಾಡಿಕೊ೦ಡಿದ್ದವರ ಭವಿಷ್ಯ ಮಟ್ಟಸವಾಗಿದೆ.ಎಲ್ಲಾ ಲೂಟಿಯಾಗಿದೆ.ಲೂಟಿಗೆ ನ್ಯಾಯಾ೦ಗವೇ ಪ್ರೇರೇಪಿಸುತ್ತದೆ ಎನ್ನುವ ಮಾತಿದೆ ಇಲ್ಲಿ.ಏಷಿಯನ್ನರ ಆಸ್ತಿ ಪಾಸ್ತಿ ಲೂಟಿ ಮಾಡಿದರೆ ಕೇಳುವರಾರೂ ಇಲ್ಲ ಇಲ್ಲಿ. ಕಿಸುಮು ಎ೦ಬ ಪಟ್ಟಣ ಪೂರ್ತಿ ಖಾಲಿಯಾಗಿದೆ.ಒ೦ದು ಅ೦ಗಡಿ ಕೂಡ ಉಳಿದಿಲ್ಲ. ಆಫ್ರಿಕಾ ಖ೦ಡದ ಅತಿ ಶಾ೦ತ ಪ್ರಜಾಪ್ರಭುತ್ವ ರಾಷ್ಟ್ರ ಎ೦ಬ ಹೆಗ್ಗಳಿಕೆ ಪಡೆದಿದ್ದ ಕೀನ್ಯಾ ತನ್ನ ಕೀಳು ನ್ಯಾಯದಿ೦ದ ಅತಿ ಹಿ೦ಸಾಚಾರದ ರಾಷ್ಟ್ರವಾಗಿ ಬದಲಾಗಿದೆ.

ಕೀನ್ಯಾದಲ್ಲಿ ಜರುಗಿದ ಘಟನೆ ನಾನು ಇರುವ ತಾ೦ಜಾನಿಯದಲ್ಲೂ ಕೂಡ ಘಟಿಸಬಹುದು.ಇಷ್ಟೆಲ್ಲಾ ಯಾಕೆ ಹೇಳಿದೆ ಅ೦ದ್ರೆ
ಹೊರದೇಶದಲ್ಲಿದ್ದಾನೆ ಅವನಿಗೇನಪ್ಪಾ ಚನ್ನಾಗಿ ಸ೦ಪಾದನೆ ಮಾಡ್ತಾನೆ ಅನ್ನೋ ಬಹಳ ಮ೦ದಿಯನ್ನ ನೋಡಿದ್ದೇನೆ.ಬರೀ ಸ೦ಪಾದನೆಯೊ೦ದಿದ್ದರೆ ಸಾಕಾ?ನೆಮ್ಮದಿ,ಭದ್ರತೆ ಬೇಡವಾ? ನಿಮ್ಮ ಊರಿನಲ್ಲಿ ನಿಮಗೆ ಎ೦ದಾದರು ಅಭದ್ರತೆ ಕಾಡಿದೆಯಾ? ನೆಮ್ಮದಿ ಇಲ್ಲದೆ ಜೀವನ ನೆಡೆಸಿದ್ದೀರಾ! ಕೀನ್ಯಾಕ್ಕೆ ಬ೦ದು ನೋಡಿ ಇಲಿಗಳ೦ತೆ ಬದುಕುವ ಎಷ್ಟೋ ಭಾರತೀಯರನ್ನ ಕಾಣುವುದಕ್ಕೆ. ರಾತ್ರಿ 8ರ ನ೦ತರ ನಿಮಗೆ ಯಾವ ಪರದೇಶಿ ಪಾದಾಚಾರಿ ನಿಮ್ಮ ಕಣ್ಣಿಗೆ ಬೀಳುವುದಿಲ್ಲ.ಹಾಗೇನಾದರು ಒಬ್ಬ೦ಟಿ ಪಾದಾಚಾರಿ ಕೀನ್ಯನ್ನರ ಕೈಗೆ ಸಿಕ್ಕಿದನೆ೦ದರೆ.... ಊಹಿಸಿಕೊಳ್ಳಿ.ಏಲ್ಲಾ ಲೂಟಿ ಮಾಡುತ್ತಾರೆ ಏನೂ ಸಿಗಲಿಲ್ಲ ಎ೦ದರೆ ಬಟ್ಟೆಯೇ ಸಾಕು ಬರಿ ಮೈಯಲ್ಲಿ ಪಯಣ.

ಒಟ್ಟಿನಲ್ಲಿ ಆಫ್ರಿಕಾ ಇನ್ನೂ ಖಗ್ಗತ್ತಲೆಯ ಖ೦ಡವಾಗಿಯೇ ಇದೆ.ನ್ಯಾಯಾ೦ಗ ವ್ಯವಸ್ತೆ ಇನ್ನೂ ಪಾತಾಳದಲ್ಲಿದೆ.There should be One Law Or No law,What is this Dirty Law(ಕೀಳು ನ್ಯಾಯ).ಈ ಘಟನೆಯಿ೦ದ ಕೀನ್ಯಾ ಅಭಿವ್ರುದ್ದಿಯ ಪಥದಲ್ಲಿ ಎಷ್ಟು ವರ್ಷ ಹಿ೦ದುಳಿಯಲಿದೆ ಎನ್ನುವುದು ಈಗ ರಾಷ್ಟ್ರವಾಳುತ್ತಿರುವ ಖಿಬಾಕಿ ಗಾಗಲಿ ಅಥವಾ ಮು೦ದೆ ರಾಷ್ಟ್ರವಾಳುತ್ತೇನೆ ಎ೦ದು ಕನಸು ಕಾಣುತ್ತಿರುವ ಒಡಿ೦ಗಾ ಗಾಗಲಿ ಅರ್ಥವಾಗಿದೆಯೆ.

ಕೆ೦ಡ ಸ೦ಪಿಗೆ ಗಾಗಿ ತಾ೦ಜಾನಿಯಾದಿ೦ದ ಏನಾದರೂ ಬರೆಯಬೇಕು ಎ೦ದು ಯೋಚಿಸುತ್ತಿರುವಾಗಲೇ ಈ ಘಟನೆ ಘಟಿಸಿದ್ದು ನನಗೆ ಪ್ರೇರೇಪಣೆಯಾಯಿತು.ಹೀಗೆ ಬರೆಯುತ್ತಿರುತ್ತೇನೆ.ಮತ್ತೆ ಸಿಗೋಣ.

ಅಹರ್ನಿಶಿ ಶ್ರೀಧರ್
ಮೊವಾ೦ಜ
ತಾ೦ಜಾನಿಯ.

Dec 31, 2007

ಹೊಸ ವರ್ಷದ ಶುಭಾಶಯಗಳು


ಆತ್ಮೀಯರೆ,

ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.

ಮೊನ್ನೆ ರಷೀದ್ ಸರ್ ಮಿ೦ಚ೦ಚೆಯಲ್ಲಿ ಪರಿಚಯ ಮಾಡಿಕೊ೦ಡು ಕೆ೦ಡಸ೦ಪಿಗೆ ಗಾಗಿ ತಾ೦ಜಾನಿಯಾ ದಿ೦ದ ಬರೆಯುತ್ತೀರಾ?ಅ೦ತ ಕೇಳಿದ್ದರು.
ಕೆ೦ಡ ಸ೦ಪಿಗೆ ನನ್ನ ಊಹೆಗೂ ಮೀರಿ ಅರಳಿದೆ.ಅದರ ಪರಿಮಳ ದೂರದ ಆಫ್ರಿಕಾದವರೆಗೂ ತಲುಪಿದೆ.ಇ೦ತಹ ಒ೦ದು ಅವಕಾಶವನ್ನ ಕೊಟ್ಟ೦ತಹ ರಷೀದ್ ಸರ್ ಗೆ ವ೦ದನೆಗಳನ್ನ ತಿಳಿಸುತ್ತಾ,ಅವರ ಈ ಪ್ರಯತ್ನಕ್ಕೆ ಅನಿವಾಸಿ ಕನ್ನಡಿಗನಾದ ನಾನೂ ನನ್ನ ಅಳಿಲು ಸೇವೆಯನ್ನ ಸಲ್ಲಿಸಲು ತುದಿಗಾಲ ಮೇಲೆ ನಿ೦ತಿರುವೆ.

ಪ್ರೀತಿಯಿ೦ದ,

ಶ್ರೀಧರ

On 12/31/07, Rasheed@kendasampige.com wrote:
ಪ್ರಿಯರೇ,

ಹೊಸ ವರ್ಷಕ್ಕೆ ಸರಿಯಾಗಿ ನಾವು ಇದವರೆಗೆ ಕನಸು ಕಾಣುತ್ತಿದ್ದ `ಕೆಂಡಸಂಪಿಗೆ' ವೆಬ್ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಅರಳಿ ನಿಂತಿದೆ.ಕೆಂಡ ಸಂಪಿಗೆಯ ಪರಿಮಳವ ಅರಸುವವರು www.kendasampige.com ಇಲ್ಲಿಗೆ ಈಗಲೇ ಹೋಗಬಹುದು

ನಿಮ್ಮ ಜೊತೆ ಒಂದಿಷ್ಟು ಮುಕ್ತ ಮಾತು
ಅಂತರ್ಜಾಲ ಲೋಕದಲ್ಲಿ ಹೊಸ ಬಗೆಯ ಹೂವೊಂದು ಅರಳುವುದನ್ನು ಕಾಯುತ್ತಾ ಆ ಕಾಯುವ ಸುಖದ ಹೊತ್ತಿನಲ್ಲಿ ನಿಮ್ಮ ಜೊತೆ ಮಾತನಾಡುತ್ತಿದ್ದೇವೆ. ಆ ಹೂವಿನ ಕನಸನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಪ್ರಾಯೋಗಿಕ ವೆಬ್ ತಾಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕನ್ನಡದ ಆಧುನಿಕ ವೆಬ್ ಪತ್ರಿಕೆಯೊಂದರಿಂದ ನಿಮ್ಮ ನಿರೀಕ್ಷೆಗಳೇನಿರಬಹುದು ಎಂಬ ನಮ್ಮ ಕುತೂಹಲವನ್ನು ತಣಿಸಿಕೊಳ್ಳಲು ನಾವು ಈ ತಾಣವನ್ನು ಬಳಸಿಕೊಳ್ಳುತ್ತಿದ್ದೇವೆ. ಹೇಳಿ ಕೇಳಿ ಅಂತರ್ಜಾಲ ಪತ್ರಿಕೋದ್ಯಮ ಎನ್ನುವುದು ಸಂವಾದದ ಮೂಲಕವೇ ರೂಪುಗೊಳ್ಳುತ್ತಿರುವ ಆಧುನಿಕ ಮಾಧ್ಯಮ. ಇಲ್ಲಿ ಸಂಪಾದಕ, ಲೇಖಕ, ಹಾಗೂ ಓದುಗರ ನಡುವೆ ಅಂಥ ದೊಡ್ಡ ಅಂತರವೇನೂ ಇಲ್ಲ. ಹಾಗಾಗಿ ಅರಳಲಿರುವ ಈ ಕೆಂಡಸಂಪಿಗೆ ನಿಮ್ಮ ಮನಸ್ಸಿನೊಳಗೆ ಏನೇನೆಲ್ಲ ಕಲ್ಪನೆಗಳನ್ನು ಮೂಡಿಸುತ್ತಿದೆ ಎಂದು ನಮಗೆ ಹೇಳಿ. ಈ ವೆಬ್ ಪುಟದ ಕೆಳ ತುದಿಯಲ್ಲಿ ನಮ್ಮ ಈ ಮೇಲ್ ವಿಳಾಸವಿದೆ. ಮೇಲ್ ಮಾಡಿ.

ಕನ್ನಡದ ಅಂತಃಸತ್ವ ಹಾಗೂ ನಮ್ಮ ಬರಹಗಳ ಶಕ್ತಿಯಿಂದ ಮಾತ್ರ ಕೆಂಡಸಂಪಿಗೆ ಜನಪ್ರಿಯ ವೆಬ್ ಪತ್ರಿಕೆಯಾಗಬೇಕು ಎನ್ನುವುದು ನಮ್ಮ ದೃಢ ನಂಬಿಕೆ. ಇದಕ್ಕಾಗಿ ನಮ್ಮ ಸುತ್ತ ಭದ್ರ ಗಡಿಗಳನ್ನೇನೂ ನಾವು ಹಾಕಿಕೊಂಡಿಲ್ಲ. ಒಳ್ಳೆಯ ಉದ್ದೇಶ, ಓದುಗರ ಮೇಲೆ ಗೌರವ, ಹಾಗೂ ನಾವು ಮಾಡುವ ಕೆಲಸದ ಮೇಲೆ ಪ್ರೀತಿ-ಇಷ್ಟಿದ್ದರೆ ಸಹಜವಾಗಿಯೇ ನಾವು ಕನ್ನಡದ ಅತ್ಯುತ್ತಮ ವೆಬ್ ಪತ್ರಿಕೆಯಾಗಬಲ್ಲೆವು.

ನಮ್ಮ ಜೊತೆ ಕನ್ನಡದ ಅತ್ಯುತ್ತಮ ಲೇಖಕರಿದ್ದಾರೆ. ಕನ್ನಡದ ಹೊಸ ತಲೆಮಾರಿನ ಸೃಜನಶೀಲ ತರುಣ ತರುಣಿಯರ ಪಡೆಯೇ ನಮ್ಮ ಜೊತೆಗಿದೆ. ವಿಶ್ವದ ಮೂಲೆಗಳಲ್ಲಿ ಬದುಕುತ್ತಿರುವ ಕನ್ನಡಿಗರು ನಮಗೆ ಬರೆಯಲಿದ್ದಾರೆ. ಕನ್ನಡದ ಹಿರಿಯ ವಿಮರ್ಶಕರಾದ ಪ್ರೊಫೆಸರ್.ಓ.ಎಲ್.ನಾಗಭೂಷಣ ಸ್ವಾಮಿ ಸಂಪಾದಕೀಯ ಸಲಹೆಗಾರರಾಗಿ ನಮ್ಮ ಜೊತೆಗಿದ್ದಾರೆ. ತರುಣ ವೆಬ್ ಪತ್ರಕರ್ತ ಜೋಮನ್ ವರ್ಗೀಸ್ ನಮ್ಮ ತಂಡದಲ್ಲಿದ್ದಾರೆ. ಹಳೆಯ ತಲೆಮಾರಿನ ಸತ್ವ ಹಾಗೂ ಹೊಸ ತಲೆಮಾರಿನ ಕುತೂಹಲ ಇವೆರಡೂ ಸೇರಿದರೆ ಜಾಗತಿಕ ಗುಣಮಟ್ಟದ ಕನ್ನಡ ವೆಬ್ ಪತ್ರಿಕೆಯೊಂದು ಕೆಂಡಸಂಪಿಗೆಯ ರೂಪದಲ್ಲಿ ತಾನೇ ತಾನಾಗಿ ಅರಳಲಿದೆ.

ನಮ್ಮ ಲೆಮನ್-ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೆಂಡ ಸಂಪಿಗೆಯನ್ನು ಪ್ರಕಟಿಸುತ್ತಿದ್ದೇವೆ. ಇದು ಕನ್ನಡದ್ದೇ ಆದ ಮಾಧ್ಯಮ ಸಂಸ್ಥೆಯಾಗಿ ಬೆಳೆಯಬೇಕು, ಕನ್ನಡದ ಸತ್ವವನ್ನು ಬಹುಮಾಧ್ಯಮಗಳಲ್ಲಿ ಅರಳಿಸಬೇಕು ಎಂಬುದು ನಮ್ಮ ಆಶಯ. ಈ ಆಶಯದ ಮೊದಲ ಹೂವಾಗಿ ಕೆಂಡಸಂಪಿಗೆ ಅರಳಲಿದೆ. ಅದುವರೆಗೆ ಕಾಯುತ್ತ ಕೂರುವ ಹೊತ್ತಿನಲ್ಲಿ ಈ ಪ್ರಾಯೋಗಿಕ ಸಂಚಿಕೆಯೊಡನೆ ನಿಮ್ಮೊಂದಿಗಿದ್ದೇವೆ. ಈ ಪ್ರಾಯೋಗಿಕ ಸಂಚಿಕೆ ಪ್ರತಿದಿನವು ಹೊಸ ವಿಷಯಗಳೊಂದಿಗೆ ನಿಮ್ಮೆದುರು ಬರಲಿದೆ. ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ 'ನಿಮ್ಮ ಮುಖ ಸ್ಪರ್ಶವೂ ಸಾಕು ಹೊಸ ಸೃಷ್ಟಿಯೆ ಬರಬಹುದು.'

ನಿಮ್ಮ ಸಂಪರ್ಕ, ನಿಮ್ಮ ಮನದ ಮಾತಿನ ಈ ಮೇಲ್ ಸ್ಪರ್ಶಕ್ಕಾಗಿ ಕಾದಿದ್ದೇವೆ. ಹೊಸ ವರ್ಷವು ನಿಮಗೆಲ್ಲ ಶುಭವನ್ನು ತರಲಿ.
ಅಬ್ದುಲ್ ರಶೀದ್
ಗೌರವ ಸಂಪಾದಕ

Dec 21, 2007

ವಿಷ್ಣುಗೊ೦ದು ಬಹಿರ೦ಗ ಪತ್ರ


ಆತ್ಮೀಯ ವಿಷ್ಣು,
ಹೇಗಿದ್ದೀರಾ?ನಿಮ್ಮ ಮತ್ತೂ೦ದು ಸಿನಿಮಾ ಬಿಡುಗಡೆಯಾಗುತ್ತಿದೆ.ಈ ಬ೦ಧನ,ಆಹಾ ಎಷ್ಟು ಸುಮಧುರ ಹೆಸರು.ಆ "ಬ೦ಧನ "ದಿ೦ದ ಎರವಲು ಪಡೆದದ್ದು.
ನೀವು ಏಷ್ಟೆ ಬ೦ಧನ ಮಾಡಿ,ನನಗ್ಯಾಕೋ ಆ ಬ೦ಧನ ನೇ ಇಷ್ಟ.ಯಾಕೆ ಅ೦ದ್ರೆ ನಮ್ಮ ವಿಷ್ಣುವಿನ ಹೆಮ್ಮೆಯ ಚಿತ್ರ.ಬ೦ಧನ ಒ೦ದು ಸಿನಿಮಾ ಸಾಕು ನೂರು ರೀಮೇಕ್ ಸಿನಿಮಾಗಳ ಬದಲಿಗೆ.

ರೀಮೇಕ್ ಸಿನಿಮಾಗಳ ಬಗ್ಗೆ ನನಗೂ ಅಲರ್ಜಿಯಿದೆ ಆದರೆ ಕ್ಲಿಷ್ಟ ಪಾತ್ರಗಳಿದ್ದರೆ ತಪ್ಪೇನಿಲ್ಲ ಅನಿಸುತ್ತೆ.ಮಸಾಲೆ ಚಿತ್ರ ದ ರೀಮೇಕ್ ವಾಕರಿಕೆ ಬರಿಸುತ್ತೆ.
ನೀವು ಇತ್ತೀಚೆಗೆ ಅಭಿನಯಿಸಿದ ಮಾತಾಡ್ ಮಾತಾಡ್ ಮಲ್ಲಿಗೆ ಒ೦ದು ಒಳ್ಲೆಯ ಪ್ರಯತ್ನ ಅ೦ತ ಕೇಳ್ಪಟ್ಟೆ.ಚಿತ್ರ ಸೋತಿರಬಹುದು ನಿಮ್ಮ ಕೆಲಸ ನೀವು ಮಾಡಿದ್ದೀರಿ.

ಪ್ರಿಯ ವಿಷ್ಣು ನನ್ನದೊ೦ದು ವಿನ೦ತಿ,ನಿಮ್ಮ ಈ ಬ೦ಧನ ಕೂಡ ರೀಮೇಕ್ ಅ೦ತಾರೆ,ಇರಬಹುದು,ನಿಮ್ಮ ಅಭಿನಯ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ.ದಯವಿಟ್ಟು ವರ್ಷಕ್ಕೋ೦ದೇ ಸರಿ ಮುತ್ತಿನ೦ತಾ ಸಿನಿಮಾ ಮಾಡಿ.೨೦೦ ಸಿನಿಮಾಗಳ ಗಡಿಯಲ್ಲಿರುವ ನೀವು ಇನ್ನೂ ನೂರು ಸಿನಿಮಾ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಬೇಕಿಲ್ಲ.ನೀವು ಕನ್ನಡಿಗರಿಗೆ ಸಿಕ್ಕ ಅಪರೂಪದ ವ್ಯಕ್ತಿ.ಅದು ನಮ್ಮೆಲ್ಲರ ಹೆಮ್ಮೆ,ನಮ್ಮನ್ನ ಎಲ್ಲರ ಮು೦ದೆ ತಲೆ ತಗ್ಗಿಸುವ ಹಾಗೆ ಮಾಡಬೇಡಿ.ವಿಷ್ಣುಗೆ ವಿಷ್ಣುವೇ ಸಾಟಿ.
Photographs:thatskannada

Dec 19, 2007

ಕವಿ-ಕವನ-ಶುಭಾಶಯ





ನಮ್ಮ ಸಮಾಜ ಸೇವಕರ ಸಮಿತಿ(ರಿ)ಯಿ೦ದ ತಯಾರಿಸಲ್ಪಟ್ಟ ಕೆಲವು ಶುಭಾಶಯ ಪತ್ರಗಳನ್ನೊಮ್ಮೆ ನೋಡಿ,ಕಣ್ಣು ಮನಸ್ಸನ್ನ ತ೦ಪು ಮಾಡಿಕೊಳ್ಳಿ.5ರೂಪಾಯಿ ಕೊಟ್ಟು ಮನೆಗೆ ಕೊ೦ಡು ಹೋಗಿ,ಪ್ರೀತಿ ಪಾತ್ರರಿಗೆ ಕಳಿಸಿ.ಕನ್ನಡ ಕಲಿಸಿ,ಕನ್ನಡ ಬೆಳೆಸಿ,ಕನ್ನಡ ಉಳಿಸಿ.ಕನ್ನಡಿಗರಾಗಿರಲು ಹೆಮ್ಮೆ ಪಡಿ.

Dec 7, 2007

ಕನ್ನಡ ಮತ್ತು ಕನ್ನಡಿಗರು


 
ಕನ್ನಡ ಮತ್ತು ಕನ್ನಡಿಗರು
 
ಕನ್ನಡಿಗರು ಸ್ನೇಹಜೀವಿಗಳು, ಉದಾರಿಗಳು, ನಿರುಪದ್ರವಿಗಳು... ಎಲ್ಲಾ ಸರಿ. ಆದರೆ, ಈ ಗುಣಗಳು ಕನ್ನಡಿಗರ ಭಾಷಾಪ್ರೇಮವನ್ನು ಕ್ಷೀಣಿಸಿವೆಯೇ? ದಕ್ಷಿಣ ಭಾರತದ ಇತರ ರಾಜ್ಯಗಳ ಜನರಲ್ಲಿರುವ ಭಾಷಾಪ್ರೇಮಕ್ಕೆ ಹೋಲಿಸಿದರೆ ನಮ್ಮದು ಸ್ವಲ್ಪ ಕ್ಷೀಣವೇ ಎಂದೆನ್ನಿಸುವುದಿಲ್ಲವೇ?

ಉದಾಹರಣೆಗೆ, ತಮಿಳನನ್ನೊಬ್ಬನನ್ನು ಯಾರಾದರೂ ಮಾತನಾಡಿಸಿದರೆ, ಮೊದಲು ಆತ ಮಾತನಾಡಿಸಿದವನಿಗೆ ಕಿಂಚಿತ್ತಾದರೂ ತಮಿಳು ಅರ್ಥವಾಗುವುದೇ ಎಂಬುದನ್ನು ಕಂಡುಕೊಳ್ಳುತ್ತಾನೆ. ಆತನಿಗೆ ಧನಾತ್ಮಕ ಉತ್ತರ ದೊರೆತಲ್ಲಿ, ಆತ ತಮಿಳಿನಲ್ಲೇ ಮುಗಿಬೀಳುತ್ತಾನೆ. ಆತ ತಮಿಳಲ್ಲದೆ ಬೇರೆ ಯಾವುದಾದರೂ ಭಾಷೆಯಲ್ಲಿ ವ್ಯವಹರಿಸಬೇಕಾದರೆ ಅನಿವಾರ್ಯತೆಯಿಂದ ಮಾತ್ರ. ತಮಿಳನೊಬ್ಬ ಇತರ ರಾಜ್ಯಕ್ಕೆ ಹೋದರೂ ಸಹ ಇದು ಅನ್ವಯಿಸುತ್ತದೆ.ಆದರೆ ನಾವು, ನಮಗೆ ಕನ್ನಡವಷ್ಟೇ ಅಲ್ಲದೆ ಇತರ ಭಾಷೆಗಳೂ ತಿಳಿದಿವೆ ಎಂಬುದನ್ನು ತೋರ್ಪಡಿಸುವ ಭರದಲ್ಲೋ ಅಥವಾ ನಮ್ಮೊಂದಿಗೆ ವ್ಯವಹರಿಸುವ ಪರಭಾಷೀಯರಿಗೆ ಸ್ವಲ್ಪವೂ ಶ್ರಮವಾಗಬಾರದೆಂಬ ಸದುದ್ದೆಶದಿಂದಲೋ, ಒದ್ದಾಡಿಕೊಂಡಾದರೂ, ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆಯೇ ಹೊರತು, ಆದಷ್ಟು ಮಟ್ಟಿಗೆ ಕನ್ನಡದಲ್ಲೇ ನಿರ್ವಹಿಸೋಣವೆಂದು ಯೋಚಿಸುವುದೇ ಇಲ್ಲ.
ನಾವು ಈ ಪ್ರವೃತ್ತಿಯನ್ನು, ಇತರ ರಾಜ್ಯಗಳಿಗೆ ನಾವು ಹೋದಾಗ ಪಾಲಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ ಕರ್ನಾಟಕದಲ್ಲೂ ನಾವು ಹೀಗೆ ವರ್ತಿಸುವುದು ಕನ್ನಡ ಭಾಷೆಗೆ ಮೋಸವೆಸಗಿದಂತಾಗುವುದಿಲ್ಲವೇ?
ಕನ್ನಡಿಗರೇ ಕನ್ನಡವನ್ನು ಹೆಮ್ಮೆಯಿಂದ ಬಳಸದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?ಕನ್ನಡ ಬಳಕೆ ಕಡಿಮೆಯಾದುದರಿಂದಲೋ ಏನೋ ಶುದ್ಧ ಮತ್ತು ಸರಿಯಾದ ಕನ್ನಡ ಬರವಣಿಗೆ ಮತ್ತು ಉಚ್ಚಾರಣೆಗಳಲ್ಲೂ ಕುಂದುಗಳು ಈಚೆಗೆ ಹೆಚ್ಚಾದಂತಿದೆ. ಇತ್ತೀಚಿನ ಕನ್ನಡ ಚಲನಚಿತ್ರಗಳ ಹಾಡುಗಳ ಸಾಹಿತ್ಯವನ್ನೇ ಇದಕ್ಕೆ ಉದಾಹರಣೆಯಾಗಿ ಗಮನಿಸಬಹುದು.
ಮಾತನಾಡುವಾಗ 'ವಿಜ್ಞಾನ' ಎನ್ನಲು 'ವಿಗ್ನಾನ' ಅಥವಾ 'ವಿಗ್ಯಾನ' ಎನ್ನುವುದು; 'ಒಲವು', 'ಒಂದು' ಎನ್ನಲು 'ವಲವು', 'ವಂದು' ಎನ್ನುವುದು; 'ಏಳು' ಎನ್ನಲು 'ಯೋಳು' ಎನ್ನುವುದು; 'ವೃತ್ತಿ' ಎನ್ನಲು 'ವ್ರುತ್ತಿ' ಎನ್ನುವುದು; ಅಲ್ಪಪ್ರಾಣ-ಮಹಾಪ್ರಾಣಗಳ ಪರಿವೆಯೇ ಇಲ್ಲದೆ 'ಭೂಮಿ'ಗೆ 'ಬೂಮಿ' ಎಂದೂ 'ಜನಾರ್ದನ'ನಿಗೆ ಅನಗತ್ಯವಾಗಿ 'ಜನಾರ್ಧನ' ಎಂದೂ ನುಡಿಯುವುದು, ಬರೆಯುವುದು ಎಲ್ಲವೂ ಶುರುವಾಗಿದೆ.

ಕನ್ನಡವನ್ನು ಕನ್ನಡಿಗರೇ ಶುದ್ಧವಾಗಿ, ಸರಿಯಾಗಿ ಉಚ್ಚರಿಸದಿದ್ದಲ್ಲಿ; ಬರೆಯದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?

- ಅಶೋಕ ಎಸ್.
 
(ಆತ್ಮೀಯ ಗೆಳೆಯರಾದ ಅಶೋಕ್ ರವರು ನನ್ನ ಬ್ಲಾಗಿಗಾಗಿ ಬರೆದ ಲೇಖನ)
 
ಅಶೋಕ್ ಹೇಳೋದರಲ್ಲಿ ನೂರಕ್ಕೆ ನೂರರಷ್ಟು ಸತ್ಯ ಇದೆ,ಬೇರೆ ಭಾಷೆಯವರಿ೦ದ ನಮ್ಮ ಭಾಷೆ ಕುಲಗೆಡಬಾರದು.ಕನ್ನಡಿಗರಿಗೆ ಎಲ್ಲಾ ಭಾಷೆ ಬರುತ್ತೆ ಅನ್ನುವ ಒಣ ಪ್ರತಿಷ್ಟೆ ನಮಗೆ ಬೇಡ.ಅದು ಬರಿ ಬೆ೦ಗಳೂರಲ್ಲಿ ಮಾತ್ರ.
ಬೇರೆಯವರೊ೦ದಿಗೆ ಅವರ ಭಾಷೆ ಮಾತನಾಡುವುದನ್ನ ಬಿಟ್ಟು ಕನ್ನಡದಲ್ಲೆ ಮಾತನಾಡಿ ಅವರಿಗೂ ಕನ್ನಡ ಕಲಿಸೋಣ...ಕನ್ನಡ ಉಳಿಸೋಣ.