ಹೊಸ ವರ್ಷದ ಶುಭಾಶಯಗಳು
ಆತ್ಮೀಯರೆ,
ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.
ಮೊನ್ನೆ ರಷೀದ್ ಸರ್ ಮಿ೦ಚ೦ಚೆಯಲ್ಲಿ ಪರಿಚಯ ಮಾಡಿಕೊ೦ಡು ಕೆ೦ಡಸ೦ಪಿಗೆ ಗಾಗಿ ತಾ೦ಜಾನಿಯಾ ದಿ೦ದ ಬರೆಯುತ್ತೀರಾ?ಅ೦ತ ಕೇಳಿದ್ದರು.
ಕೆ೦ಡ ಸ೦ಪಿಗೆ ನನ್ನ ಊಹೆಗೂ ಮೀರಿ ಅರಳಿದೆ.ಅದರ ಪರಿಮಳ ದೂರದ ಆಫ್ರಿಕಾದವರೆಗೂ ತಲುಪಿದೆ.ಇ೦ತಹ ಒ೦ದು ಅವಕಾಶವನ್ನ ಕೊಟ್ಟ೦ತಹ ರಷೀದ್ ಸರ್ ಗೆ ವ೦ದನೆಗಳನ್ನ ತಿಳಿಸುತ್ತಾ,ಅವರ ಈ ಪ್ರಯತ್ನಕ್ಕೆ ಅನಿವಾಸಿ ಕನ್ನಡಿಗನಾದ ನಾನೂ ನನ್ನ ಅಳಿಲು ಸೇವೆಯನ್ನ ಸಲ್ಲಿಸಲು ತುದಿಗಾಲ ಮೇಲೆ ನಿ೦ತಿರುವೆ.
ಪ್ರೀತಿಯಿ೦ದ,
ಶ್ರೀಧರ
On 12/31/07, Rasheed@kendasampige.com
ಪ್ರಿಯರೇ,
ಹೊಸ ವರ್ಷಕ್ಕೆ ಸರಿಯಾಗಿ ನಾವು ಇದವರೆಗೆ ಕನಸು ಕಾಣುತ್ತಿದ್ದ `ಕೆಂಡಸಂಪಿಗೆ' ವೆಬ್ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಅರಳಿ ನಿಂತಿದೆ.ಕೆಂಡ ಸಂಪಿಗೆಯ ಪರಿಮಳವ ಅರಸುವವರು www.kendasampige.com ಇಲ್ಲಿಗೆ ಈಗಲೇ ಹೋಗಬಹುದು
ನಿಮ್ಮ ಜೊತೆ ಒಂದಿಷ್ಟು ಮುಕ್ತ ಮಾತು
ಅಂತರ್ಜಾಲ ಲೋಕದಲ್ಲಿ ಹೊಸ ಬಗೆಯ ಹೂವೊಂದು ಅರಳುವುದನ್ನು ಕಾಯುತ್ತಾ ಆ ಕಾಯುವ ಸುಖದ ಹೊತ್ತಿನಲ್ಲಿ ನಿಮ್ಮ ಜೊತೆ ಮಾತನಾಡುತ್ತಿದ್ದೇವೆ. ಆ ಹೂವಿನ ಕನಸನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಪ್ರಾಯೋಗಿಕ ವೆಬ್ ತಾಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕನ್ನಡದ ಆಧುನಿಕ ವೆಬ್ ಪತ್ರಿಕೆಯೊಂದರಿಂದ ನಿಮ್ಮ ನಿರೀಕ್ಷೆಗಳೇನಿರಬಹುದು ಎಂಬ ನಮ್ಮ ಕುತೂಹಲವನ್ನು ತಣಿಸಿಕೊಳ್ಳಲು ನಾವು ಈ ತಾಣವನ್ನು ಬಳಸಿಕೊಳ್ಳುತ್ತಿದ್ದೇವೆ. ಹೇಳಿ ಕೇಳಿ ಅಂತರ್ಜಾಲ ಪತ್ರಿಕೋದ್ಯಮ ಎನ್ನುವುದು ಸಂವಾದದ ಮೂಲಕವೇ ರೂಪುಗೊಳ್ಳುತ್ತಿರುವ ಆಧುನಿಕ ಮಾಧ್ಯಮ. ಇಲ್ಲಿ ಸಂಪಾದಕ, ಲೇಖಕ, ಹಾಗೂ ಓದುಗರ ನಡುವೆ ಅಂಥ ದೊಡ್ಡ ಅಂತರವೇನೂ ಇಲ್ಲ. ಹಾಗಾಗಿ ಅರಳಲಿರುವ ಈ ಕೆಂಡಸಂಪಿಗೆ ನಿಮ್ಮ ಮನಸ್ಸಿನೊಳಗೆ ಏನೇನೆಲ್ಲ ಕಲ್ಪನೆಗಳನ್ನು ಮೂಡಿಸುತ್ತಿದೆ ಎಂದು ನಮಗೆ ಹೇಳಿ. ಈ ವೆಬ್ ಪುಟದ ಕೆಳ ತುದಿಯಲ್ಲಿ ನಮ್ಮ ಈ ಮೇಲ್ ವಿಳಾಸವಿದೆ. ಮೇಲ್ ಮಾಡಿ.
ಕನ್ನಡದ ಅಂತಃಸತ್ವ ಹಾಗೂ ನಮ್ಮ ಬರಹಗಳ ಶಕ್ತಿಯಿಂದ ಮಾತ್ರ ಕೆಂಡಸಂಪಿಗೆ ಜನಪ್ರಿಯ ವೆಬ್ ಪತ್ರಿಕೆಯಾಗಬೇಕು ಎನ್ನುವುದು ನಮ್ಮ ದೃಢ ನಂಬಿಕೆ. ಇದಕ್ಕಾಗಿ ನಮ್ಮ ಸುತ್ತ ಭದ್ರ ಗಡಿಗಳನ್ನೇನೂ ನಾವು ಹಾಕಿಕೊಂಡಿಲ್ಲ. ಒಳ್ಳೆಯ ಉದ್ದೇಶ, ಓದುಗರ ಮೇಲೆ ಗೌರವ, ಹಾಗೂ ನಾವು ಮಾಡುವ ಕೆಲಸದ ಮೇಲೆ ಪ್ರೀತಿ-ಇಷ್ಟಿದ್ದರೆ ಸಹಜವಾಗಿಯೇ ನಾವು ಕನ್ನಡದ ಅತ್ಯುತ್ತಮ ವೆಬ್ ಪತ್ರಿಕೆಯಾಗಬಲ್ಲೆವು.
ನಮ್ಮ ಜೊತೆ ಕನ್ನಡದ ಅತ್ಯುತ್ತಮ ಲೇಖಕರಿದ್ದಾರೆ. ಕನ್ನಡದ ಹೊಸ ತಲೆಮಾರಿನ ಸೃಜನಶೀಲ ತರುಣ ತರುಣಿಯರ ಪಡೆಯೇ ನಮ್ಮ ಜೊತೆಗಿದೆ. ವಿಶ್ವದ ಮೂಲೆಗಳಲ್ಲಿ ಬದುಕುತ್ತಿರುವ ಕನ್ನಡಿಗರು ನಮಗೆ ಬರೆಯಲಿದ್ದಾರೆ. ಕನ್ನಡದ ಹಿರಿಯ ವಿಮರ್ಶಕರಾದ ಪ್ರೊಫೆಸರ್.ಓ.ಎಲ್.ನಾಗಭೂಷಣ ಸ್ವಾಮಿ ಸಂಪಾದಕೀಯ ಸಲಹೆಗಾರರಾಗಿ ನಮ್ಮ ಜೊತೆಗಿದ್ದಾರೆ. ತರುಣ ವೆಬ್ ಪತ್ರಕರ್ತ ಜೋಮನ್ ವರ್ಗೀಸ್ ನಮ್ಮ ತಂಡದಲ್ಲಿದ್ದಾರೆ. ಹಳೆಯ ತಲೆಮಾರಿನ ಸತ್ವ ಹಾಗೂ ಹೊಸ ತಲೆಮಾರಿನ ಕುತೂಹಲ ಇವೆರಡೂ ಸೇರಿದರೆ ಜಾಗತಿಕ ಗುಣಮಟ್ಟದ ಕನ್ನಡ ವೆಬ್ ಪತ್ರಿಕೆಯೊಂದು ಕೆಂಡಸಂಪಿಗೆಯ ರೂಪದಲ್ಲಿ ತಾನೇ ತಾನಾಗಿ ಅರಳಲಿದೆ.
ನಮ್ಮ ಲೆಮನ್-ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೆಂಡ ಸಂಪಿಗೆಯನ್ನು ಪ್ರಕಟಿಸುತ್ತಿದ್ದೇವೆ. ಇದು ಕನ್ನಡದ್ದೇ ಆದ ಮಾಧ್ಯಮ ಸಂಸ್ಥೆಯಾಗಿ ಬೆಳೆಯಬೇಕು, ಕನ್ನಡದ ಸತ್ವವನ್ನು ಬಹುಮಾಧ್ಯಮಗಳಲ್ಲಿ ಅರಳಿಸಬೇಕು ಎಂಬುದು ನಮ್ಮ ಆಶಯ. ಈ ಆಶಯದ ಮೊದಲ ಹೂವಾಗಿ ಕೆಂಡಸಂಪಿಗೆ ಅರಳಲಿದೆ. ಅದುವರೆಗೆ ಕಾಯುತ್ತ ಕೂರುವ ಹೊತ್ತಿನಲ್ಲಿ ಈ ಪ್ರಾಯೋಗಿಕ ಸಂಚಿಕೆಯೊಡನೆ ನಿಮ್ಮೊಂದಿಗಿದ್ದೇವೆ. ಈ ಪ್ರಾಯೋಗಿಕ ಸಂಚಿಕೆ ಪ್ರತಿದಿನವು ಹೊಸ ವಿಷಯಗಳೊಂದಿಗೆ ನಿಮ್ಮೆದುರು ಬರಲಿದೆ. ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ 'ನಿಮ್ಮ ಮುಖ ಸ್ಪರ್ಶವೂ ಸಾಕು ಹೊಸ ಸೃಷ್ಟಿಯೆ ಬರಬಹುದು.'
ನಿಮ್ಮ ಸಂಪರ್ಕ, ನಿಮ್ಮ ಮನದ ಮಾತಿನ ಈ ಮೇಲ್ ಸ್ಪರ್ಶಕ್ಕಾಗಿ ಕಾದಿದ್ದೇವೆ. ಹೊಸ ವರ್ಷವು ನಿಮಗೆಲ್ಲ ಶುಭವನ್ನು ತರಲಿ.
ಅಬ್ದುಲ್ ರಶೀದ್
ಗೌರವ ಸಂಪಾದಕ