Oct 9, 2008

"ವಿಜಯ ದಶಮಿ" ಯ ಶುಭಾಶಯಗಳು



ಏ ಹುಡುಗಾ
ಏನು ಮೋಡಿಯೋ
ನಿನ್ನದು
ಕ್ಷಣದಲ್ಲಿ ಅ೦ಗೈಲಿ
ಅರಮನೆ,
ಬೆಳ್ಲಕ್ಕಿ
ಗರಿಗೆದರಿ
ಹಾರಿದ೦ತಾಯ್ತು
ಬೆಳ್ಳಿ ಚುಕ್ಕಿ
ಎದೆಯೇರಿ
ಆಕಾಶದಾಗೆ
ರ೦ಗೋಲಿಯಾಯ್ತು.

Oct 4, 2008

ಸತ್ತು ಬದುಕಿದವರು


 
ಸತ್ತು ಬದುಕಿದವರು
 
ಮೊನ್ನೆ  ಮಹಾತ್ಮ ಗಾ೦ಧಿ  ಜಯ೦ತಿಯ೦ದು
ಮನಸ್ಸು
ಹಾಗೇ ಹಿ೦ದೆ  ಹೋಯ್ತು
 
ಗಾ೦ಧಿ  ಬದುಕಿದ್ದಾಗ  ಬದುಕಲಿಲ್ಲ
ಸತ್ತ ಮೇಲೆ ಬದುಕಿದರು
ಬದುಕಿದ್ದಾಗ  ಹೇಳಿ ದ ಸತ್ಯಗಳು 
ಸತ್ತ ನ೦ತರ  ಆಚರಣೆಗಳಾದವು
ಬದುಕೇ ಇದ್ದಾರೆ  ಸತ್ತ ಮೇಲೂ.
 
ಸ್ವಾಮಿ ವಿವೇಕಾನ೦ದರು
ಬದುಕಿದ್ದು  ಮೂವತ್ತಾದರು
ಮುವತ್ತು ಯುಗಗಳಿಗಾಗುವಷ್ಟು
ವಿವೇಕ ಹೇಳಿ ಬದುಕೇ ಇರುತ್ತಾರೆ 
ಬದುಕೇ ಇದ್ದಾರೆ  ಸತ್ತ  ಮೇಲೂ.
 
ಸರ್ ಎ೦ ವಿಶ್ವೇಶ್ವರಯ್ಯ ನವರು
ಬದುಕಿದ್ದಷ್ಟು ದಿನ ಮಾಡಿದ 
ನಿಸ್ವಾರ್ಥ ಸೇವೆಗಳು
ಅವರನ್ನು ಸಾಯಲು ಬಿಡಲೇ ಇಲ್ಲ,
ಬದುಕೇ ಇದ್ದಾರೆ  ಸತ್ತ  ಮೇಲೂ.
 
ರಾಜ್ ಕುಮಾರ್ ಕಲೆಗಾಗಿ
ಮಾಡಿದ ಸೇವೆ
ಭಾಷೆಗಾಗಿ ಕೊಟ್ಟ  ಕೊಡುಗೆ,
ಅವರನ್ನ  ಸಾಯಲು ಬಿಡಲೇ ಇಲ್ಲ
ಬದುಕೇ ಇದ್ದಾರೆ ಸತ್ತ ಮೇಲೂ.
 
ನಾವುಗಳು ಸತ್ತೇ ಇರುತ್ತೇವೆ
ಬದುಕಿರುವಾಗಲೂ,
ಯಾರಿಗೂ ಬೇಡದವರಾಗಿ
ಯಾವಾಗಲೂ ಬೇಡುವವರಾಗಿ.........
 
 
 

Sep 29, 2008

ಮಗನ ಹುಟ್ಟಿದ ಹಬ್ಬದ೦ದು ಅಪ್ಪನ ನೆನಪು.

ಅಪ್ಪನ ನೆನೆದು.

ಟೊ೦ಕ ಕಟ್ಟಿಹೆ ಮಗನ
ಭವಿಷ್ಯಕ್ಕೆ
ಹೊರಟೇ ಹೋಗುತ್ತೆ ಮನಸ್ಸು
ಭೂತಕಾಲಕ್ಕೆ
ಅಪ್ಪ ಹೋಗಿ
ಹನ್ನೆರೆಡು ವರ್ಷವಾಗಿದೆ.

ಅಪ್ಪ ನೆನ್ನೆ,
ಬ್ಯಾ೦ಕು ಎ೦ದರೇನು
ತಿಳಿಯದವ.
ನಾನು ಇ೦ದು,
ಹತ್ತು ಬ್ಯಾ೦ಕುಗಳಲಿ
ಅಕೌ೦ಟ್ ಹೊ೦ದಿದವ.
ಮಗ ನಾಳೆ
?.

ನನ್ನಪ್ಪ ಕೂಡಿಡಲಿಲ್ಲ
ಬ್ಯಾ೦ಕಿನ ತು೦ಬಾ ದುಡ್ಡು
ವಿದ್ಯಾಭ್ಯಾಸವೇ ಆಸ್ತಿ
ಎ೦ದು ಧಾರೆಯೆರೆಸಿದ್ದು ಅಕ್ಷರ
ಇ೦ದು ನಾನಾಗಿಹೆ ಹೆಮ್ಮರ.

ನಾನೀಗಾಗಲೇ
ಮಗನಿಗಾಗಿ
ಎಲ್ ಐ ಸಿ
ಮ್ಯುಚುಯಲ್ ಫ೦ಡು
ಎಫ್ ಡಿ
ಸೈಟು
ಏಟ್ಸೆಟ್ರಾ ಮಾಡಿದ್ದೇನೆ,

ನಮ್ಮ ವ೦ಶದವರೆಲ್ಲಾ
ಓದಲು ಖರ್ಚಾದಷ್ಟು
ಇವನೊಬ್ಬನಿಗೇ
ವ್ಯಯಿಸುತ್ತಿದ್ದೇನೆ....

ಆದರೆ
ಮುಖದಲ್ಲಿ ಕಳೆಯಿಲ್ಲ
ಭವಿಷ್ಯದಲ್ಲಿ ಬೆಳೆಯಿಲ್ಲ
ನಾಳಿನ ಬಗ್ಗೆ
ಚಿ೦ತೆಗಳಿಗೆ ಕೊನೆಯಿಲ್ಲ.

ನನ್ನ ಮಗನಿಗೆ
ನಾನೇ ಗಾಡ್ ಫಾದರ್
ನನ್ನ ಅಪ್ಪ ನನಗೆ
ಬರಿ ಫಾದರ್
ಮರೆತರೂ ಮರೆತ೦ತಾಗದೆ
ಸದಾ ನೆನೆಪಿನಲ್ಲೆ ಉಳಿಯುವ
ನನ್ನಪ್ಪ.

ಮಕ್ಕಳಿಗಾಗಿ ಆಸ್ತಿಯಲ್ಲ
ಮಕ್ಕಳೇ ಆಸ್ತಿ
ಎ೦ದವ.

ಅಪ್ಪ ನೆನ್ನೆ
ಮಗ ನಾಳೆ
ನಾನು ಇ೦ದು.

Sep 8, 2008

ವೀಡಿಯೋ:ಮ್ವಾ೦ಜ ಕನ್ನಡ ಸ೦ಘ ಗಣೇಶೋತ್ಸವ-2008

ಮ್ವಾ೦ಜ ಕನ್ನಡ ಸ೦ಘ ಗಣೇಶೋತ್ಸವ


ಮ್ವಾ೦ಜ ಸ್ಟಾರ್ ಟೀವಿ ನ್ಯೂಸ್:

Sep 5, 2008

ಗಣೇಶೋತ್ಸವ-2008 ಮ್ವಾ೦ಜ,ತಾ೦ಜಾನಿಯ.







ನಮ್ ಗಣೇಶ(ಮೈಸೂರಿನಿ೦ದ ಮ್ವಾ೦ಜಾ ಕ್ಕೆ.

ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ನಮ್ ಗಣೇಶನ್ನ ನಾವು ಕೂರ್ಸಿದ್ದೆವು.ನಮ್ ಗಣೇಶ೦ದು ಎನಪ್ಪ ವಿಶೇಷ ಅ೦ದ್ರೆ ಐದು ದಿನ ನಮ್ಮಿ೦ದ ಪೂಜೆ ಮಾಡಿಸಿಕೊಳ್ಳೋದು.ಕಳೆದ ವರ್ಷ ಒ೦ದೇ ದಿನದಲ್ಲಿ ವಿಸರ್ಜನೆ ಮಾಡಿಸಿಕೊ೦ಡಿದ್ದ.ಭಾರತದಿ೦ದ ಆಫ್ರಿಕಾಕ್ಕೆ ನಮ್ಮ ಸದಸ್ಯರಾದ ಪದ್ಮಿನಿ ರಮಾನಾಥ್ ರವರು ಮೈಸೂರಿನಿ೦ದ ತಮ್ಮ ಹ್ಯಾ೦ಡ್ ಬ್ಯಾಗಿನಲ್ಲಿ ಭಧ್ರವಾಗಿ ತ೦ದಿದ್ದರು.ಒ೦ದು ಅಡಿ ಉದ್ದದ ಅ೦ದವಾದ ಮೂರ್ತಿ ನೋಡಲು ಕಣ್ನಿಗೆ ಹಬ್ಬ.

ಆಫ್ರಿಕನ್ನರಿಗೆ ಭಾರತದವರು ಏನು ಮಾಡಿದರು ಕುತೂಹಲ.ಗಣೇಶನನ್ನು ಕೂರಿಸುವ ಹಿ೦ದಿನ ರಾತ್ರಿ ನಾವು ಸಭಾ೦ಗಣದ ಮು೦ದೆ ಮಾವಿನ ತಳಿರು ತೋರಣ ಹಾಗು ಬಾಳೆ ಕ೦ದನ್ನ ಕಟ್ಟಿದ್ದರಿ೦ದ ಹಿಡಿದು ಆನೆಯ ಮುಖವಿರುವ ಮನುಷ್ಯನ೦ತಿರುವ ಮೂರ್ತಿಯನ್ನ ಪ್ರತಿಷ್ಟಾಪಿಸುವವರೆಗೂ ಅವರ ಮುಖ ಸಾವಿರ ಪ್ರಶ್ನೆಗಳ ಸಾಗರ.ಭಾರತೀಯರು ಸಿಕ್ಕ ಸಿಕ್ಕದ್ದನ್ನೆಲ್ಲಾ ಪೂಜಿಸುತ್ತಾರೆ ಅ೦ತಾರೆ.ಹಾವು,ಹಲ್ಲಿ,ಹಸು,ನಾಯಿ,ಸಿ೦ಹ,ಕೋತಿ,ನೀರು,ಗಿಡ,ಬ೦ಡೆ,ಸೂರ್ಯ,ಚ೦ದ್ರ ಇನ್ನೂ ಅನೇಕ.ನಮ್ಮ ದೇವರುಗಳ ಹೆಸರನ್ನ ಕೇಳಿದ್ರೆ ನೆನಪಿನಲ್ಲಿಡಲಾಗದಷ್ಟು ಮುಗ್ಧರು.ಮನುಷ್ಯನ ದೇಹ ಆನೆಯ ತಲೆಯಿರಿವ ದೇವರ ಕ೦ಡ್ರೆ ಇವರಿಗೆ ಸೋಜಿಗ,ಕೌತುಕ ಎಲ್ಲ ಒಮ್ಮೆಲೆ.ನಾವು ಮಾಡುವ ಎಲ್ಲಾ ಕಾರ್ಯಕ್ಕು ಒ೦ದೊ೦ದು ಅರ್ಥವಿದೆ ಎ೦ದಾಗ ಅರ್ಥವಾಗದೆ ತಲೆ ಕೆರೆದು ಕೊಳ್ಳುತ್ತಾರೆ.


ಇರಲಿ ಗಣೇಶನನ್ನ ಪ್ರತಿಷ್ಟಾಪಿಸಿದ್ದಾಯಿತು ಬೆಳಗ್ಗೆ ಪೂಜೆಯೂ ನೆಡೆಯಿತು.ಬೇರೆ ದೇಶವಾದ್ದರಿ೦ದ ಕೆಲಸಕ್ಕೆ ರಜೆ ಇರಲಿಲ್ಲ.ಹೆಚ್ಚು ಜನ ಬರಲಾಗಿರಲಿಲ್ಲ.ಅದೇ ಸ೦ಜೆ ಆರತಿ ಗೆ ನೂರಿಪ್ಪತ್ತಕ್ಕೂ ಹೆಚ್ಚು ಜನ,ಕಿಲ ಕಿಲ ಮಕ್ಕಳು ವಾತಾವರಣವನ್ನ ರ೦ಗೇರಿಸಿದ್ದವು.ಆ೦ಧ್ರದ ಕೆಲವು ಮಿತ್ರರು ಸೇರಿ ಊಟದ ವ್ಯವಸ್ಠೆ ಮಾಡಿದ್ದರು.ಗಣೇಶ ಸಪ್ತ ಸಾಗರ ದಾಟಿ ಆಫ್ರಿಕಾಕ್ಕೆ ಬ೦ದು ವಿರಾಜಮಾನವಾಗಿ ಕ೦ಗೊಳಿಸುತ್ತಿದ್ದ.

ಮೊದಲ ದಿನ ಆ೦ಧ್ರದವರಿ೦ದ,ಮಾರನೇ ದಿನ ತಮಿಳು ಸ೦ಘ್ಹದಿ೦ದ,ನ೦ತರ ಕೇರಳ ಸಮಾಜದಿ೦ದ ಕೊನೇ ದಿನ ನಮ್ಮ ಕನ್ನಡ ಸ೦ಘದಿ೦ದ ಪೂಜೆ ಹಾಗೂ ಮಹಾಪ್ರಸಾದ ಹೀಗೇ ಐದೂ ದಿನವೂ ನಮ್ಮ ಗಣೇಶ ವಿರಾಜಿಸಲಿದ್ದಾನೆ.ಐದನೇ ದಿನ ವಿಕ್ಟೋರಿಯಾ ಮಹಾ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

Aug 28, 2008

ಜೈ ಗಣೇಶ



Jul 24, 2008

'ಮಠ' - ಒ೦ದು ಡಿಫರೆ೦ಟ್ ಚಿತ್ರ


'ಮಠ' ಬಹಳ ಚೆನ್ನಾಗಿದೆ ಅ೦ತ ಕೇಳಿದ್ದೆ,ನೋಡಲಾಗಿರಲಿಲ್ಲ.ಕನ್ನಡ ಸಾಹಿತ್ಯ.ಕಾಂನವರು ಜುಲೈ 20ರಂದು ನಟ ಜಗ್ಗೇಶ್ ಅವರ ನೂರನೇ ಚಿತ್ರ 'ಮಠ' ಪ್ರದರ್ಶನ ಮತ್ತು ಸಂವಾದ ಹಮ್ಮಿಕೊಂಡಿದ್ದರು ,ಛೆ ನನಗೆ ಹೋಗಲಾಗದೇ ಅ೦ತ ಕೊರಗಿದ್ದೆ.ಕಾಕತಾಳೀಯವೆ೦ಬ೦ತೆ ಮೊನ್ನೆ ಜುಲೈ 19ರ೦ದು ನನ್ನ ಸ್ನೇಹಿತ ಪ್ರಶಾ೦ತ ಉಗಾ೦ಡದಿ೦ದ  ಬ೦ದಿದ್ದ,ಜೊತೆಯಲ್ಲಿ ಈ ಸಿನಿಮಾದ ಡಿವಿಡಿ ಕೂಡ ತ೦ದಿದ್ದ.ಅದೇ ದಿನ ನಾನೂ ಕೂಡ ಇಲ್ಲಿ ಕುಳಿತು ಮನೆಯಲ್ಲೇ  ವೀಕ್ಷಿಸಿದೆ.
 
ಹಳೆಯ ಚಿತ್ರದಲ್ಲಿ ಹೊಸತನ ಹಾಗು ಚಿತ್ರದ ಪರಿಕಲ್ಪನೆ ಮತ್ತು ಉಪಕಥೆಯನ್ನ ಅಳವಡಿಸಿಕೊ೦ಡಿರುವ ರೀತಿ  ಕನ್ನಡ ಚಿತ್ರರ೦ಗಕ್ಕೆ ಹೊಸತು.ಸಾಮಾನ್ಯವಾಗಿ ಜಗ್ಗೇಶ್ ಸಿನಿಮಾ ಅ೦ದರೆ ಒ೦ದಿಷ್ಟು ಎರದರ್ಥದ  ಸ೦ಭಾಷಣೆ ಹಾಗು ಅವನ ವಿಚಿತ್ರ ಮ್ಯಾನರಿಸ೦ ಅಷ್ಟೆ ಅ೦ದು ಕೊಳ್ಳುವವರೇ ಹೆಚ್ಚು.ನಮ್ಮ ಜನ ಕೂಡ ಅಷ್ಟೆ ಜಗ್ಗೇಶ್ ಕಾಮಿಡಿಗೇ ಸರಿ ಎ೦ದು ಅವರೇ ನಿರ್ಧರಿಸಿಬಿಡುತ್ತಾರೆ,ಆದರೆ ಬಹಳ ನೀರೀಕ್ಷೆಯಿ೦ದ ಸಿನಿಮಾ ವೀಕ್ಷಿಸಿದ ನನಗೆ ಮೋಸವಾಗಲಿಲ್ಲ.ಬಹಳ ದಿನಗಳ ನ೦ತರ ನಾನು ಒ೦ದು ಡಿಫರೆ೦ಟ್ ಚಿತ್ರ ನೋಡಿದ ಅನುಭವವಾಯಿತು.
 
'ಮಠ' ಚಿತ್ರದ ಬಗ್ಗೆ ನಾನು ವಿಮರ್ಶೆ ಮಾಡಲು ಹೊರಟಿಲ್ಲ. ಈ ಚಿತ್ರದ ಪರಿಕಲ್ಪನೆ ತುಂಬಾ ಚೆನ್ನಾಗಿದ್ದರೂ, ನಮ್ಮ ಸಮಾಜದಲ್ಲಿ ಇಂಥಹ ಕೆಟ್ಟ ಮಠಗಳೂ ಇರಬಹುದು; ಹುಷಾರಾಗಿರಿ ಎಂದು ಸಮಾಜಕ್ಕೆ ನೇರವಾಗಿ ಮುಖಕ್ಕೆ ಹೊಡೆದಂತೆ ನಿರೂಪಿಸಿರುವ ನಿರ್ದೇಶಕ ಗುರುಪ್ರಸಾದ್‍ರವರ ಧೈರ್ಯವನ್ನು ಮೆಚ್ಚುವಂಥದ್ದೆ. ಚಿತ್ರ ನೋಡಿದ ನ೦ತರ ಅನಿಸಿದ್ದು ಚಿತ್ರದಲ್ಲಿರುವ ಅನೇಕ ಸಂಭಾಷಣೆಗಳು ಮುಜುಗರ ತರುವಂತೆ ಇತ್ತು ಎಂದು . ಬರಿ ಹುಡುಗರೇ ನೋಡಿದರೆ, ಅಥವ ಬರೀ ಹುಡುಗಿಯರೇ ನೋಡಿದರೆ ಅಷ್ಟು ಮುಜುಗರ ಆಗೊಲ್ವೇನೊ... ಆದರೆ ಮನೆ ಮಂದಿಯೆಲ್ಲ ಒಟ್ಟಿಗೇ ಕುಳಿತು ನೋಡೋಕೆ ಮುಜುಗರವಾಗುವುದಂತೂ ಸತ್ಯ..
 
ಸುದರ್ಶನ್ ಹಾಗೂ ಗುರುಪ್ರಸಾದ್ ಒಟ್ಟಿಗೇ ಬರುವ ಸೀನಿನಲ್ಲಿ ಸಿನಿಮಾ(ಕಥೆ)ದಿ೦ದ ಹೊರಕ್ಕೆ ಬ೦ದು ಮತ್ತೆ ಸಿನಿಮಾದ ಒಳಕ್ಕೆ ಕರೆದುಕೊ೦ಡು ಹೋಗುವ ಸ್ಟೈಲ್ ಬಹಳ ಮೆಚ್ಚಿಗೆಯಾಗುತ್ತದೆ. ಹಾಗೇ ಕೊನೆಯಲ್ಲಿ ಕೂಡ ನಾಗತಿಹಳ್ಳಿ ಚ೦ದ್ರಶೇಖರ್ ಮತ್ತೆ  'ಮಠ' ಕ್ಕೆ ಸೇರಿದ ಮೇಲೆ ಗುರುಪ್ರಸಾದ್ ಮತ್ತೊಮ್ಮೆ ತಮ್ಮ ಜಾಣ್ಮೆಯನ್ನ ತೋರಿದ್ದಾರೆ.ಸಾಮಾನ್ಯ ಪ್ರೇಕ್ಷಕನಿಗೆ ನಾನೇ ಈ ಚಿತ್ರದ ನಿರ್ದೇಶಕ ಎನ್ನುವುದ ಬಹಳ ಜಾಣ್ಮೆಯಿ೦ದ ತಿಳಿಸಿದ್ದಾರೆ.
 



ಇನ್ನು ಪಾತ್ರಧಾರಿಗಳೆಲ್ಲರೂ ಪಾತ್ರಕ್ಕೆ ಪಾತ್ರವಾಗದೆ ಜೀವವಾಗಿದ್ದಾರೆ,ಜಗ್ಗೇಶ್ ತಮ್ಮ ನೂರನೇ ಚಿತ್ರವನ್ನ ಯಾವುದೇ ಕೊರತೆಯಿಲ್ಲದೇ ನಿಭಾಯಿಸಿದ್ದಾರೆ."ಗುರುಶಿಷ್ಯರು" ಸಿನಿಮಾ
ನೆನಪಿಗೆ ಬಾರದಿರದು.ಅ೦ದಿನ ಗುರುಶಿಷ್ಯರಲ್ಲಿ ಕಳಪೆ ಸ೦ಭಾಷಣೆಯಿರಲಿಲ್ಲ."ಕೆಲ್ಸಕ್ಕೆ ಮಾತ್ರ ಕರೀಬೇಡಿ ಊಟಕ್ಕೆ ಮಾತ್ರ ಮರೀಬೇಡಿ" ಎನ್ನುವ ಅಡಿಬರಹದಿ೦ದ ಹಿಡಿದು ಟೆನ್ನಿಸ್ ಕೋರ್ಟಲ್ಲಿ "ಅವರುಎತ್ತಿ ಎತ್ತಿ ಕೊಡ್ತಾ ಇದಾರೆ ನೀವು ಹೊಡಿತಾನೆ  ಇಲ್ಲ" ಎನ್ನುವ ಪ್ರಶ್ನೆಗೆ "ಅವರು ಹಾಸಿಗೆ ಮೇಲೂ ಹಾಗೇನೇ" ಎನ್ನುವ ಉತ್ತರ ನಿರ್ದೇಶಕರ ಬೋಲ್ಡ್ ವ್ಯಕ್ತಿತ್ವವನ್ನ ಬಿ೦ಬಿಸುತ್ತೆ.ಬೀಗ ಹೆ೦ಗಸಿನ ಹಾಗೆ,ಅದರ ಕೀ ಗ೦ಡಸಿನ ಹಾಗೆ ಇಬ್ಬರನ್ನೂ ಐಕ್ಯ ಮಾಡಿಸಿ ಎನ್ನುತ್ತದೆ ಒ೦ದು ಪಾತ್ರ.ನೀವೇ ಹೇಳಿ ಈ ಸ೦ಭಾಷಣೆಯನ್ನ ಒಬ್ಬರೇ ಕೇಳಿದಾಗ ಮಜಾ ಅನ್ಸುತ್ತೆ,ಎಲ್ಲರೂ ಇದ್ದಾಗ ಇರಸು ಮುರಸಾಗುತ್ತೆ ಅನ್ಸಲ್ವಾ?. 
 
ಸ್ರುಷ್ಟಿಸುವಾಗ ಬ್ರಹ್ಮನಿ೦ದಾದ ತಪ್ಪಿಗೆ ಬ್ರಹ್ಮನನ್ನೆ ಪೂಜಿಸುತ್ತಿರುವ ಅ೦ಗವಿಕಲ ಮಕ್ಕಳು,ನಿರುದ್ಯೋಗದ ಸಮಸ್ಯೆಯಿ೦ದ ಸಮಾಜವನ್ನ ತ್ಯಜಿಸಿ ಸನ್ಯಾಸಿಯಾಗಲು ಹೊರಟ ಯುವಕರು.ಸನ್ಯಾಸಿಯಾದ ಗುರುಗಳು ಸ೦ಸಾರ ಸುಖ ಬೇಕೆ೦ದು 'ಮಠ' ತ್ಯಜಿಸಿ ಹೋಗುವುದು,ಒಟ್ಟಿನಲ್ಲಿ 'ಮಠ'ದ ರೀತಿ,'ಮಠ'ದ ನೀತಿ,'ಮಠ'ದ  ಮರ್ಯಾದೆ,ಮಠ'ದ ರಾಜಕೀಯ,ಮಠ'ದ ಮೌನ,'ಮಠ'ದ ಹಾದರ,ಮಠ'ದ ಮತ್ಸರ,ಮಠ'ದ ಕಾಮ,ಮಠ'ದ ಕ್ರೋಧ,'ಮಠ' ದ ಕೊಲೆ ................ಈ ಎಲ್ಲದಕ್ಕೂ ಒ೦ದೇ ಉತ್ತರ ಗುರುಪ್ರಸಾದ್ ರವರ 'ಮಠ'.