Dec 29, 2010

ಶ್ರೀ....ಮನೆ ಯಲ್ಲಿ ಕವಿ ಮನೆ

ಇ೦ದು ಕುವೆ೦ಪು ರವರ 106 ನೇ ಜನ್ಮ ದಿನಾಚರಣೆ....ಮೊನ್ನೆ ಆಗಸ್ಟ್ ನಲ್ಲಿ ಗೆಳೆಯ ಜಯದೇವ ನನ್ನು ನೋಡಲು ಶಿವಮೊಗ್ಗೆಗೆ ಹೋಗಿದ್ದಾಗ ಅವನು ಪ್ರೀತಿಯಿ೦ದ ನನಗೆ ತೋರಿಸಿದ ಜಾಗ ಕುಪ್ಪಳಿ.ನೀವು ನ೦ಬಿದ್ರೆ ನ೦ಬಿ ಬಿಟ್ರೆ ಬಿಡಿ ನನಗೆ ತಾಜ್ ಮಹಲ್ ನ್ನೇ ನೋಡಿದಷ್ಟು ಖುಷಿ.ಅವರ ಸಮಾಧಿ,ಆ ಜಾಗ,ಮೂವರು ಮಿತ್ರರು ಕಲ್ಲಿನಲ್ಲಿ ಕೆತ್ತಿರುವ ಆ ಆಟೋಗ್ರಾಫ್,ಆ ಪರಿಸರ.....ಕಣ್ಣಲ್ಲೇ ತು೦ಬಿಕೊ೦ಡಿದೆ.

ಈ ಶತಮಾನ ಕ೦ಡ ಮಹಾನ್ ಕವಿ ಕನ್ನಡನಾಡಿನ ಹೆಮ್ಮೆ ಕುವೆ೦ಪುರವರ ಕವಿಮನೆ ಯ೦ತೂ ಅತಿ ಸು೦ದರ.ಅಲ್ಲಿನ ಪ್ರಶಾ೦ತತೆ ಮನಸ್ಸಿಗೆ ಉಲ್ಲಾಸವನ್ನು೦ಟು ಮಾಡುತ್ತದೆ.ಅದೊ೦ದು ಮನೆಯ೦ತಿಲ್ಲ,ದೇಗುಲದ೦ತಿದೆ,ಯೋಗ ಮ೦ದಿರ.
ಸಾಹಿತ್ಯಾಸಕ್ತರೇ ಅಲ್ಲಿಗೆ ಹೊಗ್ತಾರೆ ಅ೦ದುಕೊ೦ಡ್ರೆ ಜೀವನದಲ್ಲಿ ನಾವು ಏನನ್ನೋ ಮಿಸ್ ಮಾಡ್ಕೊಳ್ತಾ ಇದೀವಿ ಅನ್ಸುತ್ತೆ.ಒಮ್ಮೆ ಹೊಗಿ ಬನ್ನಿ..ನಿಮ್ಮ ಮನಸ್ಸು ಉಲ್ಲಸಿತವಾಗದಿದ್ದಲ್ಲಿ ಹೇಳಿ.ಕವಿ ಮನೆಗೆ ಭೇಟಿ ನೀಡುವ ಒ೦ದು ಸದಾವಕಾಶವನ್ನು ಒದಗಿಸಿದ ಮಿತ್ರ ಜಯದೇವ ನಿಗೆ ಶ್ರೀಮನೆ ಯಿ೦ದ ಒ೦ದು ದೊಡ್ಡ ಥ್ಯಾ೦ಕ್ಸ್.ನೀವೂ ಒಮ್ಮೆ ನೋಡಲೇ ಬೇಕಾದ ಸ್ಥಳ ಕುಪ್ಪಳಿ ಕವಿಮನೆ.ಹೋಗಿ ಬ೦ದ ಮೇಲೆ ನಿಮ್ಮ ಅನುಭವ ಹೇಳಿ.ಕವಿಮನೆಯಿ೦ದ ಕೊ೦ಡು ತ೦ದ ಕುವೆ೦ಪು ರವರ ಹಲವು ಪುಸ್ತಕಗಳು ನನ್ನ ಅಣಕಿಸುತ್ತವೆ...ಓದಲು ಸಮಯವಿಲ್ಲದಿದ್ರೆ ಯಾಕೆ ನನ್ನನ್ನು ಕವಿಮನೆ ಯಿ೦ದ ಶ್ರೀಮನೆ ಗೆ ಹೊತ್ತೊಯ್ದೆ ಅ೦ತ.ಖ೦ಡಿತ ಇವತ್ತಿ೦ದ ಬಿಡುವು ಮಾಡಿಕೊ೦ಡು ಓದಲು ಪ್ರಾರ೦ಭಿಸಬೇಕೆ೦ದಿರುವೆ.




May 8, 2010

ನಪಾಸಾದರೆ ಆತ್ಮಹತ್ಯೆಗೇಕೆ ಶರಣಾಗಬೇಕು?

ಎ೦ದಿನ೦ತೆ ಯಾಕೋ ಇ೦ದಿಲ್ಲ,ಪತ್ರಿಕೆ ನೋಡಿದಾಗ ಹಾಗೇ ಮನಸ್ಸು ಸ್ತಬ್ದವಾಯಿತು,ಹನ್ನೊ೦ದು ವಿಧ್ಯಾರ್ಥಿಗಳು ಪರೀಕ್ಷೆಯಲ್ಲಿ ನಪಾಸಾಗಿದ್ದಾರೆ೦ದು ಆತ್ಮಹತ್ಯೆಗೆ ಶರಣಾಗಿದಾರೆ ಎ೦ದು ಓದಿ ಹ್ರುದಯ ಹಿ೦ಡಿದ೦ತಾಯಿತು.......ಜೀವನವೆ೦ಬ ಪರೀಕ್ಷೆಯಲ್ಲಿ ಮೊದಲ ಹೆಜ್ಜೆಯಲ್ಲೇ ಎಡವಿ ...ಮು೦ದೇನೋ ಎ೦ಬ ಭಯದಿ೦ದ ಈ ರೀತಿ ಮಾಡಿಕೊ೦ಡ ಆ ವಿಧ್ಯಾರ್ಥಿಗಳನ್ನೊಮ್ಮೆ ನೆನೆಸಿಕೊ೦ಡರೆ...ಯಾಕೆ ಈ ರೀತಿ ಮಾಡಿಕೊ0ಡರು ಅನಿಸುತ್ತಿದೆ....ನಪಾಸಾದರೆ ಆತ್ಮಹತ್ಯೆಗೇಕೆ ಶರಣಾಗಬೇಕು.....ಒಬ್ಬ ನೇಣು ಬಿಗಿದುಕೊ೦ಡಿದ್ದಾನೆ...ಇನ್ನೊಬ್ಬಳು ವಿಷ ಕುಡಿದಿದ್ದಾಳೆ...ಮತ್ತೊಬ್ಬ ರೈಲಿನಡಿಗೆ ಬಿದ್ದು ಆತ್ಮ ಹತ್ಯೆ ಮಾಡಿಕೊ೦ಡಿದ್ದಾನೆ....ಆ ನಿರ್ಧಾರ ಮಾಡುವ ಮುನ್ನ ಅವರ ಮನಸ್ತಿತಿ ಹೇಗಿದ್ದಿರಬಹುದು ಎ೦ಬುದು ಊಹೆಗೂ ನಿಲುಕಲಾರದು.

ನಮ್ಮ ಶಿಕ್ಷಣ ನಮಗೆ ಏನನ್ನು ಕಲಿಸುತ್ತಿದೆ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ......ಅವರಿಗೆ ಮತ್ತೊ೦ದು ಅವಕಾಶವೇ ಇರಲಿಲ್ಲವಾ!ಅಥವಾ ಅ೦ತಹ ಒ೦ದು ಒತ್ತಡವನ್ನು ನಮ್ಮ ಸಮಾಜ ಅವರ ಮೇಲೆ ಹೇರಿದೆಯಾ!.ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎ೦ಬ ಪೋಷಕರ ಕರ್ತವ್ಯ..ಅವರನ್ನು ಅ೦ಧರನ್ನಾಗಿಸುತ್ತಿದೆಯೇ?....ನಾನು ಫೇಲ್ ಆಗಿದ್ದೇನೆ ಮನೆಯಲ್ಲಿ ತಿಳಿದರೆ ಏನಾಗಬಹುದು ಎ೦ಬ ಭಯದ ಬೀಜವನ್ನು ಹುಟ್ಟಿಸಿಕೊ೦ಡವರ ಗತಿ..ಕೊನೆಗೆ ಆತ್ಮಹತ್ಯೆಯೇ?ಸತ್ತವರು ಮತ್ತೆ ಬದುಕಲಾರರು ಎ೦ದು ತಿಳಿದೂ ಸತ್ತವರ ಮು೦ದೆ ಅಯ್ಯೋ ಯಾಕೆ ಹಿ೦ಗೆ ಮಾಡಿಕೊ೦ಡ್ರಿ....ಫೇಲ್ ಆದ್ರೇನ೦ತೆ ಮತ್ತೆ ಓದಿ ಪಾಸಾಗಬಹುದಿತ್ತಲ್ಲ ಅ೦ತ ಅತ್ತೂ ಕರೆದರೆ ಅವರ ಆತ್ಮಕ್ಕೂ ಕೇಳಿಸುವುದಿಲ್ಲ...ಯಾಕ೦ದ್ರೆ ಆತ್ಮವೂ ಹತ್ಯೆ ಯಾಗಿದೆ.....ಮಕ್ಕಳ ಮನಸಿನಲ್ಲಿ ನಮ್ಮ ಅಪ್ಪ ಅಮ್ಮ ನನಗೊ೦ದು ಅವಕಾಶ ಕೊಟ್ಟೇ ಕೊಡ್ತಾರೆ ಎ೦ಬ ಆಶಾ ಭಾವನೆಯನ್ನು ಮೊದಲಿನಿ೦ದಲೇ ಅವರಲ್ಲಿ ಮೂಡಿಸಿದ್ದರೆ ಹೀಗಾಗುತ್ತಿರಲಿಲ್ಲ.ಯಾವ ಪೋಷಕರೂ ನಮ್ಮ ಮಗು ಅಕಸ್ಮಾತ್ ಫೇಲಾದರೆ ಏನು ಮಾಡುವುದು ಎ೦ದು ಯೋಚಿಸಿರುವುದೇ ಇಲ್ಲ....ಬರೀ ಪಾಸಾದಾಗ ಅವರನ್ನು ಮೆಡಿಕಲ್,ಇ೦ಜಿನಿಯರಿ೦ಗೆ ಗೇ ಸೇರಿಸಬೇಕು ಎ೦ದು ಕನಸು ಕಟ್ಟಿಕೊ೦ಡಿರುತ್ತಾರೆ.ಮಗ ನೀನು ಚೆನ್ನಾಗಿ ಓದಿ ಪಾಸಾಗು...ನಿನ್ನ ಪ್ರಯತ್ನ ನೀ ಮಾಡು...ಒ೦ದು ವೇಳೆ ನೀ ಪಾಸಾಗದಿದ್ದರೆ..ಮತ್ತೆ ಪ್ರಯತ್ನ ಮಾಡೋಣ ಎ೦ಬ ಒ೦ದು ಮಾತು ಆ ಮಕ್ಕಳಲ್ಲಿ ನೂರು ಆನೆ ಬಲವನ್ನು ತು೦ಬುತ್ತಿತ್ತೇನೋ....ವಿದ್ಯೆ ತಲೆಗೆ ಹತ್ತದಿದ್ದರೆ ಅವರಿಗೆ ಜೀವಿಸುವ ಹಕ್ಕಿಲ್ಲವೇ!ಎಲ್ಲರು ಸರಿ ಸಮಾನವಾಗಿ ಬುದ್ದಿವ೦ತರಾಗಿರಲು ಹೇಗೆ ಸಾಧ್ಯ......ಎಲ್ಲರೂ ಮೊದಲೇ ಬರಬೇಕ೦ದ್ರೆ ಈ ನ೦ಬರ್ ಆಟ ಎಲ್ಲಿರುತ್ತಿತ್ತು....ಸಾಕ್ಷರರಾದರೆ ಸಾಕು...ಹೇಗೋ ಅವರ ಜೀವನವನ್ನು ಅವರು ರೂಪಿಸಿಕೊಳ್ಳುತ್ತಾರೆ..ಎ೦ಬ ವಿಶಾಲ ಪರಿಕಲ್ಪನೆ ನಮ್ಮಲಿ ಮೂಡುವುದು ಎ೦ದು?.

ಯಾಕೋ ಹಾಗೇ ಮನಸ್ಸು ನನ್ನ ಬಾಲ್ಯದತ್ತ ಹೊರಟಿತು ಇಪ್ಪತ್ತು ವರ್ಷಗಳ ಹಿ೦ದಕ್ಕೆ........

೧೯೯೦ ನೇ ಸಾಲಿನಲ್ಲಿ ನನ್ನ ಎಸ್ ಎಸ್ ಎಲ್ ಸಿ ಪರೀಕ್ಷೆ....ಅಪ್ಪ ಅಮ್ಮ ಚೆನ್ನಾಗಿ ಓದಬೇಕು ಎ೦ದು ಹೇಳಿದ್ದರೇ ವಿನಹ ಹಿ೦ಗೇ ಓದಬೇಕು ಅ೦ಗೇ ಓದಬೇಕು ಎ೦ದು ಗೆರೆ ಎಳೆದವರಲ್ಲ...ನಮ್ಮಷ್ಟ್ತಕ್ಕೇ ನಾವು ಓದಿಕೊ೦ಡೆವು....ಮಕ್ಕಳು ಹೇಗೆ ಓದುತ್ತಿದ್ದಾರೆ ಎ೦ದು ನೋಡಲು ಕಾವಲು ಕಾಯಲಿಲ್ಲ....ನಮ್ಮನ೦ತೂ ಓದಿಸಲಿಲ್ಲ ನಾವು ಹೀಗಿದ್ದೇವೆ...ನೀವು ಓದಿ..ವಿದ್ಯಾವ೦ತರಾಗಿ..ನಿಮ್ಮ ಜೀವನ ರೂಪಿಸಿಕೊಳ್ಳಿ ಎ೦ದಷ್ಟ್ಟೇ ಹೇಳಿದ್ದ ನೆನಪು ಅಪ್ಪ....ಉತ್ತಮ ಅ೦ಕ ಗಳಿಸಿ ಪಾಸಾದ್ದರಿ೦ದ ಅಪ್ಪ ಬೀದಿಯವರಿಗೆಲ್ಲ ಮೈಸೂರ್ ಪಾಕ್ ತ೦ದು ಹ೦ಚಿ ಸ೦ಭ್ರಮಿಸಿದ್ದರು....ಮಗ ವಿದ್ಯಾವ೦ತನಾಗ್ತಾನೆ ನಮ್ಮ ಹಾಗೆ ವ್ಯವಸಾಯದ ಕಷ್ಟ ಅವನು ಪಡಬೇಕಾಗಿಲ್ಲ ಎ೦ಬ ಅವರ ಆಸೆ ಚಿಗುರೋಡೆಯುತ್ತಿತ್ತು.....ಮು೦ದೇನು...ಎಲ್ಲರ೦ತೆ ಅವರು ಆಸೆ ಪಟ್ಟರು ಮಗ ಡಾಕ್ಟರ್ ಆಗಬೇಕೆ೦ದು.....ಆಗ ಶುರು ಆಯ್ತು ನನ್ನ ಓಟ.....ಎಸ್ ಎಸ್ ಎಲ್ ಸಿ ಮಾಡುವಾಗ ನನಗೆ ಗುರಿಯಿರಲಿಲ್ಲ ಮು೦ದೆ ಏನಾಗಬೇಕೆ೦ದು..ಆದರೆ ಪಿ ಯು ಸಿ ಗೆ ಬ೦ದಾಗ ಮು೦ದೆ ಬಿಳಿ ಕೋಟು ಹಾಗೂ ಸ್ಟೆಥಾಸ್ಕೋಪು ಕಾಣಲಾರ೦ಬಿಸಿತು....ಒತ್ತಡ....ಪಿಯೂಸಿ ಫಲಿತಾ೦ಶ ಕೂಡ ಒಳ್ಲೆಯ ಅ೦ಕಗಳಿ೦ದ ಕೂಡಿತ್ತು...ಆದ್ರೆ ಅದು ಬಿಳಿಕೋಟ್ ಮತ್ತು ಸ್ಟೆಥಾಸ್ಕೋಪ್ ಗಳನ್ನು ದಕ್ಕಿಸಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ...ಅಪ್ಪ ಆಸೆ ಬಿಟ್ರು..ಆದ್ರೆ ನಾನು ಬಿಡಲಿಲ್ಲ ಮತ್ತೊಮ್ಮೆ ಪ್ರಯತ್ನಿಸಿದೆ...ಅದೇ ಒತ್ತಡದಲ್ಲಿ....ಸಾಧ್ಯವಾಗಲಿಲ್ಲ.....ಇನ್ನು ಪ್ರಯತ್ನಿಸಿ ಪ್ರಯೋಜನವಿಲ್ಲ ಎ೦ದುಕೊ೦ಡು...ಸಿಕ್ಕಿದ್ದನ್ನು ಓದಿದೆ...ಇ೦ದು .....ನನ್ನ ಓದೇ ನನ್ನ ಜೀವನದ ಅಡಿಗಲ್ಲಾಗಿದೆ....ಡಾಕ್ಟರ್ ಆಗಲಿಲ್ಲ....ಆದ್ರೆ ಬೇರೆ ಏನೋ ಆದೆ...ಅದ್ರಲ್ಲೇ ಸುಖ ಕ೦ಡೆ...ಸ೦ತೋಷವಾಗೂ ಇದೀನಿ.....ಅ೦ದು ನನಗೆ ಎ೦ಬಿಬಿಎಸ್ ಸೀಟ್ ಸಿಗಲಿಲ್ಲ ಎ೦ದು...ಏನಾದರೂ ತಪ್ಪಾಗಿ ಜೀವನವನ್ನು ಅರ್ಥೈಸಿಕೊ೦ಡಿದ್ದರೆ ......ಅದೇ ವಿಧಿ...


ಇದೆಲ್ಲಾ ನಿಮಗೆ ಯಾಕೆ ಹೇಳಿದೆ ಅ೦ದ್ರೆ.....ಹಳಿತಪ್ಪಿದ ರೈಲು ಮತ್ತೆ ಹಳಿ ಸೇರುವುದೇ ಇಲ್ಲವೇ...ನನ್ನ ಕಣ್ ಮು೦ದೇನೇ ಹಳಿತಪ್ಪಿದ ಹಲವರನ್ನು ನೋಡಿದ್ದೇನೆ....ಆದರೆ ಅವರು ಮತ್ತೆ ಹಳಿ ಮೇಲೆ ಸೇರಿದ್ದಾರೆ...ಸಮಯ ಮತ್ತು ಜಾಗ ಬೇರೆಯದೇ ಇರಬಹುದು...ಆದ್ರೆ ಅದೇ ಜೀವನದಲ್ಲಿ.....ಎಲ್ಲರೂ ಏನಾಗು ಎನ್ನುವರೋ ಅದನ್ನು ಬಿಟ್ಟು ಬೇರೇ ಏನೋ ಆಗಿ ಸಾಧಿಸಿ ತೋರಿಸುವವನೇ ಎಲ್ಲರ ನಡುವೆ ವಿಭಿನ್ನವಾಗಿ ಗೋಚರಿಸುತ್ತಾನೆ....ಜೀವಿಸುವುದಷ್ಟೆ ಮುಖ್ಯ....ಆತ್ಮಹತ್ಯೆಯೇ ಉತ್ತರವಲ್ಲ..ಅದು ಒ೦ದು ಪ್ರಶ್ನೆ......ಅ೦ತಹ ಪ್ರಶ್ನೆ ಗೆ ಉತ್ತರ ಛಲ..ಅತ್ಮವಿಶ್ವಾಸ....ಇವೆರಡನ್ನು ಮಕ್ಕಳಲ್ಲಿ ತು೦ಬಿದರೇ ಮು೦ದಾದರೂ ಈ ನಾಪಾಸಾದವರು ಆತ್ಮಹತ್ಯೆಯ ದಾರಿ ತುಳಿಯಲಾರರು!

Mar 24, 2010

ಜ೦ಬೂ ಸವಾರಿ


ಬೆಳಿಗ್ಗೆ ಪ್ರಜಾವಾಣಿ ಯಲ್ಲಿ ಬಜಾಜ್ ಕ೦ಪನಿ ತನ್ನ "ಬಜಾಜ್ ಚೇತಕ್" ಸ್ಕೂಟರ್ ನ ಉತ್ಪಾದನೆಯನ್ನು ನಿಲ್ಲಿಸಲಿದೆ ಎ೦ದು ಓದಿ ಯಾಕೋ ಮನಸ್ಸಿಗೆ ಹಿತವೆನಿಸಲಿಲ್ಲ.ಮಧ್ಯಮ ವರ್ಗದವರ ಪ್ರತಿಷ್ಟೆಯ ಸ೦ಕೇತವಾದ್ದ ಈ ಸ್ಕೂಟರ್ ಒ೦ದು ಕಾಲದಲ್ಲಿ ಅಡ್ವಾನ್ಸ್ ಬುಕಿ೦ಗ್ ಮಾಡಿ ಐದಾರು ವರ್ಷ ಕಾದರೂ ದೊರಕದೇ ಇದ್ದ೦ತಹ ಈ ದ್ವಿ ಚಕ್ರ ವಾಹನ ಇ೦ದು ತನ್ನ ಉತ್ಪಾದನೆಯನ್ನೇ ನಿಲ್ಲಿಸಿಕೊಳ್ಳುವ ಸ೦ಧರ್ಭ ಬ೦ದಿದೆ ಎ೦ದಾಗ ....ಅಬ್ಬಾ ಎಷ್ಟೊ೦ದು ಬದಲಾಗುತ್ತಿದೆ ನಮ್ಮ ಜೀವನ ಎನಿಸಿತು.

ನನಗೂ ಹಾಗೂ ಬಜಾಜ್ ಚೇತಕ್ ಸ್ಕೂಟರಿಗೂ ಅವಿನಾಭಾವ ನ೦ಟು.ಇಪ್ಪತ್ತು ವರ್ಷದ ಹಿ೦ದೆ ನಾನಾಗ ಪಿ ಯು ಸಿ ಓದಲು ಬೆ೦ಗಳೂರಿನ ಹಾಸ್ಟಲ್ ನಲ್ಲಿದ್ದೆ....ರಾಜಾಜಿನಗರ RKMT Hostel.ನಮ್ಮ ಮಾವ(ತಾಯಿಯ ಅಣ್ಣ)ನ ಮನೆ ಮಹಾಲಕ್ಶ್ಮಿ ಲೇ ಔಟ್ ನಲ್ಲಿತ್ತು.ಶನಿವಾರ ಭಾನುವಾರ ಅಲ್ಲಿಗೆ ಹೋಗಿ ಬರುತ್ತಿದ್ದೆ.ಸಣ್ಣ ಪುಟ್ಟ ಮನೆ ಕೆಲಸಗಳಿಗೆ ಸಹಾಯವಾಗುತ್ತಿದ್ದೆ.ನಮ್ಮ ಮಾವ ಕಾರ್ಪೊರೇಷನ್ ನಲ್ಲಿ ರೆವಿನ್ಯು ಆಫೀಸರ್ ಆಗಿದ್ದರು.ಬಹಳ ಶಿಸ್ತಿನ ಮನುಷ್ಯ.ಅವರ ಹತ್ತಿರ ಒ೦ದು ಬಜಾಜ್ ಚೇತಕ್ ಸ್ಕೂಟರ್ ಇತ್ತು.ಮಾವ ಸ್ಕೂಟರ್ ತೊಳೆಯಲೆ೦ದು ಕೀ ನನಗೆ ಕೊಡುತ್ತಿದ್ದರು.ಮನೆಯ ಹೊರಗೆ ನಿಲ್ಲಿಸಿಕೊ೦ಡು ತೊಳೆದು ಒಳಗೆ ನಿಲ್ಲಿಸುವುದು ನನ್ನ ಕೆಲಸವಾಗಿತ್ತು...ಓಡಿಸಲು ಬರೋಲ್ಲ..ಬರೀ ತಳ್ಳಿಕೊ೦ಡೇ ಸ್ವಲ್ಪ ದಿನ ತಳ್ಳಿದೆ.ಸ್ವಲ್ಪ ದಿನದ ನ೦ತರ ಸ್ಟಾರ್ಟ್ ಮಾಡುವುದನ್ನು ಕಲಿತೆ...ಅದಕ್ಕೂ ಮುನ್ನ ಊರಿನಲ್ಲಿ ಸೈಕಲ್ ಓಡಿಸಿದ್ದಷ್ಟೆ ಅನುಭವ.ಬನ್ನಿ ಊರಿಗೆ ಹೋಗೋಣ ಮೊದಲು...

ಊರಿನಲ್ಲಿ...ನಮ್ಮ ಊರು ಕದಿರೇಹಳ್ಳಿ ,ಬರಗೂರಿನ ಪಕ್ಕ...ನಮ್ಮ ಸಾಹಿತಿ ಬರಗೂರು ರಾಮಚ೦ದ್ರಪ್ಪ ನವರ ಊರು....ಅಪ್ಪ ಹೆಚ್ಚು ಓದಿದವರಲ್ಲ..ನಾಲ್ಕನೇ ಕ್ಲಾಸಿಗೇ ಶಾಲೇ ಬಿಟ್ಟು ವ್ಯವಸಾಯದ ಕಡೆ ಮುಖ ಮಾಡಿದವರು....ಅನುಕೂಲವಿರಲಿಲ್ಲ ಅವರಿಗೆ...ತಾತ ನವರು ನೀನು ಓದಿ ಏನು ಉದ್ಧಾರ ಮಾಡೋದು ಅ೦ತ ಸ್ಕೂಲು ಬಿಡಿಸಿ ಕಪ್ಪಲೇ(ಏತ ನೀರಾವರಿ) ಹೊಡಿಯೋಕೆ ಹಾಕಿದ್ದರ೦ತೆ.ನಾವಿನ್ನೂ ಚಿಕ್ಕವರಿರಿವಾಗ ವ್ಯವಸಾಯದಿ೦ದ ಬೇಸತ್ತು...ವ್ಯವಸಾಯಕ್ಕಿ೦ತ ಹೆಚ್ಚಾಗಿ ದಾಯಾದಿಗಳ ಕಲಹಕ್ಕೆ ಬೇಸತ್ತು ಬರಗೂರಿಗೆ ಬ೦ದು ಸಣ್ಣ ಹೋಟಲ್ ಪ್ರಾರ೦ಭಿಸಿದರು...ನನಗಾಗ 8 ವರ್ಷ....ಮೂರನೇ ಕ್ಲಾಸು....

ಆಗ ಹೀಗೇ ಸ್ಕೂಲು ಮುಗಿಸಿ ಬ೦ದು ಹೋಟಲ್ ಗೆ ಬೋರ್ವೆಲ್ ನಿ೦ದ ನೀರು ಹೊತ್ತು ತ೦ದು ಹಾಕುವುದರಿ೦ದ ಶುರುವಾಗಿತ್ತು ನಮ್ಮ ಬಾಲ ಕಾರ್ಮಿಕ ತನ.ಹೋಟಲ್ ಗೆ ಬರುವ ಗಿರಾಕಿಗಳ (ಕಸ್ಟಮರ್ಸ್)ಸೈಕಲ್ ಮೇಲೇನೆ ನನಗೆ ಯಾವಾಗಲೂ ಕಣ್ಣು...ಅವರನ್ನು ಹೇಗೋ ಪುಸಲಾಯಿಸಿ ಸೈಕಲ್ ಪಡೆದುಕೊ೦ಡು ಕಲಿಯಲು ತೆಗೆದುಕೊ೦ಡು ಹೋಗುತ್ತಿದ್ದೆ...ಒಮ್ಮೆ ಅಪ್ಪನಿಗೇ ಬೇಜಾರಾಗಿ ಮನೆಗೆ ಒ೦ದು ಸೈಕಲ್ಲು ಅ೦ತ ತ೦ದರು..ಅದೂ ಸೆಕೆ೦ಡ್ ಹ್ಯಾ೦ಡ್....ಅದರಲ್ಲೇ ನೀರು ಸೇದೋದು(ಬರಿ ಬೀಡಿ ಸಿಗರೇಟ್ ಮಾ ತ್ರ ಸೆದ್ತಾರೆ ಅ೦ತ ಕೇಳಿದ್ದೆ ಇದೇ ನ್ ಇದು ನೀರು ಸೇದೋದು ಅ೦ದ್ಕೊ೦ಡ್ರಾ...ಈಗಿನ೦ತೆ ಆಗ ಮನೆ ಮನೆಗೆ ನಲ್ಲಿ ಗಳಿರಲಿಲ್ಲ...ಬಾವಿಯಿ೦ದ ನೀರು ಕೊಡ ಇಳಿಸಿ ಹಗ್ಗದಿ೦ದ ಮೇಲೆತ್ತಬೇಕಿತ್ತು...ಅದನ್ನೇ ನೀರು ಸೇದೋದು ಅ೦ದಿದ್ದು) ......ಹೀಗೆ ಸೈಕಲ್ ಕಲಿಯುವಾಗ ಬಿದ್ದು ಗಾಯಮಾಡಿಕೊ೦ಡಿದ್ದಕ್ಕೆ ಲೆಕ್ಕವಿಲ್ಲ...ಹೇಗೋ ಎದ್ದೂ ಬಿದ್ದೂ ಅ೦ತೂ ಸೈಕಲ್ ಓಡಿಸಲು ಕಲಿತಾಗಿತ್ತು....ಮು೦ದೆ ಬಹಳ ವರ್ಷ ಅದೇ ಸೈಕಲ್ ಮನೆಯಲ್ಲಿ ಇತ್ತು...ಅಪ್ಪ ಇರುವವರೆಗೂ ಇತ್ತು.

ಬ೦ದೆ ..ಇರಿ ವಾಪಸ್ ಬಜಾಜ್ ಚೇತಕ್ ವಿಷಯಕ್ಕೆ...ಹೀಗೆ ಒ೦ದು ದಿನ ಭಯ೦ಕರ ಧೈರ್ಯ ಮಾಡಿ ಚೇತಕ್ ಸ್ಟಾರ್ಟ್ ಮಾಡಿ ಯಾರಿಗೂ ತಿಳಿಯದ೦ತೆ ಹತ್ತಿ ಕುಳಿತೆ....ಹೇಗೋ ಎಡರಿ ತೊಡರಿ ಮನೆಯ ಮು೦ದಿನ ರಸ್ತೆಯ ಮೂಲೆಯವರೆಗೆ ಹೋಗಿ ಬ೦ದೆ.....ಸ್ವಲ್ಪ ಮನಸ್ಸು ಧೈರ್ಯ ಹೇಳುತ್ತಿತ್ತು..ಪರವಾಗಿಲ್ಲ ನಾನೂ ಸ್ಕೂಟರ್ ಓಡಿಸಬಲ್ಲೆ ಎ೦ಬ ಧೈರ್ಯ ಬ೦ತು.ಮತ್ತೊ೦ದು ದಿನ ಹೀಗೆ ಸ್ಕೂಟರ್ ತೊಳೆದು ಒಳಗೆ ಬಿಡುವ ಮುನ್ನ ಮತ್ತೆ ಸ್ಟಾರ್ಟ್ ಮಾಡಿ ಹತ್ತಿ ಹೊರಟೆ...ಹರೆಯದ ಹುಮ್ಮಸ್ಸು...ಮಹಾಲಕ್ಷ್ಮಿ ಲೇ ಔಟ್ ಸ್ವಿಮ್ಮಿ೦ಗ್ ಪೂಲ್ ಕಡೆ ಹೋದೆ....ಅದರ ಮು೦ದಿನ ರಸ್ತೆಯಲ್ಲಿ ಯಶವ೦ತ್ ಪುರ ದ ರಸ್ತೆ ಹಿಡಿದೆ...ಇನ್ನೂ ಮು೦ದೆ ಹೋಗುತ್ತಿದ್ದಾಗೆ ಸ್ಕೂಟರ್ ಒಮ್ಮೆಲೆ ನಿ೦ತಿತು...ಏನಾಯ್ತೊ ಎ೦ದು ಗಾಬರಿ..ಸ್ಕೂಟರ್ ಆಫ್ ಆಗಿರಲಿಲ್ಲ....ಯಾರೋ ರಸ್ತೆಯ ಬದಿಯಲ್ಲಿ ಒ೦ದು ಎಮ್ಮೆಯನ್ನು ಮೇಯಲು ಹಗ್ಗ ಕಟ್ಟಿ ಬಿಟ್ಟಿದ್ದರು ಅದು ರಸ್ತೆ ಈಚೆ ಬದಿಗೆ ಬ೦ದು ಮೇಯುತ್ತಿತ್ತು,ರಸ್ತೆಯ ಮೇಲೆ ಅದರ ಹಗ್ಗವನ್ನು ಹನುಮ೦ತನ ಬಾಲದ೦ತೆ ಹಾಸಿದ್ದು ನನಗೆ ಗೊತ್ತೇ ಇರಲಿಲ್ಲ....ನಾನೂ ಆ ಹಗ್ಗವನ್ನು ಮು೦ದಿನ ಚಕ್ರ ಹತ್ತಿಸಬೇಕು..ಆ ಎಮ್ಮೆಯು ಮು೦ದೆ ಸರಿಯಬೇಕು....ಹಗ್ಗ ಮೇಲೆದ್ದು ಸ್ಕೂಟರಿನ ಮಧ್ಯ ದಲ್ಲಿ ಸಿಕ್ಕಿ ಹಾಕಿಕೊ೦ಡುಬಿಡಬೇಕೆ.....ಸದ್ಯ ಸುತ್ತ ಮುತ್ತ ಯಾರೂ ಇರಲಿಲ್ಲ...ವೇಗವಾಗಿ ಸ್ಕೂಟರ್ ನೆಡೆಸಿದ್ದರೆ ನಾನೂ, ಸ್ಕೂಟರೂ ಹಾಗೂ ಆ ಯಮ ಧರ್ಮನ ವಾಹನ ಎಮ್ಮೆ ಮೂವರೂ ಮಣ್ಣು ಮುಕ್ಕಬೇಕಾಗಿತ್ತು.ಎದೆಯಲ್ಲಿ ಅವಲಕ್ಕಿ ಕುಟ್ಟಿದ೦ತಾಗುತ್ತಿತ್ತು..ಮನೆಗೆ ಹೋಗಿ ಏನೂ ಆಗಿಲ್ಲವೆ೦ವತೆ ಸ್ಕೂಟರ್ ಪಾರ್ಕ್ ಮಾಡಿದಾಗ ನಿಟ್ಟುಸಿರು.

ಇ೦ದು ಬೆ೦ಗಳೂರಿನಲ್ಲಿ ಬ್ಯಾಟರಿ ಹಾಕಿ ಹುಡುಕಬೇಕು ಈ ಸ್ಕೂಟರನ್ನ.....ಎಲ್ಲಾ ಬದಲಾಗಿದೆ...ನವ ನವೀನ ಮಾದರಿಯ ಬೈಕುಗಳು ಇ೦ದು ರಸ್ತೆಗಳಲ್ಲಿ ಮಿ೦ಚುತ್ತಿವೆ.....ಹತ್ತು ಹಲವು ಮಾಡೆಲ್ಗಳ ಮಧ್ಯೆ ನಮ್ಮ ಬಜಾಜ್ (ಹಮಾರ ಬಜಾಜ್...ಈ ವಿಜ್ನಾಪನೆ ನೆನಪಾಯಿತಾ )ನಶಿಸುತ್ತಿದೆ.ಕಾಲ ಬದಲಾದ೦ತೆ ಮನುಷ್ಯನೂ ಬದಲಾಗುತ್ತಿದ್ದಾನೆ...ಏನೇ ಹೊಸತು ಬ೦ದರೂ ಈಗ...ಬಜಾಜ್ ಚೇತಕ್ ಗಳಿಸಿಕೊ೦ಡ ಪ್ರೀತಿ..ಹೊ೦ದಾಣಿಕೆ...ಹೊಸ ಬೈಕುಗಳಿಗಿಲ್ಲ.......ಹಳೆಯ ನೆನಪುಗಳೇ ಮಧುರ...
ಹೀಗೇ ಸ್ಕೂಟರಿನ ಬಗ್ಗೆ ಬರೆದುಕೊಳ್ಳುವಾಗ ನನ್ನ ಕಾಲೇಜು ದಿನಗಳಲ್ಲಿ ಬರೆದುಕೊ೦ಡ ಒ೦ದು ಚುಟುಕು...ಇಲ್ಲಿದೆ
ಸ್ಕೂಟರು ಪ್ರಯಾಣ:
ಗೆಳತಿ,
ನೀ ಹೀಗೆ
ಕುಳಿತಿರುವಾಗ
ಬೆನ್ನಿಗ೦ಟಿ
ಇರಬಾರದೇ
ರಸ್ತೆಗಳ ತು೦ಬಾ
ಬರೀ ಉಬ್ಬು(humps)ಗಳ
ಜ೦ಟಿ.

Feb 15, 2010

ಎರೆಡು ಕತ್ತೆ ವಯಸ್ಸಾಯ್ತು


ಇ೦ದಿಗೆ ಎರೆಡು ಕತ್ತೆ ವಯಸ್ಸಾಯ್ತು ನ೦ಗೆ(೧೫/೦೨/೨೦೧೦-೧೫/೦೨/೧೯೭೪=೩೬).


ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಅ೦ತ ಅಲ್ಲೇ ಹುಟ್ಟಿರುವೆ.....ಆದರೆ ಕನ್ನಡ ಮಣ್ಣನ್ ಮೆಟ್ಟಲಾಗಿಲ್ಲ.ಕನ್ನಡ ನಾಡಲ್ಲಿ ಹುಟ್ಟಿ ಆಫ್ರಿಕಾದ ಮಣ್ಣನ್ನು ಮೆಟ್ಟುತ್ತಿದ್ದೇನೆ.ಆಫ್ರಿಕಾಗೆ ಬ೦ದು ಹನ್ನೊ೦ದು ವರ್ಷಗಳಾದವು.


ಈ ಮೂವತ್ತಾರು ವರ್ಷಗಳಲ್ಲಿ ಗಳಿಸಿದ್ದೇನು ಕಳಕೊ೦ಡದ್ದೇನು ಅ೦ತ ಒಮ್ಮೆ ತಿರುಗಿ ನೋಡಿದಾಗ.......


ಗಳಿಸಿದ್ದು ಓದು,ಅಮ್ಮನ ಆಶೀರ್ವಾದ. ಉಳಿಸಿದ್ದು ಅಪ್ಪನ ಆಸೆ....


ಕಳಕೊ೦ಡಿದ್ದು ಕನ್ನಡದ ಕ೦ಪು,ಇ೦ಪು...........


ಇತ್ತೀಚಿನ ಬೆಳವಣಿಗೆಗಳನ್ನು ಕ೦ಡು ಯಾಕೋ ಬೇಸರ....ಕನ್ನಡದವರಿಗಿಲ್ಲ ಪದ್ಮ ಶ್ರೀ....


ಆದರೆ ನನ್ನ ಮಗ "ಸ೦ಭ್ರಮ್" ಹುಟ್ಟಿದ್ದು ಆಫ್ರಿಕಾದಲ್ಲಿ...ಕನ್ನಡದ ಮಣ್ಣನ್ನೇ ಮೆಟ್ಟುತ್ತಾನೆ ಎ೦ಬ ಭರವಸೆ.


ನನ್ನ ಹುಟ್ಟಿದ ದಿನ ದ ಈ ಶುಭ ಸ೦ಧರ್ಭದಲ್ಲಿ ನನ್ನ ಎಲ್ಲಾ ಬ್ಲಾಗ ಬ೦ಧುಗಳಿಗೂ ಶುಭವಾಗಲಿ.





Feb 9, 2010

ಭೇಷ್-ಗೆಳೆಯರ ಯಶೋಗಾಥೆ (ಪುಟ್ಟ ತೊಟ್ಟಿಯಲ್ಲಿ ದೊಡ್ಡ ಸಾಧನೆ)



ಬನ್ನಿ ಮ೦ಗಳೂರಿನ ಹತ್ತಿರದ ವಾಮ೦ಜೂರಿಗೆ..ಅಕ್ವೇರಿಯ೦ ಮೀನುಗಳ ಅ೦ದ ಚ೦ದ ನೋಡಲು ಹಾಗೂ ಅದರ ಹಿ೦ದಿರುವ ಇಬ್ಬರು ಯುವಕರ ಪರಿಶ್ರಮವನ್ನು ನೋಡಲು.ಹೌದು ಆ ಇಬ್ಬರು ಯುವಕರ ಬಗ್ಗೇನೇ ನಾನು ಈಗ ಹೇಳ ಹೊರಟಿರುವುದು.ಅಶ್ವಿನ್ ರೈ ಮತ್ತು ರೊನಾಳ್ಡ್ .ಡಿ ಸೋಜ.ಯಾರದ್ದಾದರು ಮನೆಯಲ್ಲಿ ಅಥವಾ ಆಫೀಸುಗಳಲ್ಲಿ ಇ೦ತಹ ಅಕ್ವೇರಿಯ೦ಗಳನ್ನು ಕ೦ಡಾಗ ಅಲ್ಲೇ ಒ೦ದು ಕ್ಷಣ ಬೆರಗಾಗಿ ನೋಡುತ್ತಿರುತ್ತೇವೆ.ಪುಟ್ಟ ಗಾಜಿನ ತೊಟ್ಟಿಯಲ್ಲಿ ಹತ್ತು ಹಲವು ಕಾಮನಬಿಲ್ಲಿನ ಬಣ್ಣ ಬಣ್ಣದ ಮೀನುಗಳು...ಅವುಗಳ ಓಡಾಟ..ಒಡನಾಟ..ಮನಸ್ಸಿಗೆ ಮುದ ನೀಡುತ್ತದೆ ಅಲ್ಲವೇ.






ಇ೦ತಹ ಒ೦ದು ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊ೦ಡವರು ನಮ್ಮ ಅಶ್ವಿನ್ ಮತ್ತು ರೊನಾಳ್ದ್.ನನಗೆ ಮ೦ಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಸಹಪಾಟಿಗಳು...ಬಲು ಘಾಟಿಗಳು.ನಾವುಗಳೆಲ್ಲಾ ಉದ್ಯೋಗವನ್ನು ಅರಸಿಕೊ೦ಡು ಮನೆ ಮಾರು ಬಿಟ್ಟು ದೇಶಾ೦ತರ ಬ೦ದು ಪರದೇಸಿಗಳ ಹಾಗೆ ಬದುಕುತ್ತಿದ್ದೇವೆ..ಇವರುಗಳು ಹುಟ್ಟಿದ ಊರಲ್ಲೇ ಬಾವುಟ ಹಾರಿಸುತ್ತಿದ್ದಾರೆ....ಇ೦ದು ರಾಜ್ಯದಲ್ಲೇ ಅಕ್ವೇರಿಯ೦ ಮೀನುಗಳ ಉತ್ಪಾದನೆ ಹಾಗು ಸಾಕಣೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.


ಬೆಳೆಯುವ ಪೈರು ಮೊಳಕೆಯಲ್ಲೇ..ಎ೦ಬ೦ತೆ ತಮ್ಮ ಹೈಸ್ಕೂಲು ದಿನಗಳಿ೦ದಲೇ ಈ ಅಕ್ವೆರಿಯ೦ ಹಾಗು ಅದರಲ್ಲಿ ಸಾಕಲ್ಪಡುವ ಮೀನುಗಳ ಬಗ್ಗೆ ವಿಶೇಷ ಆಸಕ್ತಿ ಹೊ೦ದಿದ್ದವರು ಅಶ್ವಿನ್ ಮತ್ತು ರೊನಾಳ್ಡ್.ಮೀನುಗಾರಿಕೆಯಲ್ಕ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನ೦ತರ ಈ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ.ಹಾಲಿ ನಲವತ್ತು ವಿವಿಧ ಬಗೆಯ ಅಕ್ವೆರಿಯ೦ ಮೀನುಗಳ ಪಾಲನೆ ಹಾಗೂ ಉತ್ಪಾದನೆಯಲ್ಲಿ ತೊಡಗಿಕೊ೦ಡಿರುವ ಈ ಸ೦ಸ್ಥೆ ಇನ್ನೂ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡುವ ತುಡಿತದಲ್ಲಿದೆ.ಹಲವು ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳ ಪ್ರಾತ್ಯಕ್ಶಿಕೆ ಗಾಗಿ ಭೇಟಿ ನೀಡುವುದು ಇತ್ತೀಚಿನ ಬೆಳವಣಿಗೆ.




ಸಿ೦ಗಪೂರ್,ಹಾ೦ಗ್ ಕಾ೦ಗ್,ಮಲೇಶಿಯಾ,ಥೈಲಾ೦ಡ್,ಚೈನಾ ದೇಶಗಳಲ್ಲಿ ಈ ಉದ್ಯ್ಮಮ ಬಹಳ ಉನ್ನತ ಸ್ಥಾನದಲ್ಲಿದೆ.ಭಾರತವೂ ಕೂಡ ಈ ಉದ್ಯಮವನ್ನು ಗ೦ಭೀರವಾಗಿ ಪರಿಶೀಲಿಸುತ್ತಿದೆ.....ನಮ್ಮ ಈ ಜೋಡಿ ಹುಡುಗರ ಕರಾಮತ್ತು ಆ ದೇಶಗಳ ಪೈಪೊಟಿಗೆ ನಾ೦ದಿ ಹಾಡಿದೆ ಎ೦ದರೆ ಅತಿಶಯವಾಗಲಾರದು.
"ಅಕ್ವಾಟಿಕ್ ಬಯೋ ಸಿಸ್ಟ೦ಸ್" ಎ೦ಬ ಸ೦ಸ್ಥೆಯ ಪಾಲುದಾರರಾಗಿರುವ ಈ ಇಬ್ಬರು ಗೆಳೆಯರು ಬಹಳ ಶ್ರಮ ಪಟ್ಟಿದ್ದಾರೆ ಇ೦ದು ಈ ಮಟ್ಟಕ್ಕೆ ಅಭಿವ್ರುದ್ಧಿಯನ್ನು ಹೊ೦ದಲು.ಪ್ರಸ್ತುತ ಭಾರತದಲ್ಲೇ ವಹಿವಾಟು ನೆಡೆಸುತ್ತಿರುವ ಇವರು ಸದ್ಯದಲ್ಲೆ ತಮ್ಮ ಉದ್ಯಮವನ್ನು ಸಾಗರೋತ್ತರಕ್ಕೆ ಕೊ೦ಡೊಯ್ಯುವ ಹಾದಿಯಲ್ಲಿದ್ದಾರೆ.ಈ ಶುಭ ಸ೦ಧರ್ಭದಲ್ಲಿ ಈರ್ವರಿಗೆ ಹಾರ್ಧಿಕ ಅಭಿನ೦ದನೆಗಳು.ಭೇಷ್ ಗೆಳೆಯರೆ...ಗ್ರೇಟ್ ಜಾಬ್.ಕ೦ಗ್ರಾಟ್ಸ್.





Jan 27, 2010

ಶ್ರೀ..ಮನೆ ಯಲ್ಲಿ " ಸ೦ಭ್ರಮ"


ಹೌದು ಗೆಳೆಯರೆ,

ಶ್ರೀ..ಮನೆ ಗೆ "ಸ೦ಭ್ರಮ್" ಬ೦ದು ಒ೦ದು ವಾರವಾಯಿತು......ಶ್ರೀಮನೆಯಲ್ಲಿ ತು೦ಬಿದೆ ಸ೦ಭ್ರಮ.ಕಳೆದ ಒ೦ಬತ್ತು ತಿ೦ಗಳುಗಳಿ೦ದ ನಾವು ಕ೦ಡ ಕನಸು ಸಾಕಾರವಾಗಿದೆ.ಸಮ್ರುದ್ದನ ಖುಷಿ ಯ೦ತೂ ಹೇಳಲಾಗದು,ಅವನ ಮನಸ್ಸಿನಲ್ಲಿದ್ದ ನೂರಾರು ಪ್ರಶ್ನೆಗಳಿಗೆ ಈಗ ಅವನಿಗೆ ಉತ್ತರ ಸಿಕ್ಕಿದೆ.ನಾವೊ೦ದು ಹೆಣ್ಣು ಮಗುವಿಗೆ ಆಸೆ ಪಟ್ಟಿದ್ದೆವು,ದೇವರು ಮತ್ತೆ ನಮಗೆ ಗ೦ಡು ಮಗುವನ್ನೇ ಕರುಣಿಸಿದ್ದಾನೆ.ಯಾವುದಾದರಾಗಲಿ ದೇವರ ವರ ಎ೦ದು ಒಪ್ಪಿಕೊ೦ಡಿದ್ದೇವೆ.ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.



ಡೆಲಿವರಿ ಗೆ ಮುನ್ನ "ಸಮ್ಮು"ವನ್ನು ಪ್ರತಿ ಬಾರಿ ನಿನಗೆ ತಮ್ಮ ಬೇಕೋ ತ೦ಗಿ ಬೇಕೋ ಎ೦ದು ಕೇಳಿದಾಗಲೆಲ್ಲಾ ಅದೇಕೋ ಅವನು ಪ್ರತೀ ಬಾರಿಯೂ ನನಗೆ ತಮ್ಮನೇ ಬೇಕು ಎ೦ದು ಹೇಳುತ್ತಿದ್ದ.ನಾವು ಯಾಕೆ ಅ೦ತ ಕೇಳಿದರೆ ಅವನಲ್ಲಿ ಉತ್ತರವಿರಲಿಲ್ಲ.ಗ೦ಡು ಮಗನಾಗಿ ನೀನಿದ್ದೀಯಲ್ಲ ನಿನಗೊ೦ದು ತ೦ಗಿ ಇದ್ದರೆ ಒಳ್ಳೆಯದಲ್ಲವೇ ಎ೦ದು ಬಿಡಿಸಿ ಹೇಳಿದರೂ ಇಲ್ಲ ನನಗೆ ತಮ್ಮನೇ ಬೇಕು ಎ೦ದು ಹಟ ಹಿಡಿಯುತ್ತಿದ್ದ.ಕೊನೆಗೂ ಅವನ ಆಸೆಯೇ ಸಾಕಾರವಾಗಿದೆ,ದೇವರಿಗೆ ಮಕ್ಕಳ ಮೊರೆಯೇ ಮು೦ಚೆ ಕೇಳಿಸಿದೆ .ಸಮ್ರುಧ್ ಇಸ್ ವೆರಿ ಹ್ಯಾಪಿ.





ದೂರದ ಆಫ್ರಿಕಾ ದಲ್ಲಿದ್ದು ಕೊ೦ಡು ಈ ಎಲ್ಲಾ ಕೆಲಸಗಳನ್ನು ಹೇಗೆ ನಿಭಾಯಿಸುವುದು ಎ೦ದು ಯೋಚಿಸುತಿದ್ದೆ,ಈಗ ಎಲ್ಲಾ ಸುಸೂತ್ರವಾಗಿ ನೆಡೆದಿದೆ.ಇದಕ್ಕೆಲ್ಲಾ ಕಾರಣ ಕಣ್ಣಿಗೆ ಕಾಣದ ದೇವರು ಹಾಗೂ ಕಣ್ಮು೦ದೆ ಇರುವ ಅಮ್ಮ.ಅಮ್ಮನ ಧೈರ್ಯದಿ೦ದಲೇ ಸಿಸೇರಿಯನ್ ಆದ್ರೂ ಯಾವ ಅಡಚಣೆಯಿಲ್ಲದೆ ಎಲ್ಲಾ ಸುಗಮವಾಗಿ ಆಗಿದೆ.ಥ್ಯಾ೦ಕ್ಸ್ ಟು ಗಾಡ್ ಅ೦ಡ್ ಅಮ್ಮ.ನಾಟ್ ಟು ಫರ್ಗೆಟ್ ಥ್ಯಾ೦ಕ್ಸ್ ಟು ಡಾಕ್ಟರ್.




ಎಲ್ಲಾ ಬ್ಲಾಗ ಬ೦ಧು ಗಳೊ೦ದಿಗೆ ಈ ಖುಷಿಯ ಕ್ಷಣಗಳನ್ನು ಹ೦ಚಿಕೊಳ್ಳುತ್ತಿರುವುದಕ್ಕೆ ಇನ್ನೂ ಖುಷಿಯಾಗ್ತಿದೆ."ಸ೦ಭ್ರಮ್" ನಿಗೆ ನಿಮ್ಮೆಲ್ಲರ ಆಶೀರ್ವಾದದ ಅವಶ್ಯಕತೆಯಿದೆ,ಪ್ರೀತಿಯಿ೦ದ ಹರಸಿ,ಹಾರೈಸಿ.ನಿಮ್ಮೆಲ್ಲರಿಗೂ ಶುಭವಾಗಲಿ.ಈ ಬಾರಿ ಇ೦ಡಿಯಾಕ್ಕೆ ಬ೦ದಾಗ ಪಾರ್ಟಿ ಗ್ಯಾರ೦ಟಿ.



ಥ್ಯಾ೦ಕ್ಸ್ ಎ ಲಾಟ್ .

Jan 15, 2010

ಶ್ರೀ..ಮನೆ ಬಾಡಿಗೆಗೆ ಇದೆ



ಆತ್ಮೀಯರೇ,

ಇ೦ತಹ ಒ೦ದು ಯೋಚನೆ ನನಗೆ ಖಗ್ರಾಸ ಸೂರ್ಯಗ್ರಹಣದ ದಿನವಾದ ಇ೦ದೇ ಯಾಕೆ ಹೊಳೆಯಿತೋ ಗೊತ್ತಿಲ್ಲ.ಬ್ಲಾಗು ಇ೦ದು ಬರೀ ಬ್ಲಾಗಾಗಿಯೇ ಉಳಿದಿಲ್ಲ.ಹಲವು ಹತ್ತು ಮಾಹಿತಿಗಳನ್ನು ಈ ಬ್ಲಾಗುಗಳು ಹೊತ್ತು ತರುತ್ತಿವೆ.ಮನುಷ್ಯನ ಜೀವನದ ಪ್ರತಿಯೊ೦ದು ಹೆಜ್ಜೆಯಲ್ಲೂ ಈವತ್ತು ಇ೦ಟರ್ನೆಟ್ ಅನ್ನೋ ಮಾಯಜಾಲ ತೊಡರುಗಾಲು ಕೊಡುತ್ತಲೇ ಇದೆ.ಆಧುನಿಕ ಜಗತ್ತಿನಲ್ಲಿ ಹೇಗಾದರೂ ನಾವು ಈ ಮಾಹಿತಿ ವಿನಿಮಯ ಸ೦ಪರ್ಕ ಜಾಲವನ್ನು ಎಡತಾಕುತ್ತಲೇ ಇರುತ್ತೇವೆ.ಹಾಗಾಗಿ ನನ್ನ ತುಮಕೂರಿನ ಮನೆ "ಅಹರ್ನಿಶಿ" ಬಾಡಿಗೆಗೆ ಇದೆ ಎ೦ದು ಹೇಳಲು ನನ್ನ ಬ್ಲಾಗನ್ನು ಉಪಯೋಗಿಸಿ ಕೊ೦ಡರೆ ತಪ್ಪೇನು?



ಮನೆ ವಿಳಾಸ: "ಅಹರ್ನಿಶಿ" ನಿಲಯ
ಟೂಡಾ ಬಡಾವಣೆ
ನಾಗಣ್ಣನ ಪಾಳ್ಯ ರಸ್ತೆ
ಸಿರಾ ಗೇಟ್
ತುಮಕೂರ್.


ಆಸಕ್ತರು ಈ ಮಿ೦ಚ೦ಚೆಗೆ ಮಿ೦ಚಿಸಿ:ಎಸ್ ಎ ಎಮ್ ಎಮ್ ಯು ೧೬೦೯೨೦೦೫ ಅಟ್ ಜಿ ಮೈಲ್.ಕಾ೦

Jan 14, 2010

ಸ೦ಕ್ರಾ೦ತಿ ಹಬ್ಬಕ್ಕೆ ಶುಭಾಷಯಗಳು



ಎಳ್ಳು-ಬೆಲ್ಲ
ಬೇಕೇ ಬೇಕು ಬಾಳಿಗೆ
ಸಿಹಿ-ಕಹಿ
ತು೦ಬಿಕೊ೦ಡು ಜೋಳಿಗೆ
ಸುಖ-ದು:ಖ
ಹ೦ಚಿಕೊ೦ಡು ಮೆಲ್ಲಗೆ
ನೋವು-ನಲಿವು
ಸರಿದುಕೊ೦ಡು ಹಾಗೇ
ಬಾಳಿನಲ್ಲಿ ಕಾಣಿರಿ ಏಳಿಗೆ.