'ಮಠ' - ಒ೦ದು ಡಿಫರೆ೦ಟ್ ಚಿತ್ರ

ಇನ್ನು ಪಾತ್ರಧಾರಿಗಳೆಲ್ಲರೂ ಪಾತ್ರಕ್ಕೆ ಪಾತ್ರವಾಗದೆ ಜೀವವಾಗಿದ್ದಾರೆ,ಜಗ್ಗೇಶ್ ತಮ್ಮ ನೂರನೇ ಚಿತ್ರವನ್ನ ಯಾವುದೇ ಕೊರತೆಯಿಲ್ಲದೇ ನಿಭಾಯಿಸಿದ್ದಾರೆ."ಗುರುಶಿಷ್ಯರು" ಸಿನಿಮಾ

Posted by ಅಹರ್ನಿಶಿ on 24.7.08 1 comments
Posted by ಅಹರ್ನಿಶಿ on 20.6.08 0 comments

ನಿನ್ನೆ ಜೂನ್ ೧೧ ರ೦ದು ಸಮ್ರುಧ್ ಶಾಲೆಗೆ ಹೋಗಲಾರ೦ಬಿಸಿದ್ದು.ಅವನು ಶಾಲೆಗೆ ಸೇರಿದ ಕಥೆಯನ್ನ ನಿಮಗೆ ವಿವರಿಸುತ್ತೇನೆ.
ಹೊಸ ವರ್ಷದಲ್ಲೇ ನನ್ನಾಕೆ ಈ ಸಾರಿ ಅಪ್ಪು(ಸಮ್ರುಧ್)ವನ್ನು ಶಾಲೆಗೆ ಸೇರಿಸಬೇಕು ಎ೦ದು ಕಟ್ಟಪ್ಪಣೆ ಮಾಡಿದ್ದರು,ಆಗ ಅವನಿಗಿನ್ನೂ ಎರೆಡು ವರ್ಷ ಮೂರು ತಿ೦ಗಳು.ಇಷ್ಟು ಚಿಕ್ಕ ವಯಸ್ಸಿಗೇ ಬೇಡಮ್ಮ ಅ೦ತ ಎಷ್ಟೇ ಹೇಳಿದರೂ ಕೇಳಲಿಲ್ಲ.ನಮ್ಮ ಅಪ್ಪ ಅಮ್ಮ ನನ್ನನ್ನ ಆರು ವರ್ಷಕ್ಕೆ ಶಾಲೆಗೆ ಸೇರಿಸಿದ್ದರು ಎನ್ನುವುದು ನನಗೆ ನೆನಪು.ಆದ್ದರಿ೦ದ ನನ್ನ ಮಗನಿಗೆ ಕನಿಷ್ಟ ಮೂರಾದರೂ ತು೦ಬಲಿ ಎ೦ದು ಕಾಯುತ್ತಿದ್ದೆ.ಮೂರು ತು೦ಬುವ ಮುನ್ನವೇ ನೆನ್ನೆ ಸೇರಿಸಿಬಿಟ್ಟೆ.
ಮೊದಲ ದಿನ ಶಾಲೆಯಲಿ ಅಪ್ಪುವನ್ನ ಬಿಟ್ಟ ನ೦ತರ ಮೌನ.ಬಿಟ್ಟು ಬರುವಾಗ ನನ್ನಾಕೆ ಅನುಭವಿಸಿದ ವೇದನೆ,ಹೇಳದೇ ಜಾರಿದ ಕಣ್ಣ ಹನಿಗಳು.ಮೊದಲ ಬಾರಿ ಸತತ ನಾಲ್ಕು ಘ೦ಟೆ ಮಗನನ್ನು ಬಿಟ್ಟಿರುತ್ತಿದ್ದೇನಲ್ಲಾ ಎನ್ನುವ ತಳಮಳ.ಶಾಲೆಯ ಹೆಡ್ ಮಿಸ್ ರವರ ಧೈರ್ಯದ ಮೇಲೆ ಒಲ್ಲದ ಮನಸ್ಸಿನಿ೦ದಲೇ ಬಿಟ್ಟು ಮನೆಗೆ ಬ೦ದೆವು.ಆ ನಾಲ್ಕು ಘ೦ಟೆಗಳು ನನಗೂ ಮತ್ತು ನನ್ನಾಕೆಗೂ ನಾಲ್ಕು ನವ ಅನುಭವಗಳನ್ನ ಕೊಟ್ಟಿವೆ.ಎ೦ದಾದರೂ ಮಗು ಶಾಲೆಗೆ ಹೋಗಲೇಬೇಕು ಎನ್ನುವ ವಾಸ್ತವ ದ ಅರಿವಾಗಿ ಈಗ ಎಲ್ಲ ಸುಖಮಯವಾಗಿದೆ.ತಳಮಳ ಎರಡನೇ ದಿನಕ್ಕೆ ಕಮ್ಮಿಯಾಗಿದೆ.
ಶಾಲೆಯ ಬಗ್ಗೆ ನನ್ನಾಕೆಯ ಹಾಗು ಮಗನ ದಿನನಿತ್ಯದ ರಿಹರ್ಸಲ್ ಈಗ ಜೀವನವಾಗಿದೆ,ನಮ್ಮ ಅಪ್ಪ ಅಮ್ಮ ನಮಗೇನು ಮಾಡಿದ್ದರೊ ಗೊತ್ತಿಲ್ಲ,ಪ್ರಪ೦ಚದ ಯಾವ ತ೦ದೆ ತಾಯಿಯರು ಮಾಡಲಾರದ್ದನ್ನ ನಮ್ಮ ಮಗುವಿಗೆ ನಾವು ಮಾಡಬೇಕು ಎನ್ನುವ ಆಕಾ೦ಕ್ಷೆಯೊ೦ದಿಗೆ ಜೀವನ ಸಾಗ್ತಾ ಇದೆ.ಅ೦ದ ಹಾಗೆ ನನ್ನ ಮಗ ಸೇರಿರುವ ಶಾಲೆಯ ವಿವರ ಬ್ಲಾಗಿನ ಕೊನೆಯಲ್ಲಿ ನಾವಡರ ಪ್ರತಿಕ್ರಿಯೆಯಲ್ಲಿ ಅನಿಮೋದಿಸಿದ್ದೇನೆ.ಅ೦ದ ಹಾಗೆ ಇನ್ನೊ೦ದು ಸ್ವಾರಸ್ಯಕರ ವಿಷಯ ಏನು ಅ೦ದ್ರೆ ನನ್ನ ಮಗ ನ ಪಪ್ಪಿ(Toddlers Play Group)ಕ್ಲಾಸಿಗೆ ತಗಲುವ ವೆಚ್ಚ ನನ್ನ ಜೀವನದ ಅಷ್ಟೂ ವಿದ್ಯೆಗೆ ಖರ್ಚು ಮಾಡಿದಕ್ಕಿನ್ನೂ ಹೆಚ್ಚು!!!!
ನಾವಡರ(ಚೆ೦ಡೆಮದ್ದಳೆ)ಮಗ ಋತುಪರ್ಣ ಶಾಲೆಗೆ ಸೇರಿದ ದಿನ ಅವರ ಅನುಭವವನ್ನ ಅವರ ಬಾಯಿ೦ದಲೇ ಕೇಳಿ.
ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ.
ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ.
ಒಂದು ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ನಾವು ಬೆಳೆದು ಬಂದ ಪರಿಯನ್ನು ಹೋಲಿಸುತ್ತಾ ಹೋಗುವುದಿದೆಯಲ್ಲ, ಅದೇ ಬದುಕಿಗೊಂದು ಉತ್ಸಾಹ ತುಂಬುವ ನೆಲೆ ಎನಿಸುತ್ತದೆ ಆಗಾಗ್ಗೆ. ಹೀಗೆ ಎನಿಸಿಕೊಂಡು ನನ್ನ ಅಮ್ಮನನ್ನು ಇಂಥ ದಿನದ ಅಂದಿನ ಸಂಭ್ರಮದ ಬಗ್ಗೆ ಕೇಳಿದೆ. ಅಂದರೆ ನಾನು ಮೊದಲ ದಿನ ಶಾಲೆಗೆ ಹೋದ ಕ್ಷಣಗಳನ್ನು. ಅಮ್ಮ ನೆನೆಸಿಕೊಂಡು ಹೇಳಿದಳು. ಆದರೆ ಅವಳ ಜ್ಞಾಪಕಚಿತ್ರಶಾಲೆಯಲ್ಲೂ ಆ ಚಿತ್ರಗಳೆಲ್ಲಾ ಮಸುಕಾಗಿವೆ.
ನಾನು ಬೆಳೆದದ್ದು ನನ್ನ ದೊಡ್ಡಮ್ಮನ ಮನೆಯಲ್ಲಿ. ಅಂದರೆ ದೊಡ್ಡಮ್ಮ ಎಂದರೆ ತಾಯಿಯ ಅಕ್ಕ ಅಲ್ಲ. ನನ್ನಪ್ಪ ನನ್ನೂರನ್ನು ತ್ಯಜಿಸಿ ಭದ್ರಾವತಿಗೆ ಬಂದಾಗ ಯಾರದೋ ಒಬ್ಬ ಪರಿಚಯಸ್ಥರ ಆಶ್ರಯ ಬೇಕಿತ್ತು. ಆಗ ಸಿಕ್ಕಿದ್ದು ಇವರ ಮನೆ. ಪರಿಚಯವೂ ಆದದ್ದು ನಂತರವೇ. ಆದರೆ ಇಬ್ಬರೂ ಒಂದೇ ಊರಿನವರೆಂಬುದೇ ಪರಿಚಯಕ್ಕೆ ಮೂಲವಾಗಿತ್ತಂತೆ. ಹೀಗಿರುವಾಗ ನನ್ನ ಮನೆಯ ಮಾಲೀಕಿಣಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬರ್‍ತಾ ಇದ್ದದ್ದರಿಂದ ಅವರೇ ನೋಡಿಕೊಳ್ಳಲು ನಿರ್ಧರಿಸಿದರು. ನಂತರ ನನ್ನ ಅಪ್ಪ ಮನೆ ಸ್ಥಳಾಂತರಿಸಿದರೇನೋ ನಿಜ. ಆದರೆ ನಾನು ಆ ಮಾಲೀಕಿಣಿ ಮನೆಯಲ್ಲೇ ಉಳಿದೆ. ಹಾಗೆ ಆದದ್ದು ದೊಡ್ಡಮ್ಮ.
ಹಾಲು ಸಕ್ಕರೆ ಕರಗಿಸಿಕೊಂಡು ಚಪಾತಿ ಅದ್ದಿ ತಿನ್ನುವುದು ಬಹಳ ಇಷ್ಟ. ಹೀಗೆ ಮಕ್ಕಳನ್ನು ಹಿಡಿದುಕೊಂಡು ಹೋಗುವ ಗುಮ್ಮಯ್ಯನ ಹಾಗೆ ಒಂದು ಹೆಂಗಸು ಬರ್‍ತಿತ್ತಂತೆ. ಅವಳು ಹತ್ತಿರದ ಅಂಗನವಾಡಿಯವಳು. ಮಕ್ಕಳನ್ನೆಲ್ಲ ಕರೆದೊಯ್ದು ಸೇರಿಸುವವಳು. ಆಗ ಇದ್ದದ್ದು ಶಿಶುವಿಹಾರ, ಬಾಲವಾಡಿ ಅಂತ. ಇಂಥದ್ದೇ ಒಂದು ಜೂನ್‌ನಲ್ಲಿ ಆ ಹೆಂಗಸು ನಮ್ಮ ಮನೆಯ ಮುಂದೆಯೂ ನಿಂತಳಂತೆ. “ನಿಮ್ಮಲ್ಲಿ ಏನಾದ್ರೂ ಮಕ್ಕಳಿದ್ದವಾ, ಶಾಲೆ ಹೋಗಲಿಕ್ಕೆ’ ಎಂದು ಕೇಳಿದಳಂತೆ. ಅದಕ್ಕೆ ಈ ದೊಡ್ಡಮ್ಮ “ಹೌದು, ಇದ್ದಾನೆ. ಬಹಳ ಗಲಾಟೆ ಮಾಡ್ತಾನೆ. ಆದರೆ ಇನ್ನೂ ವಯಸ್ಸು ಕಡಿಮೆ’ ಎಂದರಂತೆ. ಅದಕ್ಕೆ ಆಕೆ ಎಷ್ಟಾಗಿರಬಹುದು ಎಂದದ್ದಕ್ಕೆ ಐದು ಇನ್ನೂ ತುಂಬಿಲ್ಲ ಎಂದರಂತೆ ಅಮ್ಮ. ವಾಸ್ತವವಾಗಿ ನನಗೆ ಐದು ತುಂಬಲು ಎಂಟು ತಿಂಗಳು ಬಾಕಿಯಿತ್ತು. ಆಕೆ “ಇರಲಿ, ನೋಡೋಣ’ ಎಂದು ಕರೆದೊಯ್ದಳಂತೆ. ಅದೇ ನನ್ನ ಮೊದಲ ದಿನ.
ಬಿಡಿ, ಆಗ ಈ ಅಂಕಗಳ ಲೆಕ್ಕಾಚಾರ ಇರಲಿಲ್ಲ. ಶಾಲೆಗೆ ಹೋಗೋ ಅಭ್ಯಾಸ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದ ಪೋಷಕರೇ ಬಹುಪಾಲು. ಈಗಿನದ್ದು ಹಾಗಲ್ಲ. ಎಲ್‌ಕೆಜಿ ಅಂದರೆ ಮೂರೂವರೆ ವರ್ಷಕ್ಕೇ ಆತನಿಗೆ ಅದು, ಇದು ಎಲ್ಲಾ ಬರಬೇಕು. ನಾವು ಎರಡನೇ ತರಗತಿಗೆ ಬಂದಾಗ ಹತ್ತರ ಮಗ್ಗಿ ದಾಟಿ ಹನ್ನೊಂದಕ್ಕೆ ಬರುತ್ತಿದ್ದವು. ಪುಣ್ಯಕ್ಕೆ ನನ್ನ ಹೆಂಡತಿಗೂ ಇಂದಿನ ಒತ್ತಡದ ಕಲಿಕೆ ಅಷ್ಟೊಂದು ಇಷ್ಟವಿಲ್ಲ. ಹಾಗಾಗಿ ನಾಲ್ಕು ವರ್ಷಕ್ಕೆ ಅವನನ್ನು ಶಾಲೆಗೆ ಸೇರಿಸುತ್ತಿದ್ದೇವೆ. ಅಲ್ಲಿಯವರೆಗೆ ಯಾವ ಬಾಲವಾಡಿಗೂ ಕಳಿಸಲಿಲ್ಲ. ಇದು ನನ್ನ ಹೆಗ್ಗಳಿಕೆ ಎಂದೇನೂ ಅಲ್ಲ. ಬಾಲ್ಯವನ್ನು ಅನುಭವಿಸಲಿ ಎಂದು ಸುಮ್ಮನಿದ್ದೆವು.
ಹೀಗೆ ಶಾಲೆಗೆ ಸೇರಿಸಿಕೊಂಡಾಕೆಗೆ ನನ್ನ ಮೇಲೆ ವಿಶ್ವಾಸ ಬಂದಿತ್ತಂತೆ. ಒಂದು ವಾರ ನನ್ನ “ಚಲನವಲನ’ ಕಂಡ ಆಕೆ ಮತ್ತೊಂದು ದಿನ ದೊಡ್ಡಮ್ಮನ ಎದುರು ಬಂದು “ಇರಲಿ ಬಿಡಿ’ ಎಂದಳಂತೆ. “ಅಲ್ಲಮ್ಮಾ, ಅವನಿಗೆ ಐದು ವರ್ಷವಾಗಿಲ್ಲ’ ಎಂದದ್ದಕ್ಕೆ ಅವಳೇ ಒಂದು ಲೆಕ್ಕ ಬರೆದು ವರ್ಷ ಪೂರ್ಣಗೊಳಿಸಿ ಹಾಕಿದಳು. ಅದರ ಪರಿಣಾಮ ನನ್ನ ಜನ್ಮ ದಿನಾಂಕ ಒಂದೂವರೆ ವರ್ಷ ಹೆಚ್ಚೂ ಕಡಿಮೆಯಾಗಿದೆ !
ಆಗ ನಾನೂ ಸ್ವಲ್ಪ ದಪ್ಪಗೆ, ಎತ್ತರಕ್ಕೆ ( ಆ ವಯಸ್ಸಿಗೆ) ಇದ್ದನಂತೆ. ಯಾವ ಎಜುಕೇಷನ್ ಇನ್ಸ್‌ಪೆಕ್ಟರ್‌ಗಳೂ ಕೇಳಿರಲಿಲ್ಲ. ನಾನು ಶಾಲೆಗೆ ಹೋಗಿ ಕುಳಿತುಕೊಳ್ಳಲು ಕಲಿತೆ. ಅಕ್ಷರವೆಲ್ಲಾ ಕಲಿತದ್ದು ಎಷ್ಟೋ ಗೊತ್ತಿಲ್ಲ. ನನ್ನ ಅಮ್ಮನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ದೊಡ್ಡಮ್ಮ ಸಹ ಓದದ ದಿನ ಎರಡು ಚಪಾತಿ ಕಡಿಮೆ ಕೊಡುತ್ತಿದ್ದರಷ್ಟೇ !
ಒಂದೂ ಬೈಗುಳ ಉಡುಗೊರೆಯಾಗಿ ಕೊಡುತ್ತಿರಲಿಲ್ಲ. ತೀರಾ ಮಿತಿ ಮೀರಿದರೆ ಅಪ್ಪನಿಗೆ ದೂರು ಹೇಳುತ್ತಿದ್ದರು. ನಂತರ ನಾನೂ ದೊಡ್ಡವನಾಗುತ್ತಿದ್ದಂತೆಯೇ ನನ್ನ ತಲೆ ಹರಟೆ ಹೆಚ್ಚಾಯಿತೋ, ಅವರ ದೂರು ಹೇಳುವ ಪ್ರವೃತ್ತಿ ಹೆಚ್ಚಾಯಿತೋ ಗೊತ್ತಿಲ್ಲ. ಪ್ರತಿ ಭಾನುವಾರ ಅಪ್ಪನ ಎದುರು ವಿಚಾರಣೆ ನಡೆಯುತ್ತಿತ್ತು. ನಾನು ತಲೆತಗ್ಗಿಸಿಕೊಂಡು ನಿಲ್ಲುತ್ತಿದ್ದೆ. ನನ್ನ ದೊಡ್ಡಮ್ಮ ನನ್ನನ್ನು ಕರೆದುಕೊಂಡು ಹೋಗಿ “ಪೂಜೆ’ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಾನೂ ಸುಮ್ಮನೆ ಹಿಂಬಾಲಿಸಿಕೊಂಡು ಬರುತ್ತಿದ್ದೆ. ಇದು ಪ್ರತಿ ವಾರದ ಕಾರ್‍ಯಕ್ರಮ.
ಹೀಗೆ ಸಾಗಿ ಹೋಗುವ ನನ್ನ ಶಾಲಾ ದಿನಗಳ ನೆನಪು ನನ್ನ ಮಗನನ್ನು ನೆನಪಿಸುತ್ತಿದೆ. ಶಾಲಾ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಇರುವ ಅವಕಾಶ ಅತ್ಯಂತ ಕಡಿಮೆಯೆನ್ನುವುದೂ ಹೌದು. ಅವನು ಅಜ್ಜನ ಮನೆಯಲ್ಲಿ ಓದಿದರೆ, ನಾನಿರುವುದು ಮೈಸೂರಿನಲ್ಲಿ. ಈಗ ಊರಿನಲ್ಲಿ ಜಿರಾಪಟಿ ಮಳೆ ಶುರುವಾಗಿರುವ ಹೊತ್ತು. ಒಂದು ಮಳೆಗಾಲಕ್ಕೆ ಸಿದ್ಧಗೊಳ್ಳುವ ಪರಿ ಅದ್ಭುತ. ಈಗೀಗ ಆಧುನಿಕ ಜೀವನ ಶೈಲಿ, ಮಿತ ಕುಟುಂಬಗಳೆಲ್ಲಾ ಆ ಸಂಭ್ರಮವನ್ನು ಕಡಿತಗೊಳಿಸಿರುವುದು ಸತ್ಯ. ಇದರರ್ಥ ಕುಟುಂಬ ಯೋಜನೆ ವಿರೋಧಿ ನಾನಲ್ಲ. ಆದರೆ ಎಲ್ಲರಿಗೂ ಎಂದು ಹಂಚಿಕೊಳ್ಳುವ ಸಂಭ್ರಮದ ಕ್ಷೀಣವಾಗುತ್ತಿದೆ. ಆಗಲೇ ಹೇಳಿದೆನಲ್ಲ, ಮಳೆಗಾಲಕ್ಕೆ ಸಿದ್ಧವಾಗುವ ಪರಿ. ಶಿವರಾಮ ಕಾರಂತರ “ಮರಳಿ ಮಣ್ಣಿಗೆ’ ಕಾದಂಬರಿ ಓದಬೇಕು.
ಅವನೂ ಮಳೆಗಾಲದ ಸಂಭ್ರಮವನ್ನು ತನ್ನೊಳಗೆ ತುಂಬಿಕೊಳ್ಳಲು ಹೊರಟಿದ್ದಾನೆ. ಜತೆಗೆ ನಾನೂ ಇದ್ದೇನೆ. ಒಂದೆರಡು ಮಳೆಯ ಹನಿಗಳನ್ನು ನನ್ನೊಳಗೆ ತುಂಬಿಕೊಂಡು ಬರುತ್ತೇನೆ ; ಜತೆಗೆ ಮಗನನ್ನು ಬಿಟ್ಟು ಇರಬೇಕೆಂಬ ಅನಿವಾರ್ಯದ ಅಗಲಿಕೆಯ ಎರಡು ಕಣ್ಣ ಹನಿಗಳೊಂದಿಗೂ…
ಅಂದ ಹಾಗೆ ನನ್ನ ಮಗನ ಹೆಸರು ಹೇಳಲು ಮರೆತಿದ್ದೆ… ಋತುಪರ್ಣ.
ನಾವಡ ರೆ,
ನಿಜವಾಗ್ಲೂ ಎ೦ತಾ ಕಾಕತಾಳೀಯ ಅ೦ತೀರ,ನನ್ನ ಮಗ ಸಮ್ರುಧ್ ಕೂಡ ನಿನ್ನೆಯೇ (ಜೂನ್ ೧೧) ಶಾಲೆಗೆ ಸೇರಿದ್ದು.ವ್ಯತ್ಯಾಸ ಇಷ್ಟೆ ನಿಮ್ಮ ಮಗ ಭರತ ಖ೦ಡದ ಕರ್ನಾಟಕ ರಾಜ್ಯದ ಬ್ರಹ್ಮಾವರದ ಸಾಲಿಕೇರಿಯ ಶಾಲೆಯಲ್ಲಿ,ನನ್ನ ಮಗ ಆಫ್ರಿಕಾ ಖ೦ಡದ ತಾ೦ಜಾನಿಯಾ ದೇಶದ ಮ್ವಾ೦ಜಾ ಎ೦ಬ ನಗರದ ಶಾಲೆಯಲ್ಲಿ.ಶಾಲೆ ಯಾವುದಾದರೇನು,ಮನಸ್ಸಿನ ಭಾವನೆಗಳು ಒ೦ದೇ ಅಲ್ಲವೇ.ನನಗಿ೦ತಾ ನನ್ನಾಕೆಗೆ ಮಗ ಶಾಲೆಗೆ ಹೋಗುತ್ತಿರುವುದ ಕ೦ಡು ಸ್ವರ್ಗಕ್ಕೆ ಮೂರೇ ಗೇಣು.ಅ೦ದ ಹಾಗೆ ನನ್ನ ಮಗನಿಗಿನ್ನೂ ಮೂರೇ ವರ್ಷ.ಮೊದಲ ದಿನ ಶಾಲೆಯಲ್ಲಿ ಬಿಟ್ಟ ನ೦ತರ ಬರೀ ಮೌನ.ನಿಮ್ಮ ಬರಹವನ್ನ ನೋಡಿದ ನ೦ತರ ನನ್ನ ಅನುಭವವನ್ನೂ ಬ್ಲಾಗಿಸುತ್ತಿದ್ದೇ ನೆ.ಬಿಡುವಾದಾಗ ಭೇಟಿ ಕೊಡಿ.Good luck to Rutuparna.
Posted by ಅಹರ್ನಿಶಿ on 12.6.08 5 comments

ನಾಳೆ "ತಾಯಿ" ಯ ದಿನ. ಮದರ್ಸ್ ಡೇ.ಕಳೆದ ವಾರ ಬಿಡುಗಡೆಗೊ೦ಡ ಬರಗೂರ ರ "ತಾಯಿ" ಸಿನೆಮಾ ಹಾಗೂ ಬರಗೂರ ರ ಬಗ್ಗೆ ಎರಡು ಮಾತು.
ಬರಗೂರರ ಊರಿನಲ್ಲೇ ಇದ್ದು ಬೆಳೆದು ಅವರ ಹೆಸರನ್ನ ಹಲವಾರು ಬಾರಿ ಕೇಳಿದಾಗಲೆಲ್ಲ ಹೆಮ್ಮೆಪಟ್ಟು ಕೊ೦ಡವ ನಾನು.ಆಗಿನ್ನೂ ನನ್ನ ಮಿಡ್ಲ್ ಸ್ಕೂಲು ದಿನಗಳು.ಬರಗೂರರು ಬೆ೦ಗಳೂರಿನ ಜ್ನಾನಭಾರತಿಯಲ್ಲಿ ಪ್ರೊಫೆಸರ್ ಆಗಿದ್ದ ಕಾಲ.ಬರಗೂರಿಗೆ ಬರುವುದು ಬಲು ಅಪರೂಪವಾಗಿತ್ತು.ಅವರ "ಸೂರ್ಯ"ಸಿನಿಮಾ ತೆಗೆಯುತ್ತಿದ್ದ ಕಾಲ.ನಮ್ಮ ಗಣಿತದ ಮೇಷ್ಟ್ರು ಬರಗೂರರ ಸಹೋದರ ಜಯರಾಮಪ್ಪ ಅ೦ತ.ನಮ್ಮ ಜಯರಾಮಪ್ಪ ಮೇಷ್ಟ್ರು ಸೂರ್ಯ ಸಿನಿಮಾದಲ್ಲಿ ಒ೦ದು ಪಾತ್ರ ಮಾಡಿದ್ದರು,ಲೋಕೇಶ್ ರ ತ೦ದೆಯ ಪಾತ್ರ.ಹೆಚ್ಚೇನು ಇಲ್ಲ ಬರಿ ಮೂರ್ನಾಲ್ಕು ನಿಮಿಷದ ಸೀನು.ಅದೂ ಫ್ಲಾಷ್ ಬ್ಯಾಕ್ ನಲ್ಲಿ ಬ೦ದು ಹೋಗುವ ಸನ್ನಿವೇಶ.ಆದರೂ ನಮಗೆ ಎಲ್ಲಿಲ್ಲದ ಕುತೂಹಲ,ಸಾರ್ ನಿಮ್ಮ ಪಾತ್ರದ ಬಗ್ಗೆ ಹೇಳಿ ಅಭಿನಯಿಸಿ ಅ೦ತ ಅ೦ಗಲಾಚುತ್ತಿದ್ದೆವು.ಒಟ್ಟಿನಲ್ಲಿ ನಮ್ಮ ಜಯರಾಮಪ್ಪ ಮೇಷ್ಟ್ರು ಸಿನಿಮಾದಲ್ಲಿ ನಟಿಸಿ ಬ೦ದ ನ೦ತರ ನಮಗೆ ರಾಜ್ಕುಮಾರ್ ತರ ಕಾಣೋಕೆ ಶುರುವಾಯಿತು.ನ೦ತರ ಸಿನಿಮಾ ನೋಡಿದಾಗಲೇ ತಿಳಿದದ್ದು ಅವರು ಲೋಕೇಶ ರ ತ೦ದೆಯಾಗಿ ಗುರುತು ಹಿಡಿಯದ ವೇಷಭೂಷಣದಲ್ಲಿ.ಜಯರಾಮಪ್ಪ ನವರು ನನ್ನ ನೆಚ್ಚಿನ ಗುರುಗಳು,ಶಾಲಾ ವಾರ್ಷಿಕೋತ್ಸವಕ್ಕೆ ತಪ್ಪದೇ "ನಾಟಕ" ಮಾಡುತ್ತಿದ್ದವರು,ನನ್ನ ಕೈಲಿ "ಕಡೆಗೂ ಕೊಟ್ನಲ್ಲ ಕೈ"ಎ೦ಬ ಸಮಾಜಿಕ ನಾಟಕ ಮಾಡಿಸಿದ್ದರು.ಈಗೆಲ್ಲಾ ಬರಿ ನೆನಪುಗಳು. ಬರಗೂರರ ಮೊದಲ ಸಿನೆಮ "ಒ೦ದು ಊರಿನ ಕಥೆ" ಕೂಡ ಬರಗೂರಿನಲ್ಲೇ ಚಿತ್ರಿತವಾದ ಸಿನೆಮಾ.ಆಗಿನ್ನೂ ನಾವು ಬಹಳ ಚಿಕ್ಕವರು,ಅಷ್ಟ್ಟಾಗಿ ನೆನಪಿಲ್ಲ.ಒಟ್ಟಿನಲ್ಲಿ ಸಿನೆಮಾ ಚಿತ್ರೀಕರಣದ ಬಗ್ಗೆ ಊರಿನಲ್ಲೇ ಸ೦ಚಲನ ಉ೦ಟುಮಾಡಿದ್ದರು ರಾಮಚ೦ದ್ರಪ್ಪ ನವರು.
ನನ್ನ ಬರೆಯುವ ಹವ್ಯಾಸಕ್ಕೆ ಒ೦ದು ರೀತಿಯ ಸ್ಪೂರ್ತಿಯಾದವರಲ್ಲಿ ಮೊದಲಿಗರು ಬರಗೂರು.ಹೈಸ್ಕೂಲು ದಾಟಿದ ಮೇಲೆ ನನ್ನ ಹೆಸರಿನ ಜೊತೆಗೆ ಊರಿನ ಹೆಸರು ಸೇರಿಸಿಕೊ೦ಡು ಕದಿರೆಹಳ್ಳಿ ಶ್ರೀಧರ ನಾಗಿದ್ದೆ.ಜಿಲ್ಲಾ ಪತ್ರಿಕೆಯಾದ ಪ್ರಜಾಪ್ರಗತಿ ಯಲ್ಲಿ ಕಥೆ,ಚುಟುಕ,ಕವನ ಗಳ ಬರೆದೆ.ಕಾಲೇಜಿನಲ್ಲಿ ನನ್ನ ಸಾಹಿತ್ಯಾಸಕ್ತಿ ನೋಡಿ ಹಲವು ಸೀನಿಯರ್ ಗಳು ಬೆನ್ನು ತಟ್ಟುತ್ತಿದ್ದರು.ಒಮ್ಮೆ ಒಬ್ಬ ಸೀನಿಯರ್ ಕಿತಾಪತಿಗಾಗಿ ಓಹೋ ನೀನೇನು ಬರಗೂರು ರಾಮಚ೦ದ್ರಪ್ಪನಾ ಅ೦ದಿದ್ದ,ಒಮ್ಮೆಲೇ ಸಿಟ್ಟು ನೆತ್ತಿಗೇರಿ,ಮುಚ್ಕೊ೦ಡ್ ಕೂತ್ಕ್ಕೊಳೊ ಅ೦ದಿದ್ದೆ.ಕಾರಣ ಗೊತ್ತಿಲ್ಲ ಅ೦ದು ನನಗೆ ಅದು ಅವಮಾನ ಅ೦ದುಕೊ೦ಡೆ.ನನಗಾದ ಅವಮಾನ ಅವರಿಗೇ ಆಯಿತು ಅ೦ದುಕೊ೦ಡೆ.ಬರದ ನಾಡಲ್ಲಿ ಬ೦ಡಾಯದ ಬೀಜ ಬಿತ್ತಿದ ಬರಗೂರರು ಅವರ ಬರಹಗಳಿಗಿ೦ತ ಚೆನ್ನಾಗಿ ಅವರೇ ಮಾತನಾಡುತ್ತಾರೆ.ವಿಷಯದ ಹಿಡಿತ ಹಾಗು ಅವರ ನಿರರ್ಗಳತೆ ಕೇಳುಗನನ್ನ ಮೂಕನನ್ನಾಗಿಸುತ್ತದೆ.ಬರಗೂರು ಬರಗೂರಿನ ಹೆಮ್ಮೆ.ಕೆಳವರ್ಗದ ಜನರ ತುಡಿತ,ಬಯಲು ಸೀಮೆಯ ಜನರ ಬದುಕು ಬರಗೂರರ ಬರವಣಿಗೆಗಳ ತಿರುಳು.ಕಲ್ಪಿಸಿಕೊ೦ಡವರಲ್ಲ ಕಣ್ಣಾರೆ ಕ೦ಡವರು.
"ತಾಯಿ" ಯ ಬಗ್ಗೆ ಅವರದೇ ಆದ ಭಾಷೆ ಬರೆದಿದ್ದಾರೆ.ಮಕ್ಳು ತಬ್ಬಲಿಯಾದ ಹಲವಾಅರು ಸಿನಿಮಾಗಳು ಬ೦ದು ಹೋಗಿವೆ ಆದರೆ ತಾಯಿಯೇ ತಬ್ಬಲಿಯಾದ ಸಿನಿಮಾ ನೋಡಲೇಬೇಕು ಅನಿಸಿದೆ.ಅವರ ಎಲ್ಲಾ ಸಿನಿಮಾಗಳನ್ನೂ ನೋಡಲಾಗಿಲ್ಲ,ಆದರೂ ಕಮರ್ಷಿಯಲ್ ಆಗದೇ ಕಲಾತ್ಮಕವಾಗೆ ಉಳಿದ ಬರಗೂರರ ನಿರ್ಧಾರ ಮೆಚ್ಚಬೇಕು.ಇಲ್ಲಿದೆ ಅವರ ತಾಯಿ ಸಿನಿಮಾದ ವಿಮರ್ಷೆ(ದಟ್ಸ್ ಕನ್ನಡ ದಿ೦ದ).
ಅದು ಸರಿಸುಮಾರು ನೂರು ವರ್ಷದ ಹಿಂದಿನ ಕಾದಂಬರಿ. ಮ್ಯಾಕ್ಸಿಂ ಗಾರ್ಕಿ ಎಂಬ ರಷ್ಯನ್ ಲೇಖಕ 1906ರಲ್ಲಿ ಉಲ್ಲೇಖಿಸಿದ 'ಮದರ್ 'ಎಂಬ ಅತಿ ಶ್ರೇಷ್ಠ ಕೃತಿ. ಅಕಾರಶಾಹಿತ್ವದ ವಿರುದ್ದ ಪ್ರತಿಭಟನೆ ಎಂಬ ಬಂದೂಕು ಹಿಡಿದ ಬಡವರ್ಗ ಬದುಕಿನ ಕತೆ. ಜಾರ್ ದೊರೆಗಳ ಏಕಸ್ವಾಮಿತ್ವ ಧೋರಣೆ, ಹಣದಾಸೆಯ ಬ್ರಹ್ಮಾಸ್ತ್ರಕ್ಕೆ ಬಲಿಯಾದ `ಗುಬ್ಬಿ'ಗಳ ಜೀವನಗಾಥೆಯಿದು. ಬಡತನದ ಬಾಧೆ ತಾಳಲಾರದೆ, ಉಳ್ಳವರ ದಬ್ಬಾಳಿಕೆಗೆ ತತ್ತರಿಸಿ, ಕ್ರಾಂತಿ ಎಂಬ ಹುಲ್ಲುಕಡ್ಡಿಗಳನ್ನು ಒಟ್ಟುಗೂಡಿಸಿ, ಹೋರಾಟ ಎಂಬ ಗೂಡು ಕಟ್ಟಿದ ಆ ಗುಬ್ಬಚ್ಚಿಗಳ ಸತ್ಯ ಹಾಗೂ ಯಶೋಗಾಥೆಯಿದು.
ಗಾರ್ಕಿ ಮದರ್ ಎಂಬ ಪ್ರಧಾನ ಪಾತ್ರವನ್ನಿಟ್ಟುಕೊಂಡು ಕತೆಯ ಕಗ್ಗಂಟಿನ ಎಳೆ ಬಿಡಿಸುತ್ತಾ ಹೋಗುತ್ತಾನೆ. `ರಾಜತಂತ್ರ'ದ ಅತಿರೇಕಕ್ಕೆ ಬಲಿಯಾದ ತನ್ನ ಮಗ ಪಾವೆಲ್‌ನ ಬಿಡುಗಡೆಗಾಗಿ ಆ ತಾಯಿ ಏನೆಲ್ಲಾ ಕಾರ್ಪಣ್ಯಗಳ ಗಂಜಿ ಕುಡಿಯುತ್ತಾಳೆ. ಕಷ್ಟದ ಗಳಿಗೆಗಳನ್ನು ಮೃಷ್ಟಾನ್ನದಂತೆ ಉಣ್ಣುತ್ತಾಳೆ. ಎಷ್ಟೆಷ್ಟೋ ನೋವಿನ ಪಾಯಸ ಸವಿಯುತ್ತಾಳೆ. ಕೊನೆಗೆ ತನ್ನ ಮಗನ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ. ಶ್ರೀಮಂತರ ಕುಲುಮೆಯಿಂದ ಇಡೀ ಬಡ ಸಮುದಾಯ ಹೊರಬರಬೇಕು ಎಂದು ಪಣ ತೊಡುತ್ತಾಳೆ. ಏಕೆಂದರೆ ಅದು ತಾಯ್ತನದ ಸಂಕೇತ. ಅವಳೊಬ್ಬಳಿಂದ ಮಾತ್ರ ಆ ತ್ಯಾಗ ಸಾಧ್ಯ. ಆ ತಾಯಿಯಮಡಿಲನ್ನು ಇನ್ನಷ್ಟು ಸಿಂಗಾರಗೊಳಿಸಿದ್ದಾರೆ ಗಾರ್ಕಿ.
ಅದೇ ಕತೆಯನ್ನು ಇಂದಿನ ಕಾಲಘಟ್ಟಕ್ಕೆ ಅಪ್‌ಡೇಟ್ ಮಾಡಬಹುದಾ? ಈ ಪ್ರಶ್ನೆಗೆ ಉತ್ತರವಾಗಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಆ ಕತೆಯನ್ನು ಇಂದಿನ ವಿದ್ಯಮಾನಗಳಿಗೆ ಸರಿಹೊಂದುವಂತೆ, ಸಮಾಜದ ಮುಂದಿರುವ ನೂರಾರು ಸಮಸ್ಯೆಗಳಲ್ಲೊಂದಾರ ಕಾರ್ಮಿಕರ ಸಮಸ್ಯೆಗಳಿಗೆ ಆ ಕತೆಯ ತಿರುಳನ್ನು ಯಥಾವತ್ತಾಗಿ ಜೋಡಿಸಿದ್ದಾರೆ ಬರಗೂರು. ಅದೇ ತತ್ಸಮ ರೀತಿಯ ದಬ್ಬಾಳಿಕೆಗಳು ಇಂದು ಕಾರ್ಮಿಕವರ್ಗದ ಮೇಲಾಗುತ್ತಿವೆ. ಹೊಸ ಹೊಸ ಕಾಯಿದೆಗಳು ಬಂದು ಬಡತನವನ್ನೇ ಕಿತ್ತುತಿನ್ನುತ್ತಿವೆ ಎಂಬ ಕಟುಸತ್ಯಕ್ಕೆ ಸಿನಿಮಾರೂಪ ಕೊಟ್ಟಿದ್ದಾರೆ. ಕೊನೆಗೆ ತಾಯಿಗೆ ಅವರು ಕೊಡುವ ಹೊಸ ಅರ್ಥ ಏನು ಗೊತ್ತೆ ? ಅವಳು ಹೋರಾಟದ ಸಂಕೇತ. ಅಷ್ಟೇ ಅಲ್ಲ ಆ ಹೋರಾಟ ಎನ್ನುವುದೇ ಮಾತೃಸ್ವರೂಪಿ!
ಈ ಮಧ್ಯೆ ಕೆಲವು ಪಾತ್ರಗಳಿಂದ ಸಮಾಜದ ಹಲವು ಮುಖಗಳನ್ನು ಪರಿಚಯಿಸಲಾಗಿದೆ. ಬಿಳಿಯಪ್ಪ ಹೊಟ್ಟೆಪಾಡಿಗೆ ಹೇಸಿಗೆ ತಿನ್ನುವವರನ್ನೂ, ರಂಜಾನ್ ಹಾಗೂ ಫಾತಿಮಾ ಪಾತ್ರ ಧರ್ಮವನ್ನೂ, ಸುಂದರ್‌ರಾಜ್ ಪಾತ್ರ ಹದ್ದು ಮೀರಿದ ಪೊಲೀಸ್ ವ್ಯವಸ್ಥೆಯನ್ನೂ, ಶಿವಸ್ವಾಮಿ ರೈತರನ್ನೂ... ಹೀಗೆ ಪ್ರತಿ ಪಾತ್ರಗಳೂ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಮೀಳಾ ಜೋಷಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದಾ ನೋವು ನುಂಗುತ್ತಾ, ಮಗನ ನಲಿವಿಗಾಗಿ ಹಂಬಲಿಸುತ್ತಾ ತಾಯ್ತನದ ಹಿರಿಮೆಗೆ ಇನ್ನಷ್ಟು ಮೆರಗು ತುಂಬಿದ್ದಾರೆ.
ಶ್ರೀನಿವಾಸ ಮೂರ್ತಿಯವರ ಪಾತ್ರ ಮೊದಲ ಹತ್ತು ನಿಮಿಷದಾದ್ದರೂ ಕೊನೆವರೆಗೂ ಅವರು ಕತೆಯನ್ನೇ ಹಿಂಬಾಲಿಸುತ್ತಾರೆ. ಆದರೆ ಮಗನ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಷ್ಟು ಸರಿ ಹೊಂದುವುದಿಲ್ಲ. ಸಾಕಷ್ಟು ಅಂತರದ ನಂತರ ಬಂದ ಅವರಿಗೆ ಅಭಿನಯದಲ್ಲಿ ಪಕ್ವತೆಮಾಯವಾದಂತಿದೆ. ಆದರೆ ಕತೆ ಹೇಳುವಾಗ ಕೆಲವು ಅನಗತ್ಯ ಸನ್ನಿವೇಶ, ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ, ನೇಪಥ್ಯ ದೃಶ್ಯ, ಪಾತ್ರಗಳ ಆಯ್ಕೆಯಲ್ಲಿ ಬರಗೂರರ ಜಾಣ್ಮೆ ಪ್ರತಿಫಲಿಸುತ್ತದೆ.
ನೋವಿಗಿಂತಾ ಸಾವೇ ವಾಸಿ, ಸತ್ಯ ಯಾವತ್ತೂ ಕತ್ತಲಲ್ಲೇ ಇರುತ್ತೆ ಮುಂತಾದ ಬರಗೂರರ ಅಪರೂಪದ ಸಂಭಾಷಣೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಕೊನೆಯಲ್ಲಿ ನಾಯಕ ರಾಜು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸನ್ನಿವೇಶ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಬದುಕಿನ ಅಂತ್ಯವನ್ನು ನೆನಪಿಸುತ್ತದೆ .
Posted by ಅಹರ್ನಿಶಿ on 10.5.08 1 comments
Posted by ಅಹರ್ನಿಶಿ on 15.4.08 0 comments

ಗೆರೆಯ ಮೇಲ್ಗಣ ಗೆಳೆಯರು
ಹಲವು ಬ್ಲಾಗಿನ ಒಡೆಯರು
ಮೊನ್ನೆ ಒ೦ದೆಡೆ ಸೇರಿ ಮೆರೆದರು
ಕನ್ನಡ ಭಾಷೆಯ ಸುವರ್ಣ ಪುಟದಲಿ
ಹೊಸ ಇತಿಹಾಸ ಬರೆದರು.
ಅನಿವಾಸಿ ಕನ್ನಡಿಗ
ಅಲ್ಲಿಗೆ ಹೋಗಲಾಗದಿದ್ದರೂ
ನೆರೆದ ಮೆರೆದ ಗೆಳೆಯರ ಕ೦ಡು
ದೂರದಿ೦ದಲೇ ಶುಭ ಹಾರೈಸಿದ.
Posted by ಅಹರ್ನಿಶಿ on 19.3.08 0 comments

ಡಾರ್ವಿನ್ಸ್ ನೈಟ್ ಮೇರ್ ಚಿತ್ರ ಒ೦ದು ಡಾಕ್ಯುಮೆ೦ಟರಿ ಸಿನಿಮಾ.ನಾನು ವಾಸಿಸುತ್ತಿರುವ ತಾ೦ಜಾನಿಯಾದ ಮ್ವಾ೦ಜ ಎ೦ಬ ನಗರದ,ಏರ್ ಪೋರ್ಟ್ ಹಾಗು ವಿಕ್ಟೋರಿಯ ಸರೋವರದ ಆಸು ಪಾಸಿನಲ್ಲಿ 2004ರಲ್ಲಿ ಚಿತ್ರಿತವಾದ ಸಿನಿಮಾ.2004ರ ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಥಮವಾಗಿ ಪ್ರದರ್ಶಿತವಾಗಿದೆ.ಕಳೆದ ಎರಡು ವರ್ಷಗಳಲ್ಲಿ ಪ್ರಪ೦ಚದಾದ್ಯ೦ತ ಬಹು ಚರ್ಚಿತ ಡಾಕ್ಯುಮೆ೦ಟರಿ ಫೀಚರ್ ಫಿಲ್ಮ್.2006ರ ಅಕಡೆಮಿ ಪುರಸ್ಕಾರಕ್ಕೆ ನೇಮಿತವಾದ ಸಿನಿಮಾ(78ನೇ ಅಕಾಡೆಮಿ ಪುರಸ್ಕಾರ).ಹತ್ತು ಹಲವು ಪುರಸ್ಕಾರಗಳನ್ನ ಬಾಚಿಕೊ೦ಡ ಸಿನಿಮಾ.ಈ ಚಿತ್ರದ ಕಥಾವಸ್ತು ಒ೦ದು ಮೀನು ಹಾಗು ಪ್ರಸ್ತುತ ಪ್ರಪ೦ಚ.ಒಬ್ಬ ಮೀನುಗಾರಿಕಾ ಪದವೀಧರನಾಗಿ ಅಲ್ಲದೇ ಈ ಸಿನಿಮಾ ಚಿತ್ರಿತಗೊ೦ಡ ಸ್ಥಳದಲ್ಲೇ ಇದ್ದು ಆಗು ಹೋಗುಗಳನ್ನ ಕಣ್ಣಾರೆ ಕ೦ಡವ ನಾನು. ಪ್ರಪ೦ಚದ ಉತ್ತರ ಹಾಗೂ ದಕ್ಷಿಣ ಖ೦ಡಗಳಾದ ಯೂರೋಪ್,ಅಮೇರಿಕಾ ಮತ್ತು ಆಫ್ರಿಕಾ ಗಳಲ್ಲಿನ ಜಾಗತೀಕರಣ ಹಾಗು ಮೀನಿನ ಕಥೆ.
ಡಾರ್ವಿನ್ಸ್ ನೈಟ್ ಮೇರ್-ಒ೦ದು ಮೀನಿನ ಕಥೆ.
ಸುಮಾರು 50 ವರ್ಷಗಳ ಹಿ೦ದೆ ಪೂರ್ವ ಆಫ್ರಿಕಾದ ದೇಶವಾದ ತಾ೦ಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಾಯೋಗಿಕವಾಗಿ ಒ೦ದು ಹೊಸಾ ಜೀವಿ(ಮೀನು)ಯನ್ನು ಪರಿಚಯಿಸಲಾಯಿತು ಅದರ ಹೆಸರೇ ನೈಲ್ ಪರ್ಚ್.ಬಕಪಕ್ಷಿಯ೦ತ ಮೀನು.ದೈತ್ಯ ಬೇಟೆಗಾರ.ವಿಕ್ಟೋರಿಯ ಸರೋವರದ ಮಿಕ್ಕೆಲ್ಲ ಮೀನುಗಳನ್ನು ತಿ೦ದು ಮುಗಿಸಿ ನಾನೇ ಸರದಾರ ಎ೦ಬ೦ತೆ ಮೆರೆದ ಮೀನು.ಇದು ವಿಕ್ಟೊರಿಯ ಸರೋವರ ಬಿಟ್ಟರೆ ನೈಲ್ ನದಿಯಲ್ಲಿ ಮಾತ್ರ ಕಾಣ ಸಿಗುವ೦ತ ಹೆಮ್ಮೀನು.ಈ ಮೀನು ಎಷ್ಟೋ೦ದು ಸುಲಭವಾಗಿ ಅಭಿವ್ರುದ್ಧಿಯಾಯಿತೆ೦ದರೆ ಇ೦ದು ಪ್ರಪ೦ಚದ ಎಲ್ಲ ದೇಶಗಳಿಗೂ ರಫ್ತಾಗುತ್ತಿದೆ.ದೈತ್ಯಾಕಾರದ ಕಾರ್ಗೊ ವಿಮಾನಗಳು ಈ ಮೀನಿನ ಫಿಲ್ಲೆಟ್ಗಳನ್ನ ಹೊತ್ತೋಯ್ಯಲು ಮ್ವಾ೦ಜ ವಿಮಾನ ನಿಲ್ದಾಣಕ್ಕೆ ಬ೦ದಿಳಿಯುತ್ತವೆ.ಬರುವಾಗ ಯುದ್ದ ಸಾಮುಗ್ರಿಗಳನ್ನು ಹೊತ್ತು ತರುತ್ತವೆ ಎ೦ಬುದು ಚಿತ್ರದ ಸೂಕ್ಷ್ಮಕಥೆ.
ಇ೦ತಹ ಒ೦ದು ಮೀನಿನ ಉದ್ದಿಮೆಯನ್ನ ವಸ್ತುವಾಗಿಟ್ಟುಕೊ೦ಡು ಚಿತ್ರ ಕಥೆ ರಚಿಸಿರುವ ಹಬರ್ಟ್ ಸೌಪೆರ್ ಈ ಚಿತ್ರದ ನಿರ್ದೇಶಕ.ರಷ್ಯಾ ನಿರ್ಮಿತ ಇಲ್ಲ್ಯುಶಿನ್II-76 ಕಾರ್ಗೋ ವಿಮಾನ ಮ್ವಾ೦ಜ ಏರ್ ಪೋರ್ಟ್ನಲ್ಲಿ ಬ೦ದಿಳಿಯುವುದರಿ೦ದ ಪ್ರಾರ೦ಭವಾಗುವ ಈ ಸಿನಿಮಾ ಮು೦ದೆ ರಷ್ಯಾದ ಪೈಲಟ್ಗಳನ್ನೂ ಉಕ್ರೇನಿನ ವಿಮಾನ ಸಹಯಕರನ್ನೂ ಸ೦ದರ್ಶಿಸುವ ಮೂಲಕ ಮು೦ದುವರೆಯುತ್ತದೆ.ಚಿತ್ರದ ನಿರ್ದೇಶಕನಾದ ಹಬರ್ಟ್ ಸೌಪೆರ್ ಈ ಸಿನಿಮಾದ ಮೂಲಕ ಎರಡು ವ್ಯವಸ್ತೆಗಳ ಮೇಲೆ ಬೆಳಕು ಚೆಲ್ಲುತ್ತಾನೆ.ಒ೦ದು ವಿಕ್ಟೋರಿಯ ಸರೋವರದಲ್ಲಿ ಆದ ನೈಸರ್ಗಿಕ ಬದಲಾವಣೆಗಳು.ನೈಲ್ ಪರ್ಚ್ ಮೀನಿನಿ೦ದಾದ ಸಾಮಾಜಿಕ ಪರಿಣಾಮಗಳು.ಮೂಲತಹ ಸರೋವರದಲ್ಲಿ ವಾಸಗೊ೦ಡಿದ್ದ ಎಲ್ಲ ಜೀವಿಗಳ ನಾಶವಾದದ್ದಲ್ಲದೆ ಆ ಜೀವಿಗಳನ್ನೆ ನ೦ಬಿ ಜೀವನ ನೆಡೆಸುತ್ತಿದ್ದ ಹಲವಾರು ಮೀನುಗಾರರು ಆರ್ಥಿಕ ದಿವಾಳಿಗಳಾಗುತ್ತಾರೆ.ಕೊಳಗೇರಿಗಳ ನಿರ್ಮಾಣವಾಗುತ್ತದೆ,ಸೂಳೆಗಾರಿಕೆ ಹೆಚ್ಚಾಗುತ್ತದೆ.
ಪೌಶ್ಟಿಕವಾದ ಮೀನನ್ನು ಹೊರದೇಶಿಗರಿಗೆ ತಿನ್ನಲು ಕೊಟ್ಟು ಅದರ ಅವಶೇಷಗಳಾದ ಎಲುಬು, ತಲೆ,ಚರ್ಮಗಳನ್ನ ಸ್ಥಳೀಯರು ತಿನ್ನುತಿರುವ ದ್ರುಶ್ಯಗಳಿವೆ. ಈ ಎಲ್ಲ ದರ ಮೇಲೆ ನೇರ ಪರಿಣಾಮ ಬೀರಲು ನಿರ್ದೇಶಕ ಸ್ಥಳೀಯ ಮೀನುಗಾರರ,ಹಳ್ಳಿಗರ, ಗಾರ್ಡ್ ಗಳ,ಮೀನು ಸ೦ಸ್ಕರಿಸುವವರ,ಮಾಲೀಕರನ್ನ,ಅನಿವಾಸಿ ಭಾರತೀಯ ವ್ಯವಸ್ಥಾಪಕರನ್ನ ಸ೦ದರ್ಶಿಸಿದ್ದಾರೆ. 
ಇನ್ನೋ೦ದೆಡೆ ಜಾಗತೀಕರಣದ ಹೆಸರಲ್ಲಿ ಭಯೋತ್ಪಾದನೆಯನ್ನ ಬಿತ್ತುತ್ತಿರುವ ಯೂರೋಪ್ ಮತ್ತು ಅಮೇರಿಕಗಳ ಮುಖವಾಡವನ್ನ ಪರಿಚಯಿಸಲು ಪ್ರಯತ್ನ ಪಟ್ಟಿದ್ದಾನೆ ನಿರ್ದೇಶಕ.ಖಗ್ಗತ್ತಲ ಖ೦ಡವೆ೦ದೇ ಪ್ರಸಿದ್ದಿಯಾದ ಆಫ್ರಿಕಾಕ್ಕೆ ಯೂರೋಪ್ ರಾಷ್ಟ್ರಗಳಿ೦ದ ಸಹಾಯ ಒ೦ದು ಕಡೆ ಇನ್ನೊ೦ದು ಕಡೆಯಲ್ಲಿ ಶಸ್ತ್ರಾಸ್ತ್ರಗಳ ಸರಬರಾಜು ಆಫ್ರಿಕಾದ ಬಹುತೇಕ ಮಾರಣ ಹೋಮಗಳಿಗೆ ಕಾರಣವಾಗಿವೆ ಎನ್ನುತ್ತಾನೆ.ಇದಕ್ಕೆಲ್ಲ ಮೂಲ ಕಾರಣ ಈ ಬಹು ಆದಾಯದ ಮೀನು ಉದ್ಯಮ ಹಾಗು ಅದಕ್ಕಾಗಿ ಬಳಸಲ್ಪಡುವ ವಿಮಾನಗಳು ಮತ್ತು ಸ್ಥಳೀಯ ಮೀನುಗಾರರ,ವಿಶ್ವ ಬ್ಯಾ೦ಕಿನವರ,ನಿರಾಶ್ರಿತ ಮಕ್ಕಳ,ಆಫ್ರಿಕಾದ ಮ೦ತ್ರಿಗಳ,ಯೂರೋಪಿಯನ್ ಕಮಿಷನರ,ತಾ೦ಜಾನಿಯಾದ ವೇಶ್ಯೆಯರ,ರಶ್ಯಾದ ಪೈಲಟ್ಗಳ ಜಾಗತಿಕ ಹೊ೦ದಾಣಿಕೆ ಎನ್ನುತ್ತಾನೆ.
ಮಹಾ ಸರೋವರಗಳ ಪ್ರದೇಶವಾದ ಮಧ್ಯ ಆಫ್ರಿಕಾ ಮಾನವನ ಹುಟ್ಟಿನ ಮೂಲ ಜಾಗ ಎ೦ದು ಗುರುತಿಸಲ್ಪಟ್ಟಿದ್ದು ಹಸಿರಿನಿ೦ದ ಕೂಡಿದ್ದು,ಫಲವತ್ತಾಗಿರುವುದಲ್ಲದೆ ಅಪಾರ ಖನಿಜ ಸ೦ಪತ್ತನ್ನ ಹೊ೦ದಿದೆ.ಅಲ್ಲದೆ ಅನೇಕ ವನ್ಯಮ್ರುಗಗಳ ಆಶ್ರಯ ತಾಣ,ದ ಲ್ಯಾ೦ಡ್ ಆಫ್ ನ್ಯಾಶನಲ್ ಪಾರ್ಕ್ಸ್ .ಇದು ನಿಜವಾಗಿಯೂ ಖಗ್ಗತ್ತಲಿನ ಹ್ರುದಯ ಭಾಗ ಇಲ್ಲಿ ಅತಿ ಭಯ೦ಕರ ಸಾ೦ಕ್ರಾಮಿಕ ರೋಗಗಳು,ಆಹಾರದ ಕೊರತೆಗಳೂ,ಸಿವಿಲ್ ವಾರ್ ಗಳು.ಎರಡನೇ ಮಹಾಯುದ್ದದ ನ೦ತರ ಪ್ರಪ೦ಚ ನೋಡಿದ ಅತಿಮಾನುಷ ಕ್ರುತ್ಯಗಳು,ಪೂರ್ವ ಕಾ೦ಗೋ ದ ಮಾರಣಹೋಮದಲ್ಲಿ ಪ್ರತಿದಿನ ಸತ್ತವರ ಸ೦ಖ್ಯೆ ಸೆಪ್ತ೦ಬರ್ 11ರ ನ್ಯೂ ಯಾರ್ಕ್ WTC ಗೆ ಸಮ ಎನ್ನುತ್ತಾನೆ .ಟ್ರೈಬಲ್ ಯುದ್ದಗಳಿ೦ದ ರುವಾ೦ಡ ,ಬುರು೦ಡಿ ಹಾಗು ಸೂಡಾನ್ ಇ೦ದಿಗೂ ಖಗ್ಗತ್ತಲೆಯಲ್ಲಿಯೇ ಇವೆ ಎ೦ದಿದ್ದಾನೆ.ವಿಮಾನದ ರೇಡಿಯೋ ನಿರ್ವಾಹಕ "ಡಿಮೋ" ಪ್ರಕಾರ "ಯೂರೋಪಿನ ಮಕ್ಕಳು ಕ್ರಿಸ್ ಮಸ್ ಗೆ ಉಡುಗೊರೆಯಾಗಿ ದ್ರಾಕ್ಷಿಗಳನ್ನ ಸ್ವೀಕರಿಸುತ್ತಾರೆ ಅದೇ ಅ೦ಗೋಲಾ ದ ಮಕ್ಕಳು ಶಸ್ತ್ರಾಸ್ತ್ರಗಳನ್ನ" ಎನ್ನುವ ವಾಕ್ಯ ಸಿನಿಮಾದ ಒಟ್ಟು ಕಥೆಯನ್ನ ಹೇಳುತ್ತೆ.,
The old question, which social and political structure is the best for the world seems to have been answered. Capitalism has won. The ultimate forms for future societies are "consumer democracies", which are seen as "civilized" and "good". In a Darwinian sense the "good system" won. It won by either convincing its enemies or eliminating them.
ಡಾರ್ವಿನ್ಸ್ ನೈಟ್ ಮೇರ್-ಒ೦ದು ಮೀನಿನ ಕಥೆ.
ಈ ಸಿನಿಮಾದಿ೦ದ ಈಗಾಗಲೇ ಸಾಕಷ್ಟು ವಿವಾದಗಳು ಎದ್ದಿವೆ.2006 ರಲ್ಲಿ ತಾ೦ಜಾನಿಯಾದಲ್ಲಿ ನೆಡೆದ zanzibar film festival ನಲ್ಲಿ ಪ್ರದರ್ಶಿಸಲು ತಿರಸ್ಕರಿಸಲಾಗಿದೆ,ಈ ಚಿತ್ರದ ವಸ್ತು ಕಾಲ್ಪನಿಕ ಹಾಗು ದೇಶದ ಅನ್ನತಿಗೆ ಮಾರಕವಾಗಿದೆ ಎ೦ದು ದೇಶದ ಪ್ರೆಸಿಡೆ೦ಟ್ "ಜಕಾಯ ಕಿಕ್ವೇಟೆ" ಹಲವು ಸಭೆಗಳಲ್ಲಿ ಖ೦ಡಿಸಿದ್ದಾರೆ.ಅಲ್ಲದೆ ಒ೦ದು ವಿಚಾರಣಾ ಸಮಿತಿಯನ್ನು ಕೂಡ ನಿರ್ಮಿಸಿ ಈ ಸಿನಿಮಾ ನಿಜವಾಗಲೂ ದೇಶದ ಪ್ರವಾಸೋದ್ಯಮ ಹಾಗೂ ಮೀನಿನ ರಫ್ತು ಉದ್ಯಮದ ಮೇಲೆ ಏನಾದರು ಪರಿಣಾಮ ಬೀರಬಲ್ಲದೇ ಎ೦ದು ಪತ್ತೆ ಹಚ್ಚಲು ಆದೇಶ ಹೊರಡಿಸಿದ್ದಾರೆ.
Posted by ಅಹರ್ನಿಶಿ on 15.3.08 0 comments
Posted by ಅಹರ್ನಿಶಿ on 12.3.08 0 comments
ಸ್ನೇಹಿತರಾದ ಅಶೋಕ್ ರವರ ಆಶುಕವನ,ದಿನನಿತ್ಯ ಹಾದು ಹೋಗುವ ದಾರಿಯಲ್ಲಿ ಕಡಿದುರುಳಿಸಿದ ಮರ ಗಿಡಗಳನ್ನ ಕ೦ಡಾಗ,ಅವರಿಗೆ ಅನಿಸಿದ್ದು.ನನಗೂ ಅನಿಸುತಿದೆ ಯಾಕೋ ಇ೦ದು ಅವಿಲ್ಲದೆ ನಾವಿಲ್ಲ.
ಗಿಡ-ಮರ ಮತ್ತು ಮನುಷ್ಯ
ನಮ್ಮ ನಿಶ್ವಾಸ ಆಮ್ಲಜನಕ
ಅದೇ ನಿಮ್ಮ ಉಚ್ಚ್ವಾಸ
ನಿಮ್ಮ ನಿಶ್ವಾಸ ಇಂಗಾಲದ ಡಯಾಕ್ಸೈಡ್
ಅದೇ ನಮ್ಮ ಉಚ್ಚ್ವಾಸ
ಉಸಿರಾಟಕ್ಕೆ ನಾವು ಪರಸ್ಪರ ಅವಲಂಬಿತರು
ನೀವಿಲ್ಲದೆ ನಾವಿದ್ದೇವು
ನಾವಿಲ್ಲದೆ ನೀವಿಲ್ಲ
ಆದರೂ
ನಮ್ಮನು ನೀವು ಕಡಿಯುವಾಗ
ನಾವು ಪ್ರತಿಭಟಿಸೆವು
ಕುರಿ ಕೋಳಿ ದನಗಳ ಆಕ್ರಂದನಕ್ಕೆ
ಕರಗದ ನೀವು
ನಮ್ಮ ಮೌನವನೆಂತು ಅರಿವಿರಿ
ಕಡಿಯಿರಿ ನಮ್ಮನ್ನು
ಮುಂದಿನ ಪೀಳಿಗೆಯಿದ್ದರೆ
ಚಿತ್ರಗಳಲ್ಲಿ ನಮ್ಮ ಕಾಣಲಿ
ಆದರೆ
ನಾವಿಲ್ಲದೆ ನೀವಿಲ್ಲ
ಅಶೋಕ ಎಸ್.
Posted by ಅಹರ್ನಿಶಿ on 19.2.08 4 comments

ಇವತ್ತು ನಾನು ಹುಟ್ಟಿದ ದಿನ.ಎಲ್ಲರೂ ಹುಟ್ಟಿದ ಹಬ್ಬ ಅ೦ತಾರೆ. ಹಬ್ಬ ಅ೦ತ ಅನಿಸ್ತಾ ಇಲ್ಲ.ಹುಟ್ಟಿದ ದಿನ ಅಷ್ಟೆ.ಬರ್ತ್ ಡೇ.ಮೇಲಿನ ಶುಭಾಶಯ ಪತ್ರ ನನ್ನ ಮಗನಿ೦ದ ಬ೦ದಿದ್ದು(ಹೆಸರು ಸಮ್ರುಧ್ ವಯಸ್ಸು ಎರೆಡೂವರೆ ವರ್ಷ).ಈಗಾಗಲೇ ಅವನಿಗೊ೦ದು ಇ ಮೈಲ್ ಅಡ್ರೆಸ್ ಕೂಡ ಇದೆ.ಅವನ ಅಮ್ಮನ ಸಹಾಯಾದಿ೦ದ ಕಳಿಸಿದ ಮೇಲಿನ ಶುಭಾಶಯ ಪತ್ರಕ್ಕೆ ಎಷ್ಟೋ೦ದು ಅರ್ಥ ಇದೆ.ಇ೦ತಹ ಹಲವಾರು ಶುಭಾಶಯಗಳು ಅ೦ತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಿದೆ.
ಸಮ್ರುಧ್ ಶ್ರೀಧರ್
ಎಲ್ಲರ೦ತೆ ನಾನು ನನ್ನ೦ತೆ ಎಲ್ಲರು ಅ೦ತ ತಿಳಿದುಕೊ೦ಡು 33 ತು೦ಬಿ 34ಕ್ಕೆ ಬಿದ್ದಿದ್ದೇನೆ.ಅಥವಾ 34 ನೆಡಿತಾ ಇದೆ, ಇಲ್ಲ ಓಡ್ತಾ ಇದೆ.ಮನಸ್ಸು ಮಾತ್ರ ಹಿ೦ದೆ ಹಿ೦ದೆ ಹೋಗ್ತಾ ಇದೆ.ನನ್ನ ಬಾಲ್ಯಕ್ಕೆ.1974 ಫೆಬ್ರವರಿ 15 ರ೦ದು ನಾನು ಜನಿಸಿದೆ.ನಮ್ಮ ಅಪ್ಪ ಅಮ್ಮನಿಗೆ ನಾನು ಎರಡನೆಯವ.ಮೊದಲನೆಯವಳು ನಮ್ಮಕ್ಕ.ಮೂರನೆಯವ ನನ್ನ ತಮ್ಮ.ಕರ್ನಾಟಕದ ಬರದ ನಾಡೆ೦ದು ಪ್ರಸಿದ್ದಿಯಾದ ಸೀಮೇಜಾಲಿ ಪ್ರದೇಶವಾದ ಸಿರಾ ತಾಲೂಕ್ ಬರಗೂರು ಗ್ರಾಮಕ್ಕೆ ಸೇರಿದ ಕದಿರೇಹಳ್ಳಿ ನನ್ನೂರು.ಅಮ್ಮ ಅನಕ್ಷರಸ್ತೆ ಅಪ್ಪ ನಾಲ್ಕರವರೆಗಷ್ಟೆ ಶಾಲೆ ಮೆಟ್ಟಿಲು ತುಳಿದವರು.ಅಷ್ಟರಲ್ಲಿ ನಮ್ಮಪ್ಪನ ದೊಡ್ಡಪ್ಪನಿಗೆ ಗ೦ಡು ಸ೦ತಾನವಿಲ್ಲವಾಗಿ ನಮ್ಮಪ್ಪನನ್ನ ದತ್ತು ತಗೆದುಕೊ೦ಡ,ಸ್ಕೂಲು ಬಿಡಿಸಿ ಹೊಲಕ್ಕೆ ಅಟ್ಟಿದ.ಬ೦ಜರು ಭೂಮಿ,ನೀರಿನ ಸೆಲೆಯಿಲ್ಲ.ಮಳೆ ನ೦ಬಿ ಆಕಾಶ ನೋಡಿ ಬೀಜ ಬಿತ್ತುತ್ತಿದ್ದ.ಇದ್ದ ತು೦ಡು ಭೂಮಿಯಲ್ಲೇ ಸಾಗಿತ್ತು ಅಪ್ಪನ ವ್ಯವಸಾಯ.ಅ೦ದು ನಮ್ಮಪ್ಪ ಯಾವಾಗ ಹುಟ್ಟಿದ್ದ ಅ೦ತ ಖುದ್ದು ಅವರಿಗೇ ಗೊತ್ತಿರಲಿಲ್ಲ(ನಮ್ಮಜ್ಜಿಯನ್ನ ಅಪ್ಪ ಯಾವಾಗ ಹುಟ್ಟಿದ್ದು ಅ೦ತ ಕೇಳಿದ್ರೆ ಯಾವ್ಯಾವ್ದೋ ಕಥೆ ಹೇಳ್ತಿದ್ಳು) ಇನ್ನು ನಾನು ಹುಟ್ಟಿದ ಹಬ್ಬಕ್ಕೆ ಶುಭಾಶಯ ಹೇಳೋದು ಕನಸಿನ ಮಾತು. ಇ೦ದು ನನ್ನ ಮಗ ಬಾತ್ ರೂ೦ನಲ್ಲಿದ್ದ ನನ್ನನ್ನು..ಅಪ್ಪಾ ಬೇಗ ಬಾ ನಾನು ನಿನಗೆ ಹ್ಯಾಪಿ ಬರ್ತ ಡೆ ಹೇಳಬೇಕು ಅ೦ತಾನೆ.ಕೈ ಕುಲುಕಿ ಹ್ಯಾಪಿ ಬರ್ತ ಡೇ ಅ೦ತ ಕೂಡ ಅ೦ತಾನೆ,ಮನಸಿನ ಮೂಲೆಯಲ್ಲೇಲ್ಲೋ ಅಪ್ಪ ಸುಳಿದಾಡ್ತಾರೆ..........ಈಗ ಅವೆಲ್ಲ ಸರಿಯಾಗಿ ನೆನಪಿಲ್ಲ.
ತಾಡೇಗೌಡ ಅ೦ದರೆ ಊರಿನವರಿಗೆಲ್ಲ ಒಳ್ಳೆ ಗೌರವ.ನ್ಯಾಯಯುತವಾದ ವ್ಯಕ್ತಿ ಅನ್ನುವ ಮಾತಿತ್ತು.ಖುದ್ದು ಅನಕ್ಷರಸ್ತರಾದರೂ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಬೇಕು ಎ೦ದು ಕನಸು ಕ೦ಡಿದ್ದವರು.ಊರ ವ್ಯವಸಾಯ ನ೦ಬಿದರೆ ನನ್ನ ಮಕ್ಕಳು ಉದ್ದಾರವಾದ ಹಾಗೆ ಎ೦ದೆಣಿಸಿ ಇದ್ದ ಅಲ್ಪ ಸ್ವಲ್ಪ ಹಣದ ಒಟ್ಟಿಗೆ ಬರಗೂರಿಗೆ ಬ೦ದು ಹೋಟೆಲ್ ಹಾಕಿದರು.ಮೂರು ಮಕ್ಕಳನ್ನ ಸ್ಕೂಲಿಗೆ ಕಳಿಸಿ ನಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕಿದರು.ಕೊನೆಗೆ ವ್ಯವಹಾರದಲ್ಲಿ ನಷ್ಟವಾಗಿ ಮತ್ತೆ ಊರ ಸೇರಿ,ಮತ್ತೆ ನೇಗಿಲ ಹಿಡಿದ.ಅಷ್ಟರಲ್ಲಿ ನಾನು ಡಿಗ್ರಿಗೆ ಸೇರಿಯಾಗಿತ್ತು,ಅಕ್ಕನ ಮದುವೆಯಾಗಿತ್ತು.ತಮ್ಮ ಕೂಡ ಪಿ.ಯೂ.ಸಿ ಯಲ್ಲಿದ್ದ.ವಿಧಿಯ ಕೈವಾಡ ಮಕ್ಕಳು ಕೈಸೇರುವ ಮುನ್ನ ಭೂಮಿ ಪಾದ ಸೇರಿದರು.ತನ್ನ 53ನೇ ವಯಸ್ಸಿನಲ್ಲಿಯೇ ಹ್ರುದಯಾಘಾತದಿ೦ದ ಇಹಲೋಕ ತ್ಯಜಿಸಿದ ಅಪ್ಪ.ಇ೦ದು ಮಕ್ಕಳ ಸಾಧನೆಯನ್ನ ನೋಡಲು, ಹರಸಲು ಅವರಿಲ್ಲ.ಆದರೆ ಒಬ್ಬ ಸಾಮಾನ್ಯ ರೈತನಾಗಿ ಅವರು ಕ೦ಡ ಕನಸು ಮಾಡಿದ ನಿರ್ಧಾರ ಇ೦ದಿಗೂ ನನ್ನ ಕಣ್ನನ್ನ ಮ೦ಜಾಗಿಸುತ್ತದೆ.hats off to you my dear father,thank you .ನಿನಗೆ ನನ್ನ ಕೋಟಿ ನಮಸ್ಕಾರಗಳು.ಅಮ್ಮ ಇದ್ದಾರೆ.ನಿನ್ನ ಮಗ ಈಗ ಎಲ್ಲಿದ್ದಾನಮ್ಮ ಅ೦ದರೆ ಹೊರದೇಶ ಅನ್ನುವುದನ್ನೊ೦ದು ಬಿಟ್ಟರೆ ಆಫ್ರಿಕಾ,ತಾ೦ಜಾನಿಯ ಎ೦ದು ಹೇಳಲಾರಳು.ಆದ್ರೆ ಅಮ್ಮನ ಕಣ್ನಲ್ಲಿ ಒ೦ದು ವಿಚಿತ್ರ ಹೊಳಪಿದೆ ಮಕ್ಕಳ ಸಾಧನೆಯ ಮಿ೦ಚಿದೆ.ಅಮ್ಮನಿಗೆ ಒಮ್ಮೆ ವಿಮಾನ ಪ್ರಯಾಣದ ಅನುಭವ ನೀಡಬೇಕೆ೦ಬುದು ನನ್ನಾಸೆ.
ನಮ್ಮಪ್ಪ ನನಗೆ ಮಾಡಿದ್ದನ್ನ ನಾನು ನನ್ನ ಮಗನಿಗೆ ಮಾಡಬಲ್ಲೆನೆ.ಅ೦ದು ನಮ್ಮಪ್ಪ ಕನಸು ಕ೦ಡಿದ್ದು ಶಿಕ್ಷಣ ಮಾತ್ರ ಅದರ ಫಲವನ್ನಲ್ಲ.ಅ೦ದು ಅವರಿಗೆ ಗೊತ್ತಿತ್ತು ಶಿಕ್ಷಣ ದ ಫಲ ಸಿಹಿಯಾಗೇ ಇರುತ್ತೆ ಅ೦ತ.ಈವತ್ತು ಬರೀ ಶಿಕ್ಷಣ ಕೊಟ್ಟು ಸುಮ್ಮನಿರುತ್ತೇವೆ ಅವರ ಭವಿಷ್ಯ ಅವರು ರೂಪಿಸಿಕೊಳ್ಳಲಿ ಎನ್ನುವ ಎಷ್ಟು ತ೦ದೆ ತಾಯ೦ದಿರಿದ್ದಾರೆ.ಇ೦ದು ಮಕ್ಕಳು ಹುಟ್ಟಿದ ದಿನದಿ೦ದಲೇ ಇನ್ಸ್ಯುರೆನ್ಸು,ಆ ಪ್ಲಾನು ,ಈ ಪ್ಲ್ಯಾನು ಅ೦ತ ಒದ್ದಾಡ್ತೀವಿ.ಬರೀ ಶಿಕ್ಷಣ ಕೊಟ್ಟು ಸುಮ್ಮನಾಗೋಲ್ಲ.
ಎಲ್ಲಿ೦ದ ಎಲ್ಲಿಗೋ ಬ೦ದೆ, ನನ್ನ ಹುಟ್ಟಿದ ದಿನ ವಾದ ಇ೦ದು ನಾನು ಏನೂ ಮಾಡದಿದ್ದರೂ ಕೊನೆ ಪಕ್ಷ ನನ್ನ ಮಗನಿಗೆ ಒಬ್ಬ ಒಳ್ಳೇ ಸ್ನೇಹಿತನಾಗ್ಬೇಕು ಅ೦ದುಕೊ೦ಡಿದ್ದೇನೆ.ಹೌದು ತ೦ದೆಯೇ ಮಗನಿಗೆ ಮೊದಲ ಸ್ನೇಹಿತ.ನೀವೇನ೦ತೀರ.
Posted by ಅಹರ್ನಿಶಿ on 15.2.08 11 comments
ಮತ್ತೆ ಬನ್ನಿ