Feb 15, 2024

ಸಪ್ತ ಸಾಗರದ ಆಚೆ ಇಲ್ಲೇ


 ಸಪ್ತ ಸಾಗರದಾಚೆ.. ಎಲ್ಲೋ ಸೀ ಸೈಡ್


ಪ್ರಿಯ ಸಂಗಾತಿ .


ನಿನ್ನನ್ನು ಮೊದಲು ನೋಡಿದ ದಿನವೇ ನೀನೆ ನನ್ನ ಬಾಳ ಸಂಗಾತಿ ಅಂದುಕೊಂಡವ ನಾನು.ಮುತ್ತು ಹುಡುಕಿ ಕಡಲಾಳಕ್ಕೆ ಇಳಿಯಲು ಹೊರಟವನಿಗೆ ದಡದಲ್ಲಿಯೇ ಮುತ್ತೊಂದು ಸಿಕ್ಕರೆ ಏನಾಗಬೇಡ? ನನಗೂ ಅದೇ ಆಗಿತ್ತು. ವಧುವಿನ ಅನ್ವೇಷಣೆಯಲ್ಲಿದ್ದಾಗ ರೂಪವಂತ ಹುಡುಗಿ ನನ್ನ ಆದ್ಯತೆಯಾಗಿರಲಿಲ್ಲ! ಏಕೆಂದರೆ ನನ್ನ ರೂಪಕ್ಕೆ ಯಾವುದಾದರೊಂದು ಹುಡುಗಿ ಈ ಭೂಮೀಲಿ ಹುಟ್ಟಿರಬಹುದು ಎಂಬ ನಂಬಿಕೆ. ಆದರೂ ನೀನು ಮೆಚ್ಚಿದೆ. ಕೈಲಿ ಕೆಲಸ ಇಲ್ಲದ ಹುಡುಗನನ್ನು ಯಾರು ತಾನೇ ಒಪ್ಪಿಯಾರು  ಕುಟುಂಬದವರು ಹೇಗೆ ತಾನೆ ಒಪ್ಪಿಯಾರು? ಆದರೂ ನೀ ಅವರನ್ನು ಒಪ್ಪಿಸಿ ನನ್ನ ಕೈಹಿಡಿದೆ. 


ಮದುವೆಯಾಗಿ ಆರು ತಿಂಗಳಾಗಿರಬಹುದು. ಅದೊಂದು ದಿನ ನೀ ನನ್ನ ಮಡಿಲಲ್ಲಿ ಮಗುವಾಗಿ ಕೇಳಿದ್ದೆ " ಹೀಗೆ ಆದ್ರೆ ಜೀವನ ಹೆಂಗೆ ಅಂತ "? ಹಾಗೆ ನಾ ಕೇಳಿದ ಘಳಿಗೆಯಲ್ಲಿಯೂ ನನ್ನಲ್ಲಿ ಇದ್ದದ್ದು ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಪ್ರೀತಿ ಅಲ್ಲದೆ ಮತ್ತೇನೂ ಅಲ್ಲ! ಆರು ತಿಂಗಳಲ್ಲಿ ಎಂದೂ ಜೋರಾಗಿ ಮಾತನಾಡಿರಲಿಲ್ಲ. ನಿನ್ನ  ಉಳಿತಾಯ ಎಷ್ಟು ಅಂತ ಕೇಳಿರಲಿಲ್ಲ. ಸುಮಾರು ಸಲ ಹೋಟೆಲ್ಲಿಗೆ ಕರೆದೊಯ್ದಿದ್ದೆ. ಸಿನಿಮಾ ತೋರಿಸಿದ್ದೆ. ತಿಂಗಳಿಗೊಂದು ಸೀರೆ ಕೊಡಿಸಿದ್ದೆ. ಇದಕ್ಕಿಂತ ಒಬ್ಬ ಹೆಣ್ಣಿಗೆ ಇನ್ನೇನು ಬೇಕಿರುತ್ತೆ ಎಂಬ ಪುರುಷ ಅಹಂಕಾರದಿಂದ ಕೇಳಿದ ಮಾತಾಗಿತ್ತು. ನೀ ತಣ್ಣಗೆ ಉತ್ತರಿಸಿದೆ " ನಿನ್ನಮೇಲೆ ನನಗೆ ನಂಬಿಕೆ ಇದೆ ನೀ ಏನಾದ್ರು ಮಾಡೇ ಮಾಡ್ತಿಯಾ. ತುರ್ತು ಬದಲಾಗಬೇಕಿತ್ತು ನಾನು! ಏಕೆಂದರೆ, ಒಳ್ಳೆಯವರೆನಿಸಿಕೊಳ್ಳಬೇಕೆಂಬ ಹಂಬಲ ಮನುಷ್ಯರ ಅತಿದೊಡ್ಡ ವ್ಯಸನ. ಒಂದು ಸಲ ಅದರ ಸುಳಿಗೆ ಸಿಲುಕಿದರೆ ಅದು ನಮ್ಮ  ಸರ್ವಸ್ವವನ್ನೂ ಬೇಡುತ್ತೆ. ಸಕಾಲಕ್ಕೆ ಎಚ್ಚೆತ್ತುಕೊಳ್ಳದಿದ್ದರೆ ವಾಪಸ್ಸು ಬರಲಾಗದಷ್ಟು ದೂರ ಕೊಂಡೊಯ್ದುಬಿಡುತ್ತದೆ. ನಾನೂ ಅಂತಹುದ್ದೇ ವ್ಯಸನದಿಂದ ಬದುಕ್ತಿದ್ದೆ ಅನ್ನಿಸುತ್ತೆ. ನೀ ಅದನ್ನು ಸಲೀಸಾಗಿ ದೂರಮಾಡಿದೆ. ನಾನು ಕೆಲಸವನ್ನ ಅರಸಿ ನಿನ್ನಿಂದ ಸಪ್ತ ಸಾಗರದಾಚೆ ದೂರ ಹೋಗಬೇಕಾದ ಸಂಧರ್ಭ ಬಂದಾಗ ನಿನ್ನ ಮನಸ್ಸಿನಲ್ಲಿ ಆದ ತಳಮಳ ಈಗಲೂ ಕಣ್ಣ ಮುಂದೆ ಹಾಗೇ ಇದೆ.ಸಾಕಷ್ಟು ಸಹಿಸಿಕೊಂಡಿದ್ದೆ ನೀನು.


ಅಂದೇ ಬದಲಾಗಿದ್ದು ನಾನು! ನಾ ಹೆಂಡ್ತಿಯನ್ನು ಸಾಕಬೇಕು ಮಕ್ಕಳಿಗೆ ಒಳ್ಳೆ ಭವಿಷ್ಯ ರೂಪಿಸಬೇಕು ಎಂದು ನಿನ್ನ ಉದರದಲ್ಲಿದ್ದ ಕಂದಮ್ಮನ್ನ ಬಿಟ್ಟು ಸಪ್ತ ಸಾಗರದಾಟಿ ಕೆಲಸಕ್ಕಾಗಿ ಹೋಗಬೇಕಾಗಿ ಬಂದದ್ದು ಇವೆಲ್ಲವೂ ನಿನ್ನಿಂದ ನನ್ನಲ್ಲಾದ ಬದಲಾವಣೆಗಳೇ;  ಈಗ ನೋಡು ಬದುಕು ಎಷ್ಟು ಚಂದವಿದೆ ಅನ್ಸುತ್ತೆ ನನಗೆ. ಸಂಜೆಯಾದರೆ ಮನೆಗೆ ಓಡೋಡಿ ಬರಬೇಕು ಅನ್ನಿಸುತ್ತೆ. ಬಾಗಿಲಲ್ಲೇ ಕಾದು ಕುಳಿತ ಮಕ್ಕಳಿಗೂ ಮೊದಲು ನಿನ್ನ ನೋಡಬೇಕು ಅನ್ನಿಸುತ್ತೆ. ನಿನ್ನ ಒಂದು ನಗು, ಉತ್ಸಾಹ ನನ್ನ ನೂರು ಬೇಸರವನ್ನು ದೂರ ಮಾಡುತ್ತೆ. ನಿನಗೆ ಈಗಲೂ ನನ್ನ ಬಗ್ಗೆ ದೂರುಗಳಿರಬಹುದು. ಆದರೆ ಅದು ನನ್ನ ಅಮಾಯಕತೆಯ ಕಾರಣಕ್ಕೆ ನಿನಗೆ ಅರ್ಥಮಾಡಿಸಲಾಗದ ಅಸಹಾಯಕತೆಯೇ ಹೊರತು ಉದ್ದೇಶಪೂರ್ವಕ ತಪ್ಪುಗಳಲ್ಲ. 


ಇದೆಲ್ಲಾ ಈಗ್ಯಾಕೆ ಹೇಳುತ್ತಿದ್ದೇನೆಯೆಂದರೆ... ಎಂದಿನಿಂದಲೋ ನನಗೊಂದು ಆಸೆ. ಪ್ರೇಮಿಗಳ ದಿನ ನನ್ನದೇ ಶೈಲಿಯಲ್ಲಿ ನಿನ್ನನ್ನು ಮೆಚ್ಚಿಸಬೇಕೆಂಬ ಬಯಕೆ ಆದರೆ ಅದೇ ದಿನ ನನ್ನ ಹುಟ್ಟು ಹಬ್ಬ ಅದರ ಮರೆಯಲ್ಲಿ ಬಯಕೆಗಳು ಮಸುಕಾದವು . ಆಗ ಹೊಳೆದದ್ದೇ ಈ ಬ್ಲಾಗ್ ಪತ್ರ . ಹೆಂಡ್ತಿ ಗಂಡನ ವಿಷಯ ಹೀಗೆ ಊರಲೆಲ್ಲಾ ಹೇಳಿಕೊಂಡು ತಿರುಗುವುದರಲ್ಲಿ ಅದ್ಯಾವ ಸುಖವಿದೆಯೋ ಮಾರಾಯ? ಅಂತನ್ನಿಸುತ್ತಿರಬಹುದು ನಿನಗೆ. ನಾ ಆಗಲೇ ಹೇಳಿದೆನಲ್ಲಾ ಒಳ್ಳೇತನವೆಂಬ ವ್ಯಸನದ ಬಗ್ಗೆ. ನಾನೂ ವ್ಯಸನಿ!ಹೊಟ್ಟೆಗೆ ಹಾಕಿಕೊಂಡುಬಿಡು.  


ಅವತ್ತು ಏರ್ ಪೋರ್ಟ್ ನಲ್ಲಿ ಇಳಿದು ಬಂದು ನಮ್ಮ ಸಮೃದ್ ನನ್ನು ಏಳು ತಿಂಗಳ ನಂತರ ನೋಡಿ ಬೆರಗಾಗಿದ್ದು ನೆನಪಿದೆಯಾ?  ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಸುಖಿ ನಾನೆಂಬ  ಸಂತಸ ಅದಾಗಿತ್ತು ! ಅದೆಷ್ಟು ಹೊತ್ತು ಹಾಗೆ ಅವನನ್ನು ಕಣ್ತುಂಬಿಕೊಂಡೇನೋ ಗೊತ್ತಿಲ್ಲ ಆದರೆ ಅಷ್ಟೂ ಹೊತ್ತು ನನ್ನಲ್ಲಿ ಚೂರು ಹೆಚ್ಚೇ ಆತ್ಮವಿಶ್ವಾಸ, ಭದ್ರತೆ ಮತ್ತು ಸಂಪೂರ್ಣತೆಯ ಭಾವಗಳು ಆವರಿಸಿಕೊಂಡಿದ್ದವು. ನಿನ್ನ ತ್ಯಾಗದ ಬಗ್ಗೆ ಯೋಚಿಸಿದಾಗಲೆಲ್ಲಾ ಕೃತಜ್ಞತೆಯು ನನ್ನ ಹೃದಯವನ್ನು ತುಂಬುತಿತ್ತು. ಒಂದೆರಡಲ್ಲ ಅಂತಹ ಹತ್ತಾರು ಭಾವಗಳು ಆವರಿಸಿ ನನ್ನ ಭಾವುಕನನ್ನಾಗಿಸಿದ್ದವು. ಮುಂದೆ ಜೊತೆಯಾಗಿ ಕಳೆದ ಅತಿ ಧನ್ಯತೆಯ ಕ್ಷಣ ಅದಾಗಿತ್ತು. ಇವತ್ತು ಸಮೃದ್ ಬೆಳೆದು ದೊಡ್ಡವನಾಗಿ ಡಾಕ್ಟರ್ ಆಗಲು ಹೊರಟಿದ್ದಾನೆ ಎಂದರೆ ನನ್ನ ಕಣ್ಣುಗಳನ್ನು ನಾನೇ ನಂಬಲಾಗುತ್ತಿಲ್ಲ.


ಇಂದಿಗೆ ನಾ ಹುಟ್ಟಿ ಐವತ್ತು ವರ್ಷಗಳಾಯ್ತು.ನನ್ನ ಬದುಕಿನ ಘನತೆ ಇರುವುದೇ ನೀ ನನ್ನ ಸಂಗಾತಿ ಎಂಬುದರಲ್ಲಿ! ಅದು ಇನ್ನೊಂದೈವತ್ತು ವರ್ಷ ಇರುವಂತೆ ನೋಡಿಕೊಳ್ಳುವ ಆಸೆ.


ಹ್ಯಾಪಿ ಬಿ ಲೇಟೆಡ್  ವ್ಯಾಲೆಂಟೈನ್ಸ್ ಡೇ


ಶ್ರೀ