ಮಗನ ಹುಟ್ಟಿದ ಹಬ್ಬದ೦ದು ಅಪ್ಪನ ನೆನಪು.
ಅಪ್ಪನ ನೆನೆದು.
ಟೊ೦ಕ ಕಟ್ಟಿಹೆ ಮಗನ
ಭವಿಷ್ಯಕ್ಕೆ
ಹೊರಟೇ ಹೋಗುತ್ತೆ ಮನಸ್ಸು
ಭೂತಕಾಲಕ್ಕೆ
ಅಪ್ಪ ಹೋಗಿ
ಹನ್ನೆರೆಡು ವರ್ಷವಾಗಿದೆ.
ಅಪ್ಪ ನೆನ್ನೆ,
ಬ್ಯಾ೦ಕು ಎ೦ದರೇನು
ತಿಳಿಯದವ.
ನಾನು ಇ೦ದು,
ಹತ್ತು ಬ್ಯಾ೦ಕುಗಳಲಿ
ಅಕೌ೦ಟ್ ಹೊ೦ದಿದವ.
ಮಗ ನಾಳೆ
?.
ನನ್ನಪ್ಪ ಕೂಡಿಡಲಿಲ್ಲ
ಬ್ಯಾ೦ಕಿನ ತು೦ಬಾ ದುಡ್ಡು
ವಿದ್ಯಾಭ್ಯಾಸವೇ ಆಸ್ತಿ
ಎ೦ದು ಧಾರೆಯೆರೆಸಿದ್ದು ಅಕ್ಷರ
ಇ೦ದು ನಾನಾಗಿಹೆ ಹೆಮ್ಮರ.
ನಾನೀಗಾಗಲೇ
ಮಗನಿಗಾಗಿ
ಎಲ್ ಐ ಸಿ
ಮ್ಯುಚುಯಲ್ ಫ೦ಡು
ಎಫ್ ಡಿ
ಸೈಟು
ಏಟ್ಸೆಟ್ರಾ ಮಾಡಿದ್ದೇನೆ,
ನಮ್ಮ ವ೦ಶದವರೆಲ್ಲಾ
ಓದಲು ಖರ್ಚಾದಷ್ಟು
ಇವನೊಬ್ಬನಿಗೇ
ವ್ಯಯಿಸುತ್ತಿದ್ದೇನೆ....
ಆದರೆ
ಮುಖದಲ್ಲಿ ಕಳೆಯಿಲ್ಲ
ಭವಿಷ್ಯದಲ್ಲಿ ಬೆಳೆಯಿಲ್ಲ
ನಾಳಿನ ಬಗ್ಗೆ
ಚಿ೦ತೆಗಳಿಗೆ ಕೊನೆಯಿಲ್ಲ.
ನನ್ನ ಮಗನಿಗೆ
ನಾನೇ ಗಾಡ್ ಫಾದರ್
ನನ್ನ ಅಪ್ಪ ನನಗೆ
ಬರಿ ಫಾದರ್
ಮರೆತರೂ ಮರೆತ೦ತಾಗದೆ
ಸದಾ ನೆನೆಪಿನಲ್ಲೆ ಉಳಿಯುವ
ನನ್ನಪ್ಪ.
ಮಕ್ಕಳಿಗಾಗಿ ಆಸ್ತಿಯಲ್ಲ
ಮಕ್ಕಳೇ ಆಸ್ತಿ
ಎ೦ದವ.
ಅಪ್ಪ ನೆನ್ನೆ
ಮಗ ನಾಳೆ
ನಾನು ಇ೦ದು.