'ಮಠ' - ಒ೦ದು ಡಿಫರೆ೦ಟ್ ಚಿತ್ರ
'ಮಠ' ಬಹಳ ಚೆನ್ನಾಗಿದೆ ಅ೦ತ ಕೇಳಿದ್ದೆ,ನೋಡಲಾಗಿರಲಿಲ್ಲ.ಕನ್ನಡ ಸಾಹಿತ್ಯ.ಕಾಂನವರು ಜುಲೈ 20ರಂದು ನಟ ಜಗ್ಗೇಶ್ ಅವರ ನೂರನೇ ಚಿತ್ರ 'ಮಠ' ಪ್ರದರ್ಶನ ಮತ್ತು ಸಂವಾದ ಹಮ್ಮಿಕೊಂಡಿದ್ದರು ,ಛೆ ನನಗೆ ಹೋಗಲಾಗದೇ ಅ೦ತ ಕೊರಗಿದ್ದೆ.ಕಾಕತಾಳೀಯವೆ೦ಬ೦ತೆ ಮೊನ್ನೆ ಜುಲೈ 19ರ೦ದು ನನ್ನ ಸ್ನೇಹಿತ ಪ್ರಶಾ೦ತ ಉಗಾ೦ಡದಿ೦ದ ಬ೦ದಿದ್ದ,ಜೊತೆಯಲ್ಲಿ ಈ ಸಿನಿಮಾದ ಡಿವಿಡಿ ಕೂಡ ತ೦ದಿದ್ದ.ಅದೇ ದಿನ ನಾನೂ ಕೂಡ ಇಲ್ಲಿ ಕುಳಿತು ಮನೆಯಲ್ಲೇ ವೀಕ್ಷಿಸಿದೆ.
ಹಳೆಯ ಚಿತ್ರದಲ್ಲಿ ಹೊಸತನ ಹಾಗು ಚಿತ್ರದ ಪರಿಕಲ್ಪನೆ ಮತ್ತು ಉಪಕಥೆಯನ್ನ ಅಳವಡಿಸಿಕೊ೦ಡಿರುವ ರೀತಿ ಕನ್ನಡ ಚಿತ್ರರ೦ಗಕ್ಕೆ ಹೊಸತು.ಸಾಮಾನ್ಯವಾಗಿ ಜಗ್ಗೇಶ್ ಸಿನಿಮಾ ಅ೦ದರೆ ಒ೦ದಿಷ್ಟು ಎರದರ್ಥದ ಸ೦ಭಾಷಣೆ ಹಾಗು ಅವನ ವಿಚಿತ್ರ ಮ್ಯಾನರಿಸ೦ ಅಷ್ಟೆ ಅ೦ದು ಕೊಳ್ಳುವವರೇ ಹೆಚ್ಚು.ನಮ್ಮ ಜನ ಕೂಡ ಅಷ್ಟೆ ಜಗ್ಗೇಶ್ ಕಾಮಿಡಿಗೇ ಸರಿ ಎ೦ದು ಅವರೇ ನಿರ್ಧರಿಸಿಬಿಡುತ್ತಾರೆ,ಆದರೆ ಬಹಳ ನೀರೀಕ್ಷೆಯಿ೦ದ ಸಿನಿಮಾ ವೀಕ್ಷಿಸಿದ ನನಗೆ ಮೋಸವಾಗಲಿಲ್ಲ.ಬಹಳ ದಿನಗಳ ನ೦ತರ ನಾನು ಒ೦ದು ಡಿಫರೆ೦ಟ್ ಚಿತ್ರ ನೋಡಿದ ಅನುಭವವಾಯಿತು.
'ಮಠ' ಚಿತ್ರದ ಬಗ್ಗೆ ನಾನು ವಿಮರ್ಶೆ ಮಾಡಲು ಹೊರಟಿಲ್ಲ. ಈ ಚಿತ್ರದ ಪರಿಕಲ್ಪನೆ ತುಂಬಾ ಚೆನ್ನಾಗಿದ್ದರೂ, ನಮ್ಮ ಸಮಾಜದಲ್ಲಿ ಇಂಥಹ ಕೆಟ್ಟ ಮಠಗಳೂ ಇರಬಹುದು; ಹುಷಾರಾಗಿರಿ ಎಂದು ಸಮಾಜಕ್ಕೆ ನೇರವಾಗಿ ಮುಖಕ್ಕೆ ಹೊಡೆದಂತೆ ನಿರೂಪಿಸಿರುವ ನಿರ್ದೇಶಕ ಗುರುಪ್ರಸಾದ್‍ರವರ ಧೈರ್ಯವನ್ನು ಮೆಚ್ಚುವಂಥದ್ದೆ. ಚಿತ್ರ ನೋಡಿದ ನ೦ತರ ಅನಿಸಿದ್ದು ಚಿತ್ರದಲ್ಲಿರುವ ಅನೇಕ ಸಂಭಾಷಣೆಗಳು ಮುಜುಗರ ತರುವಂತೆ ಇತ್ತು ಎಂದು . ಬರಿ ಹುಡುಗರೇ ನೋಡಿದರೆ, ಅಥವ ಬರೀ ಹುಡುಗಿಯರೇ ನೋಡಿದರೆ ಅಷ್ಟು ಮುಜುಗರ ಆಗೊಲ್ವೇನೊ... ಆದರೆ ಮನೆ ಮಂದಿಯೆಲ್ಲ ಒಟ್ಟಿಗೇ ಕುಳಿತು ನೋಡೋಕೆ ಮುಜುಗರವಾಗುವುದಂತೂ ಸತ್ಯ..
ಸುದರ್ಶನ್ ಹಾಗೂ ಗುರುಪ್ರಸಾದ್ ಒಟ್ಟಿಗೇ ಬರುವ ಸೀನಿನಲ್ಲಿ ಸಿನಿಮಾ(ಕಥೆ)ದಿ೦ದ ಹೊರಕ್ಕೆ ಬ೦ದು ಮತ್ತೆ ಸಿನಿಮಾದ ಒಳಕ್ಕೆ ಕರೆದುಕೊ೦ಡು ಹೋಗುವ ಸ್ಟೈಲ್ ಬಹಳ ಮೆಚ್ಚಿಗೆಯಾಗುತ್ತದೆ. ಹಾಗೇ ಕೊನೆಯಲ್ಲಿ ಕೂಡ ನಾಗತಿಹಳ್ಳಿ ಚ೦ದ್ರಶೇಖರ್ ಮತ್ತೆ 'ಮಠ' ಕ್ಕೆ ಸೇರಿದ ಮೇಲೆ ಗುರುಪ್ರಸಾದ್ ಮತ್ತೊಮ್ಮೆ ತಮ್ಮ ಜಾಣ್ಮೆಯನ್ನ ತೋರಿದ್ದಾರೆ.ಸಾಮಾನ್ಯ ಪ್ರೇಕ್ಷಕನಿಗೆ ನಾನೇ ಈ ಚಿತ್ರದ ನಿರ್ದೇಶಕ ಎನ್ನುವುದ ಬಹಳ ಜಾಣ್ಮೆಯಿ೦ದ ತಿಳಿಸಿದ್ದಾರೆ.
ಇನ್ನು ಪಾತ್ರಧಾರಿಗಳೆಲ್ಲರೂ ಪಾತ್ರಕ್ಕೆ ಪಾತ್ರವಾಗದೆ ಜೀವವಾಗಿದ್ದಾರೆ,ಜಗ್ಗೇಶ್ ತಮ್ಮ ನೂರನೇ ಚಿತ್ರವನ್ನ ಯಾವುದೇ ಕೊರತೆಯಿಲ್ಲದೇ ನಿಭಾಯಿಸಿದ್ದಾರೆ."ಗುರುಶಿಷ್ಯರು" ಸಿನಿಮಾ
ನೆನಪಿಗೆ ಬಾರದಿರದು.ಅ೦ದಿನ ಗುರುಶಿಷ್ಯರಲ್ಲಿ ಕಳಪೆ ಸ೦ಭಾಷಣೆಯಿರಲಿಲ್ಲ."ಕೆಲ್ಸಕ್ಕೆ ಮಾತ್ರ ಕರೀಬೇಡಿ ಊಟಕ್ಕೆ ಮಾತ್ರ ಮರೀಬೇಡಿ" ಎನ್ನುವ ಅಡಿಬರಹದಿ೦ದ ಹಿಡಿದು ಟೆನ್ನಿಸ್ ಕೋರ್ಟಲ್ಲಿ "ಅವರುಎತ್ತಿ ಎತ್ತಿ ಕೊಡ್ತಾ ಇದಾರೆ ನೀವು ಹೊಡಿತಾನೆ ಇಲ್ಲ" ಎನ್ನುವ ಪ್ರಶ್ನೆಗೆ "ಅವರು ಹಾಸಿಗೆ ಮೇಲೂ ಹಾಗೇನೇ" ಎನ್ನುವ ಉತ್ತರ ನಿರ್ದೇಶಕರ ಬೋಲ್ಡ್ ವ್ಯಕ್ತಿತ್ವವನ್ನ ಬಿ೦ಬಿಸುತ್ತೆ.ಬೀಗ ಹೆ೦ಗಸಿನ ಹಾಗೆ,ಅದರ ಕೀ ಗ೦ಡಸಿನ ಹಾಗೆ ಇಬ್ಬರನ್ನೂ ಐಕ್ಯ ಮಾಡಿಸಿ ಎನ್ನುತ್ತದೆ ಒ೦ದು ಪಾತ್ರ.ನೀವೇ ಹೇಳಿ ಈ ಸ೦ಭಾಷಣೆಯನ್ನ ಒಬ್ಬರೇ ಕೇಳಿದಾಗ ಮಜಾ ಅನ್ಸುತ್ತೆ,ಎಲ್ಲರೂ ಇದ್ದಾಗ ಇರಸು ಮುರಸಾಗುತ್ತೆ ಅನ್ಸಲ್ವಾ?.
ಸ್ರುಷ್ಟಿಸುವಾಗ ಬ್ರಹ್ಮನಿ೦ದಾದ ತಪ್ಪಿಗೆ ಬ್ರಹ್ಮನನ್ನೆ ಪೂಜಿಸುತ್ತಿರುವ ಅ೦ಗವಿಕಲ ಮಕ್ಕಳು,ನಿರುದ್ಯೋಗದ ಸಮಸ್ಯೆಯಿ೦ದ ಸಮಾಜವನ್ನ ತ್ಯಜಿಸಿ ಸನ್ಯಾಸಿಯಾಗಲು ಹೊರಟ ಯುವಕರು.ಸನ್ಯಾಸಿಯಾದ ಗುರುಗಳು ಸ೦ಸಾರ ಸುಖ ಬೇಕೆ೦ದು 'ಮಠ' ತ್ಯಜಿಸಿ ಹೋಗುವುದು,ಒಟ್ಟಿನಲ್ಲಿ 'ಮಠ'ದ ರೀತಿ,'ಮಠ'ದ ನೀತಿ,'ಮಠ'ದ ಮರ್ಯಾದೆ,ಮಠ'ದ ರಾಜಕೀಯ,ಮಠ'ದ ಮೌನ,'ಮಠ'ದ ಹಾದರ,ಮಠ'ದ ಮತ್ಸರ,ಮಠ'ದ ಕಾಮ,ಮಠ'ದ ಕ್ರೋಧ,'ಮಠ' ದ ಕೊಲೆ ................ಈ ಎಲ್ಲದಕ್ಕೂ ಒ೦ದೇ ಉತ್ತರ ಗುರುಪ್ರಸಾದ್ ರವರ 'ಮಠ'.