ಕನ್ನಡ-ಕನ್ನಡಿಗ-ಕಿಲಿಮ೦ಜಾರೋ
ಲೇಖನ : ಪ್ರಶಾಂತ್ ಬೀಚಿ, ತಾನ್ಜಾನಿಯ(ದಟ್ಸ್ ಕನ್ನಡದಿ೦ದ)
ಕಿಲಿಮಂಜರೊ ಆಫ್ರಿಕಾದಲ್ಲೇ ಅತೀ ಎತ್ತರವಾದ ಪರ್ವತ. ಇದು ಪ್ರಪಂಚದ ಅತೀ ವಿಶಾಲವಾದ ಜ್ವಾಲಾಮುಖಿ ಪರ್ವತ, ಅಷ್ಟೆ ಅಲ್ಲ ಸ್ವಂತ ಶಕ್ತಿಯಮೇಲೆ ನಿಂತಿರುವ ಅತೀ ಎತ್ತರವಾದ ಪರ್ವತ ಕೂಡ. ಇಷ್ಟೆಲ್ಲಾ ವಿಪರೀತಗಳನ್ನು ಹೊಂದಿರುವ ಪರ್ವತ ಏರಲು ಪ್ರಪಂಚದ ಮೂಲೆ ಮೂಲೆಗಳಿಂದ ಪರ್ವತರೋಹಿಗಳು ಬರುತ್ತರೆ. ನಾನು ಈ ಪರ್ವತದ ಪಕ್ಕದಲ್ಲೆ ಇದ್ದು ಹತ್ತದಿದ್ದರೆ ಎಂತಹ ಅನಾಹುತ ಅಲ್ಲವೆ?
ಈ ಪರ್ವತ ಹತ್ತಲು ಸುಮಾರು ಅರವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಬೇಕಾಗುತ್ತದೆ, ಸುಮ್ಮನೆ ಅಷ್ಟೊಂದು ದುಡ್ಡು ಸುರಿದು ಶ್ರಮ ಪಡುವುದು ಒಳಿತೆ ಎಂದು ನನ್ನ ಯೋಜನೆಯನ್ನು ಮುಂದೂಡುತ್ತಲೆ ಬಂದಿದ್ದೆ. ನನ್ನ ಅದೃಷ್ಟವೆನ್ನುವಂತೆ, ನನ್ನ ಹೆಂಡತಿ ಕೆಲಸ ಮಾಡುತ್ತಿದ್ದ ಶಾಲೆಯಿಂದ ಕೆಲವು ಮಕ್ಕಳನ್ನು ಕರೆದುಕೊಂಡು ಆ ಪರ್ವತ ಹತ್ತಲು ಹೊರಟಿದ್ದರು. ನನ್ನ ಆಸೆ ತಿಳಿದಿದ್ದ ನನ್ನ ಹೆಂಡತಿ ಶಾಲೆಯಿಂದ ಏನೆನೊ ಸುಬೂಬು ಹೇಳಿ ಅವಳೊಂದಿಗೆ ನನ್ನನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದಳು. ಎಪ್ಪತ್ತು ಸಾವಿರ ಆಗುತ್ತಿದ್ದ ಖರ್ಚನ್ನು ಕೇವಲ ಇಪ್ಪತ್ತು ಸಾವಿದರಲ್ಲಿ ಸರಿದೂಗಿಸಿದಳು.
ಎಲ್ಲವೂ ಸರಿ, ಆದರೆ ನಾವು ಆ ಪರ್ವತವನ್ನು ಹತ್ತಲು ಸಮರ್ಥರೆ? ನಮ್ಮಲ್ಲಿ ಆ ಮಟ್ಟದ ಸಾಮರ್ಥ್ಯ ಇದೆಯೆ? ನಮ್ಮ ಆರೋಗ್ಯ ಆ ಪರ್ವತಾರೋಹಣಕ್ಕೆ ಯೋಗ್ಯವಾಗಿದೆಯೇ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು. ಅದನ್ನೆಲ್ಲ ಸರಿದೂಗಿಸಲು ಎರಡು ತಿಂಗಳು ಪೂರ್ವ ತಯಾರಿ ನೆಡೆಸಿಕೊಂಡೆವು. ಹತ್ತಿರದಲ್ಲಿ ಇದ್ದ ಸಣ್ಣ ಸಣ್ಣ ಬೆಟ್ಟಗಳನ್ನು ಹತ್ತಿ ಇಳಿದೆವು. ದಿನಕ್ಕೆ ಇಪ್ಪತ್ತು ಕಿಲೋ ಮೀಟರ್‌ಗಳಂತೆ ನೆಡೆದೆವು. ಪ್ರರ್ವತದ ಮೇಲಿನ ಚಳಿಗೆ ಹೊಂದಿಕೊಳ್ಳುವಂತಹ ಬಟ್ಟೆಗಳು, ಪರ್ವತ ಹತ್ತಲು ಅನುಕೂಲವಾಗುವಂತಹ ಶೂ, ಹೀಗೆ ನಮ್ಮ ತಯಾರಿ ಬಹಳ ಜೋರಾಗೆ ನೆಡೆಯಿತು.
ಪ್ರವಾಸ ಪ್ರಯಾಸ : ಐದು ಸಾವಿರದ ಎಂಟುನೂರ ತೊಂಬತ್ತೈದು ಮೀಟರ್, ತುದಿಯ ಮೇಲೆ ಮೈನಸ್ ಹದಿನೈದು ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಚಳಿಯಲ್ಲಿ ಮಂಜುಗಡ್ಡೆಯ ಮೇಲೆ ನಮ್ಮ ಆಟ ನೆಡೆಯುವುದಿಲ್ಲ. ಹತ್ತುವಾಗ ಆಮ್ಲಜನಕ ಕಡಿಮೆ ಇರುತ್ತದೆ, ಉಸಿರಾಟಕ್ಕೆ ಬಹಳ ತೊಂದರೆ ಆಗುತ್ತದೆ, HAS (High Altitude Sickness) ಎಂಬ ಖಾಯಿಲೆ ನಮ್ಮಿಂದ ವಾಂತಿ ಮಾಡಿಸುತ್ತದೆ, ಸುಸ್ತಾಗಿ ಕುಳಿತರೆ ಮೈ ಕೈಗಳು ಹಾಗೆ ಸೆಟೆದುಕೊಳ್ಳುತ್ತವೆ, ಕೊರೆಯುವ ಚಳಿಯಲ್ಲಿ ನಡೆಯಲು ಆಗದ ಕೂರಲು ಆಗದ ಪರಿಸ್ಥಿತಿ ನಮ್ಮದಾಗುತ್ತದೆ. ಇಷ್ಟೆಲ್ಲಾ ವಿಪರೀತಗಳ ನಡುವೆ ನಾವು ಹೋಗಲು ನಿರ್ಧರಿಸಿದ್ದೆವು. ಸುಮಾರು ಆರು ದಿನಗಳ ಈ ಪ್ರವಾಸ ಒಂದು ಪ್ರಯಾಸವೆ.
ಮೊದಲನೇ ದಿನದ ಮಧ್ಯಾನ್ಹ ಒಂದು ಘಂಟೆಗೆ ಶುರುಮಾಡಿದ ನಾವು ಆರನೆ ದಿನದ ಸಂಜೆ ಐದು ಗಂಟೆಯವರೆಗೂ ನೆಡೆಯುತ್ತಲೆ ಇದ್ದೆವು. ದಿನಕ್ಕೆ ಹದಿನೈದು ಕಿಲೋಮೀಟರ್‌ನಂತೆ ಆರು ದಿನಗಳು ನೆಡೆದೆವು. ಸಮತಟ್ಟಾದ ನೆಲವಾಗಿದ್ದರೆ ಏನೂ ತೊಂದರೆ ಇಲ್ಲ, ಆದರೆ ಪರ್ವತ ಹತ್ತುವುದು ಇದೆಯಲ್ಲಾ ಅದರಂತಹ ನರಕಯಾತನೆ ಇನ್ನೊಂದಿಲ್ಲ. ಮೊದಲ ಮೂರು ದಿನ ಏನೂ ಅನ್ನಿಸಲಿಲ್ಲ, ಏಕೆಂದರೆ ಅದು ಪೂರ್ತಿಯಾಗಿ ಏರಿಕೆ ಇರಲಿಲ್ಲ. ಅಲ್ಲಲ್ಲಿ ಸಮತಟ್ಟಾದ ಭೂಮಿಯೂ ಇತ್ತು. ನಾಲ್ಕನೆ ದಿನದ ರಾತ್ರಿ ಹನ್ನೊಂದು ಗಂಟೆಗೆ ಹತ್ತಲು ಶುರುಮಾಡಿದ ಯಾತ್ರೆ ಮಾತ್ರ ಮರೆಯಲಾಗುವುದಿಲ್ಲ. ಒಂದು ಮೀಟರ್ ಮೇಲೆ ಹೋಗಲು ಸುಮಾರು ನಾಲ್ಕು ಮೀಟರ್‌ನಷ್ಟು ನೆಡೆಯಬೇಕಿತ್ತು. ಜಿಗ್-ಜಾಗ್ ಮಾದರಿಯಲ್ಲಿ ನಾವು ನೆಡೆಯುತ್ತಿದ್ದೆವು. ನೇರವಾಗಿ ನೇಡೆಯುವುದು ಅಸಾಧ್ಯವಾಗಿತ್ತು, ನಾವು ಹೆಜ್ಜೆ ಇಟ್ಟರೆ ಕಾಲುಗಳು ಹಾಗೆ ಕೆಳಕ್ಕೆ ಬರುತ್ತಿದ್ದವು, ಪರ್ವತದ ಆ ಮಣ್ಣು ನಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ. ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ, ಪರ್ವತವನ್ನು ಹತ್ತಲು ಬಂದಿದ್ದಕ್ಕೆ ನಮ್ಮನ್ನು ನಾವೆ ಶಪಿಸಿಕೊಳ್ಳುತ್ತಾ ನೆಡೆಯುತ್ತಿದೆವು. ಸುಮಾರು ನಾಲ್ಕು ತಾಸುಗಳ ನಂತರ ಒಂದು ಗುಹೆ ಸಿಕ್ಕಿತು. ಅಲ್ಲಿ ಕೇವಲ ಹತ್ತುನಿಮಿಷ ಕುಳಿತುಕೊಳ್ಳಲು ಅವಕಾಶ. ಮಲಗಿಕೊಂಡರೆ ಆಮ್ಲಜನಕ ಕಡಿಮೆಯಾಗಿ ನಮಗೆ ಗೊತ್ತಾಗದೆ ನಮ್ಮ ಪ್ರಾಣ ಹಾರಿಹೋಗುತ್ತದೆ ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರಿಂದ ಯಾರೂ ಮಲಗಲು ಹೋಗಲಿಲ್ಲ. ಅಲ್ಪ ವಿರಾಮದ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು.
ಎಲ್ಲರ ಕಾಲು ಪದ ಹೇಳುತ್ತಿದ್ದವು, ಯಾರಿಗೂ ಪರ್ವತ ಏರುವ ಆಸಕ್ತಿ ಇಲ್ಲದಾಗಿತ್ತು. ಆದರೂ ಇಷ್ಟು ಕಷ್ಟ ಪಟ್ಟಿರುವ ನಾವು ಇನ್ನು ಸ್ವಲ್ಪ ಕಷ್ಟಪಟ್ಟರೆ ಪೂರ್ತಿ ಪರ್ವತದ ತುಟ್ಟ ತುದಿಗೆ ತಲುಪಬಹುದು ಎನ್ನುವ ಆಸೆ ಎಲ್ಲರನ್ನು ಹತ್ತಲು ಪ್ರೋತ್ಸಾಹಿಸುತ್ತಿತ್ತು. ಅಲ್ಲಲ್ಲಿ ಕೆಲವರು ವಾಂತಿ ಮಾಡಿಕೊಳ್ಳುವುದು, ಕೈ ಕಾಲು ಹಿಚುಕಿಕೊಳ್ಳುವುದು, ಅಳುವ ಮುಖ ಮಾಡಿ ಕುಳಿತುಕೊಂಡಿರುವುದು ಸಾಮಾನ್ಯದೃಶ್ಯವಾಗಿತ್ತು. ಯಾರಿಗೂ ಇನ್ನೊಬ್ಬರ ಮೇಲೆ ಕರುಣೆ ಅನ್ನುವುದು ಬರುತ್ತಿರಲಿಲ್ಲ. ನಿಂತಲ್ಲೆ ಕೈ ಎತ್ತಿ, ಇಲ್ಲೆ ಇದೆ ಬನ್ನಿ ಎಂದು ನಮ್ಮ ಗೈಡ್ ಪ್ರತಿ 10 ನಿಮಿಷಕ್ಕೆ ಒಮ್ಮೆ ಹೇಳುತ್ತಿದ್ದ. ನಾವು ಎಲ್ಲಿದ್ದೇವೆ? ಇನ್ನು ಎಷ್ಟು ದೂರ ಇದೆ? ಎನ್ನುವುದು ತಿಳಿದಿರಲಿಲ್ಲ. ರಾತ್ರಿಯ ಕತ್ತಲಲ್ಲಿ ಚಂದ್ರನ ಬೆಳಕಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ತೇಪೆ ಕಾಣಿಸುತ್ತಿತ್ತು.
ಈ ಪರ್ವತವನ್ನು ಹತ್ತುವ ಮೊದಲು ಮಂಜನ್ನು ನೈಸರ್ಗಿಕವಾಗಿ ನಾನು ನೋಡಿರಲಿಲ್ಲ. ಯಾವಾಗ ಮಂಜು ಸಿಗುತ್ತದೊ ಅದರ ಮೇಲೆ ಹತ್ತು ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಆಟವಾಡುತ್ತೇನೆ, ಅದರ ಮೇಲೆ ಮಲಗಿ ಉರುಳಾಡುತ್ತೇನೆ ಎಂದು ಏನೇನೊ ಊಹೆಗಳನ್ನು ಮಾಡಿಕೊಂಡಿದ್ದೆ. ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯ, ಹತ್ತುವಾಗ ಒಂದು ಕಡೆ ಹತ್ತಿಯನ್ನು ಹಾಸಿದ ಹಾಗೆ ಕಾಣಿಸುತ್ತಿತ್ತು. ನನ್ನ ಹಿಂದೆ ಬರುತ್ತಿದ್ದವನು ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಅಲ್ಲಿ ಐಸ್ ಬಿದ್ದೆದೆ ಅಂದ, ನನಗೆ ಸರಿಯಾಗಿ ಕೇಳಿಸಲಿಲ್ಲ. ನಾನು ಹತ್ತಿರ ಹೋದಮೇಲೆ ತಿಳಿಯಿತು ಅದು ಮಂಜುಗಡ್ಡೆಯ ಹಾಸಿಗೆ ಎಂದು. ಹಿಂದೆ ತಿರುಗಿ ನಿಧಾನವಾಗಿ ಹೇಳಿದೆ ನೋಡು ಇಲ್ಲಿ ಮಂಜು ಬಿದ್ದಿದೆ, ನಿನಗೆ ಆಸೆ ಇದ್ದರೆ ಮುಟ್ಟಿ ನೋಡು, ನನಗಂತೂ ಅದರನ್ನು ಮುಟ್ಟುವ ಆಸಕ್ತಿಯೂ ಇಲ್ಲ, ಕೂತರೆ ಏಳುವ ಶಕ್ತಿಯೂ ಇಲ್ಲ ಎಂದು ಹೇಳಿ ನನ್ನ ಆಮೆ ವೇಗದ ಪ್ರಯಾಣವನ್ನು ಮುಂದುವರೆಸಿದೆ. ನಮ್ಮ ಜೊತೆಗಾರರು ಬಹಳ ಜನ ಹಿಂದುಳಿದ ಕಾರಣ ನಾನು ಬೇರೊಬ್ಬ ಗೈಡನ್ನು ಹಿಂಬಾಲಿಸಿ ಹೊರಟೆ. ಒಬ್ಬಳು ಚೈನಿ ಹುಡುಗಿಯನ್ನು ಆತ ಕರೆದುಕೊಂಡು ಹೋಗುತ್ತಿದ್ದ. ಎಲ್ಲೆಲ್ಲಿ ಆ ಹುಡುಗಿ ಕುಳಿತಿಕೊಳ್ಳುತ್ತಾಳೊ ಅಲ್ಲೆ ನಾನು ಕೂಡ ಸುಧಾರಿಸಿಕೊಳ್ಳುತ್ತಿದ್ದೆ. ಕೆಲವು ಕಡೆ ಅವಳು ವಾಂತಿಮಾಡಿಕೊಂಡಳು. ಆದರೂ ಅವಳು ತನ್ನ ಪ್ರಯಾಣವನ್ನು ನಿಲ್ಲಿಸದೆ ಮುಂದುವರೆಸುತ್ತಿದ್ದಳು. ಈ ರೀತಿಯ ಪರ್ವತ ಹತ್ತುವಾಗ ಸುಧಾರಿಸಿಕೊಳ್ಳಲು ಕೂತರೆ ಇನ್ನೂ ಜಾಸ್ತಿ ಸುಸ್ತಾಗುತ್ತದೆ. ಆಮ್ಲಜನಕ ಕಡಿಮೆ, ಚಳಿ ಜಾಸ್ತಿ ಇದೆ, ಕೊರೆಯುವ ಚಳಿಯಲ್ಲೂ ಕೈ ಕಾಲು ಉರಿಯುತ್ತಿತ್ತು. ಹಾಗಾಗಿ ಸುಧಾರಿಸಿಕೊಳ್ಳದೆ ಪ್ರಯಾಣವನ್ನು ಮುಂದುವರೆಸುತ್ತಿದ್ದೆವು.
ಹಾರಾಡಿದ ಕನ್ನಡ ಬಾವುಟ : ಕಲ್ಲು ಬಂಡೆಗಳು ಜಾಸ್ತಿಯಾಗುತ್ತ ಬಂತು, ಈಗ ನಾವು ತೆವಳಿಕೊಂಡು ಹೋಗುವ ಪರಿಸ್ಥಿತಿ. ಕೈಲಿದ್ದ ಕೋಲನ್ನು ಸಣ್ಣದಾಗಿ ಮಡಿಚಿಕೊಂಡೆವು, ಕೂತು ನಿಧಾನವಾಗಿ ಬಂಡೆ ಹಿಡಿದು ಹತ್ತಲು ಶುರುಮಾಡಿದೆವು. ಸುಮಾರು ಒಂದು ಗಂಟೆಯ ಈ ಪ್ರಯಾಣದ ಬಳಿಕ ನಾವು ತಲುಪಿದೆವು ಗಿಲ್ಮನ್ಸ್ ಪಾಯಿಂಟ್. ಇಲ್ಲಿಯ ತನಕ ತಲುಪುವುದು ಕೂಡ ಒಂದು ಸಾಹಸವೇ ಸರಿ. ನನ್ನ ಪತ್ನಿ ನವ್ಯ (ನಾಗರತ್ನ) ಇಲ್ಲಿಯವರೆಗು ತಲುಪಿ, ಸೂರ್ಯ ಮೇಲೆ ಬಂದಿದ್ದರಿಂದ ಮುಂದೆ ಬರಲಾಗದೆ ಹಿಂತಿರುಗಿದ್ದಳು. ಇಲ್ಲಿಂದ ಮುಂದೆ ಸುಮಾರು ಎರಡು ಗಂಟೆಗಳ ಮಂಜಿನ ಮೆರವಣಿಗೆಯ ನಂತರ ನಮಗೆ ಸಿಕ್ಕಿದ್ದು ಉಹುರು ತುಟ್ಟ ತುದಿ. ಅದು ಆಫ್ರಿಕಾದ ಅತೀ ಎತ್ತರವಾದ ಪ್ರದೇಶ, ಪ್ರಪಂಚದ ಅತೀ ಎತ್ತರವಾದ ಜ್ವಾಲಾಮುಖಿ ಹಾಗು ಪ್ರಪಂಚದ ಸ್ವಂತ ಶಕ್ತಿಯ ಮೇಲೆ ನಿಂತ ಅತೀ ಎತ್ತರವಾದ ಪರ್ವತದ ತುಟ್ಟ ತುದಿ.
ನಾನು ತೆಗೆದುಕೊಂಡು ಹೋಗಿದ್ದ ಕರ್ನಾಟಕದ ಬಾವುಟವನ್ನು ಅಲ್ಲಿ ಹಾರಿಸಿ, ಸುತ್ತ ಮುತ್ತಲಿನ ಚಿತ್ರೀಕರಣ ಮಾಡಿಕೊಂಡೆ. ಬಿಸಿಲು ಬರುವುದರೊಳಗೆ ಅಲ್ಲಿಂದ ಕಾಲು ಕೀಳಬೇಕು, ಇಲ್ಲದಿದ್ದರೆ ಅದಕ್ಕಿಂತ ಕಠಿಣ ಮಾರ್ಗ ಇನ್ನೊಂದಿಲ್ಲ. ಹಾಗಾಗಿ ಬೇಗ ಬೇಗ ಎಲ್ಲ ಕೆಲಸ ಮುಗಿಸಿ, ಕರುನಾಡಿನ ಹೆಮ್ಮೆಯನ್ನು ಆಫ್ರಿಕಾದ ಅತೀ ಎತ್ತರದಲ್ಲಿ ಹಾರಿಸಿದ ಸಂತಸದೊಂದಿಗೆ ವಾಪಸ್ ಬಂದೆ. ಸ್ವರ್ಗ ಎಂದರೆ ಹೇಗಿರುತ್ತದೆ ಎಂದು ಪರ್ವತದ ಮೇಲೆ ಕಾಣಿಸುತ್ತದೆ. ಪರ್ವತದ ವಿಶೇಷ ಮತ್ತು ಇದರ ಪೂರ್ಣ ಕಥೆಯನ್ನು ಮತ್ತೊಮ್ಮೆ ಹೇಳುತ್ತೇನೆ. ಸದ್ಯಕ್ಕೆ ಕರ್ನಾಟಕದ ಬಾವುಟ ಆಫ್ರಿಕಾದ ತುಟ್ಟ ತುದಿಯಲ್ಲಿ ಹಾರಿಸಿದ ಸಂತಸವನ್ನು ಚಿತ್ರಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.prashanth@bol.co.tz
ಹೆಚ್ಚಿನ ಚಿತ್ರಗಳಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ.