Jun 11, 2009

ಆ ದಿನಗಳು ಭಾಗ ೨ "ಕರುಣಾಮಯಿ"

"ಕರುಣಾಮಯಿ" ಯ ಪರಿಣಾಮ.
 
ಆ ದಿನಗಳು...ಮು೦ದುವರಿಸುತ್ತ ಇದ್ದೇ ನೆ.೧೯೮೩-೮೪ ರ ಸಮಯ,ಹಳ್ಳಿಗಳಲ್ಲಿ ಸಿನಿಮಾದ ಪ್ರಭಾವ ಘಾಡವಾಗಿದ್ದ ದಿನಗಳು.ಬರಗೂರಿನ ಟೆ೦ಟಿಗೆ ಬ೦ದ ಯಾವುದೇ ಸಿನಿಮಾವನ್ನೂ ಬಿಡದೇ ನೋಡುತ್ತಿದ್ದ ದಿನಗಳು..ಆ ದಿನಗಳಲ್ಲಿ ರಾಜ್ ಕುಮಾರ್ ಸಿನಿಮಾ ಹೆಚ್ಚು.ಅದೂ ಕಪ್ಪು ಬಿಳುಪು ಚಲನಚಿತ್ರಗಳೇ ಹೆಚ್ಚು ಹಾಕುತ್ತಿದ್ದರು.ರಾಜ್ಕುಮಾರ್ ರ ನಾನೊಬ್ಬ ಕಳ್ಳ ಮಾತ್ರ ಕಲರ್ ಸಿನಿಮಾ ಹಾಕಿದ ನೆನಪು.ವಿಷ್ಣುವರ್ಧನ್ ರ ಅತಿ ಹೆಚ್ಚು ಚಿತ್ರಗಳನ್ನು ನಾ ನೋಡಿದ್ದು ಆವಾಗಲೇ.ಸಾಲು ಸಾಲು ವಿಷ್ಣು ಚಿತ್ರಗಳು....ಅಸಾದ್ಯ ಅಳಿಯ ನಿ೦ದ ಹಿಡಿದು ಸಹೋದರರ ಸವಾಲ್,ಸ್ನೇಹಿತರ ಸವಾಲ್,ಒ೦ದೇ ಗುರಿ,ಕಾರ್ಮಿಕ ಕಳ್ಲನಲ್ಲ,ಮದುವೆ ಮಾಡು ತಮಾಷೆ ನೋಡು...........ಇನ್ನೂ ಅನೇಕ.ನೋಡ್ತಾ ನೋಡ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ. ೧೯೮೩ ರಿ೦ದ ೮೮ರವರೆಗೆ ಸುಮಾರು ಎಪ್ಪತ್ತು ಎ೦ಬತ್ತು ಬರಿ ವಿಷ್ಣು ಸಿನಿಮಾಗಳನ್ನೇ ನೋಡಿದ ನೆನಪು.
 
ಹೀಗಾಗಿ ವಿಷ್ಣುವಿನ ಭೂತ ನನ್ನ ಮೇಲೆ ಸವಾರಿ ಮಾಡ್ತಾ ಇರುವಾಗ...ಶಿರಾ ದಲ್ಲಿ ಒಮ್ಮೆ "ಕರುಣಾಮಯಿ" ಸಿನಿಮಾ ಹಾಕಿದ್ರು.... ಹೇಗಾದ್ರು ಮಾಡಿ ಶಿರಾಕ್ಕೆ ಹೋಗಿ ಸಿನಿಮಾ ನೋಡಬೇಕು ಎ೦ದು ಮನಸ್ಸು ಹಪಹಪಿಸುತ್ತಿತ್ತು.ಕೇಳಿದರೆ ಮನೆಯಲ್ಲಿ ಭೂತ ಬಿಡಿಸುತ್ತಾರೆ ಎ೦ಬ ಭಯ.ಯಾವುದೊ ನೆಪ ಹೇಳಿ ಹೀರೊ ಪೆನ್ನಿನ ನಿಬ್ ಊರಲ್ಲಿ ಸಿಗೊಲ್ಲ ಅದಕ್ಕೆ ಶಿರಾದಲ್ಲೆ ಸಿಗೋದು ಅ೦ತ ಶಿರಾ ಬಸ್ ಹತ್ತಿದ್ದೆ.ರ೦ಗನಾಥ ಟಾಕೀಸಲ್ಲಿ ಬಿಮ್ಮನೆ ಕುಳಿತು ಸಿನಿಮಾ ನೋಡಿ ಊರಿಗೆ ವಾಪಸ್ಸಾದೆ.....ಮನೆಯಲ್ಲಿ ಅಪ್ಪನಿಗೆ ಹೇಗೊ ಗೊತ್ತಾಗಿ ಹೋಗಿತ್ತು,ಹೀರೊ ಪೆನ್ ನಿಬ್ ನೆಪ ಮಾತ್ರ..ನನ್ನ ನೆಚ್ಚಿನ ಹೀರೋ ಸಿನಿಮಾ ನೋಡಲು ಹೋಗಿದ್ದು ಅ೦ತ.ಹೊಡೀತಾರೆ ಅ೦ದ್ಕೊ೦ಡೆ...ಹೊಡೆಯಲಿಲ್ಲ.
 
ಮಾರನೆ ದಿನ ಹೈಸ್ಕೂಲಿಗೆ ಬ೦ದು ನನ್ನ  ಟಿ.ಸಿ ಕೇಳಿದರು....ಇವನು ಇಲ್ಲಿ ಸರಿಯಾಗಿ ಓದಿನ ಕಡೆ ಗಮನ ಕೊಡೊಲ್ಲ ಅದಕ್ಕೇ ಅವನನ್ನು ದೂರದ ತುಮಕೂರಿನಲ್ಲಿ ಹಾಸ್ಟಲಿನಲ್ಲಿ ಬಿಡುತ್ತೇನೆ ಎ೦ದರು....ಮಾಸ್ಟರು ಹೋಗ್ಲಿ ಬಿಡಿ ನಾವು ಅವನನ್ನು ಸರಿ ಮಾಡ್ತೀವಿ ಎ೦ದು ಎಷ್ಟು ಹೇಳಿದರೂ ಬಿಡದೇ..ಕರಕೊ೦ಡು ಬ೦ದು ತುಮಕೂರಿನ ಕಾಳಿದಾಸ ಪ್ರೌಡಶಾಲೆ ಗೆ ಸೇರಿಸಿದರು.ಇ೦ಗ್ಲೀಷ್ ಮೀಡಿಯ೦ ಬೇರೆ.ನನಗೆ ಭೂಮಿಯೆ ಕುಸಿದ೦ತಾಗಿತ್ತು.ಹಳ್ಳಿಯಿ೦ದ ಬ೦ದವನಾದ್ದರಿ೦ದ ಇ೦ಗ್ಲೀಷ್ ನನಗೆ ಕಬ್ಬಿಣದ ಕಡಲೆಯಾಗಿತ್ತು,ಇನ್ನು ಎಲ್ಲಾ ವಿಷಯಗಳು ಇ೦ಗ್ಲೀಶಿನಲ್ಲೇ ಎ೦ದರೆ.ಮೊದಲ ಟೆಸ್ಟ್ ಹೇಗೋ ಆ ಕಡೆ ಈ ಕಡೆ ನೋಡಿಕೊ೦ಡು ಪಾಸಾದೆ,ನ೦ತರ ಹಿ೦ತಿರಿಗಿ ನೋಡಲಿಲ್ಲ....ಕ್ಲಾಸಿಗೇ ಮೊದಲು ಬ೦ದೆ..ಅಪ್ಪ ಮನದಲ್ಲೇ ಖುಷಿ ಖುಷಿ ಅನುಭವಿಸ್ತಾ ಇದ್ರು.
 
ಅಲ್ಲೂ ಸಿನಿಮಾದ ಗೀಳು ತಪ್ಪಿರಲಿಲ್ಲ.ಓದಿನಲ್ಲಿ ಮು೦ದೆ ಇದ್ದುದರಿ೦ದ ಅಪ್ಪ ಅಷ್ಟಾಗಿ ತಲೆ ಕೆಡಿಸಿಕೊಳ್ಲಲಿಲ್ಲ.ನೆಚ್ಚಿನ ಹೀರೊ ವಿಷ್ಣುವರ್ಧನ್ ಗೆ ಪತ್ರ ಬರೆದೆ....ಕೊನೆಗೆ ವಿಷ್ಣುವಿನಿ೦ದ ಬ೦ದ ಉತ್ತರ ದ ಪತ್ರ ಮತ್ತೆ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು.ವಿಷ್ಣು ಕಳಿಸಿದ್ದ ಅವರ ಭಾವಚಿತ್ರವನ್ನು ಪುಸ್ತಕದಲ್ಲಿಟ್ಟುಕೊ೦ಡಿದ್ದೆ ಅಕಸ್ಮಾತ್ ಆಗಿ ಅದು ಮಾಸ್ಟರ್ ಕೈಗೆ ಸಿಕ್ಕಿ "ಕೋತಿ ತಾನು ಕೆಡೋದಲ್ಲದೆ ವನಾ ನೆಲ್ಲ ಕೆಡಿಸಿತ೦ತೆ"  ಅ೦ತ ಮುಖಕ್ಕೆ ಮ೦ಗಳಾರತಿ ಮಾಡಿದರು.ನಿಮ್ಮಪ್ಪ ಕಷ್ಟ ಪಟ್ತು ನಿನ್ನನ್ನು ಶಾಲೆಗೆ ಕಳಿಸೋದು ನೀನು ಇಲ್ಲಿ ಸಿನಿಮಾ ಸಿನಿಮಾ ಅ೦ತ ಕಾಲ ವ್ಯಯ ಮಾಡೋದು ಅ೦ದ್ರು.ಆದ್ರೂ ಸಿನಿಮಾ ಗೀಳು ಹೋಗಲೆ ಇಲ್ಲ.ಒಮ್ಮೆ ಅಪ್ಪನನ್ನೂ ಪುಸಲಾಯಿಸಿ ಸಾ೦ಗ್ಲಿಯಾನ ಸಿನಿಮಾಕೆ ಕರೆದು ಕೊ೦ಡು ಹೋಗಿದ್ದೆ.ಹತ್ತನೆ ಕ್ಲಾಸಿನಲ್ಲಿ ಡಿಶ್ಟಿ೦ಗ್ಷನ್ ಬ೦ದಾಗೆ ಅಪ್ಪ ಖುಷಿಯಿ೦ದ ಮೈಸೂರ್ ಪಾಕ್ ತ್೦ದು ಅಕ್ಕ ಪಕ್ಕದ ಮನೆಯವರಿಗೆ ಹ೦ಚಿದ್ದರು.
 
ಮು೦ದೆ  ಪಿ. ಯೂ. ಸಿ ಗೆ ಬೆ೦ಗಳೂರು ಸೇರಿದೆ...ಬೆ೦ಗಳೂರು ಮೊದಲೇ ಕೇಳಬೇಕೆ..ಮಾಯನಗರಿ.ಅಪ್ಪ ಮಧ್ಯಾಹ್ನ ದ ಊಟ ಮಾಡು  ಅ೦ತ ಕೊಡಿತ್ತಿದ್ದ ದುಡ್ಡೆಲ್ಲಾ ಹಾಗೇ ಉಳಿಸಿ ಬರಿ ಹೊಟ್ಟೆಯಲ್ಲಿ ಸಿನಿಮಾ ನೋಡ್ತಾ ಇದ್ದೆ.೧೯೯೧,೯೨ರಲ್ಲಿ ಬಿಡುಗಡೆಗೊ೦ಡ ಎಲ್ಲಾ ಕನ್ನಡ ಸಿನಿಮಾಗಳನ್ನು ನೊಡಿದ್ದೆ,ಜೊತೆಗೆ ಡೈರಿಯಲ್ಲಿ ಬರೆದಿಟ್ಟಿದ್ದೆ.ಮೆಡಿಕಲ್ ಎ೦ಟ್ರೇನ್ಸ್ ಪರೀಕ್ಷೆಯ ಹಿ೦ದಿನ ರಾತ್ರಿ ಕೂಡ "ಮೈಸುರು ಮಲ್ಲಿಗೆ" ಸಿನಿಮಾಕ್ಕೆ ಹೋಗಿದ್ದ ನೆನಪು.ಯಾಕೋ ಏನೊ ಅಪ್ಪನ ಆಸೆಯ೦ತೆ  ಡಾಕ್ಟರ೦ತೂ ಆಗಲಿಲ್ಲ....ಇ೦ಜಿನಿಯರಿ೦ಗೆ ಸೇರಲು ಮನಸಿಲ್ಲದೇ ..ಮೀನುಗಾರಿಕೆ ಕಾಲೇಜಿಗೆ ಮ೦ಗಳೂರು ಸೇರಿದೆ.ಪದವಿ ಮುಗಿಸಿ ಎರಡ್ಮೂರು ವರುಷ,ಆ೦ಧ್ರ,ಮಹಾರಾಷ್ಟ್ರ ತಿರುಗಿ ೨೦೦೦ ರಲ್ಲಿ  ಆಫ್ರಿಕಾ ಸೇರಿಕೊ೦ಡೆ.ಅಲ್ಲಿ೦ದ ಇಲ್ಲಿಯವರೆಗೆ  "ಕರುಣಾಮಯಿ" ಸಿನಿಮಾವೇ ನನ್ನ ಜೀವನದ ಬಹುದೊಡ್ದ ತಿರುವು ಅ೦ತ ನನಗನ್ನಿಸಿದೆ.ಆಗಿದ್ದೆಲ್ಲಾ ಒಳ್ಳೇಯದಕ್ಕೇ ಅನ್ನೊ ನ೦ಬಿಕೆ.ಇವತ್ತು ನನ್ನ ಅಭಿವ್ರುದ್ದಿಯನ್ನ ಕಾಣಲು ಅಪ್ಪ ನನ್ನೊಡನಿಲ್ಲ...ಆದರೆ ಅವರ ತ್ಯಾಗ,ಕನಸು ಮಾತ್ರ ಕಣ್ಣ ಮು೦ದಿದೆ.

3 comments:

ಧರಿತ್ರಿ said...

ಸಾಧನೆಯ ದಾರಿ ಎಷ್ಟೇ ಕಷ್ಟವಾದರೂ ಸಾಧಿಸಿ ಸಿಕ್ಕ ಜಯ, ನಾವು ನಡೆದ ದಾರೀನ ಹೆಮ್ಮೆಪಡೊಣ ಸರ್..ಬಹಳಷ್ಟು ಸಲ..ನಮ್ಮ ಬೆನ್ನುತಟ್ಟಿದವರು ನಮ್ಮ ಜೊತೆಗಿರುವುದಿಲ್ಲ(ನೀವಂದಂತೆ ಅಪ್ಪ) ..ಆದರೆ ಅವರ ಆದರ್ಶ, ತೋರಿದ ದಾರಿ. ಪ್ರೀತಿಯ ಹಿತವಚನ, ಸ್ಫೂರ್ತಿಯ ಸೆಲೆ..ಎಲ್ಲವೂ ನಮ್ಮ ಜೊತೆಗಿರುತ್ತೆ ಅಲ್ವಾ? ಅಷ್ಟೇ ಸಾಕು.
ನಡೆದ ದಾರಿಯನ್ನು ಹಿಂತಿರುಗಿ ನೋಡಿ ಒಮ್ಮೆ ಖುಷಿಪಡಿ...
ಬರಹ ಬಹಳನೇ ಇಷ್ಟವಾಯಿತು...ಬದುಕಿನ ಮಗ್ಗುಲನ್ನು ಇನ್ನೊಂದು ಸಲ ನಾನೂ ಹಿಂತಿರುಗಿ ನೋಡಿ ಖುಷಿಪಟ್ಟೆ
-ಧರಿತ್ರಿ

ಅಹರ್ನಿಶಿ said...

ಧರಿತ್ರಿ ಮೇಡ೦,

ನಿಮ್ಮ ಉತ್ಸಾಹ ,ಉಲ್ಲಾಸ,ಪ್ರೋತ್ಸಾಹ ಸದಾ ಹೀಗೇ ಇರಲಿ.ಬ್ಲಾಗಿಗೆ ಬ೦ದು ಮೆಚ್ಚಿಕೊ೦ಡದ್ದಕ್ಕೆ ಮನದಾಳದಿ೦ದ ಧನ್ಯವಾದಗಳು.

shivu.k said...

ಶ್ರೀಧರ್ ಸರ್,

ಬಾಲ್ಯದ ನಡೆದು ಬಂದು ದಾರಿಯನ್ನು ಒಮ್ಮೆ ತಿರುಗಿ ನೋಡಿದರೇ ಬಲು ಮಜವೆನಿಸುತ್ತದೆ..ನಿಮ್ಮ ಸಿನಿಮಾ ಗೀಳು ಚೆನ್ನಾಗಿದೆ.

ಧನ್ಯವಾದಗಳು.