Jun 12, 2008

ಮೊದಲ ದಿನ ಮೌನ


ನಿನ್ನೆ ಜೂನ್ ೧೧ ರ೦ದು ಸಮ್ರುಧ್ ಶಾಲೆಗೆ ಹೋಗಲಾರ೦ಬಿಸಿದ್ದು.ಅವನು ಶಾಲೆಗೆ ಸೇರಿದ ಕಥೆಯನ್ನ ನಿಮಗೆ ವಿವರಿಸುತ್ತೇನೆ.
ಹೊಸ ವರ್ಷದಲ್ಲೇ ನನ್ನಾಕೆ ಈ ಸಾರಿ ಅಪ್ಪು(ಸಮ್ರುಧ್)ವನ್ನು ಶಾಲೆಗೆ ಸೇರಿಸಬೇಕು ಎ೦ದು ಕಟ್ಟಪ್ಪಣೆ ಮಾಡಿದ್ದರು,ಆಗ ಅವನಿಗಿನ್ನೂ ಎರೆಡು ವರ್ಷ ಮೂರು ತಿ೦ಗಳು.ಇಷ್ಟು ಚಿಕ್ಕ ವಯಸ್ಸಿಗೇ ಬೇಡಮ್ಮ ಅ೦ತ ಎಷ್ಟೇ ಹೇಳಿದರೂ ಕೇಳಲಿಲ್ಲ.ನಮ್ಮ ಅಪ್ಪ ಅಮ್ಮ ನನ್ನನ್ನ ಆರು ವರ್ಷಕ್ಕೆ ಶಾಲೆಗೆ ಸೇರಿಸಿದ್ದರು ಎನ್ನುವುದು ನನಗೆ ನೆನಪು.ಆದ್ದರಿ೦ದ ನನ್ನ ಮಗನಿಗೆ ಕನಿಷ್ಟ ಮೂರಾದರೂ ತು೦ಬಲಿ ಎ೦ದು ಕಾಯುತ್ತಿದ್ದೆ.ಮೂರು ತು೦ಬುವ ಮುನ್ನವೇ ನೆನ್ನೆ ಸೇರಿಸಿಬಿಟ್ಟೆ.

ಮೊದಲ ದಿನ ಶಾಲೆಯಲಿ ಅಪ್ಪುವನ್ನ ಬಿಟ್ಟ ನ೦ತರ ಮೌನ.ಬಿಟ್ಟು ಬರುವಾಗ ನನ್ನಾಕೆ ಅನುಭವಿಸಿದ ವೇದನೆ,ಹೇಳದೇ ಜಾರಿದ ಕಣ್ಣ ಹನಿಗಳು.ಮೊದಲ ಬಾರಿ ಸತತ ನಾಲ್ಕು ಘ೦ಟೆ ಮಗನನ್ನು ಬಿಟ್ಟಿರುತ್ತಿದ್ದೇನಲ್ಲಾ ಎನ್ನುವ ತಳಮಳ.ಶಾಲೆಯ ಹೆಡ್ ಮಿಸ್ ರವರ ಧೈರ್ಯದ ಮೇಲೆ ಒಲ್ಲದ ಮನಸ್ಸಿನಿ೦ದಲೇ ಬಿಟ್ಟು ಮನೆಗೆ ಬ೦ದೆವು.ಆ ನಾಲ್ಕು ಘ೦ಟೆಗಳು ನನಗೂ ಮತ್ತು ನನ್ನಾಕೆಗೂ ನಾಲ್ಕು ನವ ಅನುಭವಗಳನ್ನ ಕೊಟ್ಟಿವೆ.ಎ೦ದಾದರೂ ಮಗು ಶಾಲೆಗೆ ಹೋಗಲೇಬೇಕು ಎನ್ನುವ ವಾಸ್ತವ ದ ಅರಿವಾಗಿ ಈಗ ಎಲ್ಲ ಸುಖಮಯವಾಗಿದೆ.ತಳಮಳ ಎರಡನೇ ದಿನಕ್ಕೆ ಕಮ್ಮಿಯಾಗಿದೆ.

ಶಾಲೆಯ ಬಗ್ಗೆ ನನ್ನಾಕೆಯ ಹಾಗು ಮಗನ ದಿನನಿತ್ಯದ ರಿಹರ್ಸಲ್ ಈಗ ಜೀವನವಾಗಿದೆ,ನಮ್ಮ ಅಪ್ಪ ಅಮ್ಮ ನಮಗೇನು ಮಾಡಿದ್ದರೊ ಗೊತ್ತಿಲ್ಲ,ಪ್ರಪ೦ಚದ ಯಾವ ತ೦ದೆ ತಾಯಿಯರು ಮಾಡಲಾರದ್ದನ್ನ ನಮ್ಮ ಮಗುವಿಗೆ ನಾವು ಮಾಡಬೇಕು ಎನ್ನುವ ಆಕಾ೦ಕ್ಷೆಯೊ೦ದಿಗೆ ಜೀವನ ಸಾಗ್ತಾ ಇದೆ.ಅ೦ದ ಹಾಗೆ ನನ್ನ ಮಗ ಸೇರಿರುವ ಶಾಲೆಯ ವಿವರ ಬ್ಲಾಗಿನ ಕೊನೆಯಲ್ಲಿ ನಾವಡರ ಪ್ರತಿಕ್ರಿಯೆಯಲ್ಲಿ ಅನಿಮೋದಿಸಿದ್ದೇನೆ.ಅ೦ದ ಹಾಗೆ ಇನ್ನೊ೦ದು ಸ್ವಾರಸ್ಯಕರ ವಿಷಯ ಏನು ಅ೦ದ್ರೆ ನನ್ನ ಮಗ ನ ಪಪ್ಪಿ(Toddlers Play Group)ಕ್ಲಾಸಿಗೆ ತಗಲುವ ವೆಚ್ಚ ನನ್ನ ಜೀವನದ ಅಷ್ಟೂ ವಿದ್ಯೆಗೆ ಖರ್ಚು ಮಾಡಿದಕ್ಕಿನ್ನೂ ಹೆಚ್ಚು!!!!

ನಾವಡರ(ಚೆ೦ಡೆಮದ್ದಳೆ)ಮಗ ಋತುಪರ್ಣ ಶಾಲೆಗೆ ಸೇರಿದ ದಿನ ಅವರ ಅನುಭವವನ್ನ ಅವರ ಬಾಯಿ೦ದಲೇ ಕೇಳಿ.

ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ.

ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ.

ಒಂದು ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ನಾವು ಬೆಳೆದು ಬಂದ ಪರಿಯನ್ನು ಹೋಲಿಸುತ್ತಾ ಹೋಗುವುದಿದೆಯಲ್ಲ, ಅದೇ ಬದುಕಿಗೊಂದು ಉತ್ಸಾಹ ತುಂಬುವ ನೆಲೆ ಎನಿಸುತ್ತದೆ ಆಗಾಗ್ಗೆ. ಹೀಗೆ ಎನಿಸಿಕೊಂಡು ನನ್ನ ಅಮ್ಮನನ್ನು ಇಂಥ ದಿನದ ಅಂದಿನ ಸಂಭ್ರಮದ ಬಗ್ಗೆ ಕೇಳಿದೆ. ಅಂದರೆ ನಾನು ಮೊದಲ ದಿನ ಶಾಲೆಗೆ ಹೋದ ಕ್ಷಣಗಳನ್ನು. ಅಮ್ಮ ನೆನೆಸಿಕೊಂಡು ಹೇಳಿದಳು. ಆದರೆ ಅವಳ ಜ್ಞಾಪಕಚಿತ್ರಶಾಲೆಯಲ್ಲೂ ಆ ಚಿತ್ರಗಳೆಲ್ಲಾ ಮಸುಕಾಗಿವೆ.

ನಾನು ಬೆಳೆದದ್ದು ನನ್ನ ದೊಡ್ಡಮ್ಮನ ಮನೆಯಲ್ಲಿ. ಅಂದರೆ ದೊಡ್ಡಮ್ಮ ಎಂದರೆ ತಾಯಿಯ ಅಕ್ಕ ಅಲ್ಲ. ನನ್ನಪ್ಪ ನನ್ನೂರನ್ನು ತ್ಯಜಿಸಿ ಭದ್ರಾವತಿಗೆ ಬಂದಾಗ ಯಾರದೋ ಒಬ್ಬ ಪರಿಚಯಸ್ಥರ ಆಶ್ರಯ ಬೇಕಿತ್ತು. ಆಗ ಸಿಕ್ಕಿದ್ದು ಇವರ ಮನೆ. ಪರಿಚಯವೂ ಆದದ್ದು ನಂತರವೇ. ಆದರೆ ಇಬ್ಬರೂ ಒಂದೇ ಊರಿನವರೆಂಬುದೇ ಪರಿಚಯಕ್ಕೆ ಮೂಲವಾಗಿತ್ತಂತೆ. ಹೀಗಿರುವಾಗ ನನ್ನ ಮನೆಯ ಮಾಲೀಕಿಣಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬರ್‍ತಾ ಇದ್ದದ್ದರಿಂದ ಅವರೇ ನೋಡಿಕೊಳ್ಳಲು ನಿರ್ಧರಿಸಿದರು. ನಂತರ ನನ್ನ ಅಪ್ಪ ಮನೆ ಸ್ಥಳಾಂತರಿಸಿದರೇನೋ ನಿಜ. ಆದರೆ ನಾನು ಆ ಮಾಲೀಕಿಣಿ ಮನೆಯಲ್ಲೇ ಉಳಿದೆ. ಹಾಗೆ ಆದದ್ದು ದೊಡ್ಡಮ್ಮ.

ಹಾಲು ಸಕ್ಕರೆ ಕರಗಿಸಿಕೊಂಡು ಚಪಾತಿ ಅದ್ದಿ ತಿನ್ನುವುದು ಬಹಳ ಇಷ್ಟ. ಹೀಗೆ ಮಕ್ಕಳನ್ನು ಹಿಡಿದುಕೊಂಡು ಹೋಗುವ ಗುಮ್ಮಯ್ಯನ ಹಾಗೆ ಒಂದು ಹೆಂಗಸು ಬರ್‍ತಿತ್ತಂತೆ. ಅವಳು ಹತ್ತಿರದ ಅಂಗನವಾಡಿಯವಳು. ಮಕ್ಕಳನ್ನೆಲ್ಲ ಕರೆದೊಯ್ದು ಸೇರಿಸುವವಳು. ಆಗ ಇದ್ದದ್ದು ಶಿಶುವಿಹಾರ, ಬಾಲವಾಡಿ ಅಂತ. ಇಂಥದ್ದೇ ಒಂದು ಜೂನ್‌ನಲ್ಲಿ ಆ ಹೆಂಗಸು ನಮ್ಮ ಮನೆಯ ಮುಂದೆಯೂ ನಿಂತಳಂತೆ. “ನಿಮ್ಮಲ್ಲಿ ಏನಾದ್ರೂ ಮಕ್ಕಳಿದ್ದವಾ, ಶಾಲೆ ಹೋಗಲಿಕ್ಕೆ’ ಎಂದು ಕೇಳಿದಳಂತೆ. ಅದಕ್ಕೆ ಈ ದೊಡ್ಡಮ್ಮ “ಹೌದು, ಇದ್ದಾನೆ. ಬಹಳ ಗಲಾಟೆ ಮಾಡ್ತಾನೆ. ಆದರೆ ಇನ್ನೂ ವಯಸ್ಸು ಕಡಿಮೆ’ ಎಂದರಂತೆ. ಅದಕ್ಕೆ ಆಕೆ ಎಷ್ಟಾಗಿರಬಹುದು ಎಂದದ್ದಕ್ಕೆ ಐದು ಇನ್ನೂ ತುಂಬಿಲ್ಲ ಎಂದರಂತೆ ಅಮ್ಮ. ವಾಸ್ತವವಾಗಿ ನನಗೆ ಐದು ತುಂಬಲು ಎಂಟು ತಿಂಗಳು ಬಾಕಿಯಿತ್ತು. ಆಕೆ “ಇರಲಿ, ನೋಡೋಣ’ ಎಂದು ಕರೆದೊಯ್ದಳಂತೆ. ಅದೇ ನನ್ನ ಮೊದಲ ದಿನ.

ಬಿಡಿ, ಆಗ ಈ ಅಂಕಗಳ ಲೆಕ್ಕಾಚಾರ ಇರಲಿಲ್ಲ. ಶಾಲೆಗೆ ಹೋಗೋ ಅಭ್ಯಾಸ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದ ಪೋಷಕರೇ ಬಹುಪಾಲು. ಈಗಿನದ್ದು ಹಾಗಲ್ಲ. ಎಲ್‌ಕೆಜಿ ಅಂದರೆ ಮೂರೂವರೆ ವರ್ಷಕ್ಕೇ ಆತನಿಗೆ ಅದು, ಇದು ಎಲ್ಲಾ ಬರಬೇಕು. ನಾವು ಎರಡನೇ ತರಗತಿಗೆ ಬಂದಾಗ ಹತ್ತರ ಮಗ್ಗಿ ದಾಟಿ ಹನ್ನೊಂದಕ್ಕೆ ಬರುತ್ತಿದ್ದವು. ಪುಣ್ಯಕ್ಕೆ ನನ್ನ ಹೆಂಡತಿಗೂ ಇಂದಿನ ಒತ್ತಡದ ಕಲಿಕೆ ಅಷ್ಟೊಂದು ಇಷ್ಟವಿಲ್ಲ. ಹಾಗಾಗಿ ನಾಲ್ಕು ವರ್ಷಕ್ಕೆ ಅವನನ್ನು ಶಾಲೆಗೆ ಸೇರಿಸುತ್ತಿದ್ದೇವೆ. ಅಲ್ಲಿಯವರೆಗೆ ಯಾವ ಬಾಲವಾಡಿಗೂ ಕಳಿಸಲಿಲ್ಲ. ಇದು ನನ್ನ ಹೆಗ್ಗಳಿಕೆ ಎಂದೇನೂ ಅಲ್ಲ. ಬಾಲ್ಯವನ್ನು ಅನುಭವಿಸಲಿ ಎಂದು ಸುಮ್ಮನಿದ್ದೆವು.
ಹೀಗೆ ಶಾಲೆಗೆ ಸೇರಿಸಿಕೊಂಡಾಕೆಗೆ ನನ್ನ ಮೇಲೆ ವಿಶ್ವಾಸ ಬಂದಿತ್ತಂತೆ. ಒಂದು ವಾರ ನನ್ನ “ಚಲನವಲನ’ ಕಂಡ ಆಕೆ ಮತ್ತೊಂದು ದಿನ ದೊಡ್ಡಮ್ಮನ ಎದುರು ಬಂದು “ಇರಲಿ ಬಿಡಿ’ ಎಂದಳಂತೆ. “ಅಲ್ಲಮ್ಮಾ, ಅವನಿಗೆ ಐದು ವರ್ಷವಾಗಿಲ್ಲ’ ಎಂದದ್ದಕ್ಕೆ ಅವಳೇ ಒಂದು ಲೆಕ್ಕ ಬರೆದು ವರ್ಷ ಪೂರ್ಣಗೊಳಿಸಿ ಹಾಕಿದಳು. ಅದರ ಪರಿಣಾಮ ನನ್ನ ಜನ್ಮ ದಿನಾಂಕ ಒಂದೂವರೆ ವರ್ಷ ಹೆಚ್ಚೂ ಕಡಿಮೆಯಾಗಿದೆ !

ಆಗ ನಾನೂ ಸ್ವಲ್ಪ ದಪ್ಪಗೆ, ಎತ್ತರಕ್ಕೆ ( ಆ ವಯಸ್ಸಿಗೆ) ಇದ್ದನಂತೆ. ಯಾವ ಎಜುಕೇಷನ್ ಇನ್ಸ್‌ಪೆಕ್ಟರ್‌ಗಳೂ ಕೇಳಿರಲಿಲ್ಲ. ನಾನು ಶಾಲೆಗೆ ಹೋಗಿ ಕುಳಿತುಕೊಳ್ಳಲು ಕಲಿತೆ. ಅಕ್ಷರವೆಲ್ಲಾ ಕಲಿತದ್ದು ಎಷ್ಟೋ ಗೊತ್ತಿಲ್ಲ. ನನ್ನ ಅಮ್ಮನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ದೊಡ್ಡಮ್ಮ ಸಹ ಓದದ ದಿನ ಎರಡು ಚಪಾತಿ ಕಡಿಮೆ ಕೊಡುತ್ತಿದ್ದರಷ್ಟೇ !

ಒಂದೂ ಬೈಗುಳ ಉಡುಗೊರೆಯಾಗಿ ಕೊಡುತ್ತಿರಲಿಲ್ಲ. ತೀರಾ ಮಿತಿ ಮೀರಿದರೆ ಅಪ್ಪನಿಗೆ ದೂರು ಹೇಳುತ್ತಿದ್ದರು. ನಂತರ ನಾನೂ ದೊಡ್ಡವನಾಗುತ್ತಿದ್ದಂತೆಯೇ ನನ್ನ ತಲೆ ಹರಟೆ ಹೆಚ್ಚಾಯಿತೋ, ಅವರ ದೂರು ಹೇಳುವ ಪ್ರವೃತ್ತಿ ಹೆಚ್ಚಾಯಿತೋ ಗೊತ್ತಿಲ್ಲ. ಪ್ರತಿ ಭಾನುವಾರ ಅಪ್ಪನ ಎದುರು ವಿಚಾರಣೆ ನಡೆಯುತ್ತಿತ್ತು. ನಾನು ತಲೆತಗ್ಗಿಸಿಕೊಂಡು ನಿಲ್ಲುತ್ತಿದ್ದೆ. ನನ್ನ ದೊಡ್ಡಮ್ಮ ನನ್ನನ್ನು ಕರೆದುಕೊಂಡು ಹೋಗಿ “ಪೂಜೆ’ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಾನೂ ಸುಮ್ಮನೆ ಹಿಂಬಾಲಿಸಿಕೊಂಡು ಬರುತ್ತಿದ್ದೆ. ಇದು ಪ್ರತಿ ವಾರದ ಕಾರ್‍ಯಕ್ರಮ.

ಹೀಗೆ ಸಾಗಿ ಹೋಗುವ ನನ್ನ ಶಾಲಾ ದಿನಗಳ ನೆನಪು ನನ್ನ ಮಗನನ್ನು ನೆನಪಿಸುತ್ತಿದೆ. ಶಾಲಾ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಇರುವ ಅವಕಾಶ ಅತ್ಯಂತ ಕಡಿಮೆಯೆನ್ನುವುದೂ ಹೌದು. ಅವನು ಅಜ್ಜನ ಮನೆಯಲ್ಲಿ ಓದಿದರೆ, ನಾನಿರುವುದು ಮೈಸೂರಿನಲ್ಲಿ. ಈಗ ಊರಿನಲ್ಲಿ ಜಿರಾಪಟಿ ಮಳೆ ಶುರುವಾಗಿರುವ ಹೊತ್ತು. ಒಂದು ಮಳೆಗಾಲಕ್ಕೆ ಸಿದ್ಧಗೊಳ್ಳುವ ಪರಿ ಅದ್ಭುತ. ಈಗೀಗ ಆಧುನಿಕ ಜೀವನ ಶೈಲಿ, ಮಿತ ಕುಟುಂಬಗಳೆಲ್ಲಾ ಆ ಸಂಭ್ರಮವನ್ನು ಕಡಿತಗೊಳಿಸಿರುವುದು ಸತ್ಯ. ಇದರರ್ಥ ಕುಟುಂಬ ಯೋಜನೆ ವಿರೋಧಿ ನಾನಲ್ಲ. ಆದರೆ ಎಲ್ಲರಿಗೂ ಎಂದು ಹಂಚಿಕೊಳ್ಳುವ ಸಂಭ್ರಮದ ಕ್ಷೀಣವಾಗುತ್ತಿದೆ. ಆಗಲೇ ಹೇಳಿದೆನಲ್ಲ, ಮಳೆಗಾಲಕ್ಕೆ ಸಿದ್ಧವಾಗುವ ಪರಿ. ಶಿವರಾಮ ಕಾರಂತರ “ಮರಳಿ ಮಣ್ಣಿಗೆ’ ಕಾದಂಬರಿ ಓದಬೇಕು.

ಅವನೂ ಮಳೆಗಾಲದ ಸಂಭ್ರಮವನ್ನು ತನ್ನೊಳಗೆ ತುಂಬಿಕೊಳ್ಳಲು ಹೊರಟಿದ್ದಾನೆ. ಜತೆಗೆ ನಾನೂ ಇದ್ದೇನೆ. ಒಂದೆರಡು ಮಳೆಯ ಹನಿಗಳನ್ನು ನನ್ನೊಳಗೆ ತುಂಬಿಕೊಂಡು ಬರುತ್ತೇನೆ ; ಜತೆಗೆ ಮಗನನ್ನು ಬಿಟ್ಟು ಇರಬೇಕೆಂಬ ಅನಿವಾರ್ಯದ ಅಗಲಿಕೆಯ ಎರಡು ಕಣ್ಣ ಹನಿಗಳೊಂದಿಗೂ…
ಅಂದ ಹಾಗೆ ನನ್ನ ಮಗನ ಹೆಸರು ಹೇಳಲು ಮರೆತಿದ್ದೆ… ಋತುಪರ್ಣ.

ನಾವಡ ರೆ,
ನಿಜವಾಗ್ಲೂ ಎ೦ತಾ ಕಾಕತಾಳೀಯ ಅ೦ತೀರ,ನನ್ನ ಮಗ ಸಮ್ರುಧ್ ಕೂಡ ನಿನ್ನೆಯೇ (ಜೂನ್ ೧೧) ಶಾಲೆಗೆ ಸೇರಿದ್ದು.ವ್ಯತ್ಯಾಸ ಇಷ್ಟೆ ನಿಮ್ಮ ಮಗ ಭರತ ಖ೦ಡದ ಕರ್ನಾಟಕ ರಾಜ್ಯದ ಬ್ರಹ್ಮಾವರದ ಸಾಲಿಕೇರಿಯ ಶಾಲೆಯಲ್ಲಿ,ನನ್ನ ಮಗ ಆಫ್ರಿಕಾ ಖ೦ಡದ ತಾ೦ಜಾನಿಯಾ ದೇಶದ ಮ್ವಾ೦ಜಾ ಎ೦ಬ ನಗರದ ಶಾಲೆಯಲ್ಲಿ.ಶಾಲೆ ಯಾವುದಾದರೇನು,ಮನಸ್ಸಿನ ಭಾವನೆಗಳು ಒ೦ದೇ ಅಲ್ಲವೇ.ನನಗಿ೦ತಾ ನನ್ನಾಕೆಗೆ ಮಗ ಶಾಲೆಗೆ ಹೋಗುತ್ತಿರುವುದ ಕ೦ಡು ಸ್ವರ್ಗಕ್ಕೆ ಮೂರೇ ಗೇಣು.ಅ೦ದ ಹಾಗೆ ನನ್ನ ಮಗನಿಗಿನ್ನೂ ಮೂರೇ ವರ್ಷ.ಮೊದಲ ದಿನ ಶಾಲೆಯಲ್ಲಿ ಬಿಟ್ಟ ನ೦ತರ ಬರೀ ಮೌನ.ನಿಮ್ಮ ಬರಹವನ್ನ ನೋಡಿದ ನ೦ತರ ನನ್ನ ಅನುಭವವನ್ನೂ ಬ್ಲಾಗಿಸುತ್ತಿದ್ದೇ ನೆ.ಬಿಡುವಾದಾಗ ಭೇಟಿ ಕೊಡಿ.Good luck to Rutuparna.

7 comments:

ವಿಕಾಸ್ ಹೆಗಡೆ/Vikas Hegde said...

ಸಾರ್, 3 ವರ್ಷಕ್ಕಿನ್ನ ಮೊದಲೇ ಸೇರಿಸಿಬಿಟ್ರಾ!!!! ಯಾಕೋ ಸರಿ ಅನಿಸಲಿಲ್ಲ ನನಗಿದು.

any how. all the best :)

ನಾವಡ said...

ಅಹರ್ನಿಶಿಯವರೇ,
ನನಗೂ ಹಾಗೇ ಅನ್ನಿಸಿತು. ಮೂರು ವರ್ಷ ಬಹಳ ಬೇಗ ಆಗಲಿಲ್ವೇ?
ನಿಜಕ್ಕೂ ಕಾಕತಾಳೀಯ ನಮ್ಮಿಬ್ಬರ ಮಕ್ಕಳೂ ಒಂದೇ ದಿನ ಶಾಲೆಗೆ ಸೇರಿದ್ದು. ಸಮ್ರುದ್ದನಿಗೆ ಒಳ್ಳೆಯದಾಗಲಿ.
ಜತೆಗೆ ನನ್ನ ಲೇಖನ ನಿಮ್ಮಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದ.ಕರ್ನಾಟಕಕ್ಕೆ ಬಂದಾಗ ಮೈಸೂರಿಗೂ ಬನ್ನಿ.
ನಾವಡ

ಅಹರ್ನಿಶಿ said...

ವಿಕಾಸ್ ಮತ್ತು ನಾವಡರಿಗೆ,

ಹೌದು ಮೂರು ವರ್ಷ ಬಹಳ ಬೇಗನೇ ಆಯ್ತು.ಆದ್ರೆ ಅದು TODDLER"s PLAY GROUP ಅ೦ತ,ಅಲ್ಲಿ ಅ ಆ ಇ ಈ ಇಲ್ಲ,ಎ ಬಿ ಸಿ ಡಿ ಇಲ್ಲ.ಬರಿ ವ್ಯಕ್ತಿತ್ವ ವಿಕಸನ.ಮಕ್ಕಳನ್ನ ಅವರ ಅಭಿರುಚಿಗೆ ಅನುಗುಣವಾಗಿ ಬೆಳೆಸುತ್ತಾರೆ.ಹೊರೆಯಲ್ಲದ ಶಾಲೆ.
ಆಡಿದ್ದೇ ಆಟ,ಕಲಿತಿದ್ದೇ ಪಾಟ.

ತು೦ಬಾ ಧನ್ಯವಾದಗಳು.

rksistu said...

hi ..
Do you still use free service like blogspot.com or wordpress.com but
they have less control and less features.
shift to next generation blog service which provide free websites for
your blog at free of cost.
get fully controllable (yourname.com)and more features like
forums,wiki,CMS and email services for your blog and many more free
services.
hundreds reported 300% increase in the blog traffic and revenue
join next generation blogging services at www.hyperwebenable.com
regards
www.hyperwebenable.com

ಜೋಮನ್ said...

ತಾಂಜಾನಿಯಾದಲ್ಲಿ ಮೂರು ವರ್ಷಕ್ಕೇ ಮಕ್ಕಳನ್ನು ಈ ರೀತಿ ಶಾಲೆಗೆ ಸೇರಿಸಿಕೊಳ್ಳುತ್ತಾರಾ? ಅಷ್ಟಕ್ಕೂ ನೀವೀಗ ಸೇರಿಸಿರುವುದು ಶಾಲೆಗಾ, ನರ್ಸರಿಗಾ? ಶ್ರೀಧರ್ ಸಾರ್ ಹೀಗಾದರೆ ನಿಮ್ಮ ಮಗ ಹತ್ತು ವರ್ಷಕ್ಕೇ sslc ಮುಗಿಸಿ ನಿಮ್ಮ ಹಾಗೆ ಬೇರೊಂದು ದೇಶಕ್ಕೆ ಹಾರಿಬಿಡುತ್ತಾನೆ. ಅಲ್ಲಿ ಕುಳಿತು ಆ ದೇಶದ ವಿಶೇಷತೆಗಳ ಬಗ್ಗೆ ಬ್ಲಾಗಿಸುತ್ತಾನೆ. ಅಪ್ಪ ಮಗ ಇಬ್ಬರ ಜೋಡಿ ಚೆನ್ನಾಗಿದೆ. ಇಬ್ಬರೂ ಇಷ್ಟವಾಗಿದ್ದೀರಿ. ಪುಟ್ಟನಿಗೆ ನನ್ನದೂ ಒಂದು ಶುಭಾಶಯ ತಿಳಿಸಿ.

ಧನ್ಯವಾದಗಳು.

ಜೋಮನ್.

MD said...

ಶ್ರೀ,
'ಮೊದಲ ದಿನ ಮೌನ' ಎನ್ನುವುದು ಅದೇ ದಿನಕ್ಕೆ ಬ್ರಾಂಡ್ ಆಗಿತ್ತು. ಈ ಪದಕ್ಕೆ ಬೇರೊಂದು ಅರ್ಥವೂ ನೀಡಿದ್ದಕ್ಕೆ ಧನ್ಯವಾದಗಳು.
ಹೌದಲ್ಲ ! ಇಂತಹ ಮೌನ ನನ್ನ ತಂದೆ/ತಾಯಿಗೂ ಆಗಿರಬಹುದಲ್ಲ?
ಹಾಗೆಯೇ ನಾವಡರ ಆ ಬರಹವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
ಸರ್, ನಿಮಗಾದರೂ ಆ ಜೋಶ್ ಇತ್ತೋ ಇಲ್ಲವೋ ಗೊತ್ತಿಲ್ಲಾ. ಆದರೆ ಈ ಫೋಟೊದಲ್ಲಿ ಸಮ್ರುಧ್ ನ ಹೆಜ್ಜೆ ಇಡುವ ಹುರುಪನ್ನು ಗಮನಿಸಿ.
ಸಾಹೇಬ್ರು ಆಗಲೇ ಶಾಲೆಗೆ ಸೇರುವ ಹುಮ್ಮಸ್ಸಿನಲ್ಲಿದ್ದಾರೆ.

sa said...

AV,無碼,a片免費看,自拍貼圖,伊莉,微風論壇,成人聊天室,成人電影,成人文學,成人貼圖區,成人網站,一葉情貼圖片區,色情漫畫,言情小說,情色論壇,臺灣情色網,色情影片,色情,成人影城,080視訊聊天室,a片,A漫,h漫,麗的色遊戲,同志色教館,AV女優,SEX,咆哮小老鼠,85cc免費影片,正妹牆,ut聊天室,豆豆聊天室,聊天室,情色小說,aio,成人,微風成人,做愛,成人貼圖,18成人,嘟嘟成人網,aio交友愛情館,情色文學,色情小說,色情網站,情色,A片下載,嘟嘟情人色網,成人影片,成人圖片,成人文章,成人小說,成人漫畫,視訊聊天室,a片,AV女優,聊天室,情色,性愛