Dec 7, 2007

ಕನ್ನಡ ಮತ್ತು ಕನ್ನಡಿಗರು


 
ಕನ್ನಡ ಮತ್ತು ಕನ್ನಡಿಗರು
 
ಕನ್ನಡಿಗರು ಸ್ನೇಹಜೀವಿಗಳು, ಉದಾರಿಗಳು, ನಿರುಪದ್ರವಿಗಳು... ಎಲ್ಲಾ ಸರಿ. ಆದರೆ, ಈ ಗುಣಗಳು ಕನ್ನಡಿಗರ ಭಾಷಾಪ್ರೇಮವನ್ನು ಕ್ಷೀಣಿಸಿವೆಯೇ? ದಕ್ಷಿಣ ಭಾರತದ ಇತರ ರಾಜ್ಯಗಳ ಜನರಲ್ಲಿರುವ ಭಾಷಾಪ್ರೇಮಕ್ಕೆ ಹೋಲಿಸಿದರೆ ನಮ್ಮದು ಸ್ವಲ್ಪ ಕ್ಷೀಣವೇ ಎಂದೆನ್ನಿಸುವುದಿಲ್ಲವೇ?

ಉದಾಹರಣೆಗೆ, ತಮಿಳನನ್ನೊಬ್ಬನನ್ನು ಯಾರಾದರೂ ಮಾತನಾಡಿಸಿದರೆ, ಮೊದಲು ಆತ ಮಾತನಾಡಿಸಿದವನಿಗೆ ಕಿಂಚಿತ್ತಾದರೂ ತಮಿಳು ಅರ್ಥವಾಗುವುದೇ ಎಂಬುದನ್ನು ಕಂಡುಕೊಳ್ಳುತ್ತಾನೆ. ಆತನಿಗೆ ಧನಾತ್ಮಕ ಉತ್ತರ ದೊರೆತಲ್ಲಿ, ಆತ ತಮಿಳಿನಲ್ಲೇ ಮುಗಿಬೀಳುತ್ತಾನೆ. ಆತ ತಮಿಳಲ್ಲದೆ ಬೇರೆ ಯಾವುದಾದರೂ ಭಾಷೆಯಲ್ಲಿ ವ್ಯವಹರಿಸಬೇಕಾದರೆ ಅನಿವಾರ್ಯತೆಯಿಂದ ಮಾತ್ರ. ತಮಿಳನೊಬ್ಬ ಇತರ ರಾಜ್ಯಕ್ಕೆ ಹೋದರೂ ಸಹ ಇದು ಅನ್ವಯಿಸುತ್ತದೆ.ಆದರೆ ನಾವು, ನಮಗೆ ಕನ್ನಡವಷ್ಟೇ ಅಲ್ಲದೆ ಇತರ ಭಾಷೆಗಳೂ ತಿಳಿದಿವೆ ಎಂಬುದನ್ನು ತೋರ್ಪಡಿಸುವ ಭರದಲ್ಲೋ ಅಥವಾ ನಮ್ಮೊಂದಿಗೆ ವ್ಯವಹರಿಸುವ ಪರಭಾಷೀಯರಿಗೆ ಸ್ವಲ್ಪವೂ ಶ್ರಮವಾಗಬಾರದೆಂಬ ಸದುದ್ದೆಶದಿಂದಲೋ, ಒದ್ದಾಡಿಕೊಂಡಾದರೂ, ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆಯೇ ಹೊರತು, ಆದಷ್ಟು ಮಟ್ಟಿಗೆ ಕನ್ನಡದಲ್ಲೇ ನಿರ್ವಹಿಸೋಣವೆಂದು ಯೋಚಿಸುವುದೇ ಇಲ್ಲ.
ನಾವು ಈ ಪ್ರವೃತ್ತಿಯನ್ನು, ಇತರ ರಾಜ್ಯಗಳಿಗೆ ನಾವು ಹೋದಾಗ ಪಾಲಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ ಕರ್ನಾಟಕದಲ್ಲೂ ನಾವು ಹೀಗೆ ವರ್ತಿಸುವುದು ಕನ್ನಡ ಭಾಷೆಗೆ ಮೋಸವೆಸಗಿದಂತಾಗುವುದಿಲ್ಲವೇ?
ಕನ್ನಡಿಗರೇ ಕನ್ನಡವನ್ನು ಹೆಮ್ಮೆಯಿಂದ ಬಳಸದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?ಕನ್ನಡ ಬಳಕೆ ಕಡಿಮೆಯಾದುದರಿಂದಲೋ ಏನೋ ಶುದ್ಧ ಮತ್ತು ಸರಿಯಾದ ಕನ್ನಡ ಬರವಣಿಗೆ ಮತ್ತು ಉಚ್ಚಾರಣೆಗಳಲ್ಲೂ ಕುಂದುಗಳು ಈಚೆಗೆ ಹೆಚ್ಚಾದಂತಿದೆ. ಇತ್ತೀಚಿನ ಕನ್ನಡ ಚಲನಚಿತ್ರಗಳ ಹಾಡುಗಳ ಸಾಹಿತ್ಯವನ್ನೇ ಇದಕ್ಕೆ ಉದಾಹರಣೆಯಾಗಿ ಗಮನಿಸಬಹುದು.
ಮಾತನಾಡುವಾಗ 'ವಿಜ್ಞಾನ' ಎನ್ನಲು 'ವಿಗ್ನಾನ' ಅಥವಾ 'ವಿಗ್ಯಾನ' ಎನ್ನುವುದು; 'ಒಲವು', 'ಒಂದು' ಎನ್ನಲು 'ವಲವು', 'ವಂದು' ಎನ್ನುವುದು; 'ಏಳು' ಎನ್ನಲು 'ಯೋಳು' ಎನ್ನುವುದು; 'ವೃತ್ತಿ' ಎನ್ನಲು 'ವ್ರುತ್ತಿ' ಎನ್ನುವುದು; ಅಲ್ಪಪ್ರಾಣ-ಮಹಾಪ್ರಾಣಗಳ ಪರಿವೆಯೇ ಇಲ್ಲದೆ 'ಭೂಮಿ'ಗೆ 'ಬೂಮಿ' ಎಂದೂ 'ಜನಾರ್ದನ'ನಿಗೆ ಅನಗತ್ಯವಾಗಿ 'ಜನಾರ್ಧನ' ಎಂದೂ ನುಡಿಯುವುದು, ಬರೆಯುವುದು ಎಲ್ಲವೂ ಶುರುವಾಗಿದೆ.

ಕನ್ನಡವನ್ನು ಕನ್ನಡಿಗರೇ ಶುದ್ಧವಾಗಿ, ಸರಿಯಾಗಿ ಉಚ್ಚರಿಸದಿದ್ದಲ್ಲಿ; ಬರೆಯದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?

- ಅಶೋಕ ಎಸ್.
 
(ಆತ್ಮೀಯ ಗೆಳೆಯರಾದ ಅಶೋಕ್ ರವರು ನನ್ನ ಬ್ಲಾಗಿಗಾಗಿ ಬರೆದ ಲೇಖನ)
 
ಅಶೋಕ್ ಹೇಳೋದರಲ್ಲಿ ನೂರಕ್ಕೆ ನೂರರಷ್ಟು ಸತ್ಯ ಇದೆ,ಬೇರೆ ಭಾಷೆಯವರಿ೦ದ ನಮ್ಮ ಭಾಷೆ ಕುಲಗೆಡಬಾರದು.ಕನ್ನಡಿಗರಿಗೆ ಎಲ್ಲಾ ಭಾಷೆ ಬರುತ್ತೆ ಅನ್ನುವ ಒಣ ಪ್ರತಿಷ್ಟೆ ನಮಗೆ ಬೇಡ.ಅದು ಬರಿ ಬೆ೦ಗಳೂರಲ್ಲಿ ಮಾತ್ರ.
ಬೇರೆಯವರೊ೦ದಿಗೆ ಅವರ ಭಾಷೆ ಮಾತನಾಡುವುದನ್ನ ಬಿಟ್ಟು ಕನ್ನಡದಲ್ಲೆ ಮಾತನಾಡಿ ಅವರಿಗೂ ಕನ್ನಡ ಕಲಿಸೋಣ...ಕನ್ನಡ ಉಳಿಸೋಣ. 

1 comment:

Anonymous said...

kannadapara lekanagalige nodi ee kelagina blog

http://enguru.blogspot.com