ಮದರ್ಸ್ ಡೇ ಯ೦ದು ಬರಗೂರರ "ತಾಯಿ"
ನಾಳೆ "ತಾಯಿ" ಯ ದಿನ. ಮದರ್ಸ್ ಡೇ.ಕಳೆದ ವಾರ ಬಿಡುಗಡೆಗೊ೦ಡ ಬರಗೂರ ರ "ತಾಯಿ" ಸಿನೆಮಾ ಹಾಗೂ ಬರಗೂರ ರ ಬಗ್ಗೆ ಎರಡು ಮಾತು.
ಬರಗೂರರ ಊರಿನಲ್ಲೇ ಇದ್ದು ಬೆಳೆದು ಅವರ ಹೆಸರನ್ನ ಹಲವಾರು ಬಾರಿ ಕೇಳಿದಾಗಲೆಲ್ಲ ಹೆಮ್ಮೆಪಟ್ಟು ಕೊ೦ಡವ ನಾನು.ಆಗಿನ್ನೂ ನನ್ನ ಮಿಡ್ಲ್ ಸ್ಕೂಲು ದಿನಗಳು.ಬರಗೂರರು ಬೆ೦ಗಳೂರಿನ ಜ್ನಾನಭಾರತಿಯಲ್ಲಿ ಪ್ರೊಫೆಸರ್ ಆಗಿದ್ದ ಕಾಲ.ಬರಗೂರಿಗೆ ಬರುವುದು ಬಲು ಅಪರೂಪವಾಗಿತ್ತು.ಅವರ "ಸೂರ್ಯ"ಸಿನಿಮಾ ತೆಗೆಯುತ್ತಿದ್ದ ಕಾಲ.ನಮ್ಮ ಗಣಿತದ ಮೇಷ್ಟ್ರು ಬರಗೂರರ ಸಹೋದರ ಜಯರಾಮಪ್ಪ ಅ೦ತ.ನಮ್ಮ ಜಯರಾಮಪ್ಪ ಮೇಷ್ಟ್ರು ಸೂರ್ಯ ಸಿನಿಮಾದಲ್ಲಿ ಒ೦ದು ಪಾತ್ರ ಮಾಡಿದ್ದರು,ಲೋಕೇಶ್ ರ ತ೦ದೆಯ ಪಾತ್ರ.ಹೆಚ್ಚೇನು ಇಲ್ಲ ಬರಿ ಮೂರ್ನಾಲ್ಕು ನಿಮಿಷದ ಸೀನು.ಅದೂ ಫ್ಲಾಷ್ ಬ್ಯಾಕ್ ನಲ್ಲಿ ಬ೦ದು ಹೋಗುವ ಸನ್ನಿವೇಶ.ಆದರೂ ನಮಗೆ ಎಲ್ಲಿಲ್ಲದ ಕುತೂಹಲ,ಸಾರ್ ನಿಮ್ಮ ಪಾತ್ರದ ಬಗ್ಗೆ ಹೇಳಿ ಅಭಿನಯಿಸಿ ಅ೦ತ ಅ೦ಗಲಾಚುತ್ತಿದ್ದೆವು.ಒಟ್ಟಿನಲ್ಲಿ ನಮ್ಮ ಜಯರಾಮಪ್ಪ ಮೇಷ್ಟ್ರು ಸಿನಿಮಾದಲ್ಲಿ ನಟಿಸಿ ಬ೦ದ ನ೦ತರ ನಮಗೆ ರಾಜ್ಕುಮಾರ್ ತರ ಕಾಣೋಕೆ ಶುರುವಾಯಿತು.ನ೦ತರ ಸಿನಿಮಾ ನೋಡಿದಾಗಲೇ ತಿಳಿದದ್ದು ಅವರು ಲೋಕೇಶ ರ ತ೦ದೆಯಾಗಿ ಗುರುತು ಹಿಡಿಯದ ವೇಷಭೂಷಣದಲ್ಲಿ.ಜಯರಾಮಪ್ಪ ನವರು ನನ್ನ ನೆಚ್ಚಿನ ಗುರುಗಳು,ಶಾಲಾ ವಾರ್ಷಿಕೋತ್ಸವಕ್ಕೆ ತಪ್ಪದೇ "ನಾಟಕ" ಮಾಡುತ್ತಿದ್ದವರು,ನನ್ನ ಕೈಲಿ "ಕಡೆಗೂ ಕೊಟ್ನಲ್ಲ ಕೈ"ಎ೦ಬ ಸಮಾಜಿಕ ನಾಟಕ ಮಾಡಿಸಿದ್ದರು.ಈಗೆಲ್ಲಾ ಬರಿ ನೆನಪುಗಳು. ಬರಗೂರರ ಮೊದಲ ಸಿನೆಮ "ಒ೦ದು ಊರಿನ ಕಥೆ" ಕೂಡ ಬರಗೂರಿನಲ್ಲೇ ಚಿತ್ರಿತವಾದ ಸಿನೆಮಾ.ಆಗಿನ್ನೂ ನಾವು ಬಹಳ ಚಿಕ್ಕವರು,ಅಷ್ಟ್ಟಾಗಿ ನೆನಪಿಲ್ಲ.ಒಟ್ಟಿನಲ್ಲಿ ಸಿನೆಮಾ ಚಿತ್ರೀಕರಣದ ಬಗ್ಗೆ ಊರಿನಲ್ಲೇ ಸ೦ಚಲನ ಉ೦ಟುಮಾಡಿದ್ದರು ರಾಮಚ೦ದ್ರಪ್ಪ ನವರು.
ನನ್ನ ಬರೆಯುವ ಹವ್ಯಾಸಕ್ಕೆ ಒ೦ದು ರೀತಿಯ ಸ್ಪೂರ್ತಿಯಾದವರಲ್ಲಿ ಮೊದಲಿಗರು ಬರಗೂರು.ಹೈಸ್ಕೂಲು ದಾಟಿದ ಮೇಲೆ ನನ್ನ ಹೆಸರಿನ ಜೊತೆಗೆ ಊರಿನ ಹೆಸರು ಸೇರಿಸಿಕೊ೦ಡು ಕದಿರೆಹಳ್ಳಿ ಶ್ರೀಧರ ನಾಗಿದ್ದೆ.ಜಿಲ್ಲಾ ಪತ್ರಿಕೆಯಾದ ಪ್ರಜಾಪ್ರಗತಿ ಯಲ್ಲಿ ಕಥೆ,ಚುಟುಕ,ಕವನ ಗಳ ಬರೆದೆ.ಕಾಲೇಜಿನಲ್ಲಿ ನನ್ನ ಸಾಹಿತ್ಯಾಸಕ್ತಿ ನೋಡಿ ಹಲವು ಸೀನಿಯರ್ ಗಳು ಬೆನ್ನು ತಟ್ಟುತ್ತಿದ್ದರು.ಒಮ್ಮೆ ಒಬ್ಬ ಸೀನಿಯರ್ ಕಿತಾಪತಿಗಾಗಿ ಓಹೋ ನೀನೇನು ಬರಗೂರು ರಾಮಚ೦ದ್ರಪ್ಪನಾ ಅ೦ದಿದ್ದ,ಒಮ್ಮೆಲೇ ಸಿಟ್ಟು ನೆತ್ತಿಗೇರಿ,ಮುಚ್ಕೊ೦ಡ್ ಕೂತ್ಕ್ಕೊಳೊ ಅ೦ದಿದ್ದೆ.ಕಾರಣ ಗೊತ್ತಿಲ್ಲ ಅ೦ದು ನನಗೆ ಅದು ಅವಮಾನ ಅ೦ದುಕೊ೦ಡೆ.ನನಗಾದ ಅವಮಾನ ಅವರಿಗೇ ಆಯಿತು ಅ೦ದುಕೊ೦ಡೆ.ಬರದ ನಾಡಲ್ಲಿ ಬ೦ಡಾಯದ ಬೀಜ ಬಿತ್ತಿದ ಬರಗೂರರು ಅವರ ಬರಹಗಳಿಗಿ೦ತ ಚೆನ್ನಾಗಿ ಅವರೇ ಮಾತನಾಡುತ್ತಾರೆ.ವಿಷಯದ ಹಿಡಿತ ಹಾಗು ಅವರ ನಿರರ್ಗಳತೆ ಕೇಳುಗನನ್ನ ಮೂಕನನ್ನಾಗಿಸುತ್ತದೆ.ಬರಗೂರು ಬರಗೂರಿನ ಹೆಮ್ಮೆ.ಕೆಳವರ್ಗದ ಜನರ ತುಡಿತ,ಬಯಲು ಸೀಮೆಯ ಜನರ ಬದುಕು ಬರಗೂರರ ಬರವಣಿಗೆಗಳ ತಿರುಳು.ಕಲ್ಪಿಸಿಕೊ೦ಡವರಲ್ಲ ಕಣ್ಣಾರೆ ಕ೦ಡವರು.
"ತಾಯಿ" ಯ ಬಗ್ಗೆ ಅವರದೇ ಆದ ಭಾಷೆ ಬರೆದಿದ್ದಾರೆ.ಮಕ್ಳು ತಬ್ಬಲಿಯಾದ ಹಲವಾಅರು ಸಿನಿಮಾಗಳು ಬ೦ದು ಹೋಗಿವೆ ಆದರೆ ತಾಯಿಯೇ ತಬ್ಬಲಿಯಾದ ಸಿನಿಮಾ ನೋಡಲೇಬೇಕು ಅನಿಸಿದೆ.ಅವರ ಎಲ್ಲಾ ಸಿನಿಮಾಗಳನ್ನೂ ನೋಡಲಾಗಿಲ್ಲ,ಆದರೂ ಕಮರ್ಷಿಯಲ್ ಆಗದೇ ಕಲಾತ್ಮಕವಾಗೆ ಉಳಿದ ಬರಗೂರರ ನಿರ್ಧಾರ ಮೆಚ್ಚಬೇಕು.ಇಲ್ಲಿದೆ ಅವರ ತಾಯಿ ಸಿನಿಮಾದ ವಿಮರ್ಷೆ(ದಟ್ಸ್ ಕನ್ನಡ ದಿ೦ದ).
ಅದು ಸರಿಸುಮಾರು ನೂರು ವರ್ಷದ ಹಿಂದಿನ ಕಾದಂಬರಿ. ಮ್ಯಾಕ್ಸಿಂ ಗಾರ್ಕಿ ಎಂಬ ರಷ್ಯನ್ ಲೇಖಕ 1906ರಲ್ಲಿ ಉಲ್ಲೇಖಿಸಿದ 'ಮದರ್ 'ಎಂಬ ಅತಿ ಶ್ರೇಷ್ಠ ಕೃತಿ. ಅಕಾರಶಾಹಿತ್ವದ ವಿರುದ್ದ ಪ್ರತಿಭಟನೆ ಎಂಬ ಬಂದೂಕು ಹಿಡಿದ ಬಡವರ್ಗ ಬದುಕಿನ ಕತೆ. ಜಾರ್ ದೊರೆಗಳ ಏಕಸ್ವಾಮಿತ್ವ ಧೋರಣೆ, ಹಣದಾಸೆಯ ಬ್ರಹ್ಮಾಸ್ತ್ರಕ್ಕೆ ಬಲಿಯಾದ `ಗುಬ್ಬಿ'ಗಳ ಜೀವನಗಾಥೆಯಿದು. ಬಡತನದ ಬಾಧೆ ತಾಳಲಾರದೆ, ಉಳ್ಳವರ ದಬ್ಬಾಳಿಕೆಗೆ ತತ್ತರಿಸಿ, ಕ್ರಾಂತಿ ಎಂಬ ಹುಲ್ಲುಕಡ್ಡಿಗಳನ್ನು ಒಟ್ಟುಗೂಡಿಸಿ, ಹೋರಾಟ ಎಂಬ ಗೂಡು ಕಟ್ಟಿದ ಆ ಗುಬ್ಬಚ್ಚಿಗಳ ಸತ್ಯ ಹಾಗೂ ಯಶೋಗಾಥೆಯಿದು.
ಗಾರ್ಕಿ ಮದರ್ ಎಂಬ ಪ್ರಧಾನ ಪಾತ್ರವನ್ನಿಟ್ಟುಕೊಂಡು ಕತೆಯ ಕಗ್ಗಂಟಿನ ಎಳೆ ಬಿಡಿಸುತ್ತಾ ಹೋಗುತ್ತಾನೆ. `ರಾಜತಂತ್ರ'ದ ಅತಿರೇಕಕ್ಕೆ ಬಲಿಯಾದ ತನ್ನ ಮಗ ಪಾವೆಲ್‌ನ ಬಿಡುಗಡೆಗಾಗಿ ಆ ತಾಯಿ ಏನೆಲ್ಲಾ ಕಾರ್ಪಣ್ಯಗಳ ಗಂಜಿ ಕುಡಿಯುತ್ತಾಳೆ. ಕಷ್ಟದ ಗಳಿಗೆಗಳನ್ನು ಮೃಷ್ಟಾನ್ನದಂತೆ ಉಣ್ಣುತ್ತಾಳೆ. ಎಷ್ಟೆಷ್ಟೋ ನೋವಿನ ಪಾಯಸ ಸವಿಯುತ್ತಾಳೆ. ಕೊನೆಗೆ ತನ್ನ ಮಗನ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ. ಶ್ರೀಮಂತರ ಕುಲುಮೆಯಿಂದ ಇಡೀ ಬಡ ಸಮುದಾಯ ಹೊರಬರಬೇಕು ಎಂದು ಪಣ ತೊಡುತ್ತಾಳೆ. ಏಕೆಂದರೆ ಅದು ತಾಯ್ತನದ ಸಂಕೇತ. ಅವಳೊಬ್ಬಳಿಂದ ಮಾತ್ರ ಆ ತ್ಯಾಗ ಸಾಧ್ಯ. ಆ ತಾಯಿಯಮಡಿಲನ್ನು ಇನ್ನಷ್ಟು ಸಿಂಗಾರಗೊಳಿಸಿದ್ದಾರೆ ಗಾರ್ಕಿ.
ಅದೇ ಕತೆಯನ್ನು ಇಂದಿನ ಕಾಲಘಟ್ಟಕ್ಕೆ ಅಪ್‌ಡೇಟ್ ಮಾಡಬಹುದಾ? ಈ ಪ್ರಶ್ನೆಗೆ ಉತ್ತರವಾಗಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಆ ಕತೆಯನ್ನು ಇಂದಿನ ವಿದ್ಯಮಾನಗಳಿಗೆ ಸರಿಹೊಂದುವಂತೆ, ಸಮಾಜದ ಮುಂದಿರುವ ನೂರಾರು ಸಮಸ್ಯೆಗಳಲ್ಲೊಂದಾರ ಕಾರ್ಮಿಕರ ಸಮಸ್ಯೆಗಳಿಗೆ ಆ ಕತೆಯ ತಿರುಳನ್ನು ಯಥಾವತ್ತಾಗಿ ಜೋಡಿಸಿದ್ದಾರೆ ಬರಗೂರು. ಅದೇ ತತ್ಸಮ ರೀತಿಯ ದಬ್ಬಾಳಿಕೆಗಳು ಇಂದು ಕಾರ್ಮಿಕವರ್ಗದ ಮೇಲಾಗುತ್ತಿವೆ. ಹೊಸ ಹೊಸ ಕಾಯಿದೆಗಳು ಬಂದು ಬಡತನವನ್ನೇ ಕಿತ್ತುತಿನ್ನುತ್ತಿವೆ ಎಂಬ ಕಟುಸತ್ಯಕ್ಕೆ ಸಿನಿಮಾರೂಪ ಕೊಟ್ಟಿದ್ದಾರೆ. ಕೊನೆಗೆ ತಾಯಿಗೆ ಅವರು ಕೊಡುವ ಹೊಸ ಅರ್ಥ ಏನು ಗೊತ್ತೆ ? ಅವಳು ಹೋರಾಟದ ಸಂಕೇತ. ಅಷ್ಟೇ ಅಲ್ಲ ಆ ಹೋರಾಟ ಎನ್ನುವುದೇ ಮಾತೃಸ್ವರೂಪಿ!
ಈ ಮಧ್ಯೆ ಕೆಲವು ಪಾತ್ರಗಳಿಂದ ಸಮಾಜದ ಹಲವು ಮುಖಗಳನ್ನು ಪರಿಚಯಿಸಲಾಗಿದೆ. ಬಿಳಿಯಪ್ಪ ಹೊಟ್ಟೆಪಾಡಿಗೆ ಹೇಸಿಗೆ ತಿನ್ನುವವರನ್ನೂ, ರಂಜಾನ್ ಹಾಗೂ ಫಾತಿಮಾ ಪಾತ್ರ ಧರ್ಮವನ್ನೂ, ಸುಂದರ್‌ರಾಜ್ ಪಾತ್ರ ಹದ್ದು ಮೀರಿದ ಪೊಲೀಸ್ ವ್ಯವಸ್ಥೆಯನ್ನೂ, ಶಿವಸ್ವಾಮಿ ರೈತರನ್ನೂ... ಹೀಗೆ ಪ್ರತಿ ಪಾತ್ರಗಳೂ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಮೀಳಾ ಜೋಷಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದಾ ನೋವು ನುಂಗುತ್ತಾ, ಮಗನ ನಲಿವಿಗಾಗಿ ಹಂಬಲಿಸುತ್ತಾ ತಾಯ್ತನದ ಹಿರಿಮೆಗೆ ಇನ್ನಷ್ಟು ಮೆರಗು ತುಂಬಿದ್ದಾರೆ.
ಶ್ರೀನಿವಾಸ ಮೂರ್ತಿಯವರ ಪಾತ್ರ ಮೊದಲ ಹತ್ತು ನಿಮಿಷದಾದ್ದರೂ ಕೊನೆವರೆಗೂ ಅವರು ಕತೆಯನ್ನೇ ಹಿಂಬಾಲಿಸುತ್ತಾರೆ. ಆದರೆ ಮಗನ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಷ್ಟು ಸರಿ ಹೊಂದುವುದಿಲ್ಲ. ಸಾಕಷ್ಟು ಅಂತರದ ನಂತರ ಬಂದ ಅವರಿಗೆ ಅಭಿನಯದಲ್ಲಿ ಪಕ್ವತೆಮಾಯವಾದಂತಿದೆ. ಆದರೆ ಕತೆ ಹೇಳುವಾಗ ಕೆಲವು ಅನಗತ್ಯ ಸನ್ನಿವೇಶ, ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ, ನೇಪಥ್ಯ ದೃಶ್ಯ, ಪಾತ್ರಗಳ ಆಯ್ಕೆಯಲ್ಲಿ ಬರಗೂರರ ಜಾಣ್ಮೆ ಪ್ರತಿಫಲಿಸುತ್ತದೆ.
ನೋವಿಗಿಂತಾ ಸಾವೇ ವಾಸಿ, ಸತ್ಯ ಯಾವತ್ತೂ ಕತ್ತಲಲ್ಲೇ ಇರುತ್ತೆ ಮುಂತಾದ ಬರಗೂರರ ಅಪರೂಪದ ಸಂಭಾಷಣೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಕೊನೆಯಲ್ಲಿ ನಾಯಕ ರಾಜು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸನ್ನಿವೇಶ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಬದುಕಿನ ಅಂತ್ಯವನ್ನು ನೆನಪಿಸುತ್ತದೆ .